ಪ್ರಕೃತಿ ಪ್ರಿಯರಿಗೆ ಪ್ರೈವೆಸಿ ಸಿಗೋ ಬೆಸ್ಟ್‌ ಹನಿಮೂನ್‌ ಸ್ಪಾಟ್‌ಗಳು!

By Suvarna News  |  First Published Dec 29, 2019, 9:32 AM IST

ನವ ವಿವಾಹಿತರು ಅತೀ ಹೆಚ್ಚು ಹುಡುಕೋದು ಏನ್‌ ಗೊತ್ತಾ.. ನಮಗೆ ಪ್ರೈವೆಸಿ ಎಲ್ಲಿ ಸಿಗುತ್ತೆ ಅಂತ. ಮದುವೆ ಆದ ಮೇಲೆ ಸುತ್ತ ಮುತ್ತ ಎಲ್ಲ ನೆಂಟರು, ಸ್ನೇಹಿತರು. ಮದುವೆ ಲೆಕ್ಕದಲ್ಲಿ ಅಲ್ಲಿ ಪಾರ್ಟಿ, ಇಲ್ಲಿ ಡಿನ್ನರ್‌ ಅಂತ ನವ ದಂಪತಿಗಳಿಗೆ ಏಕಾಂತವೇ ಸಿಗಲ್ಲ. ಹೊಸ ವರ್ಷದ ಹೊಸ್ತಿಲಲ್ಲಿ ನವ ಬದುಕಿಗೆ ಅಡಿಯಿಟ್ಟ ದಂಪತಿಗೆ ಬೆಸ್ಟ್‌ ತಾಣಗಳ ವಿವರ ಇಲ್ಲಿದೆ.
 


1. ಕೊಡಗಿನ ಚಳಿಯಲ್ಲಿ ..

ಕೊಡಗು ಅಂದರೆ ಹಿತವಾದ ಪರಿಸರ ಕಣ್ಮುಂದೆ ಹಾದು ಹೋಗುತ್ತೆ. ಡಿಸೆಂಬರ್‌ ಜನವರಿ ಹೊತ್ತಲ್ಲಿ ಇಲ್ಲಿ ಕುಟು ಕುಟು ಚಳಿ. ಮದುವೆಯಾದ ಹೊಸತರಲ್ಲಿ ಬರುವ ಜಗಳ, ಮುನಿಸು ಎಲ್ಲ ಮರೆಯಾಗಿ ದಂಪತಿಗಳಲ್ಲಿ ಪ್ರೀತಿಯ ಚಿಗುರು ಬೆಳೆಯುವ ಟೈಮು. ಕೊಡಗಿನಲ್ಲಿ ಅನೇಕ ಹೋಂ ಸ್ಟೇಗಳು, ರೆಸಾರ್ಟ್‌ಗಳು ಇವೆ. ನಿಮ್ಮ ಆರ್ಥಿಕತೆಗೆ ತಕ್ಕದ್ದನ್ನು ಆರಿಸಬಹುದು. ಮಡಿಕೇರಿ ಸಿಟಿಯಲ್ಲಿ ರಾಜಾಸೀಟ್‌ನಂಥಾ ಜಾಗಗಳಿಗೆ ವಿಸಿಟ್‌ ಮಾಡಬಹುದು.

Tap to resize

Latest Videos

ಆದರೆ ಇಲ್ಲೆಲ್ಲ ಜನದಟ್ಟಣೆ ಹೆಚ್ಚು. ಹಾಗಾಗಿ ಜನ ಕಡಿಮೆ ಇರುವ ಸುಂಠಿಕೊಪ್ಪ, ವಿರಾಜಪೇಟೆಯ ಕಡೆ ಹೋಗಿ. ಇಲ್ಲಿ ನಿಮಗೆ ಬೇಕಾದ ಏಕಾಂತ ಸಿಗುತ್ತದೆ. ರಮಣೀಯವಾದ ಜಾಗಗಳೂ ಇವೆ. ಜನ ಸಂಚಾರ ಕಡಿಮೆ. ಕಾಫಿ ತೋಟಗಳು, ನದಿ ದಂಡೆಗಳ ಮೇಲೆ ಚೆಂದದ ಹೋಂ ಸ್ಟೇಗಳು ಇರುತ್ತವೆ. ರೀಸನೇಬಲ್‌ ದರಕ್ಕೆ ನಿಮಗೊಂದು ಆಹ್ಲಾದಕರ ಅನುಭವ ನೀಡುತ್ತವೆ. ಮಂಜು ಸುರಿವ ಬೆಳಗು, ದಿನವಿಡೀ ಎಳೆ ಬಿಸಿಲು, ಸಂಜೆಯಾದರೆ ಮತ್ತೆ ಆವರಿಸುವ ಬೆಳ್ಳನೆ ಪರದೆಯಂಥಾ ಮಂಜು.. ನವ ದಾಂಪತ್ಯದ ದಿನಗಳನ್ನು ಲೈಪ್‌ಟೈಮ್‌ ನೆನೆಸುವಂತೆ ಮಾಡುತ್ತವೆ.

2 ಹೊನ್ನೆಮರಡು

ನವ ದಂಪತಿಗಳಿಬ್ಬರೂ ಪ್ರಕೃತಿಪ್ರಿಯರಾಗಿದ್ದರೆ ಈ ಜಾಗ ನಿಮಗೆ ಬಹಳ ಇಷ್ಟ ಆಗೋದ್ರಲ್ಲಿ ಡೌಟೇ ಇಲ್ಲ. ಇದೊಂದು ಹಿನ್ನೀರಿನ ಪ್ರದೇಶ. ಉತ್ತರ ಕನ್ನಡ ಜಿಲ್ಲೆ ಸಾಗರದ ಸಮೀಪ ಇದೆ. ಇಲ್ಲೇ ಕ್ಯಾಂಪಿಂಗ್‌ ಗೆ ಅವಕಾಶ ಇದೆ. ಅಡ್ವೆಂಚರ್‌ ಎಂಬ ಸಂಸ್ಥೆ ಪ್ರಕೃತಿ ಪ್ರೇಮಿಗಳಿಗೋಸ್ಕರವೇ ಇದನ್ನು ನಿರ್ವಹಿಸುತ್ತಿದೆ.

ದಟ್ಟವಾದ ಕಾಡು, ಹಿನ್ನೀರು, ಪ್ರಕೃತಿಯ ಮರ್ಮರ, ಎಲ್ಲಕ್ಕಿಂತ ಮುಖ್ಯವಾಗಿ ಒಂದು ಗಾಢವಾದ ಮೌನ.. ನೀವಿಬ್ಬರೂ ಒಬ್ಬರನ್ನೊಬ್ಬರು ಅರಿಯಲು ಸಹಾಯ ಮಾಡುತ್ತದೆ. ಹಿನ್ನೀರಿನಲ್ಲಿ ಅನೇಕ ಸಾಹಸ ಕ್ರೀಡೆಗಳನ್ನು ಆಡಬಹುದು. ಕೈ ಕೈ ಹಿಡಿದು ಹಿನ್ನೀರಿನ ದಂಡೆಯುದ್ದಕ್ಕೂ ಹೆಜ್ಜೆ ಹಾಕಬಹುದು. ಇಲ್ಲೇ ಕ್ಯಾಂಪ್‌ ಮಾಡೋದಾದ್ರೆ ಮೂರು ವಾರ ಮೊದಲೇ ಅಡ್ವೆಂಚರ್‌ ಸಂಸ್ಥೆಗೆ ಕರೆ ಮಾಡಿ ಬುಕ್‌ ಮಾಡಬೇಕು.

3. ಚಿಕ್ಕಮಗಳೂರು

ಚಿಕ್ಕಮಗಳೂರು ಅಂದ ಕೂಡಲೇ ಚಿಕ್ಕಮಗಳೂರು ಸಿಟಿಯಲ್ಲಿ ರೂಮ್‌ ಮಾಡ್ಕೊಂಡು ಮುಳ್ಳಯ್ಯನ ಗಿರಿ, ಬಾಬಾ ಬುಡನ್‌ಗಿರಿ ಸುತ್ತಾಡ್ಕೊಂಡು ಬರೋರೇ ಹೆಚ್ಚು. ಆದರೆ ನೀವು ನಿಜಕ್ಕೂ ಚಿಕ್ಕಮಗಳೂರಿನ ಚೆಲುವು ಆಸ್ವಾದಿಸಬೇಕಾದರೆ ಸಿಟಿ ಬಿಟ್ಟು ಹಳ್ಳಿಗಳ ಕಡೆಗೆ ಹೋಗಬೇಕು. ನೆಟ್‌ನಲ್ಲಿ ಸರ್ಚ್‌ ಮಾಡಿದರೆ ಚಿಕ್ಕಮಗಳೂರಿನ ಬೆಟ್ಟಗಳ ನಡುವೆ ಇರುವ ಹೋಂ ಸ್ಟೇಗಳ ವಿವರ ಸಿಗುತ್ತೆ. ಇಲ್ಲಿ ನಿಮಗೆ ಸರ್ವ ಸೌಲಭ್ಯವೂ ಸಿಗುತ್ತೆ. ಬೆಟ್ಟವೇರುವ ಅವಕಾಶ ಇರುತ್ತೆ.

ಸಂಜೆಗಳು ಹೆಚ್ಚು ಆಪ್ತವಾಗಿರುತ್ತವೆ. ಸಮಯವಿದ್ದರೆ ಮುಳ್ಳಯ್ಯನ ಗಿರಿ ಏರಿ, ಬಾಬಾ ಬುಡನ್‌ಗಿರಿಗೆ ಹೋಗಿ. ಅಲ್ಲಿಗೇ ಪ್ರಯಾಣ ಮುಗಿಸಿದರೆ ವೇಸ್ಟ್‌. ಅಲ್ಲಿಂದ ಮುಂದುವರಿದರೆ ಅದ್ಭುತ ಬೆಟ್ಟ ರಾಜಿಯಲ್ಲಿ ನಿಮಗೊಂದು ಏಕಾಂತ ದಕ್ಕುತ್ತದೆ. ಹುಯಿಲಿಡುವ ಗಾಳಿ ನಿಮ್ಮನ್ನು ಹರಸುತ್ತದೆ. ಈ ಬೆಟ್ಟಗಳಿಗೆ ಹೋಗುವ ದಾರಿ ಬಹಳ ದುರ್ಗಮ. ಆದರೆ ಆ ದಾರಿಯಲ್ಲಿ ಹೋಗುವ ಅನುಭವ ಲೈಪ್‌ಟೈಮ್‌ ಮೆಮೊರಿ. 

click me!