ಮೃದುವಾದ ಹಾಸಿಗೆ ಮೇಲೆ ಮಲಗಿ, ತಂಪಾದ ಗಾಳಿ ತೆಗೆದುಕೊಳ್ತಾ, ಆಕಾಶದಲ್ಲಿ ಮಿನುಗುವ ನಕ್ಷತ್ರ ಎಣಿಸ್ತಾ ಮಲಗಿದ್ರೆ ನಿದ್ರೆ ಬಂದಿದ್ದೇ ತಿಳಿಯೋದಿಲ್ಲ. ಆ ಸುಂದರ ರಾತ್ರಿಯ ಬಗ್ಗೆ ನೀವೂ ಕನಸು ಕಾಣ್ತಿದ್ದರೆ ಇನ್ನೇಕೆ ತಡ. ನಿಮಗಾಗಿಯೇ ಇಂಥ ಹೊಟೇಲ್ ಒಂದು ನಿರ್ಮಾಣವಾಗಿದೆ.
ಪ್ರವಾಸಕ್ಕೆ ಹೋಗುವ ಸ್ಥಳ ಫಿಕ್ಸ್ ಆದ್ಮೇಲೆ ನಾವು ರಾತ್ರಿ ಎಲ್ಲಿ ತಂಗೋದು ಎನ್ನುವುದ್ರ ಬಗ್ಗೆ ಆಲೋಚನೆ ಮಾಡ್ತೇವೆ. ಸಂಬಂಧಿಕರು, ಸ್ನೇಹಿತರ ಮನೆಯಿದ್ರೆ ಅಲ್ಲಿಗೆ ಇಲ್ಲವೆ ಹೊಟೇಲ್ ರೂಮ್ ಗೆ ಹೋಗುತ್ತೇವೆ. ಪ್ರವಾಸಕ್ಕೆ ಹೋಗುವ ಟಿಕೆಟ್ ಬುಕ್ ಆಗ್ತಿದ್ದಂತೆ ಹೊಟೇಲ್ ರೂಮ್ ಕೂಡ ಬುಕ್ ಆಗುತ್ತದೆ. ಹೊಟೇಲ್ ಕೂಡ ಆರಾಮದಾಯಕವಾಗಿರಬೇಕು, ಯಾವುದೇ ಸಮಸ್ಯೆ ಕಾಡಬಾರದು, ನಮ್ಮ ಬಜೆಟ್ ಗೆ ಹೊಂದಿಕೆಯಾಗುವಂತಿರಬೇಕೆಂದು ನಾವು ಪ್ಲಾನ್ ಮಾಡಿ ರೂಮ್ ಬುಕ್ ಮಾಡ್ತೇವೆ.
ಭಾರತ (India) ಸೇರಿದಂತೆ ವಿದೇಶದಲ್ಲೂ ಸಾಕಷ್ಟು ಹೊಟೇಲ್ (Hotel) ಗಳು ತಮ್ಮದೇ ವೈಶಿಷ್ಟ್ಯದಿಂದ ಪ್ರಸಿದ್ಧಿ ಪಡೆದಿವೆ. ಕೆಲ ಹೊಟೇಲ್ ರೂಮಿನ ಬೆಲೆ ವಿಪರೀತವಾಗಿದ್ರೆ ಮತ್ತೆ ಕೆಲ ಹೊಟೇಲ್ ವಿಭಿನ್ನ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಮಾಲ್ಡೀವ್ಸ್ ನಲ್ಲಿ ನೀರಿನ ಅಡಿಯಲ್ಲಿ ನಿರ್ಮಿಸಲಾದ ಐಷಾರಾಮಿ ಹೋಟೆಲ್, ಸ್ವಿಟ್ಜರ್ಲೆಂಡ್‌ನ ಪರ್ವತಗಳ ಮಧ್ಯದಲ್ಲಿರುವ ಎಸ್ಚರ್ ಕ್ಲಿಫ್ ಹೋಟೆಲ್, ಫ್ರಾನ್ಸ್ ನಲ್ಲಿ ಹಿಮಪಾತದ ಮಧ್ಯೆ ಗಾಜಿನ ಗೋಡೆಯಿಂದ ಆವೃತವಾದ ಹೋಟೆಲ್,ಇದಲ್ಲದೇ ಇಟಲಿಯ ಗುಹೆಯ ಒಳಗಿರುವ ಗ್ರೊಟ್ಟಾ ಹೋಟೆಲ್, ದಟ್ಟ ಕಾಡಿನ ಮಧ್ಯದಲ್ಲಿರುವ ಇಂಡೋನೇಷಿಯಾದ ಹ್ಯಾಂಗಿಂಗ್ ಗಾರ್ಡನ್ ಹೋಟೆಲ್ ಹೀಗೆ ಪಟ್ಟಿ ಮಾಡ್ತಾ ಹೋದ್ರೆ ಸಾಕಷ್ಟು ಭಿನ್ನ ಹೊಟೇಲ್ ಗಳನ್ನು ನಾವು ನೋಡ್ಬಹುದು. ಇತ್ತೀಚಿನ ದಿನಗಳಲ್ಲಿ ಈ ಮೇಲಿನ ಹೊಟೇಲ್ ಗಳಷ್ಟೆ ಇನ್ನೊಂದು ಹೊಟೇಲ್ ಸುದ್ದಿ ಮಾಡ್ತಿದೆ. ಆ ಹೊಟೇಲ್ ರೂಮಿಗೆ ಛಾವಣಿಯಿಲ್ಲ. ಗೋಡೆಯೂ ಇಲ್ಲ. ಹಾಸಿಗೆ ಮೇಲೆ ಮಲಗಿದ್ರೆ ನಿಮಗೆ ಆಕಾಶ ಕಾಣುತ್ತದೆ. ಆ ರೂಮಿಗೆ ಬಾತ್ ರೂಮ್ ಕೂಡ ಇಲ್ಲ. ಹಾಗಿದ್ರೆ ಈ ವಿಭಿನ್ನ ಹೊಟೇಲ್ ಎಲ್ಲಿದೆ ಗೊತ್ತಾ? .
ವಿಮಾನದಲ್ಲಿ ಫೋನ್ ಫ್ಲೈಟ್ ಮೋಡ್ ನಲ್ಲಿ ಇಡದಿದ್ದರೆ ಏನಾಗುತ್ತೆ?
ಛಾವಣಿಯಿಲ್ಲದ, ಗೋಡೆಯಿಲ್ಲದ ಹೊಟೇಲ್ ಎಲ್ಲಿದೆ? : ಪ್ರಪಂಚದ ಅತ್ಯಂತ ಸುಂದರ ದೇಶವೆಂದೇ ಸ್ವಿಡ್ಜರ್ಲ್ಯಾಂಡ್ (Switzerland) ಪ್ರಸಿದ್ಧಿಪಡೆದಿದೆ. ಈ ಸ್ವಿಡ್ಜರ್ಲ್ಯಾಂಡ್ ನಲ್ಲಿಯೇ ಈ ಹೊಟೇಲ್ ಇದೆ. ಈ ಅದ್ಭುತ ಹೋಟೆಲ್‌ನ ಹೆಸರು ನಲ್ ಸ್ಟರ್ನ್ (Null Stern). ಸ್ವಿಡ್ಜರ್ಲ್ಯಾಂಡ್ ನ ಗೋಬ್ಸಿ ಎಂಬ ಪರ್ವತ ಶಿಖರದಲ್ಲಿ ಈ ನಲ್ ಸ್ಟರ್ನ್ ಹೊಟೇಲ್ ನಿರ್ಮಾಣಗೊಂಡಿದೆ. ರೂಮಿನ ನೆಲಕ್ಕೆ ಟೈಲ್ಸ್ ಹಾಕಲಾಗಿದೆ. ಅದ್ರ ಮೇಲೆ ಮಂಚವನ್ನಿಟ್ಟು, ಬೆಡ್ ಹಾಕಲಾಗಿದೆ. ಆದ್ರೆ ಮೇಲೆ ಛಾವಣಿಯಾಗ್ಲಿ, ಅಕ್ಕಪಕ್ಕ ಗೋಡೆಯಾಗ್ಲಿ ಇಲ್ಲ. ಕೆಲ ದಿನಗಳ ಹಿಂದಷ್ಟೆ ಈ ಹೊಟೇಲ್ ಗ್ರಾಹಕರಿಗೆ ತೆರೆದಿದೆ. ಈ ಹೊಟೇಲ್ ರೂಮಿನ ಇನ್ನೊಂದು ವಿಶೇಷವೆಂದ್ರೆ ಬಾತ್ ರೂಮ್. ನಿಮಗೆ ರೂಮಿನಲ್ಲಿಯೇ ಅಟ್ಯಾಚ್ಡ್ ಬಾತ್ ರೂಮ್ ಲಭ್ಯವಿಲ್ಲ. ನಾಲ್ಕೈದು ನಿಮಿಷ ನಡೆದ್ರೆ ಬಾತ್ ರೂಮ್ ಸಿಗುತ್ತದೆ. ಸುಂದರ ಆಕಾಶದ ಕೆಳಗೆ ನೆಮ್ಮದಿಯ ನಿದ್ರೆ ಮಾಡಬೇಕು ಎನ್ನುವ ಜನರಿಗೆ ಇದು ಹೇಳಿ ಮಾಡಿಸಿದಂತಿದೆ. ಐಷಾರಾಮಿ ಬೆಡ್ ಮೇಲೆ ಮಲಗಿ ನೀವು ಆಕಾಶದ ನಕ್ಷತ್ರಗಳನ್ನು ಎಣಿಸಬಹುದಾಗಿದೆ.
ನಮ್ಮಲ್ಲೇ ನೇತ್ರಾಣಿ ಐಲ್ಯಾಂಡ್ ಇರೋವಾಗ ಸ್ಕೂಬಾ ಡೈವಿಂಗ್‌ಗಾಗಿ ಥೈಲ್ಯಾಂಡ್‌ಗೆ ಯಾಕೆ?
ಈ ಹೊಟೇಲ್ ಬಾಡಿಗೆ ಎಷ್ಟು ಗೊತ್ತಾ? : ಛಾವಣಿ, ಗೋಡೆ, ಬಾತ್ ರೂಮ್ ಎನೂ ಇಲ್ಲದ ಈ ರೂಮ್ ಬಾಡಿಗೆ ಒಂದು ದಿನಕ್ಕೆ 15 ಸಾವಿರ ರೂಪಾಯಿಯಿಂದ ಶುರುವಾಗುತ್ತದೆ. ಕೆಲ ಋತುವಿನಲ್ಲಿ ಇದ್ರ ಬೆಲೆಯಲ್ಲಿ ಏರಿಕೆಯಾಗಬಹುದು. ಈ ಹೊಟೇಲ್ ಎಲ್ಲರ ಗಮನ ಸೆಳೆದಿದೆ. 9 ಸಾವಿರಕ್ಕೂ ಹೆಚ್ಚು ಮಂದಿ ರೂಮ್ ಬುಕ್ ಮಾಡಲು ಸರತಿಯಲ್ಲಿದ್ದಾರೆಂದು ಹೊಟೇಲ್ ಮಾಹಿತಿ ನೀಡಿದೆ.
ಯಾರಿಂದ ನಿರ್ಮಾಣಗೊಂಡಿದೆ ಈ ಹೊಟೇಲ್ : ಸ್ವಿಸ್ ಕಲಾವಿದರಾದ ಫ್ರಾಂಕ್ ಮತ್ತು ರಿಕ್ಲಿನ್ ಎಂಬ ಇಬ್ಬರು ಕಲಾವಿದರು ಇದನ್ನು ತಯಾರಿಸಿದ್ದಾರೆ. ಇವರ ಅನನ್ಯ ಶೈಲಿಯಲ್ಲಿ ನಿರ್ಮಾಣವಾದ ಹೊಟೇಲ್ ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.