ಇಂಜಿನಿಯರಿಂಗ್ ಅದ್ಭುತ ವಿಶ್ವದ ಅತೀ ಎತ್ತರದ ಚೀನಾಬ್ ರೈಲ್ವೆ ಬ್ರಿಡ್ಜ್ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತ

By Kannadaprabha News  |  First Published Dec 30, 2024, 5:34 AM IST

ವಿಶ್ವದ ಅತಿ ಎತ್ತರದ ಚೀನಾಬ್ ಕಮಾನು ರೈಲು ಸೇತುವೆ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ. ಕಟ್ರಾ ಮತ್ತು ಬನಿಹಾಲ್ ನಡುವಿನ ಈ ಸೇತುವೆ ಭಾರತೀಯ ರೈಲ್ವೆಗೆ ಹೊಸ ಮೈಲಿಗಲ್ಲು. ಈ ಯೋಜನೆಯು ಕಾಶ್ಮೀರ ಕಣಿವೆಯನ್ನು ಉಳಿದ ಭಾರತದೊಂದಿಗೆ ಸಂಪರ್ಕಿಸುತ್ತದೆ.


ಶ್ರೀಕಾಂತ್ಎನ್‌.ಗೌಡಸಂದ್ರ

ಶ್ರೀನಗರ: ಭಾರತ ದೇಶದ ಮುಕುಟ ಜಮ್ಮು ಮತ್ತು ಕಾಶ್ಮೀರದ ಹಿರಿಮೆಗೆ ವಿಶ್ವಮಟ್ಟದ ಗರಿ ಮೂಡಿದ್ದು, ಎಂಜಿನಿಯರಿಂಗ್‌ ಅದ್ಭುತ, ಸ್ವತಂತ್ರ ಭಾರತದ ಎಂಜಿನಿಯರಿಂಗ್‌ ನಾವೀನ್ಯತೆ ಹಾಗೂ ನೈಪುಣ್ಯತೆಯನ್ನು ಜಗತ್ತಿಗೆ ಸಾರುವ ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ‘ಚೀನಾಬ್ ಕಮಾನು ಸೇತುವೆ’ ಅಧಿಕೃತ ರೈಲು ಸಂಚಾರ ಸೇವೆಗೆ ಸಜ್ಜಾಗಿದೆ. ಇದರ ಜತೆಗೆ ಕಟ್ರಾ ಮತ್ತು ಬನಿಹಾಲ್‌ ನಡುವೆ ನಿರ್ಮಾಣಗೊಂಡಿರುವ ದೇಶದ ಮೊಟ್ಟ ಮೊದಲ ರೈಲ್ವೆ ಕೇಬಲ್‌ ಸೇತುವೆ ‘ಅಂಜಿ ಬ್ರಿಡ್ಜ್‌’ ಕೂಡ ದೇಶಕ್ಕೆ ಅರ್ಪಣೆಗೊಳ್ಳಲಿದೆ. ತನ್ಮೂಲಕ ಭಾರತೀಯ ರೈಲು ಸೇವೆ ಜತೆಗೆ ಕಾಶ್ಮೀರ ಕಣಿವೆ ಅಧಿಕೃತವಾಗಿ ಸಂಪರ್ಕಗೊಳ್ಳಲಿದೆ. 25 ವರ್ಷಗಳ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಶುರುವಾದ ‘ಉಧಾಂಪುರ್-ಶ್ರೀನಗರ-ಬಾರಮುಲ್ಲ ರೈಲು ಸಂಪರ್ಕ ಯೋಜನೆ’ (ಯುಎಸ್‌ಬಿಆರ್‌ಎಲ್‌) ಸಾರ್ಥಕಗೊಳ್ಳಲಿದೆ.

Tap to resize

Latest Videos

ಕಟ್ರಾ-ರೆಯಾಸಿ ನಡುವಿನ ರೈಲು ಮಾರ್ಗದ ಪ್ರಾಯೋಗಿಕ ರೈಲು ಸಂಚಾರ ಹಾಗೂ ಸುರಕ್ಷತಾ ಪರೀಕ್ಷೆ ನಡೆದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಯೋಜನೆಯಡಿಯ ಸಂಗಲ್ಡನ್‌ ಹಾಗೂ ರೆಯಾಸಿ ನಡುವಿನ 46 ಕಿ.ಮೀ. ಹಾಗೂ ರೆಯಾಸಿ ಹಾಗೂ ಕಟ್ರಾ ನಿಲ್ದಾಣದ ನಡುವಿನ 17 ಕಿ.ಮೀ. ಉದ್ದದ ರೈಲು ಪ್ರಯಾಣ ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ.26 ರಂದು ರೆಯಾಸಿ ರೈಲು ನಿಲ್ದಾಣದಿಂದ ಚಾಲನೆ ನೀಡುವ ಸಾಧ್ಯತೆಯಿದೆ.

ಈ ಮೂಲಕ ಅತಿ ಕಷ್ಟ ಹಾಗೂ ದುರ್ಗಮ ಹಾದಿ ಎಂದೇ ಹೆಸರಾಗಿದ್ದ ಕಟ್ರಾ-ಬನಿಹಾಳ್‌ (111 ಕಿ.ಮೀ.) ಸೆಕ್ಷನ್‌ನ ಬಹುತೇಕ ಮಾರ್ಗ ದೇಶಕ್ಕೆ ಅರ್ಪಣೆಗೊಳ್ಳಲಿದೆ. ಇದರಿಂದ ಈ ಭಾಗದ ಪ್ರವಾಸೋದ್ಯಮ ಸೇರಿ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ. ಮುಖ್ಯವಾಗಿ ವೈಷ್ಣೋದೇವಿ ಯಾತ್ರಿಗಳಿಗೆ ಯಾತ್ರೆ ಸುಲಭವಾಗಲಿದೆ.

ಐಫಲ್‌ ಟವರ್‌ಗಿಂತ ಎತ್ತರ!: ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಹಾಗೂ ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಕಮಾನು ಬ್ರಿಡ್ಜ್‌ ಆಗಿ ದಾಖಲೆಯ ಪುಸ್ತಕ ಸೇರಿರುವ ಚೀನಾಬ್‌ ರೈಲು ಸೇತುವೆ ಎಂಜಿನಿಯರಿಂಗ್‌ ಲೋಕದ ಅದ್ಭುತ ಸೃಷ್ಟಿ. ಹಿಮಾಲಯದ ಪರ್ವತ ಶ್ರೇಣಿ, ಅತಿ ಆಳದ ನದಿ ಕಣಿವೆಗಳನ್ನು ಮೆಟ್ಟಿ ನಿಂತು ಭಾರತೀಯ ಉತ್ತರ ರೈಲ್ವೆ ಹಾಗೂ ಕೊಂಕಣ್‌ ರೈಲ್ವೆ ನಿಗಮ ಮಾಡಿರುವ ಪವಾಡ ವರ್ಣನಾತೀತ. 
ಚೀನಾಬ್‌ ನದಿ ಮೇಲೆ ಬರೋಬ್ಬರಿ 1,178 (359 ಮೀ.) ಎತ್ತರದಲ್ಲಿ ರೈಲು ಹಾದು ಹೋಗುವಂತೆ ಚೀನಾಬ್‌ ರೈಲ್ವೆ ಕಮಾನು ಸೇತುವೆ ನಿರ್ಮಾಣ ಮಾಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತಿರುವು ಉಳ್ಳ ಸೇತುವೆ ನಿರ್ಮಿಸಿದ್ದು, ಇದು ಪ್ಯಾರಿಸ್‌ನ ವಿಶ್ವ ಪ್ರಸಿದ್ಧ ಐಫೆಲ್‌ ಟವರ್‌ಗಿಂತ 30 ಮೀಟರ್‌ ಎತ್ತರವಿದೆ. ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ಈ ಉಕ್ಕು ಹಾಗೂ ಕಾಂಕ್ರೀಟ್ ಕಮಾನು ಸೇತುವೆ ನಿರ್ಮಾಣಗೊಂಡಿದ್ದು, ಕಾಂತಾನ್‌ ಚೀನಾಬ್‌ ರೈಲ್ವೆ ಠಾಣೆಗೆ ಹೊಂದಿಕೊಂಡಂತಿದೆ.

ಶೇ.100 ರಷ್ಟು ಸ್ವದೇಶಿ ನಿರ್ಮಾಣ:

ವಿದೇಶಿ ಕಂಪೆನಿ ವಿನ್ಯಾಸ ಮಾಡಿದ್ದರೂ ಶೇ.100 ರಷ್ಟು ಸ್ವದೇಶಿ ತಂತ್ರಜ್ಞಾನ, ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಬರೋಬ್ಬರಿ 30,000 ಟನ್‌ನಷ್ಟು ಉಕ್ಕು ಬಳಕೆ ಮಾಡಿದ್ದು ಅಷ್ಟೂ ಉಕ್ಕನ್ನು ದೇಶೀಯ ಕಂಪೆನಿಗಳಿಂದಲೇ ಖರೀದಿಸಲಾಗಿದೆ. ಎಂಜಿನಿಯರ್‌ಗಳು, ಉದ್ಯೋಗಿಗಳು ಎಲ್ಲರನ್ನೂ ದೇಶಿಯವಾಗಿಯೇ ಬಳಕೆ ಮಾಡಿಕೊಂಡು ಶೇ.100 ರಷ್ಟು ಸ್ವದೇಶಿ ನಿರ್ಮಾಣ ಮಾಡಲಾಗಿದೆ ಎಂದು ಚೀನಾಬ್‌ ಯೋಜನೆಯ ಉಪ ಮುಖ್ಯಸ್ಥ ಎಸ್‌.ಎಸ್‌. ಮಲ್ಲಿಕ್‌ ಕನ್ನಡಪ್ರಭಗೆ ತಿಳಿಸಿದರು.

ಸ್ಫೋಟ, ಭೂಕಂಪಕ್ಕೂ ಜಗ್ಗಲ್ಲ: ಪಾಕಿಸ್ತಾನ ಗಡಿಯಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಸೇತುವೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದ್ದು, ಸೇತುವೆಯ ಉದ್ದಕ್ಕೂ ವೆಲ್ಡಿಂಗ್‌ ಇಲ್ಲದಂತಹ ಅತ್ಯಾಧುನಿಕ ರೈಲು ಹಳಿ ನಿರ್ಮಿಸಲಾಗಿದೆ. ದಿನದ 24 ಗಂಟೆಯೂ ಸಿಆರ್‌ಪಿಎಫ್‌ ಬಿಗಿ ಭದ್ರತೆ ಜತೆಗೆ ಸೇತುವೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಯಾರೇ ಪ್ರವೇಶಿಸಿದರೂ ಸೈರನ್‌ ಮೊಳಗಲಿದೆ. 266 ಕಿ.ಮೀ. ವೇಗ, ಭಯೋತ್ಪಾದಕರ ಸ್ಫೋಟ, ಭೂಕಂಪ ತೀವ್ರತೆ ತಡೆಯುವ ಸಾಮರ್ಥ್ಯ ಈ ಉಕ್ಕಿನ ಸೇತುವೆಗಿದೆ. ರೈಲಿನಿಂದ ಪ್ರಯಾಣಿಕರು ಚೀನಾಬ್‌ ರೈಲ್ವೆ ಸೇತುವೆ ಮೇಲೆ ಸ್ಫೋಟಕ ಎಸೆದರೆ ಉಂಟಾಗುವ ಹಾನಿ ತಪ್ಪಿಸಲು ಜಾಲಿ ಅಳವಡಿಸಲಾಗಿದೆ.

ಏಷ್ಯಾದಲ್ಲೇ ಅತಿ ಉದ್ದದ ಕೇಬಲ್‌ ಕ್ರೇನ್‌ ಬಳಕೆ:

ಚೀನಾಬ್‌ ಸೇತುವೆ ನಿರ್ಮಾಣಕ್ಕೆ ಏಷ್ಯಾದಲ್ಲೇ ಅತಿ ಉದ್ದದ ಕೇಬಲ್‌ ಕ್ರೇನ್‌ ಅಳವಡಿಕೆ ಮಾಡಲಾಗಿದೆ. 20 ಟನ್‌ ಲಿಫ್ಟಿಂಗ್‌ ಸಾಮರ್ಥ್ಯವುಳ್ಳ ಕ್ರೇನ್‌ 914 ಮೀ. ಉದ್ದದ ಕೇಬಲ್‌ ಮೂಲಕ ಯೋಜನೆಗೆ ಅಗತ್ಯವಾದ ಸಾಮಗ್ರಿಗಳನ್ನು ಪೂರೈಕೆ ಮಾಡಿದ್ದು, ಕ್ರೇನ್‌ ಕೂಡ ದಾಖಲೆ ಬರೆದಿದೆ.

ಅಪಘಾತ ರಹಿತ ಯೋಜನೆ!:

ಬರೋಬ್ಬರಿ 500 ಲಕ್ಷ ಮಾನವ ದಿನಗಳಷ್ಟು ಕೆಲಸವನ್ನು ಸುಮಾರು 3 ಸಾವಿರ ಕಾರ್ಮಿಕರು ನಿರಂತರವಾಗಿ ಮಾಡಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಸೇತುವೆ ನಿರ್ಮಾಣದಲ್ಲಿ ಸಣ್ಣ ಅಪಘಾತವೂ ಸಂಭವಿಸಿಲ್ಲ. ಈ ಬಗ್ಗೆ ರಾಷ್ಟ್ರೀಯ ಸುರಕ್ಷತಾ ಪ್ರಾಧಿಕಾರ ಪ್ರಮಾಣಪತ್ರ ನೀಡಿದೆ.

ಚೀನಾಬ್‌ ಸೇತುವೆ ವಿಶೇಷತೆ

ಯೋಜನಾ ವೆಚ್ಚ1,486 ಕೋಟಿ ರು.

ಒಟ್ಟು ಉದ್ದ1,315 ಮೀ.

ನದಿಯ ಮೇಲಿನ ಸೇತುವೆ ಉದ್ದ1,017 ಮೀ.

ನದಿಯಿಂದ ಸೇತುವೆಯ ಎತ್ತರ359 ಮೀ.

ಬಳಕೆ ಮಾಡಿರುವ ಉಕ್ಕು30,000 ಟನ್‌

ವಿನ್ಯಾಸದ ಬಾಳ್ವಿಕೆ ಅವಧಿ120 ವರ್ಷ 
 

click me!