
ಬೆಂಗಳೂರು: ನೀಲಿ ಸಮುದ್ರ, ಹವಳದ ದಿಬ್ಬಗಳು ಮತ್ತು ನಿಸರ್ಗ ಸೌಂದರ್ಯಕ್ಕೆ ಹೆಸರಾದ ಲಕ್ಷದ್ವೀಪಕ್ಕೆ ಪ್ರವಾಸ ಹೋಗಲು ಬಯಸುವವರಿಗೆ ಇಲ್ಲೊಂದು ಸಿಹಿ ಸುದ್ದಿ. ಪ್ರಮುಖ ಆನ್‌ಲೈನ್ ಟ್ರಾವೆಲ್ ಸಂಸ್ಥೆ 'ಮೇಕ್‌ಮೈಟ್ರಿಪ್' ಪ್ರಾದೇಶಿಕ ವಿಮಾನಯಾನ ಸಂಸ್ಥೆ 'ಫ್ಲೈ91' ಜೊತೆ ಕೈಜೋಡಿಸಿದ್ದು, ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸಂಪರ್ಕವಿರುವ ವಿಶೇಷ ಹಾಲಿಡೇ ಪ್ಯಾಕೇಜ್‌ಗಳನ್ನು ಘೋಷಿಸಿದೆ.
ಈ ವಿಶೇಷ ವಿಮಾನ ಸೇವೆಯು 2026ರ ನವೆಂಬರ್ 12 ರಿಂದ ಆರಂಭವಾಗಲಿದ್ದು, 2027ರ ಜನವರಿ ಮಧ್ಯದವರೆಗೆ ಲಭ್ಯವಿರಲಿದೆ. ಲಕ್ಷದ್ವೀಪಕ್ಕೆ ಭೇಟಿ ನೀಡಲು ನವೆಂಬರ್‌ನಿಂದ ಜನವರಿ ಅತ್ಯಂತ ಪ್ರಶಸ್ತವಾದ ಸಮಯ ಆಗಿರುವುದರಿಂದ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಬೆಂಗಳೂರಿನಿಂದ ಲಕ್ಷದ್ವೀಪದ 'ಅಗತ್ತಿ' ದ್ವೀಪಕ್ಕೆ ವಿಮಾನಗಳು ಹಾರಾಟ ನಡೆಸಲಿವೆ.
ಬೆಂಗಳೂರು ನಗರವು ದೇಶದ ಇತರೆ ಪ್ರಮುಖ ನಗರಗಳೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿರುವುದರಿಂದ, ಕೇವಲ ದಕ್ಷಿಣ ಭಾರತೀಯರಿಗೆ ಮಾತ್ರವಲ್ಲದೆ ಇಡೀ ದೇಶದ ಪ್ರವಾಸಿಗರಿಗೆ ಲಕ್ಷದ್ವೀಪ ತಲುಪಲು ಬೆಂಗಳೂರು ಮುಖ್ಯ ಹೆಬ್ಬಾಗಿಲಾಗಲಿದೆ.
4 ದಿನ ಮತ್ತು 3 ರಾತ್ರಿಗಳ ಈ ಪ್ರವಾಸ ಪ್ಯಾಕೇಜ್‌ನ ದರ ಒಬ್ಬರಿಗೆ 84,898 ರೂ. ರಿಂದ ಆರಂಭವಾಗುತ್ತದೆ. ಇದರಲ್ಲಿ ಬೆಂಗಳೂರಿನಿಂದ ಹೋಗಿ-ಬರುವ ನೇರ ವಿಮಾನ ಟಿಕೆಟ್, ಲಕ್ಷದ್ವೀಪ ಪ್ರವೇಶಕ್ಕೆ ಅಗತ್ಯವಿರುವ ಪರ್ಮಿಟ್ (ಅನುಮತಿ ಪತ್ರ), ಉತ್ತಮ ವಸತಿ, ಊಟೋಪಚಾರ, ಸ್ಥಳೀಯ ಚಟುವಟಿಕೆಗಳು ಹಾಗೂ ಪ್ರವಾಸಿಗರ ನೆರವಿಗೆ ಜತೆಯಲ್ಲೇ ಒಬ್ಬ ಟೂರ್ ಮ್ಯಾನೇಜರ್ ಲಭ್ಯವಿರಲಿದ್ದಾರೆ.
ವಿಶೇಷವೆಂದರೆ ಲಕ್ಷದ್ವೀಪ ಪ್ರವಾಸಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಒಂದೇ ಬುಕಿಂಗ್ ಅಡಿಯಲ್ಲಿ ಕಲ್ಪಿಸಲಾಗಿದೆ. ಇದು ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾಗಿದೆ.
ಪ್ಯಾಕೇಜ್‌ನಲ್ಲಿರುವ ಸಾಮಾನ್ಯ ಚಟುವಟಿಕೆಗಳ ಜೊತೆಗೆ, ಪ್ರವಾಸಿಗರು ಹೆಚ್ಚುವರಿ ಶುಲ್ಕ ನೀಡಿ ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ಆಮೆಗಳ ವೀಕ್ಷಣೆ, ಕಯಾಕಿಂಗ್, ಗ್ಲಾಸ್-ಬಾಟಮ್ ಬೋಟ್ ರೈಡ್ ಹಾಗೂ ಯೋಗ-ಧ್ಯಾನದಂತಹ ಚಟುವಟಿಕೆಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.
"ಲಕ್ಷದ್ವೀಪಕ್ಕೆ ಭೇಟಿ ನೀಡಲು ಜನರಿಗೆ ಅಪಾರ ಆಸಕ್ತಿಯಿತ್ತು, ಆದರೆ ನೇರ ಮತ್ತು ಸುಲಭ ಪ್ರಯಾಣದ ಕೊರತೆಯಿತ್ತು. ಈ ಪಾಲುದಾರಿಕೆಯು ಆ ಕೊರತೆಯನ್ನು ನೀಗಿಸಲಿದೆ," ಎಂದು ಮೇಕ್‌ಮೈಟ್ರಿಪ್‌ನ ಚೀಫ್ ಬಿಸಿನೆಸ್ ಆಫೀಸರ್ ಜಸ್ಮೀತ್ ಸಿಂಗ್ ಹೇಳಿದ್ದಾರೆ..
ಫ್ಲೈ91 ಸಂಸ್ಥೆಯ ಎಂಡಿ ಮತ್ತು ಸಿಇಒ ಮನೋಜ್ ಚಾಕೋ ಮಾತನಾಡಿ, "ಅಗತ್ತಿ ಭಾರತದ ಅತ್ಯಂತ ಸುಂದರ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಪ್ರಯಾಣಿಕರಿಗೆ ಕೇವಲ ವಿಮಾನಯಾನ ಮಾತ್ರವಲ್ಲದೆ, ನೆನಪಿನಲ್ಲಿ ಉಳಿಯುವಂತಹ ಅದ್ಭುತ ರಜಾದಿನಗಳ ಅನುಭವವನ್ನು ನೀಡುವುದು ನಮ್ಮ ಉದ್ದೇಶ," ಎಂದು ವಿವರಿಸಿದ್ದಾರೆ.
ಈ ಆಕರ್ಷಕ ಲಕ್ಷದ್ವೀಪ ಹಾಲಿಡೇ ಪ್ಯಾಕೇಜ್‌ಗಳನ್ನು ಮೇಕ್‌ಮೈಟ್ರಿಪ್‌ನ ಆ್ಯಪ್, ಅಧಿಕೃತ ವೆಬ್‌ಸೈಟ್ ಅಥವಾ ಅದರ ಫ್ರಾಂಚೈಸಿ ಕೇಂದ್ರಗಳ ಮೂಲಕ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.