ಉಡುಪಿ: ಸ್ಲ್ಪೆಂಡರ್‌ ಬೈಕಲ್ಲಿ ವಿಶ್ವದ 2ನೇ ಅತೀ ಎತ್ತರ ಪ್ರದೇಶಕ್ಕೆ ತೆರಳಿ ಕನ್ನಡ ಬಾವುಟ ಹಾರಿಸಿದ ಅಪ್ಪ ಮಗ..!

By Kannadaprabha News  |  First Published Jun 28, 2024, 12:55 PM IST

ಸಾಕಷ್ಟು ಮಂದಿ 300 ಸಿಸಿ, 400 ಸಿಸಿ ಬೈಕುಗಳ ಮೂಲಕ ತೆರಳಿ ಈ ಸಾಹಸ ಮಾಡುತ್ತಾರೆ. ಆದರೆ ಅಪ್ಪ ರಾಜೇಂದ್ರ ಶೆಣೈ ಮತ್ತು ಪುತ್ರ ಪ್ರಜ್ವಲ್ ಶೆಣೈ ಅವರು ಈ ಸಾಹಸ ಮಾಡಿರುವುದು ತಮ್ಮ ನಿತ್ಯಸಂಚಾರದ ಹೀರೋ ಹೊಂಡಾ ಸ್ಲ್ಪೆಂಡರ್‌ ಬೈಕ್‌ನಲ್ಲಿ ಎಂಬುದು ವಿಶೇಷ.


ಕಾಪು(ಜೂ.28): 100 ಸಿ.ಸಿ.ಯ ಹೀರೋ ಹೋಂಡಾ ಸ್ಪ್ಲೆಂಡರ್‌ ಬೈಕ್‌ ನಲ್ಲೇ ವಿಶ್ವದ 2ನೇ ಅತೀ ಎತ್ತರ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಖರ್ದುಂಗ್ಲಾಗೆ ತೆರಳಿ ಕನ್ನಡ ಬಾವುಟ ಹಾರಿಸುವ ಮೂಲಕ ಉಡುಪಿಯ ಅಪ್ಪ-ಮಗ ಸಾಹಸ ಮೆರೆದಿದ್ದಾರೆ.

ಸಾಕಷ್ಟು ಮಂದಿ 300 ಸಿಸಿ, 400 ಸಿಸಿ ಬೈಕುಗಳ ಮೂಲಕ ತೆರಳಿ ಈ ಸಾಹಸ ಮಾಡುತ್ತಾರೆ. ಆದರೆ ಅಪ್ಪ ರಾಜೇಂದ್ರ ಶೆಣೈ ಮತ್ತು ಪುತ್ರ ಪ್ರಜ್ವಲ್ ಶೆಣೈ ಅವರು ಈ ಸಾಹಸ ಮಾಡಿರುವುದು ತಮ್ಮ ನಿತ್ಯಸಂಚಾರದ ಹೀರೋ ಹೊಂಡಾ ಸ್ಲ್ಪೆಂಡರ್‌ ಬೈಕ್‌ನಲ್ಲಿ ಎಂಬುದು ವಿಶೇಷ.

Latest Videos

undefined

ನೀವು ಟ್ರೆಕ್ಕಿಂಗ್‌ ಪ್ರಿಯರೇ ಇಲ್ಲಿದೆ ನೋಡಿ ಪ್ರಪಂಚದ ಸುಂದರ ಹಾಗೂ ಅತಿ ಹೆಚ್ಚು ಏರಿದ ಪವರ್ತಗಳು!

ಅವರು ಜೂನ್ ಮೊದಲ ವಾರದಲ್ಲಿ ಉಡುಪಿಯಿಂದ ರೈಲಿನಲ್ಲಿ ಹೊರಟು ದೆಹಲಿ ತಲುಪಿದ್ದಾರೆ. ಅಲ್ಲಿಂದ ತಮ್ಮ ಬೈಕಿನಲ್ಲಿ ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ ಸುತ್ತಿ ಜಮ್ಮು ಮತ್ತು ಕಾಶ್ಮೀರ ತಲುಪಿದರು. ಅಲ್ಲಿ ಲೇಹ್, ಲಡಾಖ್‌, ಕಾರ್ಗಿಲ್‌, ಮನಾಲಿ ಮೂಲಕ ಸಮುದ್ರ ಮಟ್ಟದಿಂದ ಸರಿಸುಮಾರು 17,982 ಅಡಿ ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶ ಖರ್ದುಂಗ್ಲಾ ತಲುಪಿದ್ದಾರೆ. ಬೈಕಿನಲ್ಲಿ 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಮಾಡಿದ್ದಾರೆ. ಪದವಿ ಮುಗಿಸಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಸಿದ್ಧರಾಗುತ್ತಿರುವ ಪ್ರಜ್ವಲ್ ಮತ್ತು ಶಿರ್ವದಲ್ಲಿ ದಿನಸಿ ಅಂಗಡಿ ನಡೆಸುತ್ತಿರುವ ರಾಜೇಂದ್ರ ಅವರು ಈ ಹಿಂದೆ ಇದೇ ಬೈಕಿನಲ್ಲಿ ಕನ್ಯಾಕುಮಾರಿ, ರಾಮೇಶ್ವರಕ್ಕೆ ಹೋಗಿ ಬಂದಿದ್ದಾರೆ.

ಕಾರ್ಗಿಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಯುದ್ಧದಲ್ಲಿ ವೀರ ಮರಣ ಹೊಂದಿದ ಕ್ಯಾ.ವಿಕ್ರಮ್ ಬಾತ್ರಾ ಮತ್ತು ಇತರ ಸೈನಿಕರ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿಯನ್ನೂ ಸಮರ್ಪಿಸಿದ್ದಾರೆ. ರಾಜಸ್ಥಾನದಲ್ಲಿ 45 ಡಿಗ್ರಿ ಸೆ. ಮೈಸುಡುವ ಬಿಸಿಗಾಳಿ ತಾಳಿಕೊಂಡು, ಜಮ್ಮುವಿನಲ್ಲಿ-5 ಡಿಗ್ರಿ ಮೈಕೊರೆಯುವ ಚಳಿಯನ್ನು ಸಹಿಸಿಕೊಂಡು ಜೀವಮಾನದಲ್ಲೇ ಮರೆಯಲಾಗದ ಅನುಭೂತಿಯನ್ನು ಪ್ರಯಾಣದ ವೇಳೆ ಅವರು ಪಡೆದಿದ್ದಾರೆ.

ಕಾಶ್ಮೀರದ ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲಕಿರಿದಾಗಿದ್ದು, ಎರಡೂ ಬದಿಯಿಂದ ಕಲ್ಲುಗಳು ಉದುರುತ್ತಿದ್ದವು. ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಂಭವವಿತ್ತು. ರಸ್ತೆಯ ಎರಡೂ ಬದಿ ಆಳವಾದ ಪ್ರಪಾತವಿದ್ದು, ಸ್ವಲ್ಪ ಮೈಮರೆತರೂ ಕೆಳಕ್ಕೆ ಉರುಳಿ ಅಲ್ಲೇ ಸಮಾಧಿಯಾಗಬಹುದಾದ ಪರಿಸ್ಥಿತಿ ಭಯಾನಕವಾಗಿತ್ತು.

ಪ್ರಪಂಚದ ಅಪಾಯಕಾರಿ ತಾಣಗಳಿವು, ಒಂದ್ಸಲ ಹೋದ್ರೆ ರಿಟರ್ನ್ ಬರುವುದೇ ಡೌಟು!

ಜನ, ವಾಹನ ಸಂಚಾರ ಕಡಿಮೆ ಇರುವ ಬಹುತೇಕ ನಿರ್ಜನ ಪ್ರದೇಶ, ಕಲ್ಲುಹೊಂಡಗಳ ನಡುವೆ ನೀರು ಕೆಸರುಮಯ ರಸ್ತೆಯಲ್ಲಿ ಸಂಚರಿಸಿದ್ದನ್ನು, ಕಾಲಲ್ಲಿ ಗಮ್ ಬೂಟ್ ಇಲ್ಲದೆ, ಸಾಧಾರಣ ಶೂಸ್‌ಗಳನ್ನು ಧರಿಸಿದ್ದರಿಂದ ಸ್ನೋ ಬೈಟ್, ಪಾದ ಮರಗಟ್ಟಿ ಕಷ್ಟಪಟ್ಟಿದ್ದನ್ನು ರೋಮಾಂಚನದಿಂದ ಅಪ್ಪ, ಮಗ ನೆನಪಿಸಿಕೊಳ್ಳುತ್ತಾರೆ.

ಸಮುದ್ರ ಮಟ್ಟದಿಂದ ಸುಮಾರು 19,024 ಅಡಿ ಎತ್ತರದ ವಿಶ್ವದ ಅತೀ ಎತ್ತರದ ಸ್ಥಳ ಉಮ್ಮಿಂಗ್ಲಾ ತಲುಪಲು ಆಸೆಯಿತ್ತು. ಆದರೆ ಪ್ರತಿಕೂಲ ಹವಾಮಾನ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಪ್ರವಾಸವನ್ನು ಅರ್ಧಕ್ಕೆ ಮುಗಿಸಿ ಉಡುಪಿಗೆ ಹಿಂತಿರುಗಬೇಕಾಯಿತು ಎಂದು ಉಡುಪಿಯ ಸಾಹಸಿ ಬೈಕ್ ಸವಾರ ಪ್ರಜ್ವಲ್ ಶೆಣೈ ತಿಳಿಸಿದ್ದಾರೆ. 

click me!