ನಮ್ಮಲ್ಲಿ ಅನೇಕ ಗಾದೆಗಳಿವೆ. ಈ ಗಾದೆಗಳನ್ನು ಸುಮ್ಮನೆ ಮಾಡಿಲ್ಲ. ಕೆಲವೊಂದು ಗಾದೆಗೆ ಆಧಾರವಿದೆ. ಗೋಡೆಗೂ ಕಿವಿ ಇದೆ ಎನ್ನುವ ಗಾದೆ ಬರೀ ಗಾದೆಯಲ್ಲ. ಸತ್ಯ. ನಾವಿಂದು ಕಿವಿ ಇರುವ ಗೋಡೆ ಬಗ್ಗೆ ಮಾಹಿತಿ ನೀಡ್ತೇವೆ.
ಗೋಡೆಗೂ ಕಿವಿ ಇದೆ ಎಂಬ ಗಾದೆಯನ್ನು ನೀವು ಕೇಳಿರಹುದು. ಪಿಸುಪಿಸು - ಗುಸುಗುಸು ಮಾತನಾಡುವ ಸಮಯದಲ್ಲಿ ಜನರು, ಗೋಡೆಗೂ ಕಿವಿ ಇದೆ, ಸ್ವಲ್ಪ ನಿಧಾನವಾಗಿ ಮಾತನಾಡಿ ಅಂತ ಹೇಳ್ತಿರುತ್ತಾರೆ. ಈ ಮಾತನ್ನು ಕೇಳಿ ನಾವು ನಗ್ತಿರುತ್ತೇವೆ. ಗೋಡೆ ನಿರ್ಜೀವ ವಸ್ತು. ಅದಕ್ಕೆ ಕಿವಿ ಇರುತ್ತಾ ಅಂತ ಮಕ್ಕಳು ಪ್ರಶ್ನೆ ಮಾಡ್ತಾರೆ. ಗೋಡೆಗೆ ಕಿವಿ ಇದೆ ಅನ್ನೋದು ಬರೀ ಒಂದು ಗಾದೆ ಮಾತಲ್ಲ. ನಿಮ್ಮ ಮಾತನ್ನು ಯಾರಾದ್ರೂ ಕೇಳಿಸಿಕೊಂಡು ಇನ್ನೊಬ್ಬರಿಗೆ ಹೇಳ್ಬಹುದು ಎಂಬ ಸೂಕ್ಷ್ಮತೆಯನ್ನು ಈ ಗಾದೆ ಹೇಳುತ್ತದೆ ನಿಜ. ಆದ್ರೆ ನಿಜವಾಗ್ಲೂ ಕಿವಿ ಹೊಂದಿರುವ ಗೋಡೆ ಇದೆ. ನೀವು ಆಗಾಗ ಗೋಡೆಗೆ ಕಿವಿ ಎಂಬ ಮಾತನ್ನು ಆಡ್ತಿದ್ದರೆ ಅದ್ರ ಬಗ್ಗೆ ಕುತೂಹಲಕಾರಿ ವಿಷ್ಯವನ್ನು ನಾವು ಹೇಳ್ತೆವೆ.
ಗೋಡೆ (Wall) ಗೂ ಕಿವಿ ಇದೆ ಎನ್ನುವ ಗಾದೆ ಬಂದಿದ್ದೆಲ್ಲಿ? : ಗೋಡೆಗೂ ಕಿವಿ (Ear) ಇದೆ ಎನ್ನುವ ಗಾದೆ ಬಂದಿದ್ದು ಲಕ್ನೋದ ಪ್ರಸಿದ್ಧ ಆಸಿಫಿ ಇಮಾಂಬರರಿಂದ (Imambara). ಭೂಲ್ಭುಲೈಯಾ ಅಥವಾ ಬಡಾ ಇಮಾಂಬರ ಎಂದೂ ಇದನ್ನು ಕರೆಯಲಾಗುತ್ತದೆ. ಈ ಸ್ಮಾರಕವನ್ನು 18ನೇ ಶತಮಾನದಲ್ಲಿ ನವಾಬ್ ಅಸಫ್-ಉದ್-ದೌಲಾ ಕಟ್ಟಿಸಿದ್ದಾರೆ. ಬಡಾ ಇಮಾಂಬರನ ಬಾಗಿದ ರಚನೆ, ಒಂದೇ ರೀತಿಯ ಮಾರ್ಗಗಳು ಮತ್ತು ಕಲಾಕೃತಿಗಳು, ಸುರಂಗ ಮಾರ್ಗ, ಆಕರ್ಷಕ ಕೆತ್ತನೆಯಿಂದ ಗಮನ ಸೆಳೆಯುತ್ತದೆ. ಈ ಗೋಡೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಈ ಗೋಡೆಗೆ ಕಿವಿ ಇರೋದು ಸತ್ಯ. ನೀವು ಒಂದು ಗೋಡೆ ಬಳಿ ಮಾತನಾಡ್ತಿದ್ದು, ಇನ್ನೊಬ್ಬ ವ್ಯಕ್ತಿ ಅದೇ ಸಮಯದಲ್ಲಿ ಗೋಡೆಯ ಮತ್ತ್ಯಾವುದೋ ಭಾಗದಲ್ಲಿ ಗೋಡೆಗೆ ಕಿವಿಕೊಟ್ಟರೆ ನೀವು ಹೇಳಿದ ಮಾತು ಅವರಿಗೆ ಕೇಳುತ್ತದೆ.
ಗೋಡೆಯ ವಿಶೇಷತೆ ಏನು? : ಬಡಾ ಇಮಾಂಬರ ಗೋಡೆ ವಿಶಾಲವಾಗಿದೆ. ಸಭಾಂಗಣ 165 ಅಡಿ ಹೊಂದಿದೆ. ಒಂದು ಮೂಲೆಯಲ್ಲಿ ನೀವು ಮೃದುವಾಗಿ ಮಾತನಾಡಿದ್ರೂ ಇನ್ನೊಂದು ಮೂಲೆಯಲ್ಲಿ ನೀವು ಏನು ಮಾತನಾಡುತ್ತಿದ್ದೀರಿ ಎಂಬುದು ಕೇಳುತ್ತದೆ. ಗೋಡೆಯಿಂದ ಮಾತು ಕೇಳಲು ಕಾರಣ ಗೋಡೆಯ ವಿನ್ಯಾಸ. ಗೋಡೆಗೆ ಬಿಳಿ ಮತ್ತು ಕಪ್ಪು ಟೊಳ್ಳಾದ ಗೆರೆಗಳಿವೆ. ಈ ಗೆರೆಗಳು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಧ್ವನಿಯನ್ನು ರವಾನಿಸುತ್ತವೆ.
ಶತ್ರುಗಳನ್ನು ಸದೆಬಡಿಯಲು ಮತ್ತು ಗೂಢಾಚಾರಿಕೆ ತಪ್ಪಿಸುವ ಉದ್ದೇಶದಿಂದ ನವಾಬ್ ಅಸಫ್-ಉದ್-ದೌಲಾ ಈ ಗೋಡೆ ಕಟ್ಟಿಸಿದ ಎನ್ನಲಾಗುತ್ತದೆ. ಬಡಾ ಇಮಾಂಬರದ ಮತ್ತೊಂದು ಪ್ರಮುಖ ಭಾಗವೆಂದರೆ ಆಕರ್ಷಕ ಚಕ್ರವ್ಯೂಹ. ಇದನ್ನು ಭೂಲ್ ಭುಲೈಯಾ ಎಂದು ಕರೆಯಲಾಗುತ್ತದೆ. ಇದು ಡಾರ್ಕ್ ಮತ್ತು ಕಿರಿದಾದ ಕಾರಿಡಾರ್ ಮತ್ತು ಮೆಟ್ಟಿಲುಗಳ ಸಂಕೀರ್ಣ ಜಾಲವಾಗಿದೆ.
ಗೋಡೆಗೂ ಕಿವಿ ಇದೆ ಎನ್ನುವ ಬಗ್ಗೆ ವಿಜ್ಞಾನಿಗಳು ಹೇಳೋದೇನು? : ಗೋಡೆಗೂ ಕಿವಿಯನ್ನು ನೀವು ಮಾಡ್ಬಹುದು. ಗೋಡೆಗೆ ಅತ್ಯಂತ ಕಿರಿದಾರ ರಂಧ್ರವನ್ನು ಮಾಡ್ಬೇಕು. ಅದರ ಒಂದು ಭಾಗದಲ್ಲಿ ಪ್ಲಾಸ್ಟಿಕ್ ಮೆಂರ್ಬೆನ್ ಹಾಕಬೇಕು. ಆ ನಂತ್ರ ನೀವು ಗೋಡೆ ಒಂದು ಕಡೆಯಲ್ಲಿ ಮಾತನಾಡಿದ್ರೆ ಇನ್ನೊಂದು ಕಡೆ ಸ್ಪಷ್ಟವಾಗಿ ಕೇಳಿಸುತ್ತದೆ. ಅದು ಶೇಕಡಾ 75 ರಿಂದ ಶೇಕಡಾ 100ರಷ್ಟು ಸ್ಪಷ್ಟತೆಯನ್ನು ಹೊಂದಿರುತ್ತದೆ. ಇದನ್ನು ನೀವು ಗೋಡೆಯ ಕಿವಿ ಎಂದು ಕರೆಯಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆದ್ರೆ ಗೋಡೆಯ ರಂಧ್ರಕ್ಕೆ ಪ್ಲಾಸ್ಟಿಕ್ ಮೆಂರ್ಬೆನ್ ಹಾಕದೆ ಹೋದಲ್ಲಿ ಒಂದು ಬದಿಯ ಮಾತು ಇನ್ನೊಂದು ಕಡೆ ಕೇಳಿಸೋದಿಲ್ಲ. ನೀವು ಗೋಡೆಯನ್ನು ಸೌಂಡ್ ಪ್ರೂಫ್ ಮಾಡಲು ಬಯಸಿದ್ರೆ ಸೌಂಡ್ ಪ್ರೂಫ್ ಬೋರ್ಡ್ ಅಥವಾ ಹಾಳೆಯನ್ನು ಹಾಕಬೇಕಾಗುತ್ತದೆ ಎಂದು ಬಡಾ ಇಮಾಂಬರದ ಬಗ್ಗೆ ಸಂಶೋಧನೆ ನಡೆಸಿದ ದಕ್ಷಿಣ ಕೋರಿಯಾ ಹಾಗೂ ಜಪಾನ್ ವಿಜ್ಞಾನಿಗಳು ತಿಳಿಸಿದ್ದಾರೆ.