ಬೆಂಗಳೂರು- ಶಿವಮೊಗ್ಗ ವಿಮಾನ ಟಿಕೆಟ್‌ ಬುಕಿಂಗ್‌ ಆರಂಭ: ಟಿಕೆಟ್‌ ದರ 3,999 ರೂ.

By Sathish Kumar KH  |  First Published Jul 27, 2023, 4:34 PM IST

ಕರ್ನಾಟಕದ ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗಕ್ಕೆ ಬೆಂಗಳೂರಿನಿಂದ ವಿಮಾನಯಾನ ಸೇವೆ ಆ.31ರಿಂದ ಆರಂಭ ಆಗಲಿದ್ದು, ಇಂದಿನಿಂದ (ಜು.27) ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ.


ಬೆಂಗಳೂರು (ಜು.27): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಆಗಿರುವ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಆ.31ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ಟಿಕೆಟ್‌ ಬುಕಿಂಗ್ ಇಂದಿನಿಂದ (ಜು.27) ಆರಂಭವಾಗಿದೆ.  ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕೇವಲ 75 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದ್ದು, ಇದಕ್ಕೆ 3,999 ರೂ. ದರವನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೀಟ್ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ.

ರಾಜ್ಯದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಮಲೆನಾಡು ಭಾಗದ ಜನರಿಗೆ ಕಡಿಮೆ ಅವಧಿಯ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿರ್ಮಿಸಲಾದ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಉದ್ಘಾಟನೆಯಿಂದಲೂ ಭಾರಿ ಸುದ್ದಿಯಲ್ಲಿದೆ. ಈಗಾಗಲೇ ಆಗಸ್ಟ್‌ 11 ರಿಂದ ವಿಮಾನ ಹಾರಾಟ ಆರಂಭ ಮಾಡಲಾಗುವುದು ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯು ಹೇಳಿತ್ತು. ಆದರೆ, ಕಾರಣಾಂತರಗಳಿಂದ ವಿಮಾನ ಹಾರಾಟ ದಿನಾಂಕವನ್ನು ಆಗಸ್ಟ್‌ 31ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಇಂಡಿಗೋ ವಿಮಾನಯಾನ ಸಂಸ್ಥೆಯು ಅಧಿಕೃತವಾಗಿ ಟಿಕೆಟ್‌ ಬುಕಿಂಗ್‌ ಸೇವೆಯನ್ನೂ ಆರಂಭಿಸಿದೆ. 

Latest Videos

undefined

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಮೂರು ವಿಮಾನ ಮಾರ್ಗಗಳ ಸೇರ್ಪಡೆ: ಉಡಾನ್‌ ಭರ್ಜರಿ ಕೊಡುಗೆ

ಕೇವಲ 75 ನಿಮಿಷದಲ್ಲಿ ಪ್ರಯಾಣ: ಬೆಂಗಳೂರಿನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 320 ಕಿ.ಮೀ ಅಂತರವಿದ್ದು, ರಸ್ತೆ ಮಾರ್ಗವಾಗಿ ಹೋದಲ್ಲಿ ಕನಿಷ್ಠ 6 ಗಂಟೆಗಳ ಸಮಯ ಬೇಕಾಗುತ್ತದೆ. ಆದರೆ, ಈ ಮಾರ್ಗವನ್ನು ವಿಮಾನದಲ್ಲಿ ಕೇವಲ 1 ಗಂಟೆ 15 ನಿಮಿಷದಲ್ಲಿ (75 ನಿಮಿಷದಲ್ಲಿ) ತಲುಪಬಹುದಾಗಿದೆ. ಇನ್ನು ಕೆಲವು ಐಷಾರಾಮಿ ಬಸ್‌ಗಳಲ್ಲಿ ಒಂದು ಸಾವುರ ರೂ.ಗಳಿಂದ 2 ಸಾವಿರ ರೂ. ಕೊಟ್ಟು ಧೀರ್ಘವಾದ ಪ್ರಯಾಣ ಮಾಡುವ ಬದಲು 3,999 ರೂ. ಕೊಟ್ಟು ಕೇವಲ ೊಂದು ಗಂಟೆಯಲ್ಲಿ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ. ವಿಮಾನಯಾನ ಸೇವೆಯು ಉದ್ಯಮಿಗಳು ಸೇರಿದಂತೆ ಹಲವರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ವಿಮಾನ ಹೊರಡುವ ಮತ್ತು ಬರುವ ವೇಳಾ ಪಟ್ಟಿ ಇಲ್ಲಿದೆ: 
ಆ. 31ರಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.50 ಕ್ಕೆ ಹೊರಟು 11.05 ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣವನ್ನು ತಲುಪಲಿದೆ. ಇದಾದ ನಂತರ ಪುನಃ 11:25ಕ್ಕೆ ಶಿವಮೊಗ್ಗದಿಂದ ಹೊರಟು 12:25ಕ್ಕೆ ಬೆಂಗಳೂರು ತಲುಪಲಿದೆ. ಆದರೆ, ಮಲೆನಾಡು ಭಾಗಕ್ಕೆ ಮೊದಲ ವಿಮಾನಯಾನ ಸೇವೆ ಆರಂಭದ ದಿನವಾದ ಆ. 31ರಂದು ಪ್ರತಿ ಟಿಕೆಟ್ ದರ 6,227 ರೂ ಇರಲಿದೆ. ಇದಾದ ನಂತರ ಸೆಪ್ಟೆಂಬರ್ 1ರಿಂದ ಟಿಕೆಟ್ ದರ 3,999ರೂ. ಇರಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯು ಮಾಹಿತಿ ನೀಡಿದೆ.

ಶಿವಮೊಗ್ಗಕ್ಕೆ ವಿಮಾನ ಹಾರಾಟ, ಹೊಸ ರೈಲು ಮಾರ್ಗದ ಅಪ್ಡೇಟ್‌ ಮಾಹಿತಿ ಕೊಟ್ಟ ಸಂಸದ ರಾಘವೇಂದ್ರ

ತೂಕದ ಬ್ಯಾಗ್‌ ಕೊಂಡೊಯ್ಯಲು ಮಿತಿ ಅನ್ವಯ: ಸೆಪ್ಟೆಂಬರ್ ಒಂದರಿಂದ ಪ್ರತಿ ದಿನ ಇದೇ ವೇಳೆಯಲ್ಲಿ ವಿಮಾನ ಸಂಚಾರ ನಡೆಸಲಿದೆ. ಪ್ರಯಾಣಿಕರು ಕೊಂಡೊಯ್ಯುವ ಲಗೇಜ್ ತೂಕಕ್ಕೆ ವಿಮಾನದಲ್ಲಿ ಮಿತಿ ಇರಲಿದೆ. ಶಿವಮೊಗ್ಗ-ಬೆಂಗಳೂರು ವಿಮಾನದಲ್ಲಿ 15 ಕೆ.ಜಿ. ತೂಕದ ಲಗೇಜ್ ಕೊಂಡೊಯ್ಯಬಹುದು. ಅಂದರೆ, ಪ್ರತಿ ಪ್ರಯಾಣಿಕ ಒಂದು ಹ್ಯಾಂಡ್ ಬ್ಯಾಗ್ ತೆಗೆದುಕೊಂಡು ಹೋಗಬಹುದು. ಸುತ್ತಳತೆ 115 ಸೆಂ.ಮೀ. ಮೀರುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಇಂಡಿಗೋ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಶಿವಮೊಗ್ಗ-ಬೆಂಗಳೂರು ಮಧ್ಯೆ ವಿಮಾನ ಹಾರಾಟ ಯಾವಾಗ ಎಂಬ ಕುತೂಹಲವಿತ್ತು. ಇಂಡಿಗೋ ಸಂಸ್ಥೆ ಟಿಕೆಟ್‌ ಬುಕಿಂಗ್ ಆರಂಭಿಸಿದ್ದು ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತ ನಿರೀಕ್ಷೆ ಹೆಚ್ಚಾಗಿದೆ. 

Now flying daily, non-stop to Shivamogga, our 79th domestic destination from Bengaluru W.E.F. 31st August, 2023. Fares starting at ₹3,999. Book now https://t.co/fTjSXCSrkf. pic.twitter.com/SSgZMC59hE

— IndiGo (@IndiGo6E)
click me!