ರೈಲ್ವೆ ಟಿಕೆಟ್ ವರ್ಗಾಯಿಸಲು ಅವಕಾಶ: ಸಾಮಾನ್ಯರಿಗೆ, ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಹೀಗಿದೆ ರೂಲ್ಸ್​

Published : Jul 21, 2026, 12:34 PM IST
Indian Railway

ಸಾರಾಂಶ

ದೃಢೀಕೃತ ರೈಲ್ವೆ ಟಿಕೆಟ್​ ಹೊಂದಿದ್ದು, ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಅದನ್ನು ನಿಮ್ಮ ರಕ್ತ ಸಂಬಂಧಿಗಳಿಗೆ ವರ್ಗಾಯಿಸಬಹುದು. ರೈಲು ಹೊರಡುವ 24 ಗಂಟೆಗಳ ಮೊದಲು, ಸಮೀಪದ ಮೀಸಲಾತಿ ಕೌಂಟರ್​ಗೆ ಖುದ್ದಾಗಿ ಭೇಟಿ ನೀಡಿ, ಲಿಖಿತ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಿಯಮಗಳಿವೆ.

ರೈಲ್ವೆ ಟಿಕೆಟ್​ ಬುಕ್​ ಮಾಡಿದಾಗ ಎಷ್ಟೋ ಸಂದರ್ಭದಲ್ಲಿ ಯಾರ ಹೆಸರಿನಲ್ಲಿ ಟಿಕೆಟ್​ ಬುಕ್​ ಆಗಿರುತ್ತೋ ಅವರಿಗೆ ಹೋಗಲು ಆಗುವುದೇ ಇಲ್ಲ. ಅವರ ಬದಲು ಬೇರೆಯವರಿಗೆ ಕಳುಹಿಸಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ರೈಲ್ವೆ ನಿಯಮದ ಪ್ರಕಾರ, ಹೀಗೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಿದೆ. ಅದೇನೆಂದು ಇಲ್ಲಿ ವಿವರಿಸಲಾಗಿದೆ.

ನಿಮ್ಮ ಬಳಿ ದೃಢೀಕೃತ ಟಿಕೆಟ್ ಇದ್ದರೂ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ರೈಲು ಹೊರಡುವ ಕನಿಷ್ಠ 24 ಗಂಟೆಗಳ ಮೊದಲು ನೀವು ಅದನ್ನು ಬೇರೆಯವರಿಗೆ ಬದಲಾಯಿಸಬಹುದು. ಆದರೆ ಈ ಸಂದರ್ಭದಲ್ಲಿ ನೀವು ಸಮೀಪದ ರೈಲ್ವೆ ರಿಸರ್ವೇಷನ್​ ಕೌಂಟರ್​ಗೆ ಹೋಗಿ ಮುಖ್ಯ ಮೀಸಲಾತಿ ಮೇಲ್ವಿಚಾರಕರಿಗೆ (Chief Reservation Supervisor) ಬರವಣಿಗೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದರ ಅರ್ಥ ನಾನು ಇಂಥವರಿಗೆ ನನ್ನ ಟಿಕೆಟ್​ ವರ್ಗಾಯಿಸುತ್ತಿದ್ದೇನೆ ಎಂದು ಅದರಲ್ಲಿ ಫುಲ್​ ಡಿಟೇಲ್ಸ್​ ಬರೆದು, ಅದನ್ನು ನೀವು ನೀಡಬೇಕಾಗುತ್ತದೆ. ಪ್ರಯಾಣದ ಕನಿಷ್ಠ 24 ಗಂಟೆಗಳ ಮೊದಲು ನೀವು ಇದನ್ನು ನೀಡಬೇಕು. ಟಿಕೆಟ್​ ವರ್ಗಾವಣೆಯನ್ನು ಆನ್​ಲೈನ್​ ಮೂಲಕ ಮಾಡಲು ಬರುವುದಿಲ್ಲ. ಖುದ್ದು ನೀವೇ ಹೋಗಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಟಿಕೆಟ್​ ಕ್ಯಾನ್ಸಲ್​ ಮಾಡಿಬಿಟ್ಟಿದ್ದರೆ, ನೀವು ವರ್ಗಾವಣೆ ಮಾಡಲು ಆಗುವುದಿಲ್ಲ.

ಆದರೆ, ಇಲ್ಲೊಂದು ಷರತ್ತು ಇದೆ. ಅದೇನೆಂದರೆ, ನೀವು ನಿಮ್ಮ ಟಿಕೆಟ್​ ಅನ್ನು ಯಾರ್ಯಾರಿಗೋ ವರ್ಗಾಯಿಸಲು ಬರುವುದಿಲ್ಲ. ಒಬ್ಬರೇ ಹಲವು ಟಿಕೆಟ್​ ಪಡೆದು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಅದನ್ನು ತಪ್ಪಿಸುವ ಸಲುವಾಗಿ, ನೀವು ಟಿಕೆಟ್​ ಬೇರೆಯವರಿಗೆ ವರ್ಗಾಯಿಸಲು ಅವಕಾಶ ಕಲ್ಪಿಸಿಲ್ಲ. ಬದಲಿಗೆ ನಿಮ್ಮ ರಕ್ತದ ಸಂಬಂಧಿಕರಿಗೆ ಮಾತ್ರ ವರ್ಗಾಯಿಸಲು ಸಾಧ್ಯ. ಇದರ ಅರ್ಥ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಗಂಡ ಅಥವಾ ಹೆಂಡತಿ ಇವರಿಗೆ ಮಾತ್ರ ವರ್ಗಾಯಿಸಬಹುದು. ಆದ್ದರಿಂದ ಟಿಕೆಟ್​ ವರ್ಗಾವಣೆ ಸಂದರ್ಭದಲ್ಲಿ, ನೀವು ಯಾರಿಗೆ ಅದನ್ನು ವರ್ಗಾಯಿಸುತ್ತೀರಿ ಎನ್ನುವ ಬಗ್ಗೆ ಸೂಕ್ತ ದಾಖಲೆಯನ್ನೂ ಅರ್ಜಿಯ ಜೊತೆ ನೀಡಬೇಕಾಗುತ್ತದೆ. ವರ್ಗಾವಣೆ ಮಾಡುತ್ತಿರುವ ವ್ಯಕ್ತಿ ನಿಮ್ಮ ರಕ್ತ ಸಂಬಂಧಿ ಎನ್ನುವ ಬಗ್ಗೆ ದಾಖಲೆ ನೀಡುವುದು ಕಡ್ಡಾಯ.

ಸರ್ಕಾರಿ ನೌಕರರು, ವಿದ್ಯಾರ್ಥಿಗಳಿಗೆ ಏನು ರೂಲ್ಸ್​

ಆದರೆ, ಒಂದು ವೇಳೆ ನೀವೇನಾದರೂ ಸರ್ಕಾರಿ ನೌಕರರು ಆಗಿದ್ದಲ್ಲಿ, ಕರ್ತವ್ಯದ ಮೇಲೆ ನಿಮ್ಮ ಹೆಸರಿಗೆ ರೈಲ್ವೆ ಟಿಕೆಟ್​ ಬುಕ್​ ಆಗಿದ್ದರೆ, ಅನಿವಾರ್ಯ ಕಾರಣದಿಂದ ನೀವು ಹೋಗಲು ಆಗದೇ, ನಿಮ್ಮ ಕಚೇರಿಯ ಬೇರೆ ಸಿಬ್ಬಂದಿ ಹೋಗುವುದಾದರೆ, ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿಯೂ ಸೂಕ್ತ ದಾಖಲೆ, ಲಿಖಿತ ಮಾಹಿತಿ ಎಲ್ಲವನ್ನೂ ನೀಡಬೇಕು. ಅದೇ ರೀತಿ, ಪ್ರವಾಸಕ್ಕೋ, ಇನ್ನೆಲ್ಲೋ ಶಾಲೆ, ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿಗಳ ಹೆಸರಿನಲ್ಲಿ ಟಿಕೆಟ್​ ಬುಕ್​ ಆಗಿದ್ದರೆ, ಗುಂಪುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಾಗಿದ್ದರೆ ಅಂಥ ಸಂದರ್ಭದಲ್ಲಿ ಮಾನ್ಯತೆ ಪಡೆದ ಸಂಸ್ಥೆಯ ಮುಖ್ಯಸ್ಥರು ರೈಲು ಹೊರಡುವ 48 ಗಂಟೆಗಳ ಮೊದಲು ಒಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ಮಾಡಲಾದ ಕಾಯ್ದಿರಿಸುವಿಕೆಯನ್ನು ಅದೇ ಸಂಸ್ಥೆಯ ಇನ್ನೊಬ್ಬ ವಿದ್ಯಾರ್ಥಿಗೆ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಮದುವೆ, NCC ಕೆಡೆಟ್​ ರೂಲ್ಸ್​

ಅದೇ ರೀತಿ, ಮದುವೆ ಸಂದರ್ಭಗಳಲ್ಲಿ ಗುಂಪಾಗಿ ಟಿಕೆಟ್​ ಬುಕ್​ ಆಗಿದ್ದರೆ, ಆ ಗುಂಪಿನ ಯಾವುದೇ ಸದಸ್ಯರ ಹೆಸರಿನಲ್ಲಿ ಮಾಡಲಾದ ಕಾಯ್ದಿರಿಸುವಿಕೆಯನ್ನು ರೈಲು ಹೊರಡುವ 48 ಗಂಟೆಗಳ ಮೊದಲು ಪಕ್ಷದ ಮುಖ್ಯಸ್ಥರು ಲಿಖಿತ ವಿನಂತಿಯ ಮೇರೆಗೆ ಬೇರೆ ಯಾವುದೇ ವ್ಯಕ್ತಿಗೆ ವರ್ಗಾಯಿಸಬಹುದು. ನ್ಯಾಷನಲ್ ಕೆಡೆಟ್ ಕ್ರಾಪ್ಸ್ (ಎನ್‌ಸಿಸಿ) ಗುಂಪಿನ ಕೆಡೆಟ್‌ನ ಹೆಸರಿನಲ್ಲಿ ಮಾಡಲಾದ ಮೀಸಲಾತಿಯನ್ನು ರೈಲು ಹೊರಡುವ 24 ಗಂಟೆಗಳ ಮೊದಲು ಗುಂಪಿನ ಮುಖ್ಯಸ್ಥರು ಲಿಖಿತ ವಿನಂತಿಯ ಮೇರೆಗೆ ಮತ್ತೊಂದು ಕೆಡೆಟ್‌ಗೆ ವರ್ಗಾಯಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇದು ಚಿನ್ನದ ಕಾಫಿ, ಟೀ! ಒಂದು ಕಪ್​ಗೆ ಒಂದು ಲಕ್ಷ: ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ ಕೇಳಿ
70 ನಿಲ್ದಾಣ ದಾಟಿದ್ರೂ ಎಲ್ಲೂ ನಿಲ್ಲದ ಭಾರತದ ಏಕೈಕ ರೈಲು; 5 ರಾಜ್ಯ ಸಂಪರ್ಕಿಸೋ ಟ್ರೈನ್