ದೈವಾರಾಧನೆ: ತಾಯಿ ಮತ್ತು ಕರುಳ ಬಳ್ಳಿಯ ಸಂಬಂಧ

Nov 2, 2022, 5:41 PM IST

ಉಡುಪಿ (ನ.02): ಕಾಂತರ ಸಿನಿಮಾ ದೈವಲೋಕದ ಕುರಿತಾಗಿ ಜಗತ್ತಿನ ಕಣ್ಣು ತೆರೆಸಿದೆ. ತುಳುನಾಡಿನ ದೈವಗಳು ಮತ್ತು ಅವುಗಳ ಆರಾಧನೆ ಒಂದು ನಿಗೂಢ ಮತ್ತು ವಿಸ್ಮಯಕಾರಿ ಅನುಭೂತಿ ಕೊಡುವ ಸಂಗತಿಯಾಗಿದೆ. ಅರಸಿಕೊಂಡು ಹೊರಟಷ್ಟು ಹೊಸ ಹೊಸ ಸತ್ಯಗಳನ್ನು ಶತಮಾನಗಳಿಂದ ದರ್ಶಿಸುತ್ತಾ ಬಂದಿರುವ ದೈವಾರಾಧನೆ ಇದೀಗ ಕರಾವಳಿ ಜಿಲ್ಲೆಗಳಿಗೆ ಹೊರತಾಗಿಯೂ ನಂಬಿಕೆಯುಳ್ಳ ಜನರ ಕುತೂಹಲಕ್ಕೆ ಕಾರಣವಾಗಿದೆ. ದೈವಾರಾಧನೆ ಅಥವಾ ಭೂತಾರಾಧನೆ ತುಳು ಜನಪದದಲ್ಲಿರುವ ಪ್ರಮುಖ ಆರಾಧನೆ. ತುಳುನಾಡಿನ ಪ್ರಮುಖ ಕಲಾ ಪ್ರಕಾರ ದೈವಾರಾದನೆ. ಮಾಯದಲ್ಲಿರುವ ದೈವ ಮತ್ತು ಮನುಷ್ಯ ಮಾತನಾಡುವ ಸಂಬಂಧ ಕಂಡುಬರುವುದು ದೈವರಾದನೆಯಲ್ಲಿ ಮಾತ್ರ. ಇಷ್ಟೊಂದು ಆಪ್ತವಾದ ಮನುಷ್ಯ ಮತ್ತು ದೇವರ ಸಂಬಂಧ ನಿಮಗೆ ಬೇರೆಲ್ಲೂ ಕಾಣಸಿಗುವುದಿಲ್ಲ. ದೈವಾರದನೆಯಲ್ಲಿ ನೀವು ದೈವಗಳ ಜೊತೆ ಮಾತನಾಡಬಹುದು, ಕಷ್ಟ ಹೇಳಿಕೊಳ್ಳಬಹುದು, ಸಾಂತ್ವನ ಪಡೆಯಬಹುದು ಜಗಳವಾಡಬಹುದು. ಈ ತಾಯಿ ಮಕ್ಕಳ ಕರುಳು ಬಳ್ಳಿಯ ಸಂಬಂಧವೇ ಕರಾವಳಿಯ ಅಸ್ಮಿತೆಯಾಗಿದೆ.