ಮುಸ್ಲಿಂ ಬಾಹುಳ್ಯ ಮಲೇಷ್ಯಾದಲ್ಲೂ ನಾನ್ ಹಲಾಲ್ ಬೋರ್ಡ್, ಸಹಿಷ್ಣುತೆ ಅಂದ್ರೆ ಇದಲ್ಲವೇ?

By Suvarna NewsFirst Published Jun 24, 2023, 10:50 AM IST
Highlights

ಕರ್ನಾಟಕದಲ್ಲಿ ಹಲಾಲ್ ಇಶ್ಯೂ ಆಗುತ್ತಿರುತ್ತದೆ. ಆದರೆ, ಮುಸ್ಲಿಮರೇ ಹೆಚ್ಚಿರುವ ಮಲೇಷ್ಯಾದಂಥ ದೇಶವೂ ಇದಕ್ಕೊಂದು ಪರಿಹಾರ ಕಂಡು ಕೊಂಡಿದೆ.ಆ ಮೂಲಕ ಜಗಳ ಬದಿಗಿಟ್ಟು ಬದುಕುವುದು ಕಲಿತರೆ, ಈ ಜಗತ್ತಿನಲ್ಲಿ ನೂರಾರು ನಂಬಿಕೆಗಳ ನಡುವೆಯೂ ಬದುಕು ಸುಂದರವಾಗಿರುತ್ತೆ ಅನ್ನೋದನ್ನು ಪ್ರೂವ್ ಮಾಡಿದೆ ಎನ್ನುತ್ತಾರೆ ರಂಗಸ್ವಾಮಿ ಮೂಕನಹಳ್ಳಿ.

- ರಂಗಸ್ವಾಮಿ ಮೂಕನಹಳ್ಳಿ

ಮಲೇಷ್ಯಾ ದೇಶಕ್ಕೆ  ಇದು ನನ್ನ ಒಂಬತ್ತನೇ ಭೇಟಿ. 23 ವರ್ಷದಲ್ಲಿ ಮಲೇಷ್ಯಾ ಬದಲಾಗುತ್ತಾ ಹೋದುದನ್ನ ನೋಡಿದ ಅನುಭವ ನನ್ನದು. ಈ ಬಾರಿಯ ಭೇಟಿಯಲ್ಲಿ ಮುಖ್ಯ ಉದ್ದೇಶ ಎಕನಾಮಿ ಮತ್ತು ಧರ್ಮ . ಎಕಾನಾಮಿಯ ಬಗ್ಗೆ ವಿವರವಾಗಿ ಬರೆಯುವೆ. ಸದ್ಯಕ್ಕೆ ಧರ್ಮದ ಬಗ್ಗೆ ಬರೆಯುವೆ. ಇಲ್ಲಿಯವರೆಗೆ 19 ಮುಸ್ಲಿಂ ದೇಶಗಳನ್ನ ನೋಡುವ ಭಾಗ್ಯ ಸಿಕ್ಕಿದೆ. ಮಲೇಷ್ಯಾ ಅವುಗಳಲ್ಲಿ ನನ್ನ ಟಾಪ್ ಫೆವರೇಟ್. ಮೂರೂವರೆ ಕೋಟಿಗಿಂತ ಸ್ವಲ್ಪ ಕಡಿಮೆ ಜನಸಂಖ್ಯೆ ಇರುವ ದೇಶದಲ್ಲಿ ಶೇ.65 ಮುಸ್ಲಿಮರು , 7 ಪ್ರತಿಶತ ಹಿಂದೂಗಳು , ಉಳಿದ ಸಂಖ್ಯೆಯನ್ನ ಸಂಖ್ಯೆಯನ್ನ ಬೌದ್ಧರು , ಕ್ರಿಶ್ಚಿಯನ್ನರು ತುಂಬಿದ್ದಾರೆ. ಅಚ್ಚರಿ ಎನ್ನಿಸುವುದು ಏನು ಗೊತ್ತೇ? ಎರಡೂವರೆ ಪ್ರತಿಶತ ಜನ ಯಾವುದೇ ಧರ್ಮದಲ್ಲಿ ನಂಬಿಕೆಯಿಲ್ಲ ಎಂದಿರುವುದು! 65 ಪ್ರತಿಶತ ಮುಸ್ಲಿಮರಲ್ಲಿ ಪ್ರಾಕ್ಟಿಸಿಂಗ್ ಮುಸ್ಲಿಂರು ಕೇವಲ 18 ಪ್ರತಿಶತ !! ಉಳಿದಂತೆ 7 ಪ್ರತಿಶತ ಹಿಂದೂಗಳು , 9 ಪ್ರತಿಶತ ಬೌದ್ಧರು ಧರ್ಮವನ್ನ ಪಾಲಿಸುವುದಾಗಿ ಹೇಳಿಕೊಂಡಿದ್ದಾರೆ.
 
ಸಾವಿರಕ್ಕೂ ಹೆಚ್ಚಿನ ಕಿಲೋಮೀಟರ್ ರೋಡ್ ಟ್ರಿಪ್‌ನಲ್ಲಿ ದಾರಿಯುದ್ದಕ್ಕೂ ದೇವಸ್ಥಾನಗಳು, ಚರ್ಚುಗಳು ಹೇರಳವಾಗಿ ಕಾಣ ಸಿಕ್ಕವು. ಬೌದ್ಧ ಮಂದಿರಗಳು (ಪಗೋಡ) ಕೂಡ ಬಹಳಷ್ಟಿವೆ. ಮೈನಾರಿಟಿ ಪಟ್ಟ ಸಿಕ್ಕ ಮೇಲೆ ಜಗತ್ತಿನಾದ್ಯಂತ ಜನರ ಮೆಂಟಾಲಿಟಿ ಬದಲಾಗುತ್ತದೆ. ನನ್ನ ಅನುಭವದ ಪ್ರಕಾರ ಮನಸ್ಸಿನಲ್ಲಿ ಸುಪ್ತವಾಗಿರುವ ಭಯ ಮತ್ತು ಅಸ್ಥಿರತೆ ಇದಕ್ಕೆ ಕಾರಣ. ಇಲ್ಲಿನ ಭಾರತೀಯರಲ್ಲಿ ಎರಡು ವಿಧ, ಒಂದು ಕ್ಲಾಸ್ ಇನ್ನೊಂದು ಮಾಸ್ . ಇಲ್ಲಿನ ಭಾರತೀಯರಲ್ಲಿ ಮಧ್ಯಮವರ್ಗ ಎನ್ನುವ ವರ್ಗವೇ ಇಲ್ಲ. ಹೆಚ್ಚು ಮಕ್ಕಳು ಮಾಡಿಕೊಳ್ಳುವುದು, ತಮ್ಮದೇ ಕಾಲೋನಿಗಳಲ್ಲಿ ವಾಸಿಸುವುದು, ಧಾರ್ಮಿಕ ಹಬ್ಬಗಳನ್ನ ರಸ್ತೆಯಲ್ಲಿ ಆಚರಿಸುವುದು, ಹೆಚ್ಚಿನ, ದೊಡ್ಡ ಮಟ್ಟದ ಸದ್ದು ಮಾಡುವುದು, ತಮ್ಮ ಬಲ ಪ್ರದರ್ಶನಕ್ಕೆ ಇಳಿಯುವುದು ಸಾಮಾನ್ಯ ಗುಣಗಳು.
 
ಮಲೇಶ್ಯಾದಲ್ಲಿ ದೀಪಾವಳಿಗೆ ಪಟಾಕಿ ಹೊಡೆಯುವಂತಿಲ್ಲ ಎನ್ನುವ ಕಾನೂನು ಇದೆ. ಆದರೆ ಹಬ್ಬಕ್ಕೆ ವಾರಕ್ಕೆ ಮುಂಚಿನಿಂದ ರಸ್ತೆಯಲ್ಲಿ ಪಟಾಕಿ ಸ್ಟಾಲ್ ತಲೆ ಎತ್ತುತ್ತವೆ. ಹಬ್ಬದ ದಿನದಂದು ಭಾರತಕ್ಕಿಂತ ಹೆಚ್ಚಿನ ಪಟಾಕಿ ಸದ್ದು ಕೇಳಿಸುತ್ತದೆ. ಕೌಲಾಲಂಪುರ ಸಿಟಿ ಸೆಂಟರ್‌ನಲ್ಲಿರುವ ಮಾರಿಯಮ್ಮ ದೇವಸ್ಥಾನದಿಂದ ಬಟು ಕೇವ್ಸ್‌ನ ದೇವಸ್ಥಾನಕ್ಕೆ 15-16 ಕಿಲೋಮೀಟರ್ ದೂರವಿದೆ. ತಮಿಳು ಹೊಸ ವರ್ಷದ ಸಮಯದಲ್ಲಿ ದಿನಪೂರ್ತಿ ನಗರದಿಂದ ಬಟು ಕೇವ್ಸ್‌ವರೆಗೆ ಮೆರವಣಿಗೆಯಲ್ಲಿ ಹೋಗಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಕೆಲವೊಮ್ಮೆ ದಿನಪೂರ್ತಿ, ಕೆಲವೊಮ್ಮೆ ಒಂದೂವರೆ ದಿನ ರಸ್ತೆಯಲ್ಲಿ ಹಾಡು, ಕುಣಿತದ ಮೆರವಣಿಗೆಯದ್ದೇ ಸಾಮ್ರಾಜ್ಯ.  

ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?

ಕನ್ನಡಿಗರಿದ್ದಾರೆ, ಪಂಜಾಬಿಗಳೂ ಸಿಗುತ್ತಾರೆ:
ಮಲೇಷ್ಯಾ ಮುಸ್ಲಿಮರು ಸ್ವಭಾವತಃ ಅತ್ಯಂತ ಮೃದು ಭಾಷಿಗಳು. ಜೋರಾಗಿ ಕಿರುಚಿ ಮಾತನಾಡಿದ್ದು, ಜಗಳಕ್ಕೆ ಇಳಿದದ್ದು ಇಲ್ಲಿಯವರೆಗಿನ ನನ್ನ ಪ್ರವಾಸಗಳಲ್ಲಿ ಕಂಡಿಲ್ಲ. ಕನ್ನಡಿಗರ ಸಂಖ್ಯೆ ಇದೆ. ಆದರೆ ಲೆಕ್ಕಕ್ಕೆ ಬರುವಷ್ಟಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಪಂಜಾಬಿಗಳು ಸಿಗುತ್ತಾರೆ. ಅವರ ಗುರುದ್ವಾರವೂ ತಲೆಯೆತ್ತಿ ನಿಂತಿವೆ. ಬೌದ್ದರಲ್ಲಿ ಮಂದಿರಗಳು ಬರ್ಮಿಸ್ ಟೆಂಪಲ್, ಥೈಲ್ಯಾಂಡಿಸ್ ಟೆಂಪಲ್, ವಿಯೆಟ್ನಾಮೀಸ್ ಹೀಗೆ ಬಹಳಷ್ಟು ಛಿದ್ರವಾಗಿವೆ. ಮಂದಿರಗಳು ಮಾತ್ರ ಹೆಚ್ಚು ಕಡಿಮೆ ಎಲ್ಲವೂ ಸೇಮ್ ಇದೆ. 

ಎಲ್ಲಕ್ಕಿಂತ ಹೆಚ್ಚಿನ ಆಶ್ಚರ್ಯ ತರಿಸಿದ್ದು ಮುಸ್ಲಿಂ ಬಾಹುಳ್ಯವಿರುವ ದೇಶವಾಗಿ ಕೂಡ ಅನ್ಯ ಧರ್ಮದ ಬಗ್ಗೆ ಮಲಾಯ್ಗಳ್ಳಲಿರುವ ಸಹಿಷ್ಣುತೆ. ನಾನು ಕಂಡ ಯಾವ ಮುಸ್ಲಿಂ ದೇಶದಲ್ಲೂ ಇಂತಹ ಪಲಕವನ್ನು ಕಾಣಲಿಲ್ಲ. ನಾನ್ ಹಲಾಲ್ ಪದಾರ್ಥಗಳಿಗೆ, ಮಾಂಸಕ್ಕೆ ಇಲ್ಲಿ ಅವಕಾಶವಿದೆ. ಸೂಪರ್ ಮಾರ್ಕೆಟ್‌ನಲ್ಲಿ ನೀವು ಅದನ್ನ ಕೊಳ್ಳಬಹುದು. ಜೆಂಟಿಂಗ್ ಐಲ್ಯಾಂಡ್‌ನಂತಹ ಸ್ಥಳದಲ್ಲಿ ರೆಸ್ಟೋರೆಂಟ್ ಮುಂದೆ ನಾನ್ ಹಲಾಲ್ ಎನ್ನುವ ಬೋರ್ಡ್ ಹಾಕಲು ಬಿಡುತ್ತಾರೆ ಅಂದರೆ ನೀವೇ ಊಹಿಸಿಕೊಳ್ಳಿ!

ಹಿಂದೂಗಳ ಈ ಧಾರ್ಮಿಕ ಸ್ಥಳ ಸಂಜೆಯಾಗುತ್ತಿದ್ದಂತೆ ಭಯ ಹುಟ್ಟಿಸುವ ಸ್ಮಶಾನವಾಗುತ್ತೆ!

ಜಗಳ ಬದಿಗಿಟ್ಟು ಬದುಕುವುದು ಕಲಿತರೆ, ಈ ಜಗತ್ತಿನಲ್ಲಿ ನೂರಾರು ನಂಬಿಕೆಗಳ ನಡುವೆ ಕೂಡ ಬದುಕು ಸುಂದರವಾಗಿರಲು ಸಾಧ್ಯ. ಅದೇಕೋ ಗೊತ್ತಿಲ್ಲ, ಮಲೇಷ್ಯಾ ಹೊಸ ನಂಬಿಕೆ ನೀಡಿದೆ. 

click me!