
ಪ್ರಪಂಚ ಮೂಲೆ ಮೂಲೆಯಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಕೇಳಿದ್ರೆ, ನಮಗೆ ನಂಬೋದಕ್ಕೆ ಸಾಧ್ಯವಾಗೋದಿಲ್ಲ. ಅಂತಹ ಒಂದು ವಿಚಿತ್ರ ಗ್ರಾಮದ ಕಥೆ ಇದು. ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಓಕ್ಸಾಕದಲ್ಲಿರುವ ಟಿಲ್ಟೆಪೆಕ್ ಗ್ರಾಮವನ್ನು ಬಹಳ ಹಿಂದಿನಿಂದಲೂ ಅಂತಹ ನಿಗೂಢ ಸ್ಥಳವೆಂದು ಪರಿಗಣಿಸಲಾಗಿತ್ತು. ತಲೆಮಾರುಗಳಿಂದ, ಇಲ್ಲಿನ ಜನರು ನಿರ್ದಿಷ್ಟ ಮರವನ್ನು ನೋಡುವುದರಿಂದ ವ್ಯಕ್ತಿಯ ದೃಷ್ಟಿ ಹೋಗುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದರು.
ಟಿಲ್ಟೆಪೆಕ್ ಜನರು ಝೋಪೊಟೆಕ್ ಸಮುದಾಯಕ್ಕೆ ಸೇರಿದವರು. ಸ್ಥಳೀಯ ನಂಬಿಕೆಗಳ ಪ್ರಕಾರ, ಬಾವಿನಿ ಅಥವಾ ಲವಾಜೆಲಾ ಎಂಬ ಮರವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಈ ಮರವನ್ನು ನೋಡಿದವರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಹಲವಾರು ಜನ ಕುರುಡರಾದ ಪ್ರಕರಣಗಳು ಬೆಳಕಿದೆ ಬಂದ ಕಾರಣ, ಈ ಕಥೆ ಕ್ರಮೇಣ ಮನೆಮಾತಾಯಿತು. ನಿಗೂಢ ಮರದ ಕಥೆ ಮತ್ತು ಕುರುಡರಾಗುವ ಕಥೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂತು. ಇದೊಂದು ಅಲೌಕಿಕ ಶಕ್ತಿ, ಕೆಟ್ಟ ಶಕ್ತಿ ಎಂದೇ ಅಲ್ಲಿನ ಜನ ನಂಬಿದ್ದರು.
ವೈಜ್ಞಾನಿಕ ತನಿಖೆಯಲ್ಲಿ ತಿಳಿದು ಬಂದ ವಿಚಿತ್ರ ಸತ್ಯ
ಹಲವು ವರ್ಷಗಳ ಬಳಿಕ ವೈದ್ಯರು ಮತ್ತು ವಿಜ್ಞಾನಿಗಳು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅಲ್ಲಿನ ಜನರು ನಂಬಿಕೊಂಡ ಕಥೆಗಿಂತ ವಿಭಿನ್ನವಾದ ಸತ್ಯಾಂಶ ಬೆಳಕಿಗೆ ಬಂದಿದೆ. ಕುರುಡುತನದ ಪ್ರಕರಣಗಳು ನಿಗೂಢ ಮರ ಅಥವಾ ಅಲೌಕಿಕ ಶಕ್ತಿಗೆ ಸಂಬಂಧಿಸಿಲ್ಲ, ಬದಲಿಗೆ ಪರಾವಲಂಬಿ ಸೋಂಕಿನಿಂದ ಉಂಟಾಗಿವೆ ಎಂದು ತನಿಖೆಗಳು ತಿಳಿಸಿದವು. ಆಂಕೊಸೆರ್ಸಿಯಾಸಿಸ್ ಅಥವಾ ರಿವರ್ ಬ್ಲೈಂಡ್ನೆಸ್ ಎಂದು ಕರೆಯಲ್ಪಡುವ ಈ ರೋಗವು ಓಂಕೊಸೆರ್ಕಾ ವೋಲ್ವುಲಸ್ ಎಂಬ ಪರಾವಲಂಬಿ ಜೀವಿಗೆ ಸಂಬಂಧಿಸಿದೆ, ಇದು ಸೋಂಕಿತ ಕಪ್ಪು ನೊಣಗಳಿಂದ ಹರಡಬಹುದಾದ ಕಾಯಿಲೆಯಾಗಿದೆ.
ಕಣ್ಣುಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಸಣ್ಣ ನೊಣ
ಸೋಂಕಿತ ಕಪ್ಪು ನೊಣವು ವ್ಯಕ್ತಿಯನ್ನು ಕಚ್ಚಿದಾಗ, ಪರಾವಲಂಬಿ ದೇಹವನ್ನು ಪ್ರವೇಶಿಸಬಹುದು. ನಂತರ, ಸೋಂಕು ಕಣ್ಣುಗಳು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಶಾಶ್ವತ ಕಣ್ಣಿನ ಹಾನಿಯು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು. ಕಪ್ಪು ನೊಣಗಳು ಸಾಮಾನ್ಯವಾಗಿ ವೇಗವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುತ್ತವೆ. ಆದ್ದರಿಂದ, ನದಿಗಳು, ತೊರೆಗಳು ಮತ್ತು ನೀರಿನ ಸುತ್ತಲಿನ ಪರಿಸರದಿಂದಾಗಿ ಈ ರೋಗ ವೇಗವಾಗಿ ಹರಡುತ್ತದೆ.
ಮಕ್ಕಳು ಹುಟ್ಟಿನಿಂದಲೇ ಕುರುಡರಾಗಿರುವುದಿಲ್ಲ
ಇಲ್ಲಿ ಮಕ್ಕಳು ಹುಟ್ಟಿನಿಂದಲೇ ಕುರುಡರಾಗಿರುತ್ತಾರೆ ಎಂಬ ವದಂತಿ ಕೂಡ ಇತ್ತು. ಆದರೆ, ಲಭ್ಯವಿರುವ ವೈಜ್ಞಾನಿಕ ಪುರಾವೆಗಳು ಇದು ನಿಜವಲ್ಲ ಎಂದು ಸೂಚಿಸುತ್ತವೆ. ಮಕ್ಕಳು ಸಾಮಾನ್ಯ ದೃಷ್ಟಿಯೊಂದಿಗೆ ಜನಿಸುತ್ತಾರೆ. ಆದರೆ ನಂತರ ಸೋಂಕಿತ ಕಪ್ಪು ನೊಣಗಳು ಪದೇ ಪದೇ ಕಚ್ಚುವ ಮೂಲಕ ಪರಾವಲಂಬಿ ಸೋಂಕಿಗೆ ಒಳಗಾಗಬಹುದು. ಈ ರೋಗವು ಮನುಷ್ಯರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸೋಂಕಿತ ನೊಣಗಳು ಪ್ರಾಣಿಗಳಿಗೂ ಸೋಂಕು ತಗುಲಿಸಬಹುದು. ಇದನ್ನೇ ಅಲ್ಲಿನ ಜನರು ಇದು ಕೆಟ್ಟ ಶಕ್ತಿಯ ಪರಿಣಾಮ ಎಂದು ನಂಬಿಕೊಂಡು ಬಂದಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.