Hijab Controversy: ಕಾಲೇಜಲ್ಲಿ ಹಿಜಾಬ್‌ ನಿಷೇಧ ಬೇಡ: ಜಮಾತೆ ಇಸ್ಲಾಮಿ

By Kannadaprabha News  |  First Published Jan 25, 2022, 7:53 AM IST

ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ (ತಲೆಗವಸು) ಧರಿಸುವ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ ನೀಡದಿರುವುದು ಆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗುತ್ತಿದೆ. 


ಬೆಂಗಳೂರು (ಜ.25):  ಉಡುಪಿಯ (Udupi) ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ (ತಲೆಗವಸು) ಧರಿಸುವ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ ನೀಡದಿರುವುದು ಆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗುತ್ತಿದೆ. ಈ ಪ್ರಕರಣದಲ್ಲಿ ರಾಜಕಾರಣ ಬೆರೆಸದೆ ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಜಮಾತೆ ಇಸ್ಲಾಮಿ ( Jamaat-i-Islami) ಹಿಂದ್‌ ಸಂಘಟನೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ.ಮಹಮ್ಮದ್‌ ಸಾದ್‌ ಬೆಳಗಾಮಿ (Dr Muhammad Saad Belgami), ಹಿಜಾಬ್‌ ಧರಿಸುವುದನ್ನು ಅಶಿಸ್ತು ಎಂದು ನೋಡದೆ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು. ಈ ಪ್ರಕರಣವನ್ನು ಮುಂದುವರೆಸಿದರೆ ಅದು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಗಬಹುದು. ಆದ್ದರಿಂದ ಶೀಘ್ರದಲ್ಲಿ ಪ್ರಕರಣವನ್ನು ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ಇತ್ಯರ್ಥಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಅವಕಾಶ ನೀಡಬೇಕು ಎಂದರು.

Latest Videos

undefined

ಹೆಣ್ಣು ಮಕ್ಕಳು ಹಿಜಾಬ್‌ ಧರಿಸಿ ಶಾಲಾ ಕಾಲೇಜುಗಳಿಗೆ ಬರುವುದು ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದು ಮುಸ್ಲಿಂ ಧರ್ಮದ ಧಾರ್ಮಿಕ ನಂಬಿಕೆಯಾಗಿದೆ. ಇದೇ ಕಾರಣ ನೀಡಿ ಹೆಣ್ಣುಮಕ್ಕಳ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡದಿರುವುದು ಅ ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಆಟವಾಡುವ ಪ್ರಕ್ರಿಯೆಯಾಗಿದೆ. ಆದ್ದರಿಂದ ತಕ್ಷಣ ಈ ವಿಚಾರವನ್ನು ಬಗೆಹರಿಸಿ ಮಕ್ಕಳು ಶಿಕ್ಷಣ ಮುಂದುವರೆಸಲು ಅವಕಾಶ ನೀಡಬೇಕು ಎಂದರು.

Hijab Controversy: ಹಿಜಾಬ್‌ ವಿವಾದ ತಡೆಗೆ ಪಿಯುಸಿಗೂ ಸಮವಸ್ತ್ರ?

ಸೂರ್ಯ ನಮಸ್ಕಾರಕ್ಕೆ ವಿನಾಯ್ತಿ ನೀಡಿ: 73ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದು ಒಂದು ಸಮುದಾಯದ ಧಾರ್ಮಿಕ ಆಚರಣೆಗಳನ್ನು ಇತರೆ ಸಮುದಾಯದವರ ಮೇಲೆ ಹೇರಿದಂತಾಗಲಿದೆ. ಆದ್ದರಿಂದ ಮುಸ್ಲಿಂ ಸಮುದಾಯದ ಮಕ್ಕಳಿಗೆ ಸೂರ್ಯ ನಮಸ್ಕಾರ ಮಾಡುವುದರಿಂದ ವಿನಾಯ್ತಿ ನೀಡಬೇಕು ಎಂದು ಅವರು ಅಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್‌ ಕಾರ್ಯದರ್ಶಿ ಮೌಲಾನಾ ವಹೀದುದ್ದೀನ್‌ ಖಾನ್‌ ಮತ್ತಿತರರಿದ್ದರು.

ಇಸ್ಲಾಂ ಮಾತ್ರವಲ್ಲದೆ, ಕ್ರಿಶ್ಚಿಯನ್‌, ಸಿಖ್‌ ಸೇರಿದಂತೆ ಇತರೆ ಧರ್ಮಗಳ ಹೆಣ್ಣು ಮಕ್ಕಳು ತಲೆಗವಸು ಹಾಕಿಕೊಳ್ಳುವುದು ಸಾಮಾನ್ಯ. ಮಹಿಳೆಯರ ಪ್ರಗತಿಗೆ ಹಿಜಾಬ್‌ ಎಂದಿಗೂ ಅಡ್ಡಿಯಾಗಿಲ್ಲ. ಅಲ್ಲದೆ, 2016ರಲ್ಲಿ ಈ ಸಂಬಂಧ ಆದೇಶ ಹೊರಡಿಸಿರುವ ಕೇರಳ ಹೈಕೋರ್ಟ್‌, ಇದೊಂದು ಧಾರ್ಮಿಕ ಹಕ್ಕು ಎಂದು ತಿಳಿಸಿದೆ. ಆದ್ದರಿಂದ ಪ್ರಕರಣವನ್ನು ಮುಂದುವರೆಸಬಾರದು ಎಂದರು.

ಇದು ಸೂರ್ಯನಿಗೆ ಸಲ್ಲಿಸುವ ಸಾಷ್ಟಾಂಗ ನಮಸ್ಕಾರ ಮತ್ತು ಸ್ತೋತ್ರಗಳ ಪಠಣವಾಗಿದೆ. ಆದರೆ, ಇಸ್ಲಾಂ ಧರ್ಮದಲ್ಲಿ ಇಂತಹ ಸೃಷ್ಟಿಆರಾಧನೆ ನಿಷಿದ್ಧ. ಅಲ್ಲಾಹುನಿಗೆ ಮಾತ್ರ ಶಿರಬಾಗಿ ಆರಾಧನೆ ಸಲ್ಲಿಸಲು ಅವಕಾಶವಿದೆ. ಇದೇ ಕಾರಣದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ನಮಾಜ್‌ ಮಾಡುವುದನ್ನು ನಿಷೇಧಿಸಲಾಗಿದೆ. ಸೂರ್ಯ ನಮಸ್ಕಾರದಲ್ಲಿ ಭಾಗಿಯಾದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳ ಧಾರ್ಮಿಕ ಹಕ್ಕು ಉಲ್ಲಂಘನೆಯಾಗಲಿದೆ.

ವಿವಿ ವಿದ್ಯಾರ್ಥಿಗಳಿಗೆ ನೆರವಾಗುವ ‘ಇ-ಸಹಮತಿ’ ಆರಂಭ: ಸಚಿವ ಅಶ್ವತ್ಥ ನಾರಾಯಣ

ಪಿಯು ಮಂಡಳಿಗೆ ಕಾಲೇಜಿನ ಪತ್ರ: ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ‘ಹಿಜಾಬ್‌’ ಧರಿಸಿ ಬರುವ ಕುರಿತು ಉಂಟಾಗಿರುವ ವಿವಾದ ಮೂರು ವಾರ ಕಳೆದರೂ ತಣ್ಣಗಾಗಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿ ನಡುವೆ ಹಟ-ಬಿಕ್ಕಟ್ಟು ಸೃಷ್ಟಿಸಿದೆ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ನಮ್ಮ ಹಕ್ಕು, ಹಿಜಾಬ್‌ ಧರಿಸಿ ತರಗತಿಗೆ ಬರಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಿ ಪಾಠ ಕೇಳುವ ನಿಯಮ ನಮ್ಮಲ್ಲಿಲ್ಲ ಎಂದು ಕಾಲೇಜು ಹೇಳಿದೆ. ಇದರಿಂದ ಬಿಕ್ಕಟ್ಟು ಮುಂದುವರೆದಿದೆ.ಈ ಮಧ್ಯೆ, ಇಲಾಖೆ ಮೂಲಗಳ ಪ್ರಕಾರ ಕಾಲೇಜಿನ ಪ್ರಾಂಶುಪಾಲರು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ವಿಚಾರದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಅಂತಿಮವಾಗಿ ಬೋರ್ಡ್‌ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಲೇಜು ಕಾಯುತ್ತಿದೆ.

click me!