Amazing Fact : ವರ್ಷದಲ್ಲಿ ಐದು ರಾತ್ರಿ ಕರೆಂಟ್ ಹಾಕಲ್ಲ ಇಲ್ಲಿನ ಜನ, ಮಾದರಿಯಾಗಿದೆ ಕಾರಣ

Published : Oct 26, 2026, 02:47 PM IST
Corvo island

ಸಾರಾಂಶ

Amazing Fact : ವರ್ಷದಲ್ಲಿ ಐದು ದಿನ ಈ ಊರಿನಲ್ಲಿ ರಾತ್ರಿ ದೀಪ ಉರಿಯೋದಿಲ್ಲ. ಎಲ್ಲ ಲೈಟ್‌ ಗಳನ್ನು ಊರಿನ ಜನರೇ ಆರಿಸ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ?

ರಾತ್ರಿಯಾಗ್ತಿದ್ದಂತೆ ಎಲ್ಲ ಕಡೆ ದೀಪ ಬೆಳಗಲು ಶುರುವಾಗುತ್ತೆ. ಕತ್ತಲೆ ದೂರ ಮಾಡಲು ಮನೆ, ರಸ್ತೆಗಳಲ್ಲಿ ದೀಪ ಹಚ್ಚುತ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಊರಿನಲ್ಲಿ ಕತ್ತಲಾದ್ಮೇಲೆ ದೀಪ ಆರುತ್ತೆ. ವರ್ಷದಲ್ಲಿ ಆರು ದಿನ ಲೈಟ್‌ ಬಂದ್‌ ಮಾಡ್ತಾರೆ.

ದೀಪ ಆರಿಸಲು ಕಾರಣ ಏನು?

ಯುರೋಪ್ನ ಪೋರ್ಚುಗಲ್ ದೇಶದಲ್ಲಿರುವ ಒಂದು ಪುಟ್ಟ ದ್ವೀಪ ವರ್ಷಕ್ಕೊಮ್ಮೆ ಐದು ರಾತ್ರಿ ಸಂಪೂರ್ಣ ಕತ್ತಲಿನಲ್ಲಿ ಮುಳುಗುತ್ತದೆ. ಇಲ್ಲಿನ ಜನರು ವಿದ್ಯುತ್ ದೀಪಗಳನ್ನು ಆರಿಸುವುದು ವಿದ್ಯುತ್ ಉಳಿಸುವುದಕ್ಕಲ್ಲ, ಬದಲಿಗೆ ಸಮುದ್ರ ಪಕ್ಷಿಗಳನ್ನು ಸಾವಿನಿಂದ ರಕ್ಷಿಸುವುದಕ್ಕಾಗಿ. ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಅಜೋರ್ಸ್ ದ್ವೀಪಸಮೂಹದ ಅತ್ಯಂತ ಚಿಕ್ಕ ಮತ್ತು ಉತ್ತರದ ದ್ವೀಪವಾದ ಕೊರ್ವೋನಲ್ಲಿ ದೀಪ ಆರಿಸಲಾಗುತ್ತದೆ. ಇಲ್ಲಿ ಒಂದೇ ಒಂದು ಗ್ರಾಮವಿದ್ದು, ಸುಮಾರು 450 ಜನರು ವಾಸಿಸುತ್ತಿದ್ದಾರೆ. 2019ರಿಂದ ಪ್ರತಿ ಶರತ್ಕಾಲದಲ್ಲಿ ಐದು ರಾತ್ರಿ ದೀಪಗಳನ್ನು ಆರಿಸುವ ಮೂಲಕ ಇಲ್ಲಿನ ಜನರು ಕೋರಿ ಶಿಯರ್ವಾಟರ್ ಎಂಬ ಸಮುದ್ರ ಪಕ್ಷಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.

1991ರಲ್ಲಿ ಏನು ನಡೆದಿತ್ತು?

ಈ ಸಮಸ್ಯೆ ಗಮನಕ್ಕೆ ಬಂದಿದ್ದು 1991ರಲ್ಲಿ. ಆಗ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಳೆಯ ಶಿಯರ್ವಾಟರ್ ಪಕ್ಷಿಗಳು ಸಾವನ್ನಪ್ಪುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ಈ ಪಕ್ಷಿಗಳು ಸಮುದ್ರದತ್ತ ತಮ್ಮ ಮೊದಲ ಹಾರಾಟ ನಡೆಸುವ ಮೊದಲು ಸುಮಾರು ಮೂರು ತಿಂಗಳು ಗೂಡಿನಲ್ಲೇ ಕಳೆಯುತ್ತವೆ. ನಂತರ ಸಮುದ್ರದತ್ತ ಹಾರುವಾಗ ನಕ್ಷತ್ರಗಳ ಬೆಳಕಿನ ಸಹಾಯದಿಂದ ದಿಕ್ಕು ಗುರುತಿಸುತ್ತವೆ.

ಆದರೆ ರಾತ್ರಿ ರಸ್ತೆಯಲ್ಲಿರುವ ವಿದ್ಯುತ್ ದೀಪಗಳ ಬೆಳಕಿನಿಂದ ಅವು ದಿಕ್ಕು ತಪ್ಪುತ್ತವೆ. ನಕ್ಷತ್ರಗಳ ಬೆಳಕನ್ನು ಗುರುತಿಸಲು ಸಾಧ್ಯವಾಗದೆ, ರಸ್ತೆಗಳು ಮತ್ತು ಕಟ್ಟಡಗಳಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬೀಳುತ್ತವೆ. ಇದರಿಂದ ಅನೇಕ ಪಕ್ಷಿಗಳು ಗಾಯಗೊಂಡು ಸಾವನ್ನಪ್ಪುತ್ತಿದ್ದವು.

ಪಕ್ಷಿಗಳನ್ನು ಉಳಿಸಲು ದೀಪ ಆರಿಸಿದ್ರು

ಪಕ್ಷಿಗಳು ನೆಲಕ್ಕೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ರಾತ್ರಿ ಇಡೀ ಗ್ರಾಮದಲ್ಲಿ ಹುಡುಕಾಡಿ ಅವುಗಳನ್ನು ರಕ್ಷಿಸಲು ಆರಂಭಿಸಿದರು. ಈ ಪ್ರಯತ್ನ ಮುಂದೆ ದೊಡ್ಡ ಅಭಿಯಾನವಾಗಿ ಬೆಳೆಯಿತು. ದಿ ಗಾರ್ಡಿಯನ್ ವರದಿಯ ಪ್ರಕಾರ, 1995ರಲ್ಲಿ ಅಜೋರ್ಸ್ ಸರ್ಕಾರವು ಇತರ ದ್ವೀಪಗಳಿಗೂ ಈ ಪ್ರಯತ್ನವನ್ನು ವಿಸ್ತರಿಸಲು 'SOS ಕಗಾರೊ' ಎಂಬ ಅಭಿಯಾನವನ್ನು ಆರಂಭಿಸಿತು. ನಂತರ ಪೋರ್ಚುಗೀಸ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಬರ್ಡ್ಸ್ (SPEA) ಕೂಡ ಈ ಯೋಜನೆಯಲ್ಲಿ ಕೈಜೋಡಿಸಿತು.

ಇಂದು ಕೊರ್ವೋ ದ್ವೀಪದಲ್ಲಿ ಪಕ್ಷಿಗಳ ಹಾರಾಟಕ್ಕೆ ಅಡ್ಡಿಯಾಗದಂತೆ, ನಿರ್ದಿಷ್ಟ ಐದು ರಾತ್ರಿಗಳಲ್ಲಿ ಸರ್ಕಾರಿ ಬೀದಿ ದೀಪಗಳನ್ನು ಸಂಪೂರ್ಣವಾಗಿ ಆರಿಸಲಾಗುತ್ತದೆ. ಇದರಿಂದ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಪಕ್ಷಿಗಳು ದಿಕ್ಕು ತಪ್ಪದೆ ಸಮುದ್ರದತ್ತ ಹಾರಲು ಇದು ನೆರವಾಗುತ್ತದೆ.

ಈ ಐದು ರಾತ್ರಿಗಳಲ್ಲಿ ಗ್ರಾಮಸ್ಥರು ರಾತ್ರಿ ಹೊತ್ತು ಬೀದಿಗಳಲ್ಲಿ ಸುತ್ತಾಡಿ ನೆಲಕ್ಕೆ ಬಿದ್ದಿರುವ ಪಕ್ಷಿಗಳನ್ನು ಹುಡುಕುತ್ತಾರೆ. ಸಿಕ್ಕ ಪಕ್ಷಿಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಇಟ್ಟು ರಾತ್ರಿ ಪೂರ್ತಿ ವಿಶ್ರಾಂತಿ ಪಡೆಯಲು ಬಿಡುತ್ತಾರೆ. ಮರುದಿನ ಅವುಗಳನ್ನು ಸಮುದ್ರದ ಬಳಿಯ ಬಂಡೆಯೊಂದರಿಂದ ಬಿಡಲಾಗುತ್ತದೆ. ಹೀಗೆ ಅವುಗಳಿಗೆ ಮತ್ತೆ ಸಮುದ್ರವನ್ನು ತಲುಪಿ ತಮ್ಮ ಸಹಜ ಜೀವನಕ್ಕೆ ಮರಳಲು ಅವಕಾಶ ಮಾಡಿಕೊಡಲಾಗುತ್ತದೆ.

ಮನುಷ್ಯರ ಒಂದು ಸಣ್ಣ ಪ್ರಯತ್ನ ನೂರಾರು ಪಕ್ಷಿಗಳ ಜೀವ ಉಳಿಸಬಲ್ಲದು ಎಂಬುದಕ್ಕೆ ಕೊರ್ವೋ ದ್ವೀಪದ ಈ ಕಾರ್ಯವೇ ಉದಾಹರಣೆ. ಪ್ರಕೃತಿಯನ್ನು ರಕ್ಷಿಸಲು ದೊಡ್ಡ ಯೋಜನೆಗಳೇ ಬೇಕಿಲ್ಲ, ಕಾಳಜಿ ಮತ್ತು ಒಗ್ಗಟ್ಟಿನ ಮನಸ್ಸಿದ್ದರೆ ಸಾಕು ಎಂಬುದನ್ನು ಇಲ್ಲಿನ ಜನರು ತೋರಿಸಿಕೊಟ್ಟಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

9 ವರ್ಷಗಳ ಮುಂಬೈ ಬದುಕು ಬಿಟ್ಟು ಬೆಂಗಳೂರಿಗೆ ಸ್ಟ್ಯಾಂಡಪ್ ಕಾಮಿಡಿಯನ್ ಶಿಫ್ಟ್! ಕನ್ನಡ ನೆಲವೇಕೆಂದು ಬಿಚ್ಚಿಟ್ರು ಕಾರಣ
ಓನರ್ ತಲೆಯಿಂದ ಬಿದ್ದ ವಿಗ್ ನೋಡಿ ಬಿದ್ದೂಬಿದ್ದೂ ನಕ್ಕ ಪಾಂಡಾ; ಅದಕ್ಕೂ ಮೊದಲು ಆ ಪ್ರಾಣಿ ಮಾಡಿದ್ದೇನು ನೋಡಿ!