ರಾಜಸ್ಥಾನದ ನಗರಗಳು ಪೂರ್ವ ಯೂರೋಪ್ ಹಾಗೂ ಏಷ್ಯನ್ನರ ಫೇವರೇಟ್ ಪ್ರವಾಸಿ ಸ್ಥಳಗಳಾಗಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಜೋಧ್‌ಪುರ ಬೆಳೆಯುತ್ತಿರುವ ಪ್ರವಾಸಿ ಸ್ಥಳಗಳಲ್ಲಿ ಜಗತ್ತಿನಲ್ಲೇ ಟಾಪ್ 10ರಲ್ಲಿ ಒಂದಾಗಿ ಹೊರಹೊಮ್ಮಿದೆ.
ಹಿಂದೆ ವಿದೇಶಿಯರು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿಕೊಂಡ ತಾಜ್‌ಮಹಲ್ ನೋಡಲು ಆಗ್ರಾದತ್ತ ಮುಗಿ ಬೀಳುತ್ತಿದ್ದರು. ಆದರೆ ಈಗ ಆಗ್ರಾಗಿಂತ ರಾಜಸ್ಥಾನವೇ ದೇಶವಿದೇಶದ ಪ್ರವಾಸಿಗರ ಹಾಟ್ ಫೇವರೇಟ್.
ಇಲ್ಲಿನ ವಿಭಿನ್ನ ಸಂಸ್ಕೃತಿ, ವರ್ಣಮಯ ಕಲೆಗಳು, ಮಾನವನ ದುರಾಸೆಗಿನ್ನೂ ಬಲಿಯಾಗದ ಪ್ರಕೃತಿ, ರಾಜಮಹಾರಾಜರ ವೈಭವ ನೆನಪಿಸುವ ಅರಮನೆ ಕೋಟೆಗಳು, ಕಾದಂಬರಿಯೊಂದು ಮೈವೆತ್ತಂತ ಅನುಭವ ನೀಡುವ ಸ್ಥಳಗಳು ಪ್ರವಾಸಿಗರಿಗೆ ರಸದೌತಣ ಬಡಿಸುತ್ತಿವೆ. ಅದರಲ್ಲೂ ಜೋಧ್‌ಪುರವೆಂದರೆ ವಿದೇಶಿಗರಿಗೆ ಮತ್ತೂ ಮೆಚ್ಚು.
undefined
ಭಾರತದಲ್ಲೇ ಡೈವೋರ್ಸ್ ಅತಿ ಕಡಿಮೆ... ಹೆಚ್ಚಿರೋ ದೇಶಗಳಿವು!
ಹೌದು, ಡಿಜಿಟಲ್ ಟ್ರಾವೆಲ್ ಕಂಪನಿ ಬುಕಿಂಗ್.ಕಾಮ್ ನಡೆಸಿದ ಸರ್ವೆಯಲ್ಲಿ, ಜಗತ್ತಿನ ಟಾಪ್ 10 ಎಮರ್ಜಿಂಗ್ ಟ್ರಾವೆಲ್ ಡೆಸ್ಟಿನೇಶನ್‌ಗಳಲ್ಲಿ ಒಂದಾಗಿ ಜೋಧ್‌ಪುರ ಸ್ಥಾನ ಪಡೆದಿದೆ. ಜಗತ್ತಿನ ವರ್ಣರಂಜಿತ ನಗರಗಳಲ್ಲಿ ಒಂದೆನಿಸಿರುವ ಜೋಧ್‌ಪುರ ನೀಲಿ ಮನೆಗಳು, ಮೆಹ್ರಂಗರ್ ಕೋಟೆ, ಉಮೈದ್ ಭವನ್ ಅರಮನೆ, ಮಂಡೋರ್ ಉದ್ಯಾನ, ಬಜಾರ್‌ಗಳ ಸ್ಪೈಸಿ ಟೇಸ್ಟಿ ಮಿಶ್ರಣ. ಆಹಾರಪ್ರಿಯರಿಗೆ, ಶಾಪಿಂಗ್ ಪ್ರೇಮಿಗಳಿಗೆ, ಇತಿಹಾಸ ಆಸಕ್ತರಿಗೆ, ಪ್ರಕೃತಿ ಪ್ರೇಮಿಗಳಿಗೆ- ಎಲ್ಲರಿಗೂ ಇಲ್ಲಿ ಮನ ತಣಿಸುವ ಸಂಗತಿಗಳಿವೆ.
ಈ ಬುಕಿಂಗ್.ಕಾಮ್‌ನ ಸರ್ವೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿರುವ ಇತರೆ ನಗರಗಳೆಂದರೆ,
1. ಇಲ್ ಜಿರಾ, ಮಾಲ್ಟಾ
ಮಾಲ್ಟಾದ ಈಶಾನ್ಯ ತೀರಪ್ರದೇಶದಲ್ಲಿರುವ ಐಲ್ ಜಿರಾ ವಾಲೆಟ್ಟಾ ನಗರಕ್ಕೆ ಮುಖ ಮಾಡಿ ನಿಂತಿದೆ. ಮನೋಲ್ ದ್ವೀಪಕ್ಕೆದುರಾಗಿ ನಿಂತ ಇಲ್ಲಿನ ಮಾರ್ಸ್ ಅಮ್‌ಕ್ಸೆಟ್ ಬಂದರು, ಮೈನವಿರೇಳಿಸುವ ತೀರಪ್ರದೇಶವನ್ನು ನೋಡಿದಾಗ ಇದು ಬೆಳೆಯುತ್ತಿರುವ ಪ್ರವಾಸಿ ಸ್ಥಳ ಎಂಬುದರಲ್ಲಿ ಅನುಮಾನ ಉಳಿಯುವುದಿಲ್ಲ. ಮನೋಲ್ ದ್ವೀಪದಲ್ಲಿ 1726ರಲ್ಲಿ ಕಟ್ಟಿದ ಕೋಟೆ ಪ್ರವಾಸಿಗರ ಒಂದು ದಿನವನ್ನು ಕದಿಯುತ್ತದೆ.
2. ನಿನ್ ಬಿನ್, ವಿಯೆಟ್ನಾಂ
ಹನೋಯ್ ನಗರದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ನಿಂತಿದ್ದರೂ ಪ್ರಶಾಂತತೆಯನ್ನು ಕಾಯ್ದುಕೊಂಡಿರುವ ನಿನ್ ಬಿನ್ ರಿಲ್ಯಾಕ್ಸಿಂಗ್ ಅನುಭವ ಬಯಸುವವರಿಗೆ ಸುಖೀತಾಣ. ಗುಡ್ಡಗಳು, ನದಿ, ಹಸಿರೋ ಹಸಿರು, ಗುಹೆಗಳು, ಭತ್ತದ ಗದ್ದೆಗಳು... ಏನುಂಟು ಏನಿಲ್ಲ? ಇಲ್ಲಿ ಬೋಟ್ ಟೂರ್ ಮಾಡಿದರೆ ಯಾವುದೋ ಸಿನಿಮಾದ ಸೀನ್‍ನಂತೆ ಕಾಣುತ್ತದೆ.
ಡಾರ್ಕ್ ಟೂರಿಸಂ; ಕ್ರೂರವಾದ ಕಣ್ಣೀರ ಕಥೆ ಹೇಳುವ ತಾಣಗಳಿವು
3. ಸಾಲ್ಟಾ, ಅರ್ಜೆಂಟೀನಾ
ಕಣ್ಣಿಗೆ ರಾಚುವ ಕಲೋನಿಯಲ್ ಆರ್ಕಿಟೆಕ್ಚರ್‌ನಿಂದ ಕೂಡಿರುವ ನಗರ ಸಾಲ್ಟಾ. ನಗರದ ಹೃದಯ ಭಾಗದಲ್ಲಿರುವ ಸಿಟಿ ಸ್ಕ್ವೇರ್, 9 ಡಿ ಜುಲಿಯೋ ಪ್ಲಾಜಾ ವರ್ಣರಂಜಿತ ನಗರದ ವೈಭೋಗ ತೋರಿಸುತ್ತದೆ. 1600ರ ಕಾಲದ ಸ್ಯಾನ್ ಫ್ರಾನ್ಸಿಸ್ಕೋ ಚರ್ಚ್ ನಗರಕ್ಕೆ ಮತ್ತಷ್ಟು ಹೆಸರು ತಂದುಕೊಟ್ಟಿದೆ. ಇದಲ್ಲದೆ, ಹತ್ತಿರದಲ್ಲೇ ಏಳು ಬಣ್ಣದ ಗುಡ್ಡ, ಉಪ್ಪಿನ ಮರುಭೂಮಿ ಸಲೈನಸ್ ಗ್ರಾಂಡೆಸ್ ಇದ್ದು- ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತುಕೊಳ್ಳುತ್ತವೆ.
4. ಸಿಯೋವಿಪೋ, ದಕ್ಷಿಣ ಕೊರಿಯಾ
ಇಲ್ಲಿನ ಜೆಜು ದ್ವೀಪದ ಎರಡನೇ ಅತಿ ದೊಡ್ಡ ನಗರವಿದು. ದಟ್ಟ ನೀಲ ಸಮುದ್ರ, ತೀರಪ್ರದೇಶದಿಂದಾಗಿ ಕಳೆಗಟ್ಟಿರುವ ನಗರ ಚಾರಣಿಗರಿಗೂ, ವಾಟರ್ ಸ್ಪೋರ್ಟ್ಸ್ ಪ್ರಿಯರಿಗೂ ಸಾಕಷ್ಟು ಮಸ್ತಿಮೋಜನ್ನು ಕಾಯ್ದುಕೊಂಡಿದೆ.
5. ಸ್ವಿನೌಜ್ಸೈಸೀ, ಪೋಲಂಡ್
ಇದೂ ಕೂಡಾ ಬಂದರು ನಗರವಾಗಿದ್ದು, ಜಲಸಾಹಸಿಗಳಿಗೆ ಪರ್ಫೆಕ್ಟ್ ಆಗಿದೆ. ಸೀ ಫಿಶರಿ ಮ್ಯೂಸಿಯಂ, 19ನೇ ಶತಮಾನದ ಲೈಟ್‌ಹೌಸ್ ಎಲ್ಲವೂ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿವೆ.
6. ಟಕಮಟ್ಸು, ಜಪಾನ್
ತನ್ನ ಪಿಕ್ಚರ್ ಪರ್ಫೆಕ್ಟ್ ಸೀನ್‌ಗಳಿಗೆ ಹೆಸರಾಗಿರುವ ಟಕಮಟ್ಸು ಕೂಡಾ ಬಂದರು ಪಟ್ಟಣ. ಇಲ್ಲಿ ಪ್ರವಾಸಿಗರು ನೂರಾರು ಹೊಸರುಚಿ ಸವಿದು ತಣಿಯಬಹುದು. ಲೋಟಸ್ ಪಾಂಡ್, ಎಂಗೆಟ್ಸು-ಕ್ಯೋ ಸೇತುವೆ, ರಿಟ್ಸೂರಿನ್ ಪಾರ್ಕ್, ಟೀ ಹೌಸ್‌ಗಳು ಇಲ್ಲಿ ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳಗಳು.
7. ಸ್ಯಾನ್ ಜಾನ್, ಪೋರ್ಟೋ ರಿಕೋ
ಪೋರ್ಟೋ ರಿಕೋದ ರಾಜಧಾನಿ ಸ್ಯಾನ್ ಜಾನ್ ಶ್ರೀಮಂತ ಸಂಸ್ಕೃತಿ ಮತ್ತು ವಾಸ್ತುಶಿಲ್ಪಗಳ ಸಮ್ಮಿಲನ. ಇಲ್ಲಿನ ಓಲ್ಡ್ ಸ್ಯಾನ್ ಜಾನ್ ಬೀದಿಯಲ್ಲಿ ವಾಕ್ ಮಾಡುವ ಮಜಾವೇ ಬೇರೆ- ಸ್ಪ್ಯಾನಿಶ್ ಕಾಲೋನಿಯಲ್ ಕಟ್ಟಡಗಳು ವರ್ಣರಂಜಿತವಾಗಿ ಕೈ ಬೀಸಿ ಬರ ಮಾಡಿಕೊಳ್ಳುತ್ತವೆ. ಫೋರ್ಟಾಲೆಜಾ ಸ್ಟ್ರೀಟ್, ಬೀದಿಯುದ್ದಕ್ಕೂ ತುಂಬಿದ ಕಲಾಕೃತಿಗಳು ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತವೆ.
8. ಝಬ್ಲ್ಜಾಕ್, ಮೊಂಟೆನೆಗ್ರೋ
ಮಾಂಟೆನೆಗ್ರೋದ ಸಣ್ಣ ಪಟ್ಟಣ ಝಬ್ಲಾಕ್, ತನ್ನ ಸುಂದರ ಪರ್ವತಗಳಿಗಾಗಿ ಜನಪ್ರಿಯ. ಬೇಸಿಗೆಯಲ್ಲಾದರೆ ವಾಟರ್ ಸ್ಪೋರ್ಟ್ಸ್ ಮಜಾ, ಚಳಿಗಾಲದಲ್ಲಿ ಹಿಮಪರ್ವತಗಳ ಸ್ಪರ್ಶ ಪ್ರವಾಸಿಗರ ಮನಸೂರೆಗೊಳ್ಳುತ್ತವೆ.
9. ಯೆರೆವನ್, ಅರ್ಮೇನಿಯಾ
ಇತಿಹಾಸ ಪ್ರಿಯರಿಗೆ ಅರ್ಮೇನಿಯಾದ ರಾಜಧಾನಿ ಯೆರೆವನ್ ಭೇಟಿ ನೀಡಲು ಯೋಗ್ಯ ತಾಣ. ಕ್ಯಾಥೆಡ್ರಲ್‌ಗಳು, ಪರ್ವತಗಳು, ಕ್ಯಾಸ್‌ಕೇಡ್, ಉದ್ಯಾನಗಳು,ರಿಪಬ್ಲಿಕ್ ಸ್ಕ್ವೇರ್- ಇಲ್ಲಿ ನೋಡಲು ಕೊರತೆಯೇ ಇಲ್ಲದಷ್ಟು ಸ್ಥಳಗಳಿವೆ.