ʼಅಮೃತಧಾರೆʼ ಧಾರಾವಾಹಿಯಿಂದ ಈಗಾಗಲೇ ಮೂವರು ಕಲಾವಿದರು ಹೊರಗಡೆ ಬಂದಿದ್ದಾರೆ. ಈಗ ಇನ್ನೋರ್ವ ಕಲಾವಿದರು ಹೊರಬರ್ತಾರಾ ಎಂಬ ಪ್ರಶ್ನೆ ಮೂಡಿದೆ.
ಕೆಲ ತಿಂಗಳುಗಳಿಂದ ಒಬ್ಬರಾದ ಮೇಲೆ ಒಬ್ಬರಂತೆ ‘ಅಮೃತಧಾರೆ’ ಧಾರಾವಾಹಿಯಿಂದ ಕಲಾವಿದರು ಹೊರಗಡೆ ಬರುತ್ತಿದ್ದಾರೆ. ನಟ ಶಶಿ ಹೆಗಡೆ, ಸಾರಾ ಅಣ್ಣಯ್ಯ ನಂತರದಲ್ಲಿ ರಾಧಾ ಭಗವತಿ ಕೂಡ ಹೊರಗಡೆ ಬಂದರು. ಈಗ ಯಶವಂತ್ ಕುಮಾರ್ ಹೊರಬರುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ಎದ್ದಿದೆ.
ಹೊಸ ಧಾರಾವಾಹಿಯಲ್ಲಿ ಯಶವಂತ್!
ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿರುವ ʼನಂದಗೋಕುಲʼ ಧಾರಾವಾಹಿಯಲ್ಲಿ ಯಶವಂತ್ ಕುಮಾರ್ ಅವರು ಹೀರೋ ಪಾತ್ರ ಮಾಡಲಿದ್ದಾರಂತೆ. ಇದು ಬಹುತಾರಾಗಣದ ಧಾರಾವಾಹಿ. ಈ ಸೀರಿಯಲ್‌ನಲ್ಲಿ ನಟ ಅಭಿಷೇಕ್ ರಾಮ್‌ದಾಸ್ ಕೂಡ ನಟಿಸಲಿದ್ದಾರೆ. ಹೀಗಾಗಿ ಯಶವಂತ್ ಅವರು ʼಅಮೃತಧಾರೆʼ ಧಾರಾವಾಹಿಯಿಂದ ಹೊರಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. “ಮಕ್ಕಳನ್ನ ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ತಂದೆಯ ಕತೆ!” ಇದಾಗಿದೆ. ಯಾವಾಗ ಈ ಧಾರಾವಾಹಿ ಪ್ರಸಾರ ಆಗಲಿದೆ ಎಂದು ಕಾದು ನೋಡಬೇಕಿದೆ.
ಅಮೃತಧಾರೆ ಧಾರಾವಾಹಿ: ಭೂಮಿಕಾಗೆ ಮೋಸಗಾತಿ ಎಂದ ಗೌತಮ್; ತ್ಯಾಗಮಯಿ ಪತ್ನಿಗೆ ಇಂಥ ಮಾತು ಹೇಳೋದಾ?
ಯಶವಂತ್ ಹೊರಗಡೆ ಬರ್ತಾರಾ?
ಈ ಹಿಂದೆ ಜೀವನ್ ಪಾತ್ರದಲ್ಲಿ ಶಶಿ ಹೆಗಡೆ ನಟಿಸುತ್ತಿದ್ದರು. ಇವರು ಧಾರಾವಾಹಿಯಿಂದ ಹೊರನಡೆದ ನಂತರದಲ್ಲಿ ಯಶವಂತ್ ಕುಮಾರ್ ಅವರು ಎಂಟ್ರಿ ಕೊಟ್ಟಿದ್ದರು. ಈ ಹಿಂದೆ ಇವರು ʼಗಂಡ ಹೆಂಡ್ತಿʼ ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸಿದ್ದರು. ಧಾರಾವಾಹಿ ಹೀರೋ ಆದವರು ಏಕಕಾಲಕ್ಕೆ ಕನ್ನಡದಲ್ಲಿ ಇನ್ನೊಂದು ಸೀರಿಯಲ್‌ನಲ್ಲಿ ನಟಿಸುವ ಹಾಗಿಲ್ಲ ಎಂಬ ಒಪ್ಪಂದ ಇರುತ್ತದೆ. ಹೀಗಾಗಿ ಯಶವಂತ್ ಅವರು ʼಅಮೃತಧಾರೆʼ ತೊರೆಯುವ ಸಾಧ್ಯತೆ ಇದೆ. ಹೀಗಾಗಿ ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಯಶವಂತ್ ಆಗಲೀ, ವಾಹಿನಿಯಾಗಲೀ ಈ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
ಸದ್ಯ ಹೇಗೆ ಕಥೆ ಸಾಗುತ್ತಿದೆ?
ʼಅಮೃತಧಾರೆʼ ಧಾರಾವಾಹಿಯಲ್ಲಿ ಯಶವಂತ್ ಅವರು ಜೀವನ್ ಪಾತ್ರ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಪಾತ್ರಕ್ಕೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಸಿಗುತ್ತಿದೆ. ಗೌತಮ್ ದಿವಾನ್-ಭೂಮಿ, ಶಕುಂತಲಾ-ಜಯದೇವ್ ಜೊತೆಗೆ ಜೀವ-ಭೂಪತಿ ಪಾತ್ರಗಳೇ ಹೈಲೈಟ್ ಆಗುತ್ತಿದ್ದು, ಇದರ ಬಗ್ಗೆಯೇ ಕಥೆ ಸಾಗುತ್ತಿದೆ.
ಇಷ್ಟು ಚಿಕ್ಕ ವಯಸ್ಸಿಗೆ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡ ಅಮೃತಧಾರೆ ಧಾರಾವಾಹಿ ಬಾಲ ನಟಿ
ʼಅಮೃತಧಾರೆʼ ಕಥೆ ಏನು?
ಗೌತಮ್ ದಿವಾನ್ ಅವರ ತಂದೆ ಎರಡು ಮದುವೆಯಾಗಿದ್ದರು. ತಂದೆ ಕಳೆದುಕೊಂಡ ಗೌತಮ್‌ಗೆ ಇತ್ತೀಚೆಗೆ ತಾಯಿ ಭಾಗ್ಯ ಸಿಕ್ಕಿದ್ದಳು. ಇನ್ನು ಎರಡನೇ ತಾಯಿ ಶಕುಂತಲಾ ತುಂಬ ಒಳ್ಳೆಯವಳು ಎಂದು ಗೌತಮ್ ನಂಬಿಕೊಂಡು ಕೂತಿದ್ದನು. ಇನ್ನೊಂದು ಕಡೆ ಗೌತಮ್ ಆಸ್ತಿ ಹೊಡೆಯಲು ಶಕುಂತಲಾ ಹಾಗೂ ಅವನ ಮಕ್ಕಳು ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮಲತಾಯಿಯ ದುಷ್ಟಬುದ್ಧಿ ಗೌತಮ್‌ಗೆ ಗೊತ್ತಿಲ್ಲ. ಗೌತಮ್ ಮೇಲೆ ವಿನಾಃ ಕಾರಣ ದ್ವೇಷ ಇಟ್ಟುಕೊಂಡು ಅವನನ್ನು ಹಾಳು ಮಾಡಲು ರಾಜೇಂದ್ರ ಭೂಪತಿ ಪ್ಲ್ಯಾನ್ ಮಾಡುತ್ತಿದ್ದಾನೆ. ಬಹುತಾರಾಗಣದ ಈ ಧಾರಾವಾಹಿಯಲ್ಲಿ ಸಾಕಷ್ಟು ಕತೆಗಳಿದ್ದು, ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ನಟ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ನಟಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ಹಿರಿಯ ನಟಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.