ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಕರ್ಣ’ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ನಾಯಕ ಕರ್ಣನಿಗೆ ಆಕ್ಸಿಡೆಂಟ್ ಆಗಿರುವುದು ವೀಕ್ಷಕರಲ್ಲಿ ಬೇಸರ ಮೂಡಿಸಿದೆ. ಈ ಅಪಘಾತದ ಹಿಂದೆ ಯಾರು ಇದ್ದಾರೆ ಮತ್ತು ಕಥೆಯಲ್ಲಿ ಮುಂದೆ ಏನಾಗಲಿದೆ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಧಾರಾವಾಹಿಯ ಕಥೆಯ ಪ್ರಕಾರ, ಕರ್ಣನಿಗೆ ಲಾರಿ ಅಪಘಾತ ಮಾಡಿಸಿದ್ದು ಬೇರೆ ಯಾರೂ ಅಲ್ಲ, ಸ್ವಂತ ತಂದೆ ರಮೇಶ್! ತನ್ನ ತಂಗಿ ತಾರಾಳ ಕುತಂತ್ರದ ಬಲೆಗೆ ಬಿದ್ದ ರಮೇಶ್, ಕರ್ಣ ತನ್ನ ಮಗನೆಂದು ತಿಳಿಯದೆಯೇ ಈ ಕೃತ್ಯ ಎಸಗಿದ್ದಾನೆ. ಕರ್ಣ ತನ್ನ ಪ್ರೇಯಸಿ ನಿಧಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವಾಗಲೇ ಈ ಭೀಕರ ಅಪಘಾತ ಸಂಭವಿಸಿದೆ. ಇದ್ದಕ್ಕಿದ್ದಂತೆ ಫೋನ್ ಕಟ್ ಆದಾಗ ಗಾಬರಿಯಾದ ನಿಧಿ, ಅತ್ತೆ ಮಾಲತಿಯೊಂದಿಗೆ ಕರ್ಣನನ್ನು ಹುಡುಕುತ್ತಾ ಹೊರಡುತ್ತಾಳೆ. ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಕರ್ಣ ನೀಡಿದ್ದ ಹಿಂಟ್ ಆಧಾರದ ಮೇಲೆ ಅವರು ಅಪಘಾತದ ಸ್ಥಳಕ್ಕೆ ಧಾವಿಸುತ್ತಾರೆ.
ಇನ್ನೊಂದೆಡೆ, ಸೀತಾ ಎಂಬಾಕೆ ಕರ್ಣನ ಹೆತ್ತ ತಾಯಿ ಎಂಬ ಸತ್ಯ ಮಾರಿಗುಡಿ ಶಿವು ಮೂಲಕ ರಮೇಶ್‌ಗೆ ತಿಳಿಯುತ್ತದೆ. ಅಷ್ಟರಲ್ಲಾಗಲೇ ಕರ್ಣನಿಗೆ ಅಪಘಾತವಾಗಿದ್ದು, ರಮೇಶ್‌ಗೆ ಸಂಕಟವಾಗಿದೆ. "ನನ್ನ ಕಂದನನ್ನ ನಾನೇ ಕೊ*ಲ್ಲಲು ಸಂಚು ಮಾಡಿದೆನಲ್ಲಾ" ಎಂದು ರಮೇಶ್ ರಸ್ತೆಯಲ್ಲೇ ಬಿದ್ದು ಗೋಳಾಡುತ್ತಿದ್ದಾನೆ.
ಧಾರಾವಾಹಿಯಲ್ಲಿ ಇಷ್ಟೆಲ್ಲಾ ಹೈಡ್ರಾಮಾ ನಡೆಯುತ್ತಿರುವಾಗಲೇ, ನಿಧಿ ಪಾತ್ರಧಾರಿ ಭವ್ಯಾ ಗೌಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರಿಗೂ ಅಪಘಾತವಾದಂತೆ ಕಂಡುಬಂದಿದೆ. ಇದನ್ನು ನೋಡಿದ ವೀಕ್ಷಕರು, "ಕರ್ಣನ ನಂತರ ಈಗ ನಿಧಿಗೂ ಆಕ್ಸಿಡೆಂಟ್ ಆಯ್ತಾ? ಇದು ಧಾರಾವಾಹಿಯ ಕ್ಲೈಮ್ಯಾಕ್ಸ್ ಇರಬಹುದಾ?" ಎಂದು ಗಾಬರಿಯಿಂದ ಕಮೆಂಟ್ ಮಾಡತೊಡಗಿದ್ದಾರೆ.
ಆದರೆ ವಾಸ್ತವವಾಗಿ, ಭವ್ಯಾ ಗೌಡ ಹಂಚಿಕೊಂಡ ವಿಡಿಯೋಗೂ ‘ಕರ್ಣ’ ಧಾರಾವಾಹಿಗೂ ಯಾವುದೇ ಸಂಬಂಧವಿಲ್ಲ. ಅದು ಅವರು ಈ ಹಿಂದೆ ನಟಿಸಿದ್ದ 'ಲ್ಯಾಂಡ್‌ಲಾರ್ಡ್' ಸಿನಿಮಾದ ಚಿತ್ರೀಕರಣದ ತುಣುಕು. ದುನಿಯಾ ವಿಜಯ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಭವ್ಯಾ ಅವರು ನಟಿಸಿದ್ದರು. ರಾಜ್ ಬಿ. ಶೆಟ್ಟಿ ಅವರೊಂದಿಗೆ ಕೆಲಸ ಮಾಡಿದ ಅದ್ಭುತ ಅನುಭವವನ್ನು ನೆನಪಿಸಿಕೊಳ್ಳುತ್ತಾ ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಸಿನಿಮಾ ಸಂವಿಧಾನದ ಆಶಯಗಳನ್ನು ಸಾರುವ ಕಥಾವಸ್ತುವನ್ನು ಹೊಂದಿದೆ.
ಬಿಗ್‌ಬಾಸ್ ಹಾಗೂ ಧಾರಾವಾಹಿಗಳ ಮೂಲಕ ಕರ್ನಾಟಕದ ಮನೆಮಾತಾಗಿರುವ ಭವ್ಯಾ ಗೌಡ ಈಗ ಬೆಳ್ಳಿತೆರೆಯಲ್ಲೂ ಮಿಂಚಲು ಸಿದ್ಧರಾಗಿದ್ದಾರೆ. ಸದ್ಯ ಅವರು ಚೇತನ್ ಅವರಿಗೆ ನಾಯಕಿಯಾಗಿ 'ದೇವಿ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಭವ್ಯಾ ಅವರು ತಮ್ಮ ನಟನೆಯ ಮೂಲಕ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ಒಟ್ಟಿನಲ್ಲಿ ಕರ್ಣ ಮತ್ತು ನಿಧಿಯ ಮುಂದಿನ ಹಾದಿ ಏನಾಗಲಿದೆ ಎಂಬುದು ಕಿರುತೆರೆ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.