ಜಿಟಿ ಜಿಟಿ ಮಳೆಯಲ್ಲಿ ಒಂದಿನದಲ್ಲಿ ಬೆಂಗಳೂರಿಂದ ಎಲ್ಲೆಲ್ಲ ಹೋಗಬಹುದು!

By Suvarna News  |  First Published Jul 23, 2021, 4:01 PM IST

ಕೊರೋನಾ ಲಾಕ್‌ ಓಪನ್‌ ಆಗಿದೆ. ಜಾಸ್ತಿ ರಜೆಯಿಲ್ಲ, ಒಂದೇ ದಿನದಲ್ಲಿ ಎಲ್ಲಾದರೂ ಹೋಗಿ ಬರಬೇಕು ಅನ್ನೋರ ಸಂಖ್ಯೆಯೂ ಹೆಚ್ಚಾಗಿದೆ. ಅಂಥವರಿಗೆ ಇಲ್ಲಿದೆ ಗೈಡೆನ್ಸ್‌


ಕಳೆದೊಂದು ವಾರದಿಂದ ಮನೆಯಿಂದ ಹೊರಬೀಳಲೂ ಬಿಡದ ಜಿಟಿ ಜಿಟಿ ಮಳೆ. ಇಂಥಾ ಟೈಮಲ್ಲಿ ಎಲ್‌ ಹೋಗಕ್ಕಾಗುತ್ತೆ ಅಂತ ಬೆಚ್ಚಗೆ ಮನೆಯಲ್ಲೇ ಕೂತು ಬಿಡ್ತೀವಿ. ಅದನ್ನು ಎನ್‌ಜಾಯ್ ಮಾಡಿದ್ರೆ ಪರವಾಗಿಲ್ಲ. ಆದರೆ ಹೆಚ್ಚಿನವರಿಗೆ ಮಳೆಯಲ್ಲೂ ಔಟಿಂಗ್‌ ಹುರುಪು. ಅದರಲ್ಲೂ ಮಳೆಯಲ್ಲಿ ಮಿಂದೆದ್ದ ಜಾಗಗಳನ್ನು ನೋಡುವ ಉತ್ಸಾಹ. ಇಂಥವರಿಗಾಗಿ ಕೇವಲ ಒಂದೇ ದಿನದಲ್ಲಿ ಹೋಗಿ ಬರಬಹುದಾದ ಕೆಲವು ತಾಣಗಳ ಪರಿಚಯ ಇಲ್ಲಿದೆ. 

1. ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಬೆಂಗಳೂರಿಂದ ಚಳಿ ಚಳಿಯ ಮುಂಜಾವ ಅಂದರೆ ಐದು ಗಂಟೆಗೆಲ್ಲ ಹೊರಟರೆ ಹತ್ತು ಗಂಟೆ ಸುಮಾರಿಗೆ ಗುಂಡ್ಲುಪೇಟೆ ಸಮೀಪದ ಹಿಮವದ್‌ ಗೋಪಾಲ ಸ್ವಾಮಿ ಬೆಟ್ಟದ ಬುಡಕ್ಕೆ ತಲುಪುತ್ತೀರಿ. ಈ ಬೆಟ್ಟಕ್ಕೆ ಹೋಗೋ ದಾರಿಯೇ ಬ್ಯೂಟಿಫುಲ್‌. ಬೆಟ್ಟದ ಬುಡದಲ್ಲಿ ಗಾಡಿ ಪಾರ್ಕ್ ಮಾಡಿ ಬಸ್‌ನಲ್ಲಿ ಬೆಟ್ಟ ಏರುವುದು. ಸುತ್ತ ಮಂಜು, ಮಳೆ. ಕುಟು ಕುಟು ಚಳಿ. ಬೀಸುವ ಗಾಳಿ ನಡುವೆ ಆಗಾಗ ಗೋಚರಿಸುವ ಪ್ರಕೃತಿ ಸೌಂದರ್ಯ. ಈ ವೆದರ್ಅನ್ನು ಸೆಲೆಬ್ರೇಟ್ ಮಾಡುವಂಥಾ ತಾಣ ಇದು. ಸಮೀಪದಲ್ಲಿ ಬಂಡೀಪುರ ನ್ಯಾಶನಲ್ ಪಾರ್ಕ್ ಇದೆ. ಅಲ್ಲಿಗೊಂದು ವಿಸಿಟ್ ಕೊಟ್ಟು ಕಾಡಿನಲ್ಲಿ ಸಫಾರಿ ಮಾಡಬಹುದು. ಈ ಸಮಯದಲ್ಲಿ ಕಾಡು ಪ್ರಾಣಿಗಳು ಅಷ್ಟಾಗಿ ಕಾಣದಿದ್ದರೂ ಸುರಿವ ಮಳೆಯಲ್ಲಿ ಕಾಡೊಳಗೆ ಸಂಚರಿಸೋದೇ ಖುಷಿ ಕೊಡುತ್ತೆ.

Tap to resize

Latest Videos

undefined

ಕಾಲು ಮುರಿದರೂ, ಹೃದಯಾಘಾತ ಆದರೂ ಈ ಜೋಡಿ ಜಗತ್ತು ಸುತ್ತೋದು ಬಿಡಲಿಲ್ಲ!
 

2. ಕೋಲಾರದ ಅಂತರಗಂಗೆ
ಬೆಳ್ಳಂಬೆಳಗ್ಗೆ ಕೋಲಾರಕ್ಕೆ ಹೋಗುವ ದಾರಿಯುದ್ದಕ್ಕೂ ಮಂಜಿನ ಬಿಳಿ ಪರದೆ ಮನಸ್ಸಿಗೆ ಆಹ್ಲಾದ ನೀಡುತ್ತದೆ. ಕೋಲಾರ ಬರಡು ಭೂಮಿ, ಬರೀ ಕಲ್ಲುಗಳ ನೆಲ ಅಂದುಕೊಂಡವರ ಯೋಚನೆ ಬದಲಾಯಿಸುವಂತಿದೆ ಇಲ್ಲಿನ ಜಾಗಗಳು. ಇಲ್ಲಿ ದಾರಿಯುದ್ದಕ್ಕೂ ಕಲ್ಲಿನ ಬೆಟ್ಟಗಳನ್ನು ನೋಡುವುದು ಖುಷಿಯಾಗುತ್ತದೆ. ಮುಂದೆ ಸಣ್ಣಗೆ ಸುರಿಯುವ ಮಳೆಯಲ್ಲಿ ನೀಲಗಿರಿ ತೋಪಿನ ನಡುವಿನ ಮೆಟ್ಟಿಲೇರುತ್ತಾ ನಡೆಯುವುದು ಅನಿರ್ವಚನೀಯ ಅನುಭವ. ದೇವಾಲಯದ ಬದಿಯಲ್ಲಿ ಸಾಗಿ ಕಾಡು ದಾರಿಯಾಗಿ ಮುಂದುವರಿದರೆ ಅಂತರಂಗೆ ಬೆಟ್ಟದ ಆರಂಭ. ಮುಂದೆ ಹೋದರೆ ಇಲ್ಲಿನ ಗುಹೆಗಳ ವಿಸ್ಮಯ ಮೂಡಿಸುತ್ತವೆ. ಸಮೀಪದಲ್ಲಿ ಒಂದಿಷ್ಟು ವಿಸಿಟ್‌ ಮಾಡಬಹುದಾದ ಜಾಗಗಳಿವೆ. ಆದರೆ ಒಂದೇ ದಿನದಲ್ಲಿ ಇದನ್ನೆಲ್ಲ ನೋಡುವುದು ಕಷ್ಟ.

3. ದೇವರಾಯನ ದುರ್ಗ
ಇದು ಬೆಂಗಳೂರಿಂದ ೭೩ ಕಿಮೀ ದೂರದಲ್ಲಿದೆ. ಯೋಗ ನರಸಿಂಹ ಹಾಗೂ ಭೋಗ ನರಸಿಂಹ ದೇವಾಲಯಗಳು ಇಲ್ಲಿವೆ, ಜೊತೆಗೆ ಅದ್ಭುತ ಪ್ರಕೃತಿ ಸೌಂದರ್ಯವೂ ಇದೆ. ದೇವರಾಯನ ದುರ್ಗದ ಮುಕ್ಕಾಲು ಭಾಗದವರೆಗೆ ವೆಹಿಕಲ್‌ನಲ್ಲಿ ಹೋಗಬಹುದು. ಅಲ್ಲಿಂದ ಮೇಲೆ ಕಾಲ್ನಡಿಗೆಯಲ್ಲೇ ಹೋಗಬೇಕು. ಆದರೆ ಟ್ರೆಕ್ಕಿಂಗ್ ಉತ್ಸಾಹಿಗಳು ಕೆಳಗೆ ದೇವಾಲಯದ ಬಳಿ ವಾಹನ ಪಾರ್ಕ್ ಮಾಡಿ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಏರುತ್ತಾರೆ. ಮೇಲಿನ ತನಕ ಮೆಟ್ಟಿಲುಗಳ ಕಾಲುದಾರಿ ಇದೆ. ನಾನಾ ಬಗೆಯ ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಅಲ್ಲಲ್ಲಿ ಸಿಗುವ ತಂಗುದಾಣಗಳಲ್ಲಿ ವಿಶ್ರಮಿಸಿಕೊಂಡು ಮೇಲೇರುವುದು ಉತ್ಸಾಹಿಗಳಿಗೆ ಹೆಚ್ಚು ಖುಷಿ.

ಭಾರತದಲ್ಲೂ ನ್ಯೂಡ್ ಬೀಚ್‌ಗಳಿವೆ, ನಿಮಗೆ ಗೊತ್ತೆ?

4. ಇರ್ಪು ಜಲಪಾತ
ನಾಗರಹೊಳೆ ಅಭಯಾರಣ್ಯದ ಒಂದು ಕೊನೆಯಲ್ಲಿ ಮೈದುಂಬಿ ಹರಿವುದು ಇರ್ಪು ಜಲಪಾತ. ಇದು ಕೊಡಗಿನ ಬ್ರಹ್ಮಗಿರಿ ಬೆಟ್ಟಗಳ ನಡುವೆ ಇರುವ ರಮಣೀಯ ಫಾಲ್ಸ್. ಈಗ ಮಳೆಗಾಲದಲ್ಲಂತೂ ಈ ಜಲಪಾತವನ್ನು ಕಣ್ತುಂಬಿಸಿಕೊಳ್ಳಲು ಎರಡೂ ಕಣ್ಣೂ ಸಾಲದು. ಜೊತೆಗೆ ಈ ಫಾಲ್ಸ್‌ನ ದಾರಿಯಲ್ಲಿ ಕಿರು ತೊರೆಗಳಿವೆ. ಅವುಗಳೂ ಮೈದುಂಬಿ ಹರಿಯುತ್ತಿರುತ್ತವೆ. ಜಲಪಾತಕ್ಕೆ ಕಾಡಿನ ದಾರಿಯಾಗಿ ಸುರಿವ ಮಳೆಯಲ್ಲಿ ನಡೆಯುತ್ತಾ ಹೋಗಬಹುದು. ವಾಪಾಸ್ ಬಂದಾಗ ನೀವು ಗಾಡಿ ಪಾರ್ಕ್ ಮಾಡುವ ಜಾಗದಲ್ಲಿ ಬಿಸಿ ಬಿಸಿ ಟೀ ಮತ್ತು ಬಿಸಿ ತಿಂಡಿ ಸವಿಯಬಹುದು.

5. ದೊಡ್ಡ ಆಲದ ಮರ
ಇದು ಬೆಂಗಳೂರಿಗೆ ಅಂಟಿಕೊಂಡ ಹಾಗೇ ಇದೆ. ಎಕರೆಗಟ್ಟಲೆ ವಿಸ್ತಾರಕ್ಕೆ ಹರಡಿದ ಆಲದ ಮರ. ವಿಶ್ವ ವಿಖ್ಯಾತವಾಗಿರುವ ಈ ಆಲದ ಮರಗಳ ಬುಡಗಳ ನಡುವೆ ಕಾಲುದಾರಿಯಲ್ಲಿ ಓಡಾಡಬಹುದು. ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯಬಹುದು. ಆದರೆ ಅದರ ಜೊತೆಗೆ ಮನಸ್ಸಿಗೆ ಮುದ ನೀಡುವುದು ದಾರಿಯುದ್ದಕ್ಕೂ ಸಿಗುವ ನರ್ಸರಿಗಳು. ನೀವು ಗಾರ್ಡನಿಂಗ್‌ನಲ್ಲಿ ಆಸಕ್ತರಾಗಿದ್ದರೆ ಇಲ್ಲಿಗೆ ವಿಸಿಟ್‌ ಮಾಡೋದು ನಿಮ್ಮನ್ನು ನಿರಾಸೆ ಮಾಡಲ್ಲ. ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದಿರುವ ನಾನಾ ಜಾತಿ ಬಣ್ಣಗಳ ಹೂಗಿಡಗಳು, ಮರ ಜಾತಿಗೆ ಸೇರಿದ ಗಿಡಗಳನ್ನು ನೋಡಿಕೊಂಡು ಬರಬಹುದು. ಪಾಟ್‌ಗಳು ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಗಿಡ ನೆಡಲು ಬೇಕಾದ ಮಣ್ಣು, ಗೊಬ್ಬರವೂ ಇದೆ. ಎಲ್ಲವನ್ನೂ ತುಂಬಿಕೊಂಡು ಮುಂದಿನ ವಾರವನ್ನು ಗಾರ್ಡನಿಂಗ್ ಗೆ ಮೀಸಲಿಡಬಹುದು. 
 

click me!