Jog Falls: ಜೋಗ ಜಲಪಾತದಲ್ಲಿ ನಡೆಯಿತು ವಿಸ್ಮಯ: ಗುರುತ್ವಾಕರ್ಷಣೆಯ ವಿರುದ್ಧ ಚಲಿಸಿದ ನೀರು

By Sharath SharmaFirst Published Jun 14, 2022, 2:55 PM IST
Highlights

Jog Falls anti gravity video: ಜೋಗ ಜಲಪಾತದಲ್ಲಿ ವಿಸ್ಮಯ ಘಟನೆಯೊಂದು ನಡೆದಿತ್ತು, ಗುರುತ್ವಾಕರ್ಷಣೆಯ ವಿರುದ್ಧವಾಗಿ ನೀರು ಮೇಲ್ಮುಖವಾಗಿ ಚಲಿಸಿದೆ. ಈ ವಿಡಿಯೋ ಭಾರೀ ವೈರಲ್‌ ಆಗಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. 

ಬೆಂಗಳೂರು: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತವನ್ನು (Top tourist destination Jog Falls) ಬದುಕಿನಲ್ಲಿ ಒಮ್ಮೆಯಾದರೂ ನೋಡಬೇಕು ಎಂದು ಕನ್ನಡದ ವರನಟ ಡಾ. ರಾಜ್‌ಕುಮಾರ್‌ (Dr Rajkumar) ಅವರೇ ಹಾಡಿದ್ದರು. ಮಲೆನಾಡಿನ ಬೆಟ್ಟ ಗುಡ್ಡಗಳನ್ನು (Western Ghats) ದಾಟಿ ಮೈದುಂಬಿ ಧುಮ್ಮಿಕ್ಕಿ ಹರಿಯುತ್ತಿರುವ ಜೋಗ ಜಲಪಾತದ ಸೌಂದರ್ಯವನ್ನೊಮ್ಮೆ ಪ್ರತಿಯೊಬ್ಬರೂ ಸವಿಯಲೇಬೇಕು. ಜೋಗ ಜಲಪಾತವನ್ನು ನೋಡಲು ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಇಂತಾ ಜೋಗ ಜಲಪಾತದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ. ಕೆಳಮುಖವಾಗಿ ಧುಮ್ಮಿಕ್ಕಿ ಹರಿಯುವ ಜಲಪಾತ ಮೇಲ್ಮುಖವಾಗಿ ಆಕಾಶದತ್ತ ಚಿಮ್ಮಿದೆ. ಇದೂ ಕೂಡ ಪ್ರಕೃತಿಯದ್ದೇ ಕೈಚಳಕ. 

ಭೂಮಿ ತೊರೆದು ಗಗನದತ್ತ ಜೋಗ:
ಜೋಗ ಜಲಪಾತ ಸುಮಾರು 830 ಅಡಿಗಳಷ್ಟು ಉದ್ದವಿದೆ. ಭಾರತದಲ್ಲಿ ಅತೀ ಉದ್ದದ ಜಲಾಶಯಗಳಲ್ಲಿ ಜೋಗ ಜಲಪಾತ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ಇಷ್ಟು ಮೇಲಿನಿಂದ ಧುಮ್ಮಿಕ್ಕುವ ನೀರನ್ನು ನೋಡುವುದೇ ಒಂದು ಅದೃಷ್ಟು. ಸಾಮಾನ್ಯವಾಗಿ ಲಿಂಗನಮಕ್ಕಿ ಜಲಾಶಯ ತುಂಬಿದ ನಂತರ ಜೋಗ ಜಲಪಾತಕ್ಕೆ ನೀರು ಬಿಡಲಾಗುತ್ತದೆ. ಒಮ್ಮೊಮ್ಮೆ ಪ್ರವಾಸಿಗರಿಗಾಗಿ ಲಿಂಗನಮಕ್ಕಿಯ ಜಲಾಶಯ ತುಂಬದಿದ್ದರೂ ಬಿಡುತ್ತಾರೆ. ಈ ಬಾರಿ ಈಗಿನ್ನೂ ಮುಂಗಾರು ಮಳೆ ಆರಂಭವಾಗಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಲು ಸಮಯ ಬೇಕಿದೆ. 

ಸದ್ಯ ಜೋಗಜಲಪಾತ ತುಂಬಿ ಹರಿಯುತ್ತಿಲ್ಲ. ಕಡಿಮೆ ನೀರಿರುವ ಕಾರಣ ಜಲಪಾತದ ಕೆಳಗಿನಿಂದ ಒತ್ತಡ ಹೆಚ್ಚಾದಾಗ ಮತ್ತು ಅದಕ್ಕೆ ಭಾರೀ ಗಾಳಿಯೂ ಜತೆಯಾದಾಗ ಜಲಪಾತದ ನೀರು ಮೇಲಕ್ಕೆ ಚಿಮ್ಮುತ್ತದೆ. ಈ ರೀತಿಯ ಘಟನೆ ಆಗಿರುವುದು ಇದೇ ಮೊದಲಲ್ಲ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರೊಬ್ಬರು. ಗಾಳಿಯ ರಭಸಕ್ಕೆ ನೀರು ಮೇಲ್ಮುಖವಾಗಿ ಸಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದರ್ಥದಲ್ಲಿ ನ್ಯೂಟನ್‌ ಲಾ ಆಫ್‌ ಮೋಷನ್‌ ವಿರುದ್ಧವಾಗಿ ಈ ಘಟನೆ ನಡೆದಿದೆ. ಗುರುತ್ವಾಕರ್ಷಣಾ ಶಕ್ತಿಯ ವಿರುದ್ಧ ಹೋಗಲು ಕಾರಣವಾಗಿರುವುದು ಗಾಳಿ ಮತ್ತು ಜಲಪಾತದ ಕೆಳಗಿರುವ ಒತ್ತಡ. 

ಪ್ರವಾಸಿಗರ ನೆಚ್ಚಿನ ತಾಣ:
ಜೋಗ ಜಲಪಾತಕ್ಕೆ ದೇಶ ವಿದೇಶಗಳಿಂದ ಜನ ಬರುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲೇ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತ. ಜಲಪಾತ ಬೀಳುವ ಜಾಗ ಉತ್ತರ ಕನ್ನಡ ಜಿಲ್ಲೆಗೆ ಸೇರಿದರೆ, ಜಲಪಾತವನ್ನು ನಿಂತು ನೋಡುವ ಜಾಗ ಶಿವಮೊಗ್ಗ ಜಿಲ್ಲೆ ಸೇರುತ್ತದೆ. ಸಾಗರ ಮತ್ತು ಸಿದ್ದಾಪುರ ತಾಲೂಕಿನ ಗಡಿಯಲ್ಲಿ ಜಲಪಾತವಿದೆ. ರಾಜಾ, ರಾಣಿ, ರೋವರ್‌ ಮತ್ತು ರಾಕೆಟ್‌ ಎಂಬ ಹೆಸರುಗಳನ್ನು ಇಲ್ಲಿನ ಜಲಪಾತದ ನಾಲ್ಕು ಹರಿವುಗಳಿಗೆ ಇಡಲಾಗಿದೆ. ಬ್ರಿಟೀಷರ ಕಾಲದಿಂದಲೇ ಜೋಗ ಪ್ರಾಮುಖ್ಯತೆ ಪಡೆದಿತ್ತು. ಜತೆಗೆ ಸುತ್ತಮುತ್ತಲ ಹಳ್ಳಿಗಳಲ್ಲಿ ಎಥೇಚ್ಚವಾಗಿ ಮಸಾಲೆ ಪದಾರ್ಥಗಳನ್ನು ಬೆಳೆಯಲಾಗುತ್ತದೆ. 

ಕಾಳು ಮೆಣಸು, ಲವಂಗ, ದಾಲ್ಚಿನ್ನಿ, ಏಲಕ್ಕಿ, ಜಾಯಿಕಾಯಿ ಸೇರಿದಂತೆ ಹಲವು ರೀತಿಯ ಮಸಾಲೆಗಳನ್ನು ಮಲೆನಾಡಿನಲ್ಲಿ ಬೆಳೆಯಲಾಗುತ್ತದೆ. ಈ ಕಾರಣಕ್ಕಾಗಿಯೂ ಬ್ರಿಟೀಷರು ಜೋಗ ಜಲಪಾತಕ್ಕೆ ಪ್ರಾಶಸ್ತ್ಯ ನೀಡಿದ್ದರು. ಮತ್ತು ಹಿರಿಯ ಅಧಿಕಾರಿಗಳಿಗೆ ಇದು ನೆಚ್ಚಿನ ತಂಗುದಾಣವಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಇಲ್ಲಿ ಬಂದು ನೆಲೆಸುತ್ತಿದ್ದರು. 

ರಾಜ್ಯಕ್ಕೆ ಕಾಲಿಟ್ಟ ಮುಂಗಾರು:

ಮುಂಗಾರು ಮಳೆ ರಾಜ್ಯಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡಿನಲ್ಲೂ ಮಳೆ ತೀವ್ರವಾಗುವ ಸಾಧ್ಯತೆಯಿದ್ದು, ಜೋಗ ಜಲಪಾತ ಮತ್ತೆ ಮೈದುಂಬಿ ಹರಿಯಲಿದೆ. ಈ ಬಾರಿ ಮುಂಗಾರು ಸ್ವಲ್ಪ ಬೇಗವೇ ಆರಂಭವಾಗಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. 

click me!