ಕರ್ನಾಟಕದ ಕಾಶಿ ಯಾತ್ರೆ ರೈಲಿಗೂ ಮೋದಿ ಚಾಲನೆ?

By Kannadaprabha NewsFirst Published Oct 30, 2022, 7:19 AM IST
Highlights

ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲಿನ ಮೊದಲ ಪ್ರವಾಸ ನವೆಂಬರ್‌ 11ರಂದು ಬೆಂಗಳೂರಿನಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಯಾತ್ರಿಗಳ ಬುಕಿಂಗ್‌ ಆರಂಭ 

ಬೆಂಗಳೂರು(ಅ.30):  ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲಿನ ಮೊದಲ ಪ್ರವಾಸ ನವೆಂಬರ್‌ 11ರಂದು ಬೆಂಗಳೂರಿನಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಯಾತ್ರಿಗಳ ಬುಕಿಂಗ್‌ ಆರಂಭಿಸಲಾಗಿದೆ. ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಕೊಡಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ನಡೆಸಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಮರು ನಿರ್ಮಾಣವಾಗಿರುವ ದಿವ್ಯ ಕಾಶಿ- ಭವ್ಯಕಾಶಿಗೆ ರಾಜ್ಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬೇಕು. ವಿಶ್ವನಾಥನ ದರ್ಶನ ಪಡೆಯಬೇಕು ಎನ್ನುವ ಉದ್ದೇಶದಿಂದ ಈ ವಿಶೇಷ ಪ್ಯಾಕೇಜ್‌ ಟೂರ್‌ ಆಯೋಜಿಸಲಾಗಿದೆ. ಕೇಂದ್ರ ಸರಕಾರದ ಭಾರತ್‌ ಗೌರವ್‌ ಯೋಜನೆಯ ಅಡಿಯಲ್ಲಿ ರೈಲನ್ನು ಮುಜರಾಯಿ ಇಲಾಖೆ ಗುತ್ತಿಗೆಗೆ ಪಡೆದು ಈ ಯೋಜನೆ ಕಾರ್ಯಗತಗೊಳಿಸಿದೆ. ರೈಲ್ವೆ ಸಚಿವರ ಸಂಪೂರ್ಣ ಸಹಕಾರದೊಂದಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೊದಲ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಚಾಲನೆ ನೀಡುವುದಕ್ಕೆ ತಯಾರಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಕೆಲವೇ ದಿನಗಳಲ್ಲಿ ಕಾಶಿ ದರ್ಶನ್‌ ರೈಲು ಆರಂಭ: ಸಚಿವೆ ಶಶಿಕಲಾ ಜೊಲ್ಲೆ

8 ದಿನ ಪ್ರವಾಸ, 20000 ದರ:

ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ ದರ 20 ಸಾವಿರ ರು. ಆಗಿದ್ದು, ಪ್ರಯಾಣಿಕರು 15,000 ರು. ಪಾವತಿಸಬೇಕು. ಉಳಿದ 5,000 ರು. ಹಣವನ್ನು ರಾಜ್ಯ ಸರ್ಕಾರ ಸಹಾಯಧನದ ರೂಪದಲ್ಲಿ ನೀಡಲಿದೆ. ಎಂಟು ದಿನಗಳ ಈ ಪ್ರವಾಸ ಪ್ಯಾಕೇಜ್‌ನಲ್ಲಿ ರೈಲು ಟಿಕೆಟ್‌ ದರವು ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್‌ ವ್ಯವಸ್ಥೆ, ಉಳಿದುಕೊಳ್ಳಲು ಹೋಟೆಲ್‌, ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ಪ್ರಯಾಣಿಕರ ವಿಮೆಯನ್ನು ಒಳಗೊಂಡಿರಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ರೈಲು ನಿಲುಗಡೆ ನಿಲ್ದಾಣಗಳು:

ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ರೈಲು ಹತ್ತುವವರು ಮತ್ತು ಇಳಿಯುವವರು ಬುಕಿಂಗ್‌ ಸಮಯದಲ್ಲಿ ಈ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಯಾಣಿಕರಿಗೆ ಸ್ಲೀಪರ್‌ 3ಎಸಿ ಆಸನ ನೀಡಲಾಗುತ್ತದೆ.

ಯಾವ ಸ್ಥಳಗಳ ಪ್ರವಾಸ?

ವಾರಾಣಸಿ: ತುಳಸಿ ಮಾನಸ ಮಂದಿರ, ಸಂಕಟ ಮೋಚನ ಹನುಮಾನ್‌ ಮಂದಿರ, ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಗಂಗಾರತಿ.
ಅಯೋಧ್ಯೆ: ರಾಮಜನ್ಮ ಭೂಮಿ ದೇವಸ್ಥಾನ, ಹನುಮಾನ ಗರ್ಹಿ, ಸರಯೂಘಾಟ್‌
ಪ್ರಯಾಗ್‌ರಾಜ್‌: ಗಂಗಾ, ಯಮುನಾ ಸಂಗಮ, ಹನುಮಾನ್‌ ದೇವಸ್ಥಾನ.

ಬುಕಿಂಗ್‌ ಎಲ್ಲಿ ಮಾಡಬೇಕು?

ಐಆರ್‌ಸಿಟಿಸಿ ವೆಬ್‌ಸೈಟ್‌: www.irctctourism.com/package-description?packageCode=SZKBG01
 

click me!