ಜೂ.21ರಿಂದ ರಾಮಾಯಣ ಯಾತ್ರಾ ರೈಲು ಆರಂಭ!

By Suvarna News  |  First Published May 26, 2022, 9:17 AM IST

- ಹಂಪಿ ಸೇರಿ ರಾಮನಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳ ಸಂಪರ್ಕ

- 18 ದಿನಗಳ ಪ್ರವಾಸ, 80 ಸಾವಿರ ಕಿ.ಮೀ. ಸಂಚಾರ

- ಟಿಕೆಟ್‌ ಬೆಲೆ 62,370 ರು.


ಲಖನೌ (ಮೇ. 26): ಭಾರತೀಯ ರೈಲ್ವೆ ಅಡುಗೆ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ), ರಾಮನ ಜೀವನಕ್ಕೆ ಸಂಬಂಧಿಸಿದ ವಿವಿಧ ಪವಿತ್ರ ಸ್ಥಳಗಳ ಯಾತ್ರೆಗೆ ‘ಶ್ರೀ ರಾಮಾಯಣ ಯಾತ್ರಾ’ (Shri Ramayana Yatra) ಎಂಬ ವಿಶೇಷ ಪ್ರವಾಸಿಗರ ರೈಲನ್ನು (special tourist train) ಜೂ.21 ರಿಂದ ಆರಂಭಿಸಲಿದೆ. ಹನುಮನ ಜನ್ಮಸ್ಥಳವಾದ ಕರ್ನಾಟಕದ ಕಿಷ್ಕಿಂದೆ ಬಳಿಯ ಹಂಪಿ (Hampi) ಸೇರಿ ವಿವಿಧೆಡೆ ರೈಲು ಸಂಚರಿಸಲಿದೆ ಎಂದು ಮಂಗಳವಾರ ತಿಳಿಸಿದೆ.

ಈ ರೈಲಿನ ಪ್ರಯಾಣವು ಜೂ. 21 ರಂದು ದೆಹಲಿಯ ಸಫ್ದರ್‌ಜಂಗ್‌ ನಿಲ್ದಾಣದಿಂದ (Safdarjung railway station) ಆರಂಭವಾಗಲಿದೆ. ಇದು 11 ಎಸಿ ವರ್ಗದ ಕೋಚ್‌ಗಳನ್ನು ಹೊಂದಿದ್ದು, 600 ಪ್ರವಾಸಿಗರ ಸಾಮರ್ಥ್ಯವನ್ನು ಹೊಂದಿದೆ. ಆಹಾರ, ಹೋಟೆಲ್‌ಗಳಲ್ಲಿ ತಂಗುವ ವೆಚ್ಚ, ಪ್ರವಾಸಿ ಗೈಡ್‌ ಸೇರಿಸಿ ಪ್ರತಿ ಟಿಕೇಟ್‌ ಬೆಲೆಯು 62,370ರು. ನಿಗದಿ ಪಡಿಸಲಾಗಿದೆ.

ಇದು 18 ದಿನಗಳ ಕಾಲ ದೇಶದುದ್ದಕ್ಕೂ ಸುಮಾರು 8,000 ಕಿಮೀ ಸಂಚರಿಸಲಿರುವ ರೈಲು ಕರ್ನಾಟಕದ ಹಂಪಿ ಸೇರಿದಂತೆ ಅಯೋಧ್ಯಾ, ಜನಕಪುರ (ನೇಪಾಳ), ಸೀತಾಮಢಿ., ಬಕ್ಸರ್‌, ವಾರಾಣಸಿ, ಪ್ರಯಾಗರಾಜ್‌, ಶ್ರಿಂಗ್‌ವೆರಪುರ, ಚಿತ್ರಕೂಟ, ನಾಶಿಕ್‌, ರಾಮೇಶ್ವರ, ಕಾಂಚೀಪುರಂ, ದಕ್ಷಿಣದ ಅಯೋಧ್ಯೆ ಎಂದೇ ಹೇಳಲಾಗುವ ಭದ್ರಾಚಲಂಗೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ದೆಹಲಿ, ಅಲಿಘರ್‌, ತುಂಡ್ಲಾ, ಕಾನ್ಪುರ, ಲಖನೌ ಈ ಪ್ರದೇಶಗಳನ್ನು ಬೋರ್ಡಿಂಗ್‌ ಸ್ಥಳಗಳಾಗಿ ಗುರುತಿಸಲಾಗಿದೆ.

ಅಯೋಧ್ಯಾ ಹಾಗೂ ಜನಕಪುರಿ- ಎರಡು ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲು ಮೊಟ್ಟಮೊದಲ ಬಾರಿ ದೇಶದ ಪ್ರವಾಸಿ ರೈಲು ದೇಶದ ಹೊರಗಡೆ ನೇಪಾಳದಲ್ಲೂ ಸಂಚರಿಸಲಿದೆ. ಸ್ವದೇಶ ದರ್ಶನ ಯೋಜನೆಯಡಿಯಲ್ಲಿ ಈ ರೈಲಿನ ಮಾರ್ಗವನ್ನು ನಿರ್ಧರಿಸಲಾಗಿದೆ.

ಜೂನ್ 21 ರಂದು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಹೊರಡುವ ರಾಮಾಯಣ ಸರ್ಕ್ಯೂಟ್‌ನ 'ಭಾರತ ಗೌರವ್ ಟೂರಿಸ್ಟ್ ಟ್ರೈನ್' ಟ್ರಿಪ್‌ಗೆ ಕಾಯ್ದಿರಿಸುವಿಕೆ ಈಗಾಗಲೇ ಆರಂಭವಾಗಿದೆ ಎಂದು ಲಕ್ನೋದ IRCTC ಯ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು. 14 ವರ್ಷಗಳ ಕಾಲ ಕಾಡಿನಲ್ಲಿ ವನವಾಸವನ್ನು ಕೈಗೊಂಡಾಗ ಭಗವಾನ್ ರಾಮ, ಅವರ ಪತ್ನಿ ಸೀತಾ ದೇವಿ ಮತ್ತು ಲಕ್ಷ್ಮಣರು ಕಾಲಿಟ್ಟ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಕನಸುಗಳನ್ನು ಸಾಕಾರಗೊಳಿಸುವ ಗುರಿಯನ್ನು ಈ ಪ್ರವಾಸ ಪ್ಯಾಕೇಜ್ ಹೊಂದಿದೆ ಎಂದು ಸಿನ್ಹಾ ಹೇಳಿದರು.

ಈಗಾಗಲೇ ದೇಶದ ವಿವಿಧ ಭಾಗಗಳಿಂದ 285 ಬುಕ್ಕಿಂಗ್ ಗಳು ನಡೆದಿವೆ ಎಂದು ಸಿನ್ಹಾ ಹೇಳಿದ್ದಾರೆ. ಇದರಲ್ಲಿ 61 ಬುಕ್ಕಿಂಗ್ ಗಳು ಮಹಾರಾಷ್ಟ್ರದಿಂದ ಆಗಿದ್ದರೆ, 55 ಬುಕ್ಕಿಂಗ್ ಗಳು ಉತ್ತರ ಪ್ರದೇಶದಿಂದ ಆಗಿದೆ ಎಂದು ಹೇಳಿದ್ದಾರೆ. 

Paytm Book Now, Pay Later: IRCTCಯಲ್ಲಿ ರೈಲು ಟಿಕೆಟ್‌ ಬುಕ್ ಮಾಡಿ, ತಿಂಗಳ ನಂತರ ಪಾವತಿಸಿ!

ಇಎಂಐ ಆಯ್ಕೆ ನೀಡಿದ ರೈಲ್ವೇಸ್: IRCTC ಪ್ರಯಾಣಿಕರಿಗೆ ಇಎಂಐ ಆಯ್ಕೆಗಳನ್ನು ಒದಗಿಸಲು ಪೇಟಿಎಂ ಮತ್ತು ರಾಜೋರ್ ಪೇ ಪಾವತಿ ಗೇಟ್‌ವೇಗಳೊಂದಿಗೆ ಸಹ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ, ಮೊದಲ 50 ಪ್ರತಿಶತ ಪ್ರಯಾಣಿಕರಿಗೆ ದರದಲ್ಲಿ 5 ಪ್ರತಿಶತದಷ್ಟು ಆರಂಭಿಕ  ರಿಯಾಯಿತಿಯನ್ನು ನೀಡಲಾಗುತ್ತದೆ. IRCTC ಇದೇ ಮೊದಲ ಬಾರಿಗೆ ಟಿಕೆಟ್ ಗೆ ಇಎಂಐ ಪಾವತಿ ಅಯ್ಕೆಯನ್ನೂ ನೀಡಿದೆ ಎಂದು ಸಿನ್ಹಾ ವಿವರಿಸಿದ್ದಾರೆ.

Rampath Yatra Express... ಪುಣೆಯಿಂದ ರಾಮ ಜನ್ಮಸ್ಥಾನ ಆಯೋಧ್ಯೆಗೆ ವಿಶೇಷ ರೈಲು....

ಇತ್ತೀಚೆಗಷ್ಟೇ ರಾಮಾಯಣ ಎಕ್ಸ್‌ಪ್ರೆಸ್‌ ರೈಲಿನ ಯಶಸ್ಸಿನ ಬಳಿಕ ಭಾರತೀಯ ರೈಲ್ವೆ ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ರಾಮಪಥ್‌ ಎಕ್ಸ್‌ಪ್ರೆಸ್‌ ರೈಲಿಗೆ ಪುಣೆಯಲ್ಲಿ ಚಾಲನೆ ನೀಡಿತ್ತು. ಈ ರೈಲು ಪುಣೆ(Pune)ಯಿಂದ ಉತ್ತರಪ್ರದೇಶದ ಅಯೋಧ್ಯೆ(Ayodhya)ಗೆ ತೆರಳಿತ್ತು. ರೈಲ್ವೆ ಇಲಾಖೆ ರಾಜ್ಯ ಸಚಿವರಾದ ರಾವ್‌ ಸಾಹೇಬ್ ದಾದಾರಾವ್‌ ಪಾಟೀಲ್ ದಾನ್ವೆ( Raosaheb Dadarao Patil Danve) ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪುಣೆ ನಿಲ್ದಾಣದಿಂದ ರಾಮ್‌ಪಥ್‌ ಯಾತ್ರಾ ಎಕ್ಸ್‌ಪ್ರೆಸ್‌ (Rampath Yatra Express)ರೈಲಿಗೆ ಚಾಲನೆ ನೀಡಿದರು. ಈ ರೈಲು  ಭಗವಾನ್‌ ರಾಮನಿಗೆ ಸಂಬಂಧಿಸಿದ 6 ಹಿಂದೂ ಧಾರ್ಮಿಕ ಯಾತ್ರಾ ಕ್ಷೇತ್ರಗಳಿಗೆ ತೆರಳಲಿದೆ.

click me!