
ಬೆಂಗಳೂರು (ಬಿಡದಿ): ಬಿಗ್ ಬಾಸ್ ಸೀಸನ್–12ರ ಫಿನಾಲೆ ಹಿನ್ನಲೆ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿನ ಬಿಗ್ ಬಾಸ್ ಮನೆ ಮುಂದೆ ಅಭಿಮಾನಿಗಳ ಭಾರಿ ಜಮಾವಣೆ ಕಂಡುಬಂದಿದ್ದು, ಪರಿಸ್ಥಿತಿ ನಿಯಂತ್ರಣ ಮಾಡಲಾಗದೆ ಪೊಲೀಸರು ಒಂದು ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ. ಇದರ ಜೊತೆಗೆ ಬಿಡದಿ ಪೊಲೀಸರು ಕೂಡ ಸ್ಥಳದಲ್ಲಿ ಜಮಾವಣೆಯಾಗಿದ್ದಾರೆ.
ಫಿನಾಲೆ ಫಲಿತಾಂಶದ ಅಧಿಕೃತ ಘೋಷಣೆ ಬಾಕಿ ಇರುವ ಮುನ್ನವೇ ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದು, ಗಿಲ್ಲಿ ಅಭಿಮಾನಿಗಳ ಸಂಭ್ರಮ ಮಿತಿ ಮೀರಿದ ಮಟ್ಟಕ್ಕೆ ತಲುಪಿದೆ. ಡೋಲು–ತಮಟೆಗಳ ಸದ್ದು, ಘೋಷಣೆಗಳು, ಜೈಕಾರಗಳು ಮತ್ತು ಕುಣಿತದಿಂದ ಜಾಲಿವುಡ್ ಸ್ಟುಡಿಯೋ ಸುತ್ತಮುತ್ತಲ ಪ್ರದೇಶ ಗದ್ದಲದಿಂದ ಕೂಡಿದೆ,
ಬಿಗ್ ಬಾಸ್ ಮನೆ ಮುಂಭಾಗದಲ್ಲಿ ಕೆಲ ಅಭಿಮಾನಿಗಳು ಬೈಕ್ ಸೈಲೆನ್ಸರ್‌ಗಳಲ್ಲಿ ಫೈರಿಂಗ್ ಮಾಡಿದ್ದು, ಇದರಿಂದ ಗದ್ದಲ ಮತ್ತಷ್ಟು ಹೆಚ್ಚಾಯಿತು. ರಸ್ತೆ ಮಧ್ಯೆ ನಿಂತು ಜೈಕಾರ ಕೂಗಿದ ಅಭಿಮಾನಿಗಳು, ಪೊಲೀಸರ ಮನವಿಯನ್ನೂ ಲೆಕ್ಕಿಸದೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಗಿಲ್ಲಿ ಫ್ಯಾನ್‌ಗಳನ್ನು ಕಂಟ್ರೋಲ್ ಮಾಡಲಾಗದೆ ಪೊಲೀಸರು ಕೊನೆಗೆ ಲಘು ಲಾಠಿ ಪ್ರವಾರ ನಡೆಸಬೇಕಾದ ಅನಿವಾರ್ಯತೆ ಉಂಟಾಯಿತು.
ಜನಸಾಗರ ಹೆಚ್ಚಾಗುತ್ತಿದ್ದಂತೆ, ಕೆಲ ಅಭಿಮಾನಿಗಳು ಸ್ಟುಡಿಯೋ ಗೇಟ್ ಒಳಗೆ ಪ್ರವೇಶಿಸಲು ಯತ್ನಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದರು. ಆದರೂ ಅಭಿಮಾನಿಗಳ ಉತ್ಸಾಹದಲ್ಲಿ ಯಾವುದೇ ಕಡಿಮೆಯಾಗದೆ, ರಸ್ತೆ ಮೇಲೆ ನಿಂತು ಜೈಕಾರ ಕೂಗುತ್ತಾ ಸಂಭ್ರಮ ಮುಂದುವರಿಸಿದರು.
ಜಾಲಿವುಡ್ ಸ್ಟುಡಿಯೋ ಗೇಟ್ ಮುಂದೆ ಅಭಿಮಾನಿಗಳ ಕೂಗಾಟ–ಚೀರಾಟ ಹೆಚ್ಚಾಗಿದ್ದು, ಗಿಲ್ಲಿಯ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಕೆಲವರು ಗಿಲ್ಲಿಯ ಡೈಲಾಗ್‌ಗಳನ್ನು ಹೇಳುತ್ತಾ ಬೊಬ್ಬೆ ಹೊಡೆದಿದ್ದಾರೆ. ಬ್ಯಾನರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹೂವಿನ ಹಾರ ಹಾಕುವ ಮೂಲಕ ಘೋಷಣೆಗೂ ಮುನ್ನವೇ ವಿಜಯೋತ್ಸವ ಆರಂಭಿಸಿ ಹುಚ್ಚಾಟ ಮೆರೆದರು.
ಬಿಗ್ ಬಾಸ್ 12ರ ವಿಜೇತ ಯಾರು ಎಂಬುದು ಬಹಿರಂಗವಾಗುವ ಮುನ್ನವೇ ಜಾಲಿವುಡ್ ಸ್ಟುಡಿಯೋ ಸುತ್ತಮುತ್ತ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್‌ಗಳಿಂದ ತುಂಬಿ ಹೋಗಿದೆ. ಗಿಲ್ಲಿ ಹಾಗೂ ಕಾವ್ಯಾ ಅವರ ಭಾರೀ ಕಟೌಟ್‌ಗಳನ್ನು ಸ್ಥಾಪಿಸಿ ಅಭಿಮಾನಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳಲು ಬಿಡದಿ ಪೊಲೀಸರು ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ನಿಯೋಜನೆಗೊಂಡಿದ್ದು, ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾ ವಹಿಸಿದ್ದಾರೆ. ಒಟ್ಟಾರೆ, ಬಿಗ್ ಬಾಸ್ ಸೀಸನ್–12 ಫಿನಾಲೆ ಹಿನ್ನೆಲೆಯಲ್ಲಿ ಜಾಲಿವುಡ್ ಸ್ಟುಡಿಯೋ ಮುಂದೆ ಅಭಿಮಾನಿಗಳ ಉತ್ಸಾಹ ಪರಾಕಾಷ್ಠೆಗೆ ತಲುಪಿದ್ದು, ಗಿಲ್ಲಿ ಗೆಲುವು ಕಂಡರೆ ಘೋಷಣೆಯೊಂದಿಗೆ ಸಂಭ್ರಮ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.