
ಸಾಮಾನ್ಯವಾಗಿ ಏಷ್ಯಾದ ಅತ್ಯುತ್ತಮ ಬೀಚ್‌ಗಳೆಂದರೆ ನಮಗೆ ಥೈಲ್ಯಾಂಡ್, ಬಾಲಿ ಅಥವಾ ಶ್ರೀಲಂಕಾ ನೆನಪಿಗೆ ಬರುತ್ತದೆ ಅಲ್ಲವೇ, ಆದರೆ ಭಾರತದಲ್ಲೂ ಇಂತಹ ಒಂದು ವಿಶ್ವದರ್ಜೆಯ ಬೀಚ್ ಇದೆ ಎಂಬುದು ಹೆಮ್ಮೆಯ ವಿಷಯ. ಅಂಡಮಾನ್‌ನ ಸ್ವರಾಜ್ ದ್ವೀಪದಲ್ಲಿ (ಹಿಂದಿನ ಹ್ಯಾವ್ಲಾಕ್ ದ್ವೀಪ) ಇರುವ ಈ ಬೀಚ್, ತನ್ನ ಮೃದುವಾದ ಬಿಳಿ ಮರಳು ಮತ್ತು ತಿಳಿ ನೀಲಿ ಬಣ್ಣದ ಸಮುದ್ರಕ್ಕೆ ಹೆಸರುವಾಸಿಯಾಗಿದೆ.
ಹೌದು.ಈ ಬೀಚ್ ಹೆಸರು ರಾಧಾನಗರ. ಇತ್ತೀಚೆಗೆ ರಾಧಾನಗರ ಬೀಚ್‌ನಲ್ಲಿ ನೀರಿನ ಅಡಿಯಲ್ಲಿ (Underwater) ಭಾರತದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ 'ಗಿನ್ನೆಸ್ ವಿಶ್ವ ದಾಖಲೆ' ನಿರ್ಮಿಸಲಾಗಿದೆ. ಈ ಅಪರೂಪದ ಸಾಧನೆಯಿಂದಾಗಿ ಈ ಸುಂದರ ಪ್ರವಾಸಿ ತಾಣವು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದು, ಪ್ರಪಂಚದಾದ್ಯಂತ ಎಲ್ಲರ ಗಮನ ಸೆಳೆಯುತ್ತಿದೆ. ಹಾಗಾದರೆ ಬನ್ನಿ, ಈ ಬೀಚ್‌ನ ವಿಶೇಷತೆ ಏನೆಂದು ತಿಳೊಯೋಣ..
'ಬೀಚ್ ನಂಬರ್ 7' ಎಂದೂ ಕರೆಯಲ್ಪಡುವ ರಾಧಾನಗರ ಬೀಚ್, 2004 ರಲ್ಲಿ ಟೈಮ್ (TIME) ಮ್ಯಾಗಜಿನ್‌ನಿಂದ 'ಏಷ್ಯಾದ ಅತ್ಯುತ್ತಮ ಬೀಚ್' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಂದಿನಿಂದ ಇಂದಿನವರೆಗೂ ಈ ಬೀಚ್ ತನ್ನ ಅಪ್ಪಟ ನೈಸರ್ಗಿಕ ಸೌಂದರ್ಯವನ್ನು ಕಿಂಚಿತ್ತೂ ಮಸಕಾಗದಂತೆ ಉಳಿಸಿಕೊಂಡು ಬಂದಿದೆ. ಇದಲ್ಲದೆ, ಇದು ಪ್ರತಿಷ್ಠಿತ 'ಬ್ಲೂ ಫ್ಲ್ಯಾಗ್' (Blue Flag) ಪ್ರಮಾಣಪತ್ರವನ್ನು ಪಡೆದಿದೆ. ಪರಿಸರ ಸಂರಕ್ಷಣೆ, ಸ್ವಚ್ಛತೆ, ಸುರಕ್ಷತೆ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಕಾಪಾಡಿಕೊಳ್ಳುವ ಬೀಚ್‌ಗಳಿಗೆ ಮಾತ್ರ ಡೆನ್ಮಾರ್ಕ್‌ನ ಈ ಅಂತರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ.
ಇಲ್ಲಿ ಸಾಹಸಕ್ಕಿಂತ ಹೆಚ್ಚಾಗಿ ಮನಸ್ಸಿಗೆ ಶಾಂತಿ ನೀಡುವ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ..
ಈಜು ಮತ್ತು ಬಿಸಿಲ ಸ್ನಾನ: ಇಲ್ಲಿ ಸಮುದ್ರದ ಆಳ ಕ್ರಮೇಣ ಹೆಚ್ಚಾಗುವುದರಿಂದ ಈಜಲು ತುಂಬಾ ಸುರಕ್ಷಿತವಾಗಿದೆ.
ಸೂರ್ಯಾಸ್ತದ ವೀಕ್ಷಣೆ: ಇಲ್ಲಿನ ಸೂರ್ಯಾಸ್ತದ ದೃಶ್ಯ ಜಗತ್ಪ್ರಸಿದ್ಧ. ಸಂಜೆ 4 ಗಂಟೆಗೆ ಇಲ್ಲಿ ತಲುಪಿದರೆ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಫೋಟೋಗ್ರಫಿ: ಎತ್ತರದ ಉಷ್ಣವಲಯದ ಮರಗಳು ಮತ್ತು ಬಿಳಿ ಮರಳು ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿದೆ. (ಡ್ರೋನ್ ಕ್ಯಾಮೆರಾ ಬಳಸಲು ಪೂರ್ವಾನುಮತಿ ಅಗತ್ಯ).
ಪಿಕ್ನಿಕ್: ಆಹಾರದ ಮಳಿಗೆಗಳು ಇಲ್ಲಿ ಕಡಿಮೆ ಇರುವುದರಿಂದ, ಪ್ರವಾಸಿಗರು ಲಘು ಉಪಾಹಾರ ಮತ್ತು ನೀರನ್ನು ಜೊತೆಯಲ್ಲಿ ಕೊಂಡೊಯ್ಯುವುದು ಉತ್ತಮ.
ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ. ಸಮುದ್ರ ಶಾಂತವಾಗಿರುತ್ತದೆ ಮತ್ತು ಹವಾಮಾನವು ಆಹ್ಲಾದಕರವಾಗಿರುತ್ತದೆ.
ಎಲಿಫೆಂಟ್ ಬೀಚ್: ಸ್ನಾರ್ಕ್ಲಿಂಗ್ ಮತ್ತು ಜೆಟ್ ಸ್ಕೀಯಿಂಗ್‌ನಂತಹ ಜಲಕ್ರೀಡೆಗಳಿಗೆ ಇದು ಪ್ರಸಿದ್ಧ.
ನೀಲ್ಸ್ ಕೋವ್ (Neil’s Cove): ರಾಧಾನಗರ ಬೀಚ್‌ನಿಂದ ಸ್ವಲ್ಪ ದೂರದಲ್ಲೇ ಇರುವ ಸುಂದರವಾದ ಲಗೂನ್ (ಖಾರಿ).
ಕಲಾ ಪತ್ತರ್ ಬೀಚ್: ಕಪ್ಪು ಜ್ವಾಲಾಮುಖಿ ಬಂಡೆಗಳಿಗೆ ಈ ಬೀಚ್ ಹೆಸರುವಾಸಿ.
ತಲುಪುವುದು ಹೇಗೆ?
ವಿಮಾನದ ಮೂಲಕ: ದೆಹಲಿ, ಮುಂಬೈ, ಬೆಂಗಳೂರು ಅಥವಾ ಚೆನ್ನೈನಿಂದ ಪೋರ್ಟ್ ಬ್ಲೇರ್‌ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳಿವೆ.
ನೌಕೆಯ ಮೂಲಕ: ಪೋರ್ಟ್ ಬ್ಲೇರ್‌ನಿಂದ ಹ್ಯಾವ್ಲಾಕ್ ದ್ವೀಪಕ್ಕೆ ಖಾಸಗಿ ಅಥವಾ ಸರ್ಕಾರಿ ಫೆರ್ರಿಗಳ (ದೋಣಿ) ಮೂಲಕ 90 ನಿಮಿಷಗಳಿಂದ 3 ಗಂಟೆಗಳಲ್ಲಿ ತಲುಪಬಹುದು.
ಸ್ಥಳೀಯ ಸಾರಿಗೆ: ಹ್ಯಾವ್ಲಾಕ್ ಜೆಟ್ಟಿಯಿಂದ ರಾಧಾನಗರ ಬೀಚ್ 12 ಕಿ.ಮೀ ದೂರದಲ್ಲಿದೆ. ಇಲ್ಲಿ ಟ್ಯಾಕ್ಸಿ, ಸ್ಕೂಟರ್ ಅಥವಾ ಆಟೋ ರಿಕ್ಷಾಗಳ ಮೂಲಕ 20 ನಿಮಿಷಗಳಲ್ಲಿ ತಲುಪಬಹುದು.
ಪಾಸ್‌ಪೋರ್ಟ್ ಅಗತ್ಯವಿಲ್ಲದೆಯೇ ವಿದೇಶಿ ಬೀಚ್‌ಗಳ ಅನುಭವ ನೀಡುವ ಈ ತಾಣ, ಭಾರತೀಯ ಪ್ರವಾಸಿಗರಿಗೆ ನಿಜಕ್ಕೂ ಸ್ವರ್ಗದಂತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.