ACBಯನ್ನು ಲೋಕಾಯುಕ್ತದ ಅಧೀನಕ್ಕೆ ತನ್ನಿ: ನ್ಯಾ.ಪಿ.ವಿಶ್ವನಾಥ್‌ ಶೆಟ್ಟಿ

By Kannadaprabha NewsFirst Published Jan 25, 2022, 6:35 AM IST
Highlights

ಅಧಿಕಾರ ಕುಂಠಿತಗೊಳಿಸಿರುವ ಲೋಕಾಯುಕ್ತ ಸಂಸ್ಥೆಗೆ ಈ ಹಿಂದೆ ಇದ್ದ ಅಧಿಕಾರ ನೀಡಿ, ಭ್ರಷ್ಟಾರಚಾರ ನಿಗ್ರಹ ದಳವನ್ನು (ಎಸಿಬಿ) ಸಂಸ್ಥೆಯ ಅಧೀನಕ್ಕೆ ತರಬೇಕು ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಬೆಂಗಳೂರು (ಜ.25): ಅಧಿಕಾರ ಕುಂಠಿತಗೊಳಿಸಿರುವ ಲೋಕಾಯುಕ್ತ (Lokayukta) ಸಂಸ್ಥೆಗೆ ಈ ಹಿಂದೆ ಇದ್ದ ಅಧಿಕಾರ ನೀಡಿ, ಭ್ರಷ್ಟಾರಚಾರ ನಿಗ್ರಹ ದಳವನ್ನು (ಎಸಿಬಿ) ಸಂಸ್ಥೆಯ ಅಧೀನಕ್ಕೆ ತರಬೇಕು ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್‌ ಶೆಟ್ಟಿ (P.Vishwanath Shetty) ಆಗ್ರಹಿಸಿದ್ದಾರೆ. ಇದೇ ತಿಂಗಳು 28ರಂದು ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಸೋಮವಾರ ಲೋಕಾಯುಕ್ತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಎಸಿಬಿಯನ್ನು ಲೋಕಾಯುಕ್ತ ಸಂಸ್ಥೆಯ ಅಧೀನ ತರಬೇಕು. ಎಸಿಬಿ ರಚನೆಯಿಂದ ಲೋಕಾಯುಕ್ತದ ಅಧಿಕಾರ ಕುಂಠಿತವಾಗಿದೆ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವುದರಿಂದ ಎಸಿಬಿ (ACB) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಸಂಸ್ಥೆಯ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನೂ 10 ಪ್ರಕರಣಕ್ಕೆ ಅನುಮತಿ ಬೇಕು: ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರವು 10 ಅಕ್ರಮ ಆಸ್ತಿ ಪ್ರಕರಣದಲ್ಲಿ ಇನ್ನೂ ಅನುಮತಿ ನೀಡಿಲ್ಲ. ಎಸಿಬಿ ರಚನೆಯಾಗುವ ಮೊದಲು ಲೋಕಾಯುಕ್ತ ಸಂಸ್ಥೆಯ ಪೊಲೀಸ್‌ ವಿಭಾಗವು ಕಾರ್ಯಾಚರಣೆ ನಡೆಸಿದ ದಾಳಿ ಪ್ರಕರಣಗಳಾಗಿವೆ. 25 ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಿಚಾರಣೆಗೆ ಅನುಮತಿ ನೀಡಲು ಸಕ್ಷಮ ಪ್ರಾಧಿಕಾರ ನಿರಾಕರಿಸಿದೆ. 

ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ

ಪಟ್ಟಣ ಪಂಚಾಯತ್‌, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆ ಸದಸ್ಯರ, ಅಧ್ಯಕ್ಷರ, ಉಪಾಧ್ಯಕ್ಷರ ವಿರುದ್ಧ ದುರ್ನಡತೆಗಳ ಆರೋಪಗಳು ಕೇಳಿ ಬಂದಾಗ ಅವರನ್ನು ಆಯಾ ಸ್ಥಾನದಿಂದ ಮತ್ತು ಮುಂದಿನ ಆರು ವರ್ಷಗಳ ಅವಧಿಗೆ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಸಂಬಂಧ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಲೋಕಾಯುಕ್ತ ಹುದ್ದೆಗೆ ಬರುವ ವೇಳೆ ಸಮಾಜ ಸೇವೆಯ ಅವಕಾಶ ಎಂದು ಭಾವಿಸಿ ಬಂದಿದ್ದೆ. ಬರುವಾಗ ಹುದ್ದೆಯ ಸೂಕ್ಷ್ಮತೆ ತಿಳಿದಿರಲಿಲ್ಲ. ಆದರೆ, ನನ್ನ ಮೇಲೆ ನಡೆದ ಹಲ್ಲೆಯ ಘಟನೆಯಿಂದ ಹುದ್ದೆಯ ಸೂಕ್ಷ್ಮತೆ ತಿಳಿಯಿತು ಎಂದು ಇದೇ ವೇಳೆ ಹೇಳಿದರು.

20,199 ದೂರುಗಳ ವಿಲೇವಾರಿ: ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಈವರೆಗೆ 20,549 ದಾಖಲಾದ ದೂರುಗಳ ಪೈಕಿ, 20,199 ದೂರುಗಳ ವಿಲೇವಾರಿ ಮಾಡಲಾಗಿದೆ. 2,677 ಇಲಾಖೆ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. 13 ಸಾವಿರ ಇತರೆ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ತಪ್ಪಿತಸ್ಥ ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿ ವಿರುದ್ಧ 587 ವರದಿಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

Threat Call: ಬಿಜೆಪಿ ಶಾಸಕ ಬೋಪಯ್ಯಗೆ 1 ಕೋಟಿಗೆ ಬೇಡಿಕೆ ಇಟ್ಟಿದ್ದವನ ಬಂಧನ

ಈ ಹಿಂದೆ ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಇದ್ದು, ಲೋಕಾಯುಕ್ತ ಪೊಲೀಸ್‌ ವಿಭಾಗವು ಕಾರ್ಯನಿರ್ವಹಿಸುತ್ತಿತ್ತು. ಅದನ್ನು ಬದಲಿಸಿ ಎಸಿಬಿ ರಚನೆ ಮಾಡಿ ಅದಕ್ಕೆ ಅಧಿಕಾರ ನೀಡಲಾಗಿದೆ. ಲೋಕಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ ವೇಳೆ ಈ ಸಂಬಂಧ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು. ಹಲವು ಕಾರಣಗಳಿಂದಾಗಿ ರಿಟ್‌ ಅರ್ಜಿ ತೀರ್ಮಾನವಾಗಿಲ್ಲ. ಈ ಬಗ್ಗೆ ಯಾವುದೇ ನಿರ್ಣಯವಾಗದಿರುವುದು ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!