ಥಾಯ್ಲೆಂಡ್, ಬಾಲಿ ಬಿಟ್ಟು ವಿಯೆಟ್ನಾಂನ 'ಹಾ ಲಾಂಗ್ ಬೇ'ಗೆ ಮುಗಿಬಿದ್ದ ಪ್ರವಾಸಿಗರು; 10 ತಿಂಗಳಲ್ಲಿ ₹230 ಕೋಟಿ ಆದಾಯ!

Published : Nov 29, 2026, 05:36 PM IST
vietnam

ಸಾರಾಂಶ

Vietnam Tourism: ವಿಯೆಟ್ನಾಂನ 'ಹಾ ಲಾಂಗ್ ಬೇ' ಇದೀಗ ಜಾಗತಿಕ ಪ್ರವಾಸೋದ್ಯಮದ ಹೊಸ ಆಕರ್ಷಣೆಯಾಗಿ ಹೊರಹೊಮ್ಮಿದೆ. ಕೇವಲ 10 ತಿಂಗಳಲ್ಲಿ ಸುಮಾರು 30 ಲಕ್ಷ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಂಡಿರುವ ಈ ಪ್ರವಾಸಿ ತಾಣ 230 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿ ದಾಖಲೆ ನಿರ್ಮಿಸಿದೆ.

ವಿಯೆಟ್ನಾಂನ 'ಹಾ ಲಾಂಗ್ ಬೇ'ಗೆ ಮುಗಿಬಿದ್ದ ಪ್ರವಾಸಿಗರು

ನೀವೂ ವಿದೇಶ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡುತ್ತಿದ್ದೀರಾ? ಪ್ರತಿಬಾರಿಯೂ ಅದೇ ಹಳೆಯ ಪ್ರವಾಸಿ ತಾಣಗಳನ್ನು ನೋಡಿ ಬೇಸರವಾಗಿದೆಯೇ? ಹಾಗಾದರೆ ಈಗ ವಿಶ್ವದಾದ್ಯಂತ ಹೊಸ ಟ್ರಾವೆಲ್ ಟ್ರೆಂಡ್ ಆಗಿರುವ ವಿಯೆಟ್ನಾಂನತ್ತ ನಿಮ್ಮ ಗಮನ ಹರಿಸಿ. ಹೌದು, ವಿಯೆಟ್ನಾಂನ ಈಶಾನ್ಯ ಕರಾವಳಿಯಲ್ಲಿರುವ 'ಹಾ ಲಾಂಗ್ ಬೇ' (Ha Long Bay) ಇದೀಗ ಜಾಗತಿಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಕೋವಿಡ್ ಬಳಿಕ ಜಗತ್ತಿನಾದ್ಯಂತ ಪ್ರವಾಸಿಗರು ಮತ್ತೆ ಪ್ರಯಾಣ ಆರಂಭಿಸಿದಾಗಿನಿಂದ ಈ ಸುಂದರ ತಾಣ ಪ್ರವಾಸಿಗರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ.

ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಇಲ್ಲಿ ಪ್ರವಾಸೋದ್ಯಮ ದಾಖಲೆ ಮಟ್ಟಕ್ಕೆ ತಲುಪಿದೆ. ಕೇವಲ 10 ತಿಂಗಳ ಅವಧಿಯಲ್ಲಿ ಸುಮಾರು 30 ಲಕ್ಷ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ವಿಯೆಟ್ನಾಂಗೆ 700 ಬಿಲಿಯನ್ ವಿಯೆಟ್ನಾಂ ಡಾಂಗ್ ಅಂದರೆ ಸುಮಾರು 230 ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದಿದೆ.

ವಿದೇಶಿ ಪ್ರವಾಸಿಗರ ನಡುವೆ ಹಾ ಲಾಂಗ್ ಬೇಗೆ ಭಾರೀ ಬೇಡಿಕೆ!

ಹಾ ಲಾಂಗ್ ಬೇಯ ಜನಪ್ರಿಯತೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂಬುದಕ್ಕೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಅಂಕಿಅಂಶಗಳೇ ಸಾಕ್ಷಿ. ಇಲ್ಲಿಗೆ ಬರುವ ಒಟ್ಟು ಪ್ರವಾಸಿಗರಲ್ಲಿ ಸುಮಾರು ಶೇ.65ರಷ್ಟು ಮಂದಿ ವಿದೇಶಿಗರಾಗಿದ್ದಾರೆ. ಅಂದರೆ ಈ ಪ್ರವಾಸಿ ತಾಣ ಕೇವಲ ಸ್ಥಳೀಯರಿಗೆ ಮಾತ್ರ ಸೀಮಿತವಾಗಿಲ್ಲ. ಯುರೋಪ್, ಅಮೆರಿಕ ಮತ್ತು ಏಷ್ಯಾದ ವಿವಿಧ ದೇಶಗಳಿಂದ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ವಿಶೇಷವೆಂದರೆ, ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಕೇವಲ ಮೂರು ತಿಂಗಳ ಅವಧಿಯಲ್ಲೇ 6.85 ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಾ ಲಾಂಗ್ ಬೇಗೆ ಭೇಟಿ ನೀಡಿದ್ದಾರೆ. ಕೋವಿಡ್ ನಂತರ ಒಂದೇ ಪ್ರವಾಸಿ ತಾಣಕ್ಕೆ ಇಷ್ಟೊಂದು ವೇಗದಲ್ಲಿ ಪ್ರವಾಸಿಗರು ಮರಳಿರುವುದು ಪ್ರವಾಸೋದ್ಯಮ ಕ್ಷೇತ್ರದ ದೊಡ್ಡ ಸಾಧನೆಯಾಗಿದೆ.

ಪ್ರಕೃತಿಯ ಅದ್ಭುತ ಸೃಷ್ಟಿ ಈ ಹಾ ಲಾಂಗ್ ಬೇ!

ಅಷ್ಟಕ್ಕೂ ಹಾ ಲಾಂಗ್ ಬೇಯಲ್ಲಿ ಅಂಥದ್ದೇನಿದೆ? ಇಲ್ಲಿಗೆ ಹೋದ ಪ್ರತಿಯೊಬ್ಬ ಪ್ರವಾಸಿಗರೂ ಈ ಸ್ಥಳದ ಸೌಂದರ್ಯಕ್ಕೆ ಮನಸೋಲುವುದೇಕೆ? ಇದಕ್ಕೆ ಉತ್ತರ ಇಲ್ಲಿನ ಅದ್ಭುತ ಭೌಗೋಳಿಕ ರಚನೆಯಲ್ಲಿದೆ. ಸುಮಾರು 65,650 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಈ ದ್ವೀಪಸಮೂಹಕ್ಕೆ ಭೇಟಿ ನೀಡಿದರೆ ಯಾವುದೋ ಸುಂದರ ಚಿತ್ರಪಟದೊಳಗೆ ಪ್ರವೇಶಿಸಿದ ಅನುಭವವಾಗುತ್ತದೆ.

ಸಮುದ್ರದ ಹಸಿರು-ನೀಲಿ ಬಣ್ಣದ ನೀರಿನ ಮಧ್ಯೆ ಎದ್ದು ಕಾಣುವ 1,600ಕ್ಕೂ ಅಧಿಕ ಸುಣ್ಣದ ಕಲ್ಲಿನ ದ್ವೀಪಗಳು ಈ ಪ್ರದೇಶದ ಪ್ರಮುಖ ಆಕರ್ಷಣೆ. ಇಂತಹ ವಿಶಿಷ್ಟ ಪ್ರಕೃತಿ ಸೌಂದರ್ಯ ಬೇರೆ ಯಾವುದೇ ಸಮುದ್ರ ತೀರದಲ್ಲಿ ಸುಲಭವಾಗಿ ಕಾಣಸಿಗುವುದಿಲ್ಲ. ಇಲ್ಲಿರುವ ಗುಹೆಗಳು ಸುಮಾರು 50 ಕೋಟಿ ವರ್ಷಗಳಷ್ಟು ಹಳೆಯವು ಎಂದು ಹೇಳಲಾಗುತ್ತದೆ. ಈ ಗುಹೆಗಳ ಒಳಭಾಗದಲ್ಲಿರುವ ವಿಶಿಷ್ಟ ಕಲ್ಲಿನ ರಚನೆಗಳು ಪ್ರವಾಸಿಗರಲ್ಲಿ ಅಚ್ಚರಿ ಮತ್ತು ರೋಮಾಂಚನ ಮೂಡಿಸುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಗುರುತಿಸಿರುವ ಯುನೆಸ್ಕೋ 1994ರಲ್ಲೇ ಹಾ ಲಾಂಗ್ ಬೇಗೆ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಿದೆ. ಇಲ್ಲಿನ ಸಾಂಪ್ರದಾಯಿಕ ಮರದ ದೋಣಿಗಳು ಮತ್ತು ಐಷಾರಾಮಿ ಕ್ರೂಸ್‌ಗಳಲ್ಲಿ ಪ್ರಯಾಣಿಸುವುದು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ. ದ್ವೀಪಗಳ ನಡುವೆ ದೋಣಿ ವಿಹಾರ, ಕಯಾಕಿಂಗ್ ಮತ್ತು ಸಮುದ್ರದ ಮಧ್ಯೆ ಸೂರ್ಯಾಸ್ತವನ್ನು ವೀಕ್ಷಿಸುವುದು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಭಾರತೀಯ ಪ್ರವಾಸಿಗರ ಡ್ರೀಮ್ ಡೆಸ್ಟಿನೇಷನ್ ಆಗುತ್ತಿರುವುದೇಕೆ?

ಇತ್ತೀಚಿನ ದಿನಗಳಲ್ಲಿ ಭಾರತೀಯ ಪ್ರವಾಸಿಗರಲ್ಲೂ ವಿಯೆಟ್ನಾಂ ಮತ್ತು ಅದರಲ್ಲೂ ವಿಶೇಷವಾಗಿ ಹಾ ಲಾಂಗ್ ಬೇ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಇದಕ್ಕೆ ಕೇವಲ ಇಲ್ಲಿನ ಪ್ರಕೃತಿ ಸೌಂದರ್ಯ ಮಾತ್ರ ಕಾರಣವಲ್ಲ. ಪ್ರವಾಸ ಕೈಗೊಳ್ಳಲು ಇರುವ ಅನುಕೂಲಗಳೂ ಪ್ರಮುಖ ಪಾತ್ರ ವಹಿಸಿವೆ.

ಮೊದಲನೆಯದಾಗಿ, ವಿಯೆಟ್ನಾಂನ ಇ-ವೀಸಾ ಪ್ರಕ್ರಿಯೆ ಸರಳವಾಗಿರುವುದರಿಂದ ಭಾರತೀಯರು ಪ್ರವಾಸವನ್ನು ಸುಲಭವಾಗಿ ಯೋಜಿಸಬಹುದು. ಹೆಚ್ಚಿನ ಕಾಗದಪತ್ರಗಳ ತೊಂದರೆಯಿಲ್ಲದೆ ಆನ್‌ಲೈನ್‌ನಲ್ಲೇ ವೀಸಾ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ. ಇನ್ನು ವಿದೇಶ ಪ್ರವಾಸಕ್ಕೆ ಹೋಗುವ ಭಾರತೀಯರಿಗೆ ಆಹಾರ ಪ್ರಮುಖ ಸಮಸ್ಯೆಯಾಗಿರುತ್ತದೆ. ಆದರೆ ವಿಯೆಟ್ನಾಂನಲ್ಲಿ ಈಗ ಭಾರತೀಯ ಆಹಾರ ಮತ್ತು ಸಸ್ಯಾಹಾರಿ ಊಟದ ಆಯ್ಕೆಗಳೂ ಲಭ್ಯವಿವೆ.

ಕಡಿಮೆ ಬಜೆಟ್‌ನಲ್ಲಿ ಯುರೋಪ್‌ನಂತಹ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಐಷಾರಾಮಿ ಕ್ರೂಸ್ ಪ್ರಯಾಣದ ಅನುಭವ ಪಡೆಯಬಹುದು. ಹೀಗಾಗಿ ಭಾರತೀಯ ಜೋಡಿಗಳು, ಕುಟುಂಬಗಳು ಮತ್ತು ಒಬ್ಬಂಟಿಯಾಗಿ ಪ್ರವಾಸ ಮಾಡುವವರೂ ಈ ತಾಣದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು ಮತ್ತು ಉತ್ತಮ ಆತಿಥ್ಯದ ಮೂಲಕ ಹಾ ಲಾಂಗ್ ಬೇ ಏಷ್ಯಾದ ಪ್ರವಾಸೋದ್ಯಮ ನಕ್ಷೆಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಳ್ಳುತ್ತಿದೆ. ನಿಮ್ಮ ವಿದೇಶ ಪ್ರವಾಸದ ಬಕೆಟ್ ಲಿಸ್ಟ್‌ನಲ್ಲಿ ಇನ್ನೂ ಹಾ ಲಾಂಗ್ ಬೇ ಹೆಸರು ಸೇರಿಲ್ಲದಿದ್ದರೆ, ಈ ಸುಂದರ ತಾಣವನ್ನು ನಿಮ್ಮ ಮುಂದಿನ ಪ್ರವಾಸದ ಆಯ್ಕೆಗಳಲ್ಲಿ ಸೇರಿಸಿಕೊಳ್ಳಬಹುದು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಚಕವಾಗಿದ್ದರೂ ಇಲ್ಲಿಗೆ ಪ್ರವೇಶ ನಿಷಿದ್ಧ: ಭಾರತದ 5 ನಿಗೂಢ, ನಿರ್ಬಂಧಿತ ತಾಣಗಳು!
ಶಬರಿಮಲೆ ಯಾತ್ರೆ, ಕ್ರಿಸ್‌ಮಸ್‌ಗೆ ಮಂಗಳೂರು ಸೆಂಟ್ರಲ್ – ಕೊಲ್ಲಂ ನಡುವೆ ವಿಶೇಷ ರೈಲು ಸೇವೆ; ವೇಳಾಪಟ್ಟಿ ಇಲ್ಲಿದೆ