ಮೈಸೂರಿನಲ್ಲಿ ಚಿತ್ರನಗರಿ ಶೀಘ್ರದಲ್ಲೇ ನಿರ್ಮಾಣವಾಗಲಿದ್ದು, ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞರಿಂದ ಆಧುನಿಕ ತಂತ್ರಜ್ಞಾನದ ಸ್ಟುಡಿಯೋ ನಿರ್ಮಿಸಲಾಗುವುದು ಅಲ್ಲಿ ಬಾಲಿವುಡ್ ಅಲ್ಲ ಹಾಲಿವುಡ್ ಚಿತ್ರಗಳೂ ಶೂಟಿಂಗ್ ಆಗುವಷ್ಟರ ಮಟ್ಟಿಗೆ ತಂತ್ರಜ್ಞಾನ ಸೌಲಭ್ಯ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು (ಮಾ.24): ಮೈಸೂರಿನಲ್ಲಿ ಚಿತ್ರನಗರಿ ಶೀಘ್ರದಲ್ಲೇ ನಿರ್ಮಾಣವಾಗಲಿದ್ದು, ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞರಿಂದ ಆಧುನಿಕ ತಂತ್ರಜ್ಞಾನದ ಸ್ಟುಡಿಯೋ ನಿರ್ಮಿಸಲಾಗುವುದು ಅಲ್ಲಿ ಬಾಲಿವುಡ್ ಅಲ್ಲ ಹಾಲಿವುಡ್ ಚಿತ್ರಗಳೂ ಶೂಟಿಂಗ್ ಆಗುವಷ್ಟರ ಮಟ್ಟಿಗೆ ತಂತ್ರಜ್ಞಾನ ಸೌಲಭ್ಯ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗುರುವಾರ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಇತಿಹಾಸವಿರುವ ಸಿನಿಮಾ ಕ್ಷೇತ್ರದಲ್ಲಿ ಇಂದು ಅತ್ಯಂತ ಅದ್ಭುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಡಿಜಿಟಲೀಕರಣದಿಂದ ಬಹಳಷ್ಟು ಬದಲಾವಣೆ ಆಗಿದ್ದು, ಬದುಕಿನಂತೆ ಸಿನಿಮಾದಲ್ಲಿಯೂ ವೇಗದ ಬೆಳವಣಿಗೆಯಾಗುತ್ತಿದೆ ಎಂದರು. ಇಡೀ ಜಗತ್ತಿನ ಅತೀ ಕಡಿಮೆ ನಗರಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತದೆ. ಅದರಲ್ಲಿ ಬೆಂಗಳೂರು ಕೂಡ ಒಂದು ಎಂಬುದು ಹೆಮ್ಮೆಯ ವಿಚಾರ. ಈ ಬಾರಿ ಉತ್ತಮ ಚಿತ್ರಗಳ ಆಯ್ಕೆಯಾಗಿದ್ದು, ಈ ಸಿನೆಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಶೆಡ್ಯೂಲ್ 9ಕ್ಕೆ ಸೇರಿಸಿ: ಕೇಂದ್ರಕ್ಕೆ ರಾಜ್ಯದಿಂದ ಪತ್ರ
‘ಕಾಂತಾರ’ ಚಲನಚಿತ್ರದ ಯಶಸ್ಸಿನ ಬಗ್ಗೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ‘ಕಾಂತಾರ’ ಸ್ಥಳೀಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ತ್ರಿಬಲ್ ಆರ್ (ಆರ್‌ಆರ್‌ಆರ್)ಸಿನೆಮಾ ಆಸ್ಕರ್ ಪಡೆದಿದ್ದು, ನಾವೆಲ್ಲ ಹೆಮ್ಮೆ ಪಡಬೇಕು. ಆಸ್ಕರ್ ಪ್ರತಿ ವರ್ಷ ಪಡೆಯಬಹುದೆಂದು ತೋರಿಸಿ ಕೊಟ್ಟಿದೆ. ಸಿನೆಮಾ ಇಲ್ಲದೆ ನಮ್ಮ ಬದುಕಿಲ್ಲ. ಹೀಗಾಗಿ ಸಿನೆಮಾಗಾಗಿ ಸರ್ಕಾರ ಏನೆಲ್ಲ ಬೇಕೋ ಅದನ್ನು ಮಾಡಿದೆ. ಈ ಹಿಂದೆ 125 ಸಿನಿಮಾಗಳಿಗೆ ಮಾತ್ರ ಸಬ್ಸಿಡಿ ಸಿಗುತ್ತಿತ್ತು. ಅದನ್ನು 200 ಸಿನಿಮಾಗಳಿಗೆ ಹೆಚ್ಚಿಗೆ ಮಾಡಿದ್ದೇನೆ ಎಂದರು.
ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ ಗೋವಿಂದ ನಿಹಾಲಾನಿ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯಸಭಾ ಸದಸ್ಯ ವಿ.ವಿಜಯೇಂದ್ರ ಪ್ರಸಾದ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಚಿತ್ರನಟ ಅಭಿಷೇಕ್ ಅಂಬರೀಶ್, ಸಪ್ತಮಿಗೌಡ, ಹರ್ಷಿಕಾ ಪೂಣಚ್ಚ, ಶಾಸಕರಾದ ಎಸ್.ಆರ್.ವಿಶ್ವನಾಥ್, ಎಂ.ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರೇಸ್‌ಕೋರ್ಸ್ ರಸ್ತೆಗೆ ದಿ.ಅಂಬರೀಶ್ ಹೆಸರು: ದಿವಂಗತ ಅಂಬರೀಶ್ ಅವರ ಹೆಸರನ್ನು ರೇಸ್‌ಕೋರ್ಸ್ ರಸ್ತೆಗೆ ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಿದ್ದು ಸ್ಮಾರಕದ ಉದ್ಘಾಟನೆ ಮತ್ತು ರಸ್ತೆಗೆ ನಾಮಕರಣ ಕಾರ್ಯಕ್ರಮ ಮಾಚ್‌ರ್ 27ರಂದು ನಡೆಯಲಿದೆ. ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಅವರ ಹೆಸರಿನಲ್ಲಿ ಸ್ಮಾರಕ ಮಾಡಲು ಎಲ್ಲ ಸಿದ್ಧತೆಗಳಾಗಿದ್ದು ಇದೇ ವರ್ಷವೇ ಸ್ಮಾರಕ ನಾವು ನಿರ್ಮಾಣ ಮಾಡುತ್ತೇವೆ. ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಸ್ಮಾರಕಗಳನ್ನು ಒಟ್ಟು ಸೇರಿಸಿ ಸಮಗ್ರ ಅಭಿವೃದ್ಧಿ ಮಾಡಲು ಇದೇ ವರ್ಷ ಚಾಲನೆ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸಿಎಂ ಬೊಮ್ಮಾಯಿ ಸೇರಿ ಬಿಜೆಪಿಯಲ್ಲಿ ಎಲ್ಲರೂ ಭ್ರಷ್ಟರು: ಸಿದ್ದರಾಮಯ್ಯ
ಆರ್‌ಆರ್‌ಆರ್ ಕಥೆಗಾರ ವಿಜಯೇಂದ್ರ ಪ್ರಸಾದ್ ಕನ್ನಡದಲ್ಲಿ ಭಾಷಣ: ಆಸ್ಕರ್ ವಿಜೇತ ‘ಆರ್‌ಆರ್‌ಆರ್’ ಚಿತ್ರದ ಕಥೆಗಾರರೂ ಆಗಿರುವ ರಾಜ್ಯಸಭಾ ಸದಸ್ಯ ವಿ.ವಿಜಯೇಂದ್ರ ಪ್ರಸಾದ್ ಮಾತನಾಡಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಅಂತಾ ಕನ್ನಡ ಕಂಠೀರವ ಡಾ.ರಾಜ್‌ಕುಮಾರ್ ಹೇಳಿದ್ದಾರೆ ನಿಜ. ಆದರೆ ಅಂತಹ ಅದೃಷ್ಟನನಗಿಲ್ಲ. ನನ್ನ ಮದುವೆ ಇಲ್ಲಿಯೇ ಆಗಿದೆ. ನನ್ನ ಮಗ ರಾಜಮೌಳಿ (ಬಾಹುಬಲಿ ನಿರ್ದೇಶಕ), ಮಗಳು ಇಲ್ಲಿಯೇ ಹುಟ್ಟಿದ್ದಾರೆ. ಕನ್ನಡ ತಾಯಿಯ ದಯೆಯಿಂದ ನನ್ನ ಮಗ ವಿಶ್ವವಿಖ್ಯಾತಿ ಪಡೆದಿದ್ದಾನೆ ಎಂಬುದು ನನ್ನ ನಂಬಿಕೆ. ನಾನು ಹೇಗೆ ಈ ತಾಯಿಗೆ ಧನ್ಯವಾದ ಹೇಳಲಿ? ಮತ್ತೇನು ಬೇಕಿಲ್ಲ ನನಗೆ ಎಂದು ಕನ್ನಡದಲ್ಲೇ ಮಾತನಾಡುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.