ಕೇದರನಾಥ ದರ್ಶನಕ್ಕೆ ತಯಾರಿ ನಡೆಸಿರುವವರ ಗಮನಕ್ಕೆ…. ಇಂದಿನಿಂದ ದೇವಸ್ಥಾನ ಬಂದ್! ಎಲ್ಲಿ ಹೋಗ್ತಾರೆ ಬಾಬಾ?

Published : Nov 11, 2026, 07:34 PM IST
kedarnath temple

ಸಾರಾಂಶ

Kedarnath Temple: ಭಾಯ್ ದೂಜ್ ದಿನದಂದೇ ಕೇದಾರನಾಥ ದೇವಸ್ಥಾನದ ಬಾಗಿಲುಗಳನ್ನು ಮುಚ್ಚುವ ಸಂಪ್ರದಾಯವಿದೆ. ಆದರೆ ಇದರ ಹಿಂದಿರುವ ಪೌರಾಣಿಕ ನಂಬಿಕೆ ಏನು? ಆರು ತಿಂಗಳ ಕಾಲ ಬಾಬಾ ಕೇದಾರ ಎಲ್ಲಿ ನೆಲೆಸಿರುತ್ತಾರೆ? ಚಳಿಗಾಲದಲ್ಲಿ ಪೂಜೆ ಎಲ್ಲಿ ನಡೆಯುತ್ತದೆ? ಈ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಭಾಯ್ ದೂಜ್ ನಿಂದ ಕೇದರನಾಥ ದೇಗುಲ ಬಂದ್

ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ಧಾಮಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡಿ ಬಾಬಾ ಕೇದಾರನಾಥನ ದರ್ಶನ ಪಡೆಯುತ್ತಾರೆ. ಬೇಸಿಗೆಯ ಸಮಯದಲ್ಲಿ ಇಲ್ಲಿ ಭಕ್ತರ ದಂಡೇ ಹರಿದುಬರುತ್ತದೆ. ಆದರೆ ಚಳಿಗಾಲ ಆರಂಭವಾಗುತ್ತಿದ್ದಂತೆ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಅದರಲ್ಲೂ ಪ್ರತಿವರ್ಷ ಭಾಯ್ ದೂಜ್ ದಿನವೇ ಕೇದಾರನಾಥ ದೇವಸ್ಥಾನದ ಬಾಗಿಲು ಮುಚ್ಚುವ ಸಂಪ್ರದಾಯವಿದೆ ಎಂಬುದು ವಿಶೇಷ.

ಈ ದಿನ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ನಂತರ ಆರು ತಿಂಗಳ ಕಾಲ ಬಾಬಾ ಕೇದಾರನ ಪೂಜೆಯನ್ನು ಉಖೀಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಗುತ್ತದೆ. ಹಾಗಾದರೆ ಭಾಯ್ ದೂಜ್ ದಿನವೇ ದೇವಸ್ಥಾನದ ಬಾಗಿಲು ಮುಚ್ಚುವುದೇಕೆ? ಆ ಬಳಿಕ ಬಾಬಾ ಕೇದಾರನ ಪೂಜೆ ಎಲ್ಲಿ ನಡೆಯುತ್ತದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾಯ್ ದೂಜ್ ದಿನವೇ ಕೇದಾರನಾಥ ದೇವಸ್ಥಾನದ ಬಾಗಿಲು ಮುಚ್ಚುವುದೇಕೆ?

ಪ್ರತಿವರ್ಷ ಭಾಯ್ ದೂಜ್ ದಿನದಂದು ಕೇದಾರನಾಥ ಧಾಮದ ಬಾಗಿಲು ಮುಚ್ಚುವ ಸಂಪ್ರದಾಯವಿದೆ. ಈ ಸಂಪ್ರದಾಯದ ಹಿಂದೆ ಹಲವು ಧಾರ್ಮಿಕ ನಂಬಿಕೆಗಳು ಹಾಗೂ ಪೌರಾಣಿಕ ಕಥೆಗಳು ಪ್ರಚಲಿತದಲ್ಲಿವೆ. ಈ ಪೈಕಿ ಒಂದು ನಂಬಿಕೆಯು ಮಹಾಭಾರತದ ಕಾಲಕ್ಕೂ ಸಂಬಂಧಿಸಿದೆ. ಮಹಾಭಾರತದ ಯುದ್ಧ ಮುಗಿದ ಬಳಿಕ ಪಾಂಡವರು ತಮ್ಮ ಪಾಪಗಳಿಂದ ಮುಕ್ತಿ ಪಡೆಯಲು ಶಿವನನ್ನು ಹುಡುಕಿಕೊಂಡು ಹಿಮಾಲಯಕ್ಕೆ ತೆರಳಿದ್ದರು. ಈ ಪ್ರಯಾಣದಲ್ಲಿ ದ್ರೌಪದಿಯೂ ಅವರೊಂದಿಗೆ ಇದ್ದರು. ಪಾಂಡವರು ಕೇದಾರನಾಥದಲ್ಲಿ ಶಿವನನ್ನು ಆರಾಧಿಸಿದ್ದರು ಎಂಬ ನಂಬಿಕೆಯಿದೆ. ಭಾಯ್ ದೂಜ್ ದಿನದಂದು ಪಾಂಡವರು ತಮ್ಮ ಪಿತೃಗಳಿಗಾಗಿ ತರ್ಪಣ ವಿಧಿಯನ್ನು ನೆರವೇರಿಸಿದ್ದರು. ಇದರಿಂದ ಪಿತೃಗಳ ಆಶೀರ್ವಾದ ಪಡೆದು ಸ್ವರ್ಗಪ್ರಾಪ್ತಿಯಾದರು ಎಂಬ ಪ್ರತೀತಿ ಇದೆ. ಹೀಗಾಗಿ ಈ ದಿನಕ್ಕೆ ಕೇದಾರನಾಥದ ಧಾರ್ಮಿಕ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ ಎಂಬ ನಂಬಿಕೆ ಇದೆ.

ಹಿಮಪಾತ ಮತ್ತು ತೀವ್ರ ಚಳಿಯೂ ಪ್ರಮುಖ ಕಾರಣ

ಭಾಯ್ ದೂಜ್ ಹಬ್ಬದ ನಂತರ ಪರ್ವತ ಪ್ರದೇಶಗಳಲ್ಲಿ ಚಳಿಯ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 3,584 ಮೀಟರ್ ಎತ್ತರದಲ್ಲಿರುವ ಕೇದಾರನಾಥ ಧಾಮದಲ್ಲಿ ಚಳಿಗಾಲದ ಸಮಯದಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಕ್ಕೆ ಇಳಿಯುತ್ತದೆ. ಅಲ್ಲದೆ, ಭಾರೀ ಹಿಮಪಾತವೂ ಸಂಭವಿಸುತ್ತದೆ. ಇದರಿಂದ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಮಾರ್ಗಗಳು ಹಿಮದಿಂದ ಆವೃತವಾಗುತ್ತವೆ. ಹೀಗಾಗಿ ಭಕ್ತರು ದೇವಸ್ಥಾನವನ್ನು ತಲುಪುವುದು ಅತ್ಯಂತ ಕಷ್ಟಕರವಾಗುತ್ತದೆ. ಈ ಕಾರಣದಿಂದ ಭಾಯ್ ದೂಜ್ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ವೈದಿಕ ಮಂತ್ರಗಳು ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕೇದಾರನಾಥ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ದೇವಸ್ಥಾನದ ಬಾಗಿಲು ಮುಚ್ಚಿದ ಬಳಿಕ ಬಾಬಾ ಕೇದಾರನ ಪೂಜೆ ಎಲ್ಲಿ ನಡೆಯುತ್ತದೆ?

ಕೇದಾರನಾಥ ದೇವಸ್ಥಾನದ ಬಾಗಿಲು ಮುಚ್ಚಿದರೂ ಬಾಬಾ ಕೇದಾರನ ಪೂಜೆ ಮಾತ್ರ ನಿಲ್ಲುವುದಿಲ್ಲ. ದೇವಸ್ಥಾನದ ಬಾಗಿಲು ಮುಚ್ಚಿದ ಬಳಿಕ ಬಾಬಾ ಕೇದಾರನ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯನ್ನು ಉಖೀಮಠದಲ್ಲಿರುವ ಓಂಕಾರೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಉಖೀಮಠವನ್ನು ಬಾಬಾ ಕೇದಾರನ ಚಳಿಗಾಲದ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಮುಂದಿನ ಆರು ತಿಂಗಳ ಕಾಲ ಇಲ್ಲಿಯೇ ಬಾಬಾ ಕೇದಾರನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ಸಮಯದಲ್ಲಿಯೂ ಭಕ್ತರು ಉಖೀಮಠಕ್ಕೆ ತೆರಳಿ ಬಾಬಾ ಕೇದಾರನ ದರ್ಶನ ಪಡೆಯಬಹುದು.

ಇನ್ನು ಪ್ರತಿವರ್ಷ ಮಹಾಶಿವರಾತ್ರಿ ದಿನದಂದು ಕೇದಾರನಾಥ ದೇವಸ್ಥಾನದ ಬಾಗಿಲುಗಳನ್ನು ಮತ್ತೆ ತೆರೆಯುವ ದಿನಾಂಕ ಹಾಗೂ ಶುಭ ಮುಹೂರ್ತವನ್ನು ನಿಗದಿಪಡಿಸಲಾಗುತ್ತದೆ. ನಂತರ ಬೇಸಿಗೆ ಆರಂಭವಾದಾಗ ಭಕ್ತರ ದರ್ಶನಕ್ಕಾಗಿ ಕೇದಾರನಾಥ ಧಾಮದ ಬಾಗಿಲುಗಳನ್ನು ಮತ್ತೆ ತೆರೆಯಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೋವಾ, ತಿರುಪತಿ ಸೇರಿ ಹೊಸ ವರ್ಷಕ್ಕೆ 8 ರೈಲುಗಳು ರದ್ದು: ಟೂರ್‌ ಪ್ಲ್ಯಾನ್‌ ಮಾಡುವ ಮುನ್ನ ಇಲ್ಲಿ ನೋಡಿ
ಭಾರತ ಬಿಟ್ಟು ಗ್ರೀಸ್‌ನಲ್ಲಿ ಅನಿರುದ್ಧ್-ಕಾವ್ಯಾ ಮದುವೆ: ಅಷ್ಟಕ್ಕೂ ಅಲ್ಲಿನ ಸ್ಪೆಷಾಲಿಟಿ ಏನು?