ಮೈದುಂಬಿದ ಗಗನಚುಕ್ಕಿ, ಭರಚುಕ್ಕಿ ಜಲಪಾತ: ಹರಿದು ಬಂದ ಜನಸಾಗರ

By Kannadaprabha News  |  First Published Jul 31, 2023, 10:23 PM IST

ಕೃಷ್ಣ ರಾಜಸಾಗರ ಜಲಾಶಯ ಹಾಗೂ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್‌ ನೀರು ಕಾವೇರಿ ನದಿಗೆ ಹರಿದು ಬರುತ್ತಿರುವುದರಿಂದ ತಾಲೂಕಿನ ಶಿವನಸಮುದ್ರಂ (ಬ್ಲಫ್‌) ಬಳಿ ಇರುವ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಲ್ಲಿ ಮೈದುಂಬಿ ನೊರೆ ಹಾಲಿನಂತೆ ದುಮ್ಮಿಕ್ಕಿ ಹರಿದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. 


ಸಿ.ಸಿದ್ದರಾಜು ಮಾದಹಳ್ಳಿ

ಮಳವಳ್ಳಿ (ಜು.31): ಕೃಷ್ಣ ರಾಜಸಾಗರ ಜಲಾಶಯ ಹಾಗೂ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್‌ ನೀರು ಕಾವೇರಿ ನದಿಗೆ ಹರಿದು ಬರುತ್ತಿರುವುದರಿಂದ ತಾಲೂಕಿನ ಶಿವನಸಮುದ್ರಂ (ಬ್ಲಫ್‌) ಬಳಿ ಇರುವ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಲ್ಲಿ ಮೈದುಂಬಿ ನೊರೆ ಹಾಲಿನಂತೆ ದುಮ್ಮಿಕ್ಕಿ ಹರಿದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಹಲವು ತಿಂಗಳಿಂದ ನದಿಗಳಲ್ಲಿ ನೀರು ಹರಿಯದ ಕಾರಣ ಎರಡು ಜಲಪಾತಗಳು ಪ್ರವಾಸಿಗರಿಲ್ಲದೇ ಬಣಗುಡುತ್ತಿದ್ದವು. ಆದರೆ, ಶ್ರೀರಂಗಪಟ್ಟಣದ ಕೆಆರ್‌ಎಸ್‌ ಜಲಾಶಯ ಹಾಗೂ ಎಚ್‌.ಡಿ.ಕೋಟೆ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್‌ ನೀರು ಕಾವೇರಿ ನದಿಗೆ ಬಿಟ್ಟಿರುವುದರಿಂದ ‘ಪ್ರಕೃತಿಯ ವೈಭವದ ಜಲಸಿರಿಗೆ ಸರಿಸಾಟಿ ಯಾರಿಲ್ಲ’ ಎಂಬಂತೆ ಮತ್ತೆ ಗಗನಚುಕ್ಕಿ, ಭರಚುಕ್ಕಿ ಜಲಾಪತಗಳು ಮೈದುಂಬಿ ಹರಿದು ಕಣ್ಮನ ಸೆಳೆಯುತ್ತಿವೆ.

Tap to resize

Latest Videos

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಹಲವು ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಈಗಾಗಲೇ ಕಬಿನಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಕೆಆರ್‌ಎಸ್‌ ಜಲಾಶಯದಲ್ಲಿಯೂ 113 ಅಡಿಯಷ್ಟುನೀರು ಸಂಗ್ರಹವಾಗಿದೆ. ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ತಾಲೂಕಿನ ವಿಶ್ವ ವಿಖ್ಯಾತ ಗಗನಚುಕ್ಕಿ ಹಾಗೂ ಸಮೀಪದಲ್ಲೇ ಇರುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತಗಳು ಮೈತುಂಬಿ ಹಾಲ್ನೊರೆಯಂತೆ ನೀರು ಭೊರ್ಗರೆಯುವ ದೃಶ್ಯ ನೋಡುಗರನ್ನು ಆಕರ್ಷಿಸುತ್ತಿವೆ.

ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ NCC ಕೆಡೆಟ್‍ಗಳಿಗೆ ರಾಜ್ಯಪಾಲ ಅಭಿನಂದನೆ

ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಜೀವನದಿ 320 ಕಿಲೋ ಮೀಟರ್‌ ಹರಿದು ಕೆಆರ್‌ಎಸ್‌ ಅಣೆಕಟ್ಟೆಗೆ ಸೇರುತ್ತದೆ. ಕೆಆರ್‌ಎಸ್‌ನಿಂದ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹರಿದು ಸತ್ಯಗಾಲದ ಮೂಲಕ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ದುಮ್ಮಿಕ್ಕಿ ಹರಿದು ಮುತ್ತತ್ತಿಯನ್ನು ಸುತ್ತಿಕೊಂಡು ಮೇಕೆದಾಟು ಮೂಲಕ ಹೊಗೆನಕಲ್ ತಲುಪಲಿದೆ. ನಂತರ ತಮಿಳುನಾಡಿಗೆ ತಲುಪಿ 416 ಕಿ.ಮೀ.ದೂರ ಹರಿಯುತ್ತಾಳೆ. ಬಹುತೇಕ ವರ್ಷಗಳಲ್ಲಿ ಜುಲೈ ತಿಂಗಳ ಆರಂಭದಲ್ಲಿಯೇ ಸಮೃದ್ಧಿವಾದ ಮಳೆಯಾಗಿ ಅವಳಿ ಜಲಪಾತಗಳು ದುಮ್ಮಿಕ್ಕಿ ಹರಿಯುತ್ತಿರುವುದು ಪ್ರಕೃತಿಯ ಸೌಂದರ್ಯಕ್ಕೆ ಮತ್ತಷ್ಟುಮೆರಗು ತಂದಿದೆ. 

ಗಗನಚುಕ್ಕಿ ಜಲಾಕರ್ಷಣೆಯ ನಯನ ಮೋನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುವ ಜೊತೆಗೆ ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನಗರ ಪ್ರದೇಶಗಳ ಜನರು ಕುಟುಂಬ ಸಮೇತ ಜಲಪಾತ ವೀಕ್ಷಣೆಗೆ ಆಗಮಿಸುತ್ತಾರೆ. ಶನಿವಾರ, ಭಾನುವಾರಗಳಂದು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡು ಬಂತು. ಮೈಸೂರು ಮತ್ತು ಬೆಂಗಳೂರಿನಿಂದ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸಿ ದುಮ್ಮುಕ್ಕುತ್ತಿರುವ ಜಲಧಾರೆ ಕಂಡು ಮೊಬೈಲ್‌ಗಳಲ್ಲಿ ಸೆಲ್ಫೆ ತೆಗೆದುಕೊಂಡು ಸಂಭ್ರಮಿಸುತ್ತಿರುವುದು ಕಂಡು ಬಂತು.

ದಶಕಗಳಿಂದ ಅಭಿವೃದ್ಧಿ ಕುಂಠಿತ: ವಿಶ್ವ ವಿಖ್ಯಾತ ಗಗನಚುಕ್ಕಿ ಜಲಪಾತವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸುವ ಕನಸು ಕಳೆದ ಹಲವು ದಶಕಗಳಿಂದ ಹಾಗೇ ಉಳಿದಿದೆ. ಕಳೆದ ಕೆಲ ವರ್ಷಗಳ ಹಿಂದೆ 4 ಕೋಟಿ ರು. ವೆಚ್ಚದಲ್ಲಿ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಅನುಕೂಲವಾಗುವಂತೆ ಮೆಟ್ಟಿಲು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಶೇ.50ರಷ್ಟುಮಾತ್ರ ಕಾಮಗಾರಿ ಮುಗಿದಿದೆ. ನಾನಾ ಕಾರಣಗಳ ಕುಂಟ ನೆಪ ಹೇಳುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದಿರುವುದು ಪ್ರವಾಸಿಗರಿಗೆ ಸುಗಮವಾಗಿ ಜಲಪಾತ ವೀಕ್ಷಣೆಗೆ ತೊಂದರೆಯಾಗಿದೆ.

ಮಳೆ ಇಳಿಮುಖ, ನೀರು ಕಡಿಮೆ: ಕಳೆದ ನಾಲ್ಕು ದಿನಗಳಿಂದ ಕಾವೇರಿ ಕೊಳದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಪಾತಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಜಲಪಾತಗಳು ತನ್ನ ವೈಭವ ಹೆಚ್ಚಿಸಿಕೊಂಡಂತೆ ಪ್ರವಾಸಿ ತಾಣಗಳ ಆವರಣದಲ್ಲಿ ವ್ಯಾಪಾರ ವಾಹಿವಾಟು ಹೆಚ್ಚಾಗುತ್ತದೆ. ಕಳೆದ ಹಲವು ತಿಂಗಳಿಂದ ಕುಂಠಿತವಾಗಿ ವ್ಯಾಪಾರಕ್ಕೆ ಜಲಪಾತದ ವೈಭವದಿಂದ ಜೀವ ಬಂದತಾಗಿದೆ. ಜಲಪಾತದ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವದರಿಂದ ಸ್ಥಳೀಯ ಪೊಲೀಸರು ಪ್ರವಾಸಿಗರು ಜಲಪಾತಕ್ಕೆ ಇಳಿಯದಂತೆ ಬ್ಯಾರಿಕೇಟ್‌ ಅಳವಡಿಸಿ ನಿಗಧಿತ ಜಾಗದಲ್ಲಿ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ. ನಿಸರ್ಗ ಸೌಂದರ್ಯವನ್ನು ನೋಡಿ ಆನಂದ ಪಡಲು ಬರುವ ಪ್ರವಾಸಿರಿಗೆ ಮೂಲ ಸೌಲಭ್ಯ ನೀಡುವ ಜೊತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸಿ ವಿಶ್ವ ಪ್ರಸಿದ್ಧಿ ಪಡೆದಿರುವ ಜಲಪಾತದ ವೈಭವ ಹೆಚ್ಚಿಸಬೇಕು ಎನ್ನುವುದು ಪರಿಸರ ಪ್ರೇಮಿಗಳು, ಪ್ರವಾಸಿಗಳ ಆಶಯವಾಗಿದೆ.

Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು

ಗಗನಚುಕ್ಕಿ ಜಲಪಾತದಲ್ಲಿ ಹಲವು ತಿಂಗಳಿಂದ ನೀರಿಲ್ಲದೇ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು. ಇದರಿಂದ ವ್ಯಾಪಾರ ವಹಿವಾಟು ಕುಂಠಿತವಾಗಿತ್ತು. ಭರಚುಕ್ಕಿ, ಗಗನಚುಕ್ಕಿ ಜಲಪಾತಗಳು ತನ್ನ ವೈಭವ ಪಡೆದುಕೊಂಡಿದ್ದು ನಮ್ಮ ವ್ಯಾಪಾರವು ಸುಧಾರಿಸುತ್ತಿದೆ. ರಾಜ್ಯದ ವಿವಿಧ ಭಾಗದ ಪ್ರವಾಸಿಗರು ಆಗಮಿಸಿ ಪ್ರಕೃತಿ ವೈಭವ ಸವಿಯುತ್ತಿದ್ದಾರೆ. ಸರ್ಕಾರ, ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣ ಅಭಿವೃದ್ಧಿಗೆ ಮುಂದಾಗಬೇಕು.
-ಸೋಮಶೇಖರ್‌, ವ್ಯವಸ್ಥಾಪಕ ಹೋಟೆಲ್ ಲಕ್ಷದೀಪ, ಗಗನಚುಕ್ಕಿ

click me!