
ಬೆಂಗಳೂರು: ದೇಶದ ಪ್ರಮುಖ ಉದ್ಯಮಿ ವಿಪ್ರೋ ಸಂಸ್ಥಾಪಕ, ಪರೋಪಕಾರಿ ಅಜೀಂ ಪ್ರೇಮ್‌ಜಿ ಅವರು ತಮ್ಮ ಅಗಾಧ ಸಂಪತ್ತು ಹಾಗೂ ಪರೋಪಕಾರಿ ಕಾರ್ಯಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2026ರ ಪ್ರಕಾರ, ಪ್ರೇಮ್‌ಜಿ ಮತ್ತು ಅವರ ಕುಟುಂಬವು ₹2.63 ಲಕ್ಷ ಕೋಟಿ ಸಂಪತ್ತಿನೊಂದಿಗೆ ದೇಶದ 8ನೇ ಅತ್ಯಂತ ಶ್ರೀಮಂತ ಮನೆತನವಾಗಿ ಹೊರಹೊಮ್ಮಿದೆ. ಈ ಹಿಂದಿನಿದಕ್ಕಿಂತ ಅವರ ಸಂಪತ್ತು ಶೇ. 19 ರಷ್ಟು ಏರಿಕೆಯಾಗಿದೆ. ಆದರೆ, ಅವರ ಈ ಬೃಹತ್ ಆಸ್ತಿಯ ಹೊರತಾಗಿಯೂ, ಜನರ ಗಮನ ಸೆಳೆಯುವ ಮತ್ತೊಂದು ಪ್ರಮುಖ ವಿಷಯವೆಂದರೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಅವರ ₹350 ಕೋಟಿ ಮೌಲ್ಯದ ನಿವಾಸ.
ಅನೇಕ ಶತಕೋಟ್ಯಾಧಿಪತಿಗಳ ಗಾಜು ಮತ್ತು ಉಕ್ಕಿನ ಅದ್ದೂರಿ ಬಂಗಲೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಪ್ರೇಮ್ ಜಿ ಅವರ ಮನೆ. ಸರಳತೆ, ಪರಿಸರ ಕಾಳಜಿ ಮತ್ತು ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪಕ್ಕೆ ಈ ಬಂಗಲೆ ಹೆಸರುವಾಸಿಯಾಗಿದೆ.
ಸಾಮಾನ್ಯವಾಗಿ ಅತಿ-ಶ್ರೀಮಂತರು ನಗರದ ಮಧ್ಯಭಾಗದ ಪ್ರೀಮಿಯಂ ವಿಳಾಸಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಪ್ರೇಮ್‌ಜಿ ಅವರು ಪ್ರಶಾಂತತೆ ಹಾಗೂ ಹಸಿರಿನಿಂದ ಕೂಡಿದ ಐಟಿ ಹಬ್ ವೈಟ್‌ಫೀಲ್ಡ್ ಅನ್ನು ತಮ್ಮ ನಿವಾಸದ ಜಾಗವಾಗಿ ಆರಿಸಿಕೊಂಡಿದ್ದಾರೆ. ಅವರೊಬ್ಬ ಪರಿಸರ ಪ್ರೇಮಿ ಜೊತೆಗೆ ಸರಳ ಜೀವಿ.
'ಬಾಲನ್ + ನಂಬೀಸನ್ ಆರ್ಕಿಟೆಕ್ಟ್ಸ್' ಸಂಸ್ಥೆಯ ಪ್ರಕಾರ, ಈ ನಿವಾಸವು ಸುಮಾರು ಅರ್ಧ ಎಕರೆ ಜಾಗದಲ್ಲಿದ್ದು, 6,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ತೋಟದ ಮನೆಯಂತಿದ್ದು, ಸುತ್ತಲೂ ಹಸಿರಿನಿಂದ ಕೂಡಿದೆ. ಈ ಆಸ್ತಿಯ ₹350 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದೆ ಎಂದು ವರದಿಗಳ ಅಂದಾಜಾಗಿದ್ದು, ಅಧಿಕೃತವಾಗಿ ಎಲ್ಲೂ ತಿಳಿದುಬಂದಿಲ್ಲ. ಈ ಯೋಜನೆಯನ್ನು 2001ರಲ್ಲೇ ವಿನ್ಯಾಸಗೊಳಿಸಲಾಗಿತ್ತು. ಸಾಂಪ್ರದಾಯಿಕ ಇಟ್ಟಿಗೆ ಮತ್ತು ಕಲ್ಲು ಗಳಿಂದ ಮಾಡಲಾಗಿದ್ದು, ಈ ನಿವಾಸದ ಅತ್ಯಂತ ಆಕರ್ಷಕ ಅಂಶವೆಂದರೆ ಅದು ಆಧುನಿಕ ಹೊಳಪಿನ ಗಾಜಿನ ವಿನ್ಯಾಸಗಳನ್ನು ಸಂಪೂರ್ಣವಾಗಿ ಬದಿಗೊತ್ತಿರುವುದು.
ಎತ್ತರದ ಛಾವಣಿಗಳು, ಇಳಿಜಾರು (Pitch) ಮೇಲ್ಛಾವಣಿ, ವಿಶಾಲವಾದ ಅಂಗಳ ಮತ್ತು ದೊಡ್ಡ ವರಾಂಡಾಗಳನ್ನು ಹೊಂದಿರುವ ಫಾರ್ಮ್‌ಹೌಸ್ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇಟ್ಟಿಗೆ ಮತ್ತು ನೈಸರ್ಗಿಕ ಕಲ್ಲುಗಳನ್ನು ಪ್ರಮುಖವಾಗಿ ಬಳಸಿ ವಿನ್ಯಾಸಗೊಳಿಸಲಾಗಿದ್ದು, ಇದು ಭಾರತೀಯ ಸಾಂಪ್ರದಾಯಿಕ ಮತ್ತು ಕಾಲಾತೀತ ನೋಟವನ್ನು ನೀಡುತ್ತದೆ.
ಮನೆಯು ನಾಲ್ಕೂ ಕಡೆಯಿಂದ ಒಂದೇ ರೀತಿ ಕಾಣದೆ, ವಿಭಿನ್ನ ದೃಶ್ಯಾವಳಿಯನ್ನು ಕಾಣಲು ಸಿಗುತ್ತದೆ. ಪೂರ್ವ ಭಾಗ ಒಣ ಭೂದೃಶ್ಯದೊಂದಿಗೆ ಇಟ್ಟಿಗೆಯ ಹೊದಿಕೆಯನ್ನು ಹೊಂದಿದೆ. ಪಶ್ಚಿಮ ಭಾಗ ಹಚ್ಚ ಹಸಿರಿನ ಸಸ್ಯವರ್ಗದಿಂದ ಆವೃತವಾದ ಕಲ್ಲಿನ ಹೊದಿಕೆಯನ್ನು ಹೊಂದಿದೆ. ವಿಶಾಲ ವರಾಂಡಾಗಳು ಮತ್ತು ತೆರೆದ ಜಾಗಗಳು ಮನೆಯನ್ನು ಸುತ್ತಲಿನ ನೈಸರ್ಗಿಕ ವಾತಾವರಣದೊಂದಿಗೆ ತಡೆರಹಿತವಾಗಿ ಜೋಡಿಸುತ್ತವೆ.
ಸುಸ್ಥಿರ ಐಷಾರಾಮಿ ಎಂಬ ಪರಿಕಲ್ಪನೆ ಇತ್ತೀಚೆಗೆ ಪ್ರಸಿದ್ಧಿಯಾಗುವ ಮುನ್ನವೇ, ಅಂದರೆ 2001ರಲ್ಲೇ ಪ್ರೇಮ್‌ಜಿ ಅವರು ಈ ನಿವಾಸದಲ್ಲಿ ಮರುಬಳಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಿದ್ದರು.ಮನೆಯ ಮಾಲೀಕರು ಪರಿಸರದ ಮೇಲಿನ ಪರಿಣಾಮದ ಬಗ್ಗೆ ಜಾಗೃತರಾಗಿದ್ದರಿಂದ, ಹಲವಾರು ರಕ್ಷಿಸಲ್ಪಟ್ಟ ಹಾಗೂ ನವೀಕರಿಸಿದ ಪುರಾತನ ವಸ್ತುಗಳನ್ನು ಬಳಸಲಾಗಿದೆ. ಹೊಸದನ್ನು ಖರೀದಿಸುವ ಬದಲು ಅಸ್ತಿತ್ವದಲ್ಲಿರುವುದನ್ನು ಮರುಬಳಕೆ ಮಾಡುವ ಮೂಲಕ ಜವಾಬ್ದಾರಿಯುತ ವಿನ್ಯಾಸಕ್ಕೆ ಮಾದರಿಯಾಗಿದ್ದಾರೆ.
ಈ ನಿವಾಸದ ಖಾಸಗಿ ಒಳಾಂಗಣಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ. ಪ್ರೇಮ್‌ಜಿ ಅವರ ಸರಳ ವ್ಯಕ್ತಿತ್ವಕ್ಕೆ ತಕ್ಕಂತೆ ಮನೆಯು ಯಾವುದೇ ಅನಗತ್ಯ ದುಂದುಗಾರಿಕೆಯಿಲ್ಲದೆ ಅತ್ಯಂತ ಸೊಗಸಾಗಿ ನಿರ್ಮಾಣಗೊಂಡಿದೆ. ಎತ್ತರದ ಛಾವಣಿಗಳು, ನೈಸರ್ಗಿಕ ಬೆಳಕು ಮತ್ತು ಗಾಳಿಯಾಡುವ ವಿಶಾಲ ಸ್ಥಳಗಳು ಇದರ ಮುಖ್ಯ ಲಕ್ಷಣಗಳಾಗಿವೆ.
M3M ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2026ರ ಪ್ರಕಾರ, ಅಜೀಂ ಪ್ರೇಮ್‌ಜಿ ಮತ್ತು ಅವರ ಕುಟುಂಬದ ಒಟ್ಟು ನಿವ್ವಳ ಆಸ್ತಿ ಮೌಲ್ಯ ₹2.63 ಲಕ್ಷ ಕೋಟಿ ತಲುಪಿದ್ದು, ಶೇ. 19 ರಷ್ಟು ಪ್ರಗತಿ ಕಾಣುವ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಬೃಹತ್ ಆಸ್ತಿಯನ್ನು ಹೊಂದಿದ್ದರೂ, ಅವರ ಬೆಂಗಳೂರಿನ ನಿವಾಸವು ಯಾವುದೇ ಆಡಂಬರವಿಲ್ಲದೆ, ಸರಳ ಮಾತ್ರವಲ್ಲ ಸ್ವಾಭಾವಿಕ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.