ಮನೆ ಬಿಡ್ತಿರೋ ತುಳಸಿ: ಅಲ್ಲೆಲ್ಲಾ ಹೆಣ್ಮಕ್ಕಳ ಗೋಳು ಮುಗೀತು, ನಿಮ್ದು ಮುಗಿಯೋದು ಯಾವಾಗ್ರಿ?

By Suchethana D  |  First Published Jun 11, 2024, 4:35 PM IST

ಅಭಿಯ ಖುಷಿಗಾಗಿ ಮನೆಬಿಟ್ಟು ಹೋಗುವ ಸಿದ್ಧತೆ ಮಾಡಿಕೊಂಡಿದ್ದಾಳೆ ತುಳಸಿ. ಪದೇ ಪದೇ ಇದೇ ರೀತಿ ಆಗುತ್ತಿರುವುದಕ್ಕೆ ಪ್ರೇಕ್ಷಕರು ಸಿಕ್ಕಾಪಟ್ಟೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಅವರು ಹೇಳ್ತಿರೋದೇನು?
 


ಸೀರಿಯಲ್​ಗಳಲ್ಲಿ ಹೆಣ್ಣುಮಕ್ಕಳನ್ನು ಅದರಲ್ಲಿಯೂ ಸೊಸೆಯಂದಿರನ್ನು ಅಳುಮುಂಜಿ  ಎಂದೇ ತೋರಿಸ್ತಿರೋ ಬಗ್ಗೆ ಪ್ರೇಕ್ಷಕರು ಸೋಷಿಯಲ್​  ಮೀಡಿಯಾಗಳಲ್ಲಿ ಸದಾ ಬೇಸರ ವ್ಯಕ್ತಪಡಿಸುವುದು ಇದ್ದೇ ಇದೆ. ಆದರೆ ಇದೆಲ್ಲವುಗಳಿಗಿಂತಲೂ ಭಿನ್ನವಾಗಿ ಮೂಡಿ ಬರ್ತಿರೋದು ಅಮೃತಧಾರೆ ಸೀರಿಯಲ್​. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ. 

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯಳ ಗೋಳು ನೋಡಲಾಗದೇ ದಿನವೂ ಬೇಸರ ಹೊರಹಾಕುತ್ತಿದ್ದ ವೀಕ್ಷಕರು ಈಗ ನಿರಾಳರಾಗಿದ್ದಾರೆ. ಭಾಗ್ಯಳಿಗೆ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕಿದ್ದು, ಅಳುಮುಂಜಿ ಪಾತ್ರದಿಂದ ಸದ್ಯ ಹೊರ ಬಂದಿದ್ದಾಳೆ. ಜೀ ಕನ್ನಡದ ವಿಷಯ ಹೇಳುವುದಾದರೆ, ಅತ್ತೆಯಿಂದ ಸದಾ ತಿರಸ್ಕರಿಸಿ ಕಣ್ಣೀರು ಹಾಕುತ್ತಿದ್ದ ರೌಡಿಬೇಬಿ ಸತ್ಯ ಕೂಡ ಅತ್ತೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ಪ್ರೀತಿಯಿಂದ ಇದ್ದಾರೆ. ಅದೇ ಇನ್ನೊಂದೆಡೆ, ಅಳುಮುಂಜಿ ಅಲ್ಲದಿದ್ದರೂ ಡೇರಿಂಗ್​ ಆ್ಯಂಡ್ ಡ್ಯಾಷಿಂಗ್​ನಿಂದಲೇ ಅತ್ತೆ ಬಂಗಾರಮ್ಮನ ವಿರುದ್ಧ ಕಟ್ಟಿಕೊಂಡಿದ್ದ ಸ್ನೇಹಾ ಕೊನೆಗೂ ಅತ್ತೆಯ ಜೊತೆ ಒಂದಾಗಿದ್ದಾಳೆ. ಈಗ ಅತ್ತೆ ಬಂಗಾರಮ್ಮ ಮತ್ತು ಸ್ನೇಹಾ ಒಂದಾಗಿದ್ದು, ಸ್ನೇಹಾಳ ಮುಂದಿನ ಗುರಿ ಸಾಧನೆಗೆ ಅವಳೇ ಮುಂದೆ ನಿಂತು ನೆರವಾಗುತ್ತಿದ್ದಾಳೆ. ಸೀತಾರಾಮ ಸೀರಿಯಲ್​ನಲ್ಲಿಯೂ ಸೀತಾ-ರಾಮರ ಮದ್ವೆಯಾಗುತ್ತಿದೆ. ಈಗ ಈ ಸೀರಿಯಲ್​ಗಳಲ್ಲಿ ಹೆಣ್ಣುಮಕ್ಕಳು ಖುಷಿಯಾಗಿ ಇರುವುದನ್ನು ನೋಡಿ ಪ್ರೇಕ್ಷಕರು ಅದರಲ್ಲಿಯೂ ಹೆಚ್ಚಾಗಿ ಸೀರಿಯಲ್​ಗಳನ್ನು ಹೆಚ್ಚು ನೋಡುವ ಮಹಿಳಾ ಪ್ರೇಕ್ಷಕರು ಖುಷಿಯಾಗಿದ್ದಾರೆ. 

Tap to resize

Latest Videos

ಒತ್ತು ಶ್ಯಾವಿಗೆಗಾಗಿ ಬಸ್​ ಹಿಂದೆ ಓಡಿದ ಸ್ಟಾರ್​ ಹೋಟೆಲ್​ ನೌಕರರು! ಇಂಗ್ಲಿಷ್​ ಹೋಗಿ ಕನ್ನಡವೂ ಬಂತು

ಆದರೆ ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನತ್ತ ಸೀರಿಯಲ್​ ಪ್ರೇಮಿಗಳ ಕಣ್ಣು ಹೋಗಿದೆ. ಇಲ್ಲಿ ತುಳಸಿಯ ಕಷ್ಟ ಪ್ರೇಕ್ಷಕರಿಗೆ ನೋಡಲಾಗುತ್ತಿಲ್ಲ. ಇನ್ನೊಂದು ಮದುವೆ ಮಾಡಿಕೊಂಡು ಬಂದ ತುಳಸಿಗೆ ಈ ಹೊಸಮನೆಯಲ್ಲಿ ಪ್ರೀತಿ ತೋರುವ ಜನರಿದ್ದರೂ ಮಾಧವ್​ನ ಮೊದಲ ಪತ್ನಿಯ ಮಗನಿಂದಾಗಿ ಸದಾ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ. ಅದೇ ಇನ್ನೊಂದೆಡೆ ವಾರಗಿತ್ತಿ ಶಾರ್ವರಿ ಹಾಗೂ ಸೊಸೆ ದೀಪಿಕಾ ಮಸಲತ್ತು ಮಾಡುತ್ತಲೇ ಇದ್ದಾರೆ. ಅದೇ ಇನ್ನೊಂದೆಡೆ ಸ್ವಂತ ಮಗನಿಂದಲೂ ಒಂದು ರೀತಿಯಲ್ಲಿ ನೋವು ತುಳಸಿಗೆ. ಈ ತುಳಸಿಯ ಗೋಳು ಮುಗಿಯುವುದು ಯಾವಾಗ ಎಂದು ನಿರ್ದೇಶಕರನ್ನು ಕೇಳ್ತಿದ್ದಾರೆ ನೆಟ್ಟಿಗರು.

ಇದೀಗ ಕಂಪೆನಿಯ 25ನೇ ವಾರ್ಷಿಕೋತ್ಸವದ ಸಂಭ್ರಮ ಮನೆಮಾಡಿದೆ. ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್​ ಮಾಡಲು ಎಲ್ಲರೂ ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ಶಾರ್ವರಿ ಮತ್ತು ದೀಪಿಕಾ ಅಭಿಯ ತಲೆ ತಿರುಗಿಸಿ ಆಸ್ತಿಯಲ್ಲಿ ಪಾಲು ಕೇಳುವಂತೆ ಮಾಡಿದ್ದಾರೆ. ಹೀಗೆ ಮಾಡಬಾರದು ಎಂದು ತುಳಸಿ ಬೇಡಿಕೊಂಡಿರುವ ಕಾರಣಕ್ಕೆ ನೀವು ಮನೆ ಬಿಟ್ಟು ಹೋದರೆ ನಾನು ನೆಮ್ಮದಿಯಿಂದ ಇರುತ್ತೇನೆ ಎಂದಿದ್ದಾನೆ. ಇದಕ್ಕಾಗಿ ತುಳಸಿ ಮನೆಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾಳೆ. ಈ ಹಿಂದೆ ಕೂಡ ಹೀಗೆಯೇ ಮನೆಬಿಟ್ಟು ಹೋಗಿದ್ದಳು. ಕೊನೆಗೆ ವಾಪಸಾಗಿದ್ದಳು. ಈ ಬಾರಿಯೂ ಹಾಗೆಯೇ ಆಗಿದೆ. ಎಲ್ಲರೂ ಸಂತೋಷದಿಂದ ಇರುವಾಗ ಮನೆಬಿಟ್ಟು ಹೋಗುವ ಮನಸ್ಸು ಮಾಡಿದ್ದಾಳೆ. ಅಭಿ ತನ್ನಿಂದಲೇ ಎಲ್ಲರನ್ನೂ ದ್ವೇಷಿಸುತ್ತಿದ್ದಾನೆ ಎನ್ನುವ ಕಾರಣಕ್ಕೆ ಅವಳು ಈ ನಿರ್ಧಾರಕ್ಕೆ ಬಂದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು ಇವಳ ಗೋಳು ಯಾವಾಗ ಮುಗಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಶೀರ್ಷಿಕೆಗೂ ದೃಶ್ಯಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಮನಸು ಮನಸುಗಳ ಮಿಲನವೇ ಇಲ್ಲವಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 

ಈ ರಾಮ್​ದು ಅತಿಯಾಯ್ತು ಅನ್ನಿಸ್ತಿಲ್ವಾ? ಎಲ್ಲದಕ್ಕೂ ಲಿಮಿಟ್​ ಇದ್ರೆ ಚೆಂದ... ಫ್ಯಾನ್ಸ್​ ಗರಂ


click me!