ವೈಕುಂಠ ಏಕಾದಶಿ ನಿಮಿತ್ತ ತಿರುಪತಿಗೆ ಹೋಗೋ ಪ್ಲ್ಯಾನ್‌ ಇದ್ಯಾ? 10 ದಿನಗಳ ಈ ರೂಲ್ಸ್‌ ತಿಳಿದುಕೊಳ್ಳಿ...

Published : Dec 27, 2024, 02:53 PM ISTUpdated : Dec 27, 2024, 03:00 PM IST
ವೈಕುಂಠ ಏಕಾದಶಿ ನಿಮಿತ್ತ  ತಿರುಪತಿಗೆ ಹೋಗೋ ಪ್ಲ್ಯಾನ್‌ ಇದ್ಯಾ? 10 ದಿನಗಳ ಈ ರೂಲ್ಸ್‌ ತಿಳಿದುಕೊಳ್ಳಿ...

ಸಾರಾಂಶ

ಜನವರಿ 10-19ರ ವೈಕುಂಠ ಏಕಾದಶಿ ದರ್ಶನಕ್ಕೆ  ತಿರುಪತಿಗೆ ಹೋಗುವವರಿಗೆ ಟೋಕನ್/ಟಿಕೆಟ್‌ ಕಡ್ಡಾಯ.   ಟಿಕೆಟ್‌ ಇಲ್ಲದವರಿಗೆ ದರ್ಶನವಿಲ್ಲ. VIP ದರ್ಶನ ರದ್ದು. ಶಿಶು, ವೃದ್ಧ, ಅಂಗವಿಕಲರಿಗೆ ವಿಶೇಷ ದರ್ಶನವಿಲ್ಲ. ಭಕ್ತರಿಗೆ ಅನ್ನಪ್ರಸಾದ, ನೀರು, ಚಹಾ/ಕಾಫಿ ವ್ಯವಸ್ಥೆ ಇದೆ. 3.5 ಲಕ್ಷ ಲಡ್ಡುಗಳನ್ನು ಹೆಚ್ಚುವರಿಯಾಗಿ ಸಿದ್ಧಪಡಿಸಲಾಗುವುದು. ಭದ್ರತೆ, ಸೂಚನಾ ಫಲಕ, ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ಜನವರಿ 10 ರಿಂದ 19 ರವರೆಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಾಗಲೇ ಒಂದೂವರೆ ಲಕ್ಷ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗಿದ್ದು, ನಾಲ್ಕೈದು ನಿಮಿಷಗಳಲ್ಲಿಯೇ ಟಿಕೆಟ್‌ ಬುಕಿಂಗ್‌ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ ಸಿಗದವರು ಹಾಗೂ ಟಿಕೆಟ್‌ ಪಡೆದವರು ದರ್ಶನಕ್ಕೆ ಹೋಗುವ ಮನಸ್ಸು ಮಾಡಿದ್ದರೆ ಆಡಳಿತ ಮಂಡಳಿ ತೆಗೆದುಕೊಂಡಿರುವ ಈ ನಿರ್ಧಾರಗಳ ಬಗ್ಗೆ ಗಮನ ಹರಿಸಲೇಬೇಕು. ಇದರಲ್ಲಿ ಮುಖ್ಯವಾದದ್ದು ಏನೆಂದರೆ,  ವೈಕುಂಠ ದ್ವಾರ ದರ್ಶನಕ್ಕಾಗಿ ಟೋಕನ್ ಮತ್ತು ಟಿಕೆಟ್ ಹೊಂದಿರುವ ಭಕ್ತರಿಗೆ ಮಾತ್ರ ತಿರುಮಲಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಟಿಕೆಟ್‌, ಟೋಕನ್‌ ದೊರೆಯದವರು ಈ ಹತ್ತು ದಿನ ತಿರುಪತಿಗೆ ಹೋದರೆ ದರ್ಶನ ದೊರಕುವುದಿಲ್ಲ. 

ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ. ವೆಂಕಯ್ಯ ಚೌಧರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವೈಕುಂಠ ದ್ವಾರ ದರ್ಶನ ಟೋಕನ್ ನೀಡುವ 9 ಕೇಂದ್ರಗಳಲ್ಲಿ ಭಕ್ತರಿಗೆ ಚಹಾ, ಹಾಲು, ಕಾಫಿ ವಿತರಣೆ ಕಲ್ಪಿಸಲಾಗುತ್ತಿದೆ.  ನಿಗದಿಪಡಿಸಿದ ಭೇಟಿಯ ದಿನಾಂಕದಂದು ಮಾತ್ರ ಭಕ್ತರಿಗೆ ತಿರುಮಲಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಶಿಷ್ಟಾಚಾರದ ಗಣ್ಯರನ್ನು ಹೊರತುಪಡಿಸಿ ಹತ್ತು ದಿನಗಳ ಕಾಲ VIP ಬ್ರೇಕ್ ದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.  

ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ- ಹೀಗಿದೆ ನೋಡಿ ವ್ಯವಸ್ಥೆ

ಈ ಹತ್ತು ದಿನಗಳ ಅವಧಿಯಲ್ಲಿ ಶಿಶುಗಳು, ವೃದ್ಧರು, ಅಂಗವಿಕಲರು ಹಾಗೂ ಅನಿವಾಸಿ ಭಾರತೀಯರ ಪೋಷಕರಿಗೆ ವಿಶೇಷ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಗೋವಿಂದಮಾಲಾ ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಇರುವುದಿಲ್ಲ.   ವೈಕುಂಠ ದ್ವಾರ ದರ್ಶನದ ದಿನಗಳಲ್ಲಿ ಕೊಠಡಿಗಳ ಮುಂಗಡ ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಮಂಡಳಿ ವಿವರಿಸಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಲಡ್ಡು ಮಾರಾಟ ಸಂಕೀರ್ಣದಲ್ಲಿ ಎಲ್ಲ ಕೌಂಟರ್‌ಗಳು ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗುವುದು.  ಪ್ರತಿ ದಿನ ಮೂರುವರೆ ಲಕ್ಷ ಲಡ್ಡುಗಳನ್ನು ಮತ್ತು ಹೆಚ್ಚುವರಿ ಮೂರುವರೆ ಲಕ್ಷ ಲಡ್ಡುಗಳನ್ನು ಬಫರ್ ಸ್ಟಾಕ್ ಆಗಿ ಇರಿಸಲು ಕ್ರಮಕೈಗೊಳ್ಳಲಾಗುವುದು. ಪೊಲೀಸರ ಸಮನ್ವಯದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು ಹಾಗೂ ಪ್ರಮುಖ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಆಡಳಿತ ಮಂಡಳಿ ಚರ್ಚಿಸಿದೆ.  

ಭಕ್ತರು ವಿಪರೀತ ಚಳಿಯಿಂದ ಬಳಲದಂತೆ ನೋಡಿಕೊಳ್ಳಲು ಕೂಡ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೇ  ವಿದ್ಯುತ್ ವ್ಯತ್ಯಯ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಮಾಡಲಾಗಿದೆ. ವೈಕುಂಠ ದ್ವಾರ ದರ್ಶನದ ಎಲ್ಲಾ ದಿನಗಳಲ್ಲಿ ಭಕ್ತರಿಗೆ ಅನ್ನ ಪ್ರಸಾದ, ಕುಡಿಯುವ ನೀರು, ಚಹಾ, ಕಾಫಿ, ಹಾಲು ಮತ್ತು ತಿಂಡಿಗಳ ನಿರಂತರ ವಿತರಣೆ ಮಾಡಲು ಮಂಡಳಿ ತೀರ್ಮಾನಿಸಿದೆ. ವೈಕುಂಠ ಏಕಾದಶಿಯ ದಿನದಂದು ಟ್ರಾಫಿಕ್ ಸಮಸ್ಯೆ ತಪ್ಪಿಸಲು ತಿರುಮಲದಲ್ಲಿ ವಿಶೇಷ ಪಾರ್ಕಿಂಗ್ ಸ್ಥಳಗಳನ್ನು ಸ್ಥಾಪಿಸಲಾಗುವುದು. ಪಾರ್ಕಿಂಗ್ ಸ್ಥಳದಿಂದ ಸರತಿ ಸಾಲಿನಲ್ಲಿ ಹೋಗಲು ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು. ಇಷ್ಟೇ ಅಲ್ಲದೇ ತಿರುಮಲದಲ್ಲಿ ವಿದ್ಯುತ್ ಮತ್ತು ಹೂವಿನ ಅಲಂಕಾರಗಳಿಗೆ ವಿಶೇಷ ಗಮನ ನೀಡಲಾಗುವುದು. ಸರತಿ ಸಾಲುಗಳನ್ನು ನಿರ್ವಹಿಸಲು ಮತ್ತು ಭಕ್ತರಿಗೆ ಸಹಾಯ ಮಾಡಲು ಮೂರು ಸಾವಿರ ಯುವ ಶ್ರೀವಾರಿ ಸೇವಕರು, ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆಗಳನ್ನು ಬಳಸಲಾಗುತ್ತಿದೆ ಎಂದು ಮಂಡಳಿ ತಿಳಿಸಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!