
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.13): ನೈಸರ್ಗಿಕತೆಯಲ್ಲೇ ಮನೆ ಮಾಡಿರೋ ಕಾಫಿನಾಡು ಚಿಕ್ಕಮಗಳೂರಿಗಿಂತ (Chikkamagaluru) ಪ್ರವಾಸೋದ್ಯಮಕ್ಕೆ (Tourism) ಮತ್ತೊಂದು ತಾಣವಿಲ್ಲ. ಇದು ಪ್ರವಾಸಿಗರ ಹಾಟ್‌ಸ್ಪಾಟ್ ಅನ್ನೋದ್ರಲ್ಲಿ ನೋ ಡೌಟ್. ಕರ್ನಾಟಕದ ಊಟಿ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರನ್ನ ಭೂಲೋಕದ ಸ್ವರ್ಗ ಅಂದ್ರೆ ತಪ್ಪಿಲ್ಲ. ಇಲ್ಲಿನ ಪ್ರಮುಖ ಸ್ಥಳಗಳಲ್ಲಿ ಲಕ್ಕವಳ್ಳಿ ಭದ್ರಾ ಅಭಯಾರಣ್ಯವೂ (Bhadra Sanctuary) ಒಂದು. ಅಳಿವಿನಂಚಿನಲ್ಲಿರೋ ನಾನಾ ರೀತಿಯ ಕಾಡು ಪ್ರಾಣಿಗಳೂ (Wild Animals) ಇಲ್ಲಿ ಉಂಟು. ನಿತ್ಯಸುಮಂಗಲಿಯಂತಹಾ ಹಚ್ಚಹಸಿರಿನ ದಟ್ಟಕಾನನದ ವೀಕ್ಷಣೆಗೆ ಪ್ರವಾಸಿಗರು (Tourists) ಮತ್ತು ಪ್ರಕೃತಿಪ್ರಿಯರು ಮುಗಿಬೀಳುತ್ತಿದ್ದು, ಸಫಾರಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.
ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದಲೇ ಸಫಾರಿ ವ್ಯವಸ್ಥೆ: ಭದ್ರಾವನ್ಯಜೀವಿ ವಿಭಾಗದ ಮುತ್ತೋಡಿ ಮತ್ತು ಲಕ್ಕವಳ್ಳಿಯಲ್ಲಿ ಪ್ರಾಣಿ ಮತ್ತು ಪಕ್ಷಿಗಳ ವೀಕ್ಷಣೆಗೆ ಅನುಕೂಲವಾಗುವಂತೆ ಸಫಾರಿ ವ್ಯವಸ್ಥೆ ಮಾಡಲಾಗಿದೆ. ಲಕ್ಕವಳ್ಳಿಯಲ್ಲಿ 2 ಜೀಪು ಮತ್ತು 1 ಬಸ್ ವ್ಯವಸ್ಥೆ ಕಲ್ಪಿಸಿದ್ದು, ಜೀಪಿನಲ್ಲಿ 8 ಜನರು, ಬಸ್‌ನಲ್ಲಿ 25 ಜನರು ಪ್ರಯಾಣಿಸಬಹುದಾಗಿದೆ. ಕಾಡಾನೆ, ಕಾಡುಕೋಣಗಳ ಹಿಂಡು, ನೀರುನಾಯಿ, ಜಿಂಕೆ, ಮೊಸಳೆ ಸೇರಿದಂತೆ ವಿವಿಧಜಾತಿಯ ಪಕ್ಷಿಗಳು ಸಫಾರಿ ತೆರಳಿದವರಿಗೆ ಕಾಣಿಸಿದ್ದು, ಪ್ರಕೃತಿ ಪ್ರಿಯರನ್ನು ಮೂಕವಿಸ್ಮಿತರನ್ನಾಗಿಸಿವೆ. ಮುತ್ತೋಡಿಯಲ್ಲಿ 39 ಕಿಲೋ ಮೀಟರ್, ಲಕ್ಕವಳ್ಳಿಯಲ್ಲಿ 36 ಕಿ.ಮೀ. ಸಫಾರಿ ತೆರಳಬಹುದಾಗಿದೆ. ಕಾಡುಪ್ರಾಣಿಗಳ ಸಂಚಾರಕ್ಕೆ ಧಕ್ಕೆಯಾಗದಂತೆ ಸಫಾರಿ ವಾಹನಗಳು ಸಂಚರಿಸುತ್ತಿದ್ದು, ಒಂದು ವಾಹನ ಒಂದು ಮಾರ್ಗದಲ್ಲಿ ಸಾಗಿದರೆ, ಇನ್ನೊಂದು ವಾಹನ ಅದರ ವಿರುದ್ಧ ದಿಕ್ಕಿನಲ್ಲಿ ತೆರಳುತ್ತವೆ.
ಮಸಗಲಿ ಮೀಸಲು ಅರಣ್ಯ ವ್ಯಾಪ್ತಿ ಪ್ರದೇಶದ ಜನರಲ್ಲಿ ನಿತ್ಯವೂ ಆತಂಕ
ವಾರದ ಹಿಂದೆ ಚಿರತೆ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ. ಬೇಸಿಗೆಯಾಗಿರುವುದರಿಂದ ಭದ್ರಾ ಹಿನ್ನೇರಿನಲ್ಲಿ ನೀರಿನ ಹರಿವು ಕ್ಷೀಣಿಸಿದ್ದರ ಪರಿಣಾಮ ಮೊಸಳೆಯೊಂದು ದಡಕ್ಕೆ ಬಂದು ಅಚ್ಚರಿಯನ್ನುಂಟು ಮಾಡಿದೆ. ದಟ್ಟ ಕಾನನದ ನಡುವೆ ಅರಣ್ಯ ಇಲಾಖೆಯ ಜೀಪ್ ಏರಿ ಸಾಗ್ತಿದ್ರೆ ಮುಂದೇನೋ ಸಿಗುತ್ತೇ ಅನ್ನೋ ಕಾತರ, ಕುತೂಹಲಗಳೇ ಹೆಚ್ಚು. ಅದಕ್ಕೆ ತಕ್ಕಂತೆ ಜಿಂಕೆ, ಆನೆ, ಕಾಡುಹಂದಿ, ಕಾಡುಕೋಣಗಳ ಜೊತೆ ಅಪರೂಪದ ಪ್ರಾಣಿ-ಪಕ್ಷಿಗಳ ದರ್ಶನವೂ ಆಗಲಿದೆ. ಇದಲ್ಲದೆ ನವಿಲುಗಳ ನರ್ತನ ಮನಸ್ಸಿಗೆ ಖುಷಿ ಕೊಡುತ್ತೆ. ಅಪರೂಪಕ್ಕೊಮ್ಮೆ ಕೆಲವರಿಗೆ ವ್ಯಾಘ್ರನ ದರ್ಶನವೂ ಆಗುತ್ತೆ. ಪ್ರತಿದಿನ ಇಲ್ಲಿಗೆ ಬರೋ ಪ್ರವಾಸಿಗರು ಇವುಗಳೆಲ್ಲವನ್ನೂ ನೋಡಿ ಮಸ್ತ್ ಎಂಜಾಯ್ ಮಾಡ್ತಾರೆ. ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್‌ನಲ್ಲಿ ಲಕ್ಕವಳ್ಳಿ ರೆಂಜ್‌ನಲ್ಲಿ 33 ಹುಲಿ, 150ಕ್ಕೂ ಅಧಿಕ ಆನೆಗಳ ಜೊತೆ ಚಿರತೆಗಳೂ ಇವೆ. ಇಲ್ಲಿನ ಕಾಡು ಪ್ರಾಣಿಗಳ ದರ್ಶನದ ಸಫಾರಿ ಜರ್ನಿ ನಿಜಕ್ಕೂ ಥ್ರಿಲ್ ಆಗಿರುತ್ತೆ.
ಸಫಾರಿಗೆ ಇನ್ನಿಲ್ಲದ ಡಿಮ್ಯಾಂಡ್: ಮುತ್ತೋಡಿ ಮತ್ತು ಲಕ್ಕವಳ್ಳಿ ಸಫಾರಿ ಹೋದವರಲ್ಲಿ ಬೆಂಗಳೂರಿನವರೇ ಅಧಿಕ. ಕಳೆದ ವರ್ಷ ಎರಡು ವಿಭಾಗಕ್ಕೆ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 20,468 ಭಾರತೀಯವರು,49 ವಿದೇಶಿಯರು ಸೇರಿದಂತೆ ಒಟ್ಟು 20,517 ಮಂದಿ ಪ್ರವಾಸಿಗರು ಅಭಯಾರಣ್ಯ ವೀಕ್ಷಿಸಿದ್ದಾರೆ. ಈ ವರ್ಷದ ಜನವರಿಯಿಂದ ಮಾರ್ಚ್‌ವರೆಗೆ 39,963 ಭಾರತೀಯವರು, 16 ಮಂದಿ ವಿದೇಶಿಯರು ಮುತ್ತೋಡಿ, ಲಕ್ಕವಳ್ಳಿಯ ತಣಿಗೆಬೈಲು ವನ್ಯಜೀವಿ ವಿಭಾಗಕ್ಕೆ ತೆರಳಿ ಕಾನನದ ಸೊಬಗನ್ನು ಸವಿದು, ಸಫಾರಿಯಲ್ಲಿ ಕಾಡುಪ್ರಾಣಿಗಳನ್ನು ಕಣ್ಣಾರೆಕಂಡಿದ್ದಾರೆ. ಸಫಾರಿ ವೇಳೆಯಲ್ಲಿ ಕೆಲವರಿಗೆ ಆನೆ, ಜಿಂಕೆ, ಚಿರತೆಗಳು ದರ್ಶನ ನೀಡಿದ್ದರೆ, ಮತ್ತೆ ಕೆಲವರಿಗೆ ಇವುಗಳ ದರ್ಶನವಾಗಿಲ್ಲ.ಕೇವಲ ನವಿಲು ಸೇರಿದಂತೆ ವಿವಿಧ ಪಕ್ಷಿಗಳ ದರ್ಶನವಾಗಿದೆ.
ಆಜಾನ್-ಸುಪ್ರಭಾತ ವಿವಾದ: ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಸಿಟಿ ರವಿ
ಬೇಸಿಗೆಯಲ್ಲಿ ಲಕ್ಕವಳ್ಳಿ ಭದ್ರಾಹಿನ್ನೀರಿಗೆ ತೆರಳಿದರೆ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳು ನೋಡಬಹುದಾಗಿದೆ. ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಕಳೆದ ವರ್ಷ ಭ್ಯಯಾರಣ್ಯಕ್ಕೆ ಪ್ರವಾಸಿಗರು ಭೇಟಿಕೊಟ್ಟಿರಲಿಲ್ಲ,ಬೇಸಿಗೆ ರಜೆಯಾಗಿರುವುದರಿಂದ ಕುಟುಂಬ ಸಮೇತರಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮರೆಯದೆ ವನ್ಯಜೀವಿ ವಿಭಾಗಕ್ಕೆ ಭೇಟಿಕೊಡುತಿದ್ದು, ಕಾಡು ಹಾಗೂ ಕಾಡು ಪ್ರಾಣಿಗಳ ವೀಕ್ಷಿಸಲು ಮೇ. 31ರವರೆಗೆ ಅಪಾರ ಬೇಡಿಕೆಉಂಟಾಗಿದ್ದು, ಸಫಾರಿಗೆ ಇನ್ನಿಲ್ಲದ ಡಿಮ್ಯಾಂಡ್ ಉಂಟಾಗಿದೆ. ಒಟ್ಟಾರೆ ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್‌ಗೆ ಮುತ್ತೋಡಿ ಕಡೆಯಿಂದ ಹೋದ್ರೆ ಒಂದು ಅನುಭವ, ತರೀಕೆರೆಯ ಲಕ್ಕವಳ್ಳಿಯಿಂದ ಹೋದ್ರೆ ಮತ್ತೊಂದು ಅನುಭವ. ಎರಡೂ ಮಾರ್ಗವಾಗಿ ನಿತ್ಯ ಹರಿದ್ವರ್ಣದಂತಿರೋ ಕಾಡನ್ನ ಪ್ರವೇಶಿಸಿದ್ರೆ ಸಿಗುವ ಖುಷಿಯೇ ಬೇರೆ. ಇದರ ಜೊತೆ ಭದ್ರಾ ಜಲಾಶಯದಲ್ಲಿ ಬೋಟಿಂಗ್ ಹೋದ್ರಂತೂ ಆಗೋ ಖುಷಿ ವರ್ಣಿಸಲಸಾಧ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.