ನೀನ್ ಬೇಡ..ನನಗೆ ಬಾಯ್‌ಫ್ರೆಂಡೇ ಬೇಕು ಎಂದ ಪತ್ನಿ ಗಂಡನನ್ನೇ ಕೊಂದಳು..!

Sep 7, 2022, 5:54 PM IST

ಬೆಂಗಳೂರು (ಸೆ.7): ಕುಡುಕ ಗಂಡನ ಕಾಟ ಸಹಿಸಲಾರದೆ ಆತನನ್ನು ತನ್ನ ತಾಯಿ ಹಾಗೂ ಸಂಬಂಧಿಕರ ಜತೆ ಸೇರಿ ಮನೆಯಲ್ಲೇ ಹತ್ಯೆಗೈದ ಮೃತನ ಪತ್ನಿ, ರಾತ್ರೋರಾತ್ರಿ ತನ್ನೂರಿಗೆ ಮೃತದೇಹ ತೆಗೆದುಕೊಂಡು ಹೋಗಿ ಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆಗೆ ಯತ್ನಿಸಿದ್ದಾಗ ಕೊಲೆ ರಹಸ್ಯ ಬಯಲಾಗಿ ಈಗ ಜೈಲು ಸೇರಿದ್ದಾಳೆ. ಕೋಣನಕುಂಟೆ ಸಮೀಪದ ಕೋಕನೆಟ್‌ ಗಾರ್ಡನ್‌ ನಿವಾಸಿ ಶಿಲ್ಪಾ (26), ಈಕೆಯ ತಾಯಿ ಕೆಂಪದೇವಮ್ಮ (55) ಹಾಗೂ ಸೋದರ ಸಂಬಂಧಿ ಬಾಲಾಜಿ (30) ಬಂಧಿತರಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ರಘು ಹಾಗೂ ವಂಡ್ರೆ ಎಂಬುವರ ಪತ್ತೆ ತನಿಖೆ ನಡೆದಿದೆ.

ತಮ್ಮ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನು ಸಂಬಂಧಿ ಬಾಲಾಜಿ ಜತೆ ಸೇರಿ ಶಿಲ್ಪಾ ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಕೆಲ ದಿನಗಳಿಂದ ಬಾಲಾಜಿ ಜತೆ ಶಿಲ್ಪಾ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಮನೆಯಲ್ಲಿ ಪತ್ನಿ ಜತೆ ಮಹೇಶ್‌ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

ಪ್ರಿಯಕರ ಮೇಲಿನ ಮೋಹ: ಗಂಡನನ್ನೇ ಬೆಂಗಳೂರಲ್ಲಿ ಹತ್ಯಗೈದು ಮಂಡ್ಯದಲ್ಲಿ ಸಿಕ್ಕಿ ಬಿದ್ಲು

ಮೂರು ದಿನಗಳ ಹಿಂದೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತಿ ಮಹೇಶ್‌ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ತಾಯಿ ಹಾಗೂ ಸಂಬಂಧಿಕರ ಜತೆ ಸೇರಿ ಶಿಲ್ಪಾ ಕೊಲೆ ಮಾಡಿದ್ದಳು. ಬಳಿಕ ಮೃತದೇಹವನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಪೂರಿಗಾಲಿ ಗ್ರಾಮಕ್ಕೆ ಅಂತ್ಯಕ್ರಿಯೆಗೆ ಆಕೆ ತೆಗೆದುಕೊಂಡು ಹೋಗಿದ್ದಳು. ಆಗ ಮೃತದೇಹದ ಮೇಲಿನ ಗಾಯ ಗುರುತು ಕಂಡು ಅನುಮಾನಗೊಂಡ ಮೃತ ಮಹೇಶ್‌ನ ಸೋದರರು, ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ನಂತರ ಮೃತನ ಕುಟುಂಬದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌ ತಿಳಿಸಿದ್ದಾರೆ.