ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ 30.86 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ 20,810 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದ್ದು, ಇದುವರೆಗೂ ಶೇ.68.18ರಷ್ಟು ಗುರಿ ಸಾಧಿಸಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಇನ್ನಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರು (ಜ.25): ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ 30.86 ಲಕ್ಷ ರೈತರಿಗೆ (Farmers) ಸಹಕಾರ ಸಂಘಗಳ ಮೂಲಕ 20,810 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದ್ದು, ಇದುವರೆಗೂ ಶೇ.68.18ರಷ್ಟು ಗುರಿ ಸಾಧಿಸಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಇನ್ನಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ತಿಳಿಸಿದ್ದಾರೆ.
ಸೋಮವಾರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ ಒಟ್ಟು 19.58 ಲಕ್ಷ ರೈತರಿಗೆ 14,188 ಕೋಟಿ ಸಾಲ ವಿತರಿಸಲಾಗಿದೆ. ಈ ಪೈಕಿ 19.27 ಲಕ್ಷ ರೈತರಿಗೆ 13,295 ಕೋಟಿ ರು. ಅಲ್ಪಾವಧಿ ಕೃಷಿ ಸಾಲ ನೀಡಿದ್ದರೆ, 31,000 ರೈತರಿಗೆ 893 ಕೋಟಿ ರು. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನ ಗುರಿಯನ್ನು ಸಂಪೂರ್ಣ ಮುಟ್ಟಲು ಇನ್ನೂ ಶೇ.31.82ರಷ್ಟುಪ್ರಗತಿ ಸಾಧಿಸಬೇಕಿದೆ. ಬರುವ ಮಾರ್ಚ್ 25ರೊಳಗೆ ಸಾಲ ವಿತರಣೆಯಲ್ಲಿ ಸಂಪೂರ್ಣ ಗುರಿ ಸಾಧಿಸುವಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, 19,196 ಸ್ವಸಹಾಯ ಗುಂಪುಗಳಿಗೆ 689 ಕೋಟಿ ರು. ಸಾಲ ನೀಡಲಾಗಿದೆ. ಆತ್ಮನಿರ್ಭರ ಯೋಜನೆಯಡಿ 873 ಸಹಕಾರ ಸಂಘಗಳಿಗೆ 302 ಕೋಟಿ ರು. ಸಾಲ ಮಂಜೂರು ಮಾಡಿದ್ದೇವೆ. ಅದರಲ್ಲಿ 581 ಸಂಘಗಳಿಗೆ 72.73 ಕೋಟಿ ರು. ಸಾಲ ವಿತರಿಸಲಾಗಿದೆ ಎಂದರು.
ಎಸ್ ಟಿ ಸೋಮಶೇಖರ್ ಬಾವುಟ ಹಾರಿಸುವ ಮಂತ್ರಿ: ಶಾಸಕ ಎಚ್ ಪಿ ಮಂಜುನಾಥ್!
ಒಂದೇ ತಂತ್ರಾಂಶಕ್ಕೆ ಯೋಜನೆ: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಎಲ್ಲ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘಗಳಿಗೆ ಮುಂದಿನ ಮೂರು ವರ್ಷದಲ್ಲಿ ಒಂದೇ ತಂತ್ರಾಂಶ ಅಳವಡಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇದನ್ನು ಸ್ವಾಗತಿಸುತ್ತೇನೆ. ಇದಕ್ಕೆ ಕೇಂದ್ರದಿಂದ ಶೇ.60ರಷ್ಟುಅನುದಾನ ಬರಲಿದೆ. ಉಳಿದ ಶೇ.40ರಷ್ಟನ್ನು ರಾಜ್ಯ ಸರ್ಕಾರ, ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‌ಗಳು ಭರಿಸಬೇಕು. ಈ ಕುರಿತು ಚರ್ಚಿಸಲು ಇದೇ 27ರಂದು ಎಲ್ಲಾ ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪ ನಿರ್ದೇಶಕರ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಸಹಕಾರ ಸಂಘಗಳ ಹಲವು ನಿಬಂಧಕರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಲ ಮನ್ನಾ ಪ್ರಸ್ತಾಪ ಇಲ್ಲ: ರೈತರ ಸಾಲಮನ್ನಾ ಮಾಡುವ ಯಾವುದೇ ಚಿಂತನೆ, ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಇದೇ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ಕೋವಿಡ್, ಕಾಲ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ರೈತರಿಂದ ಸಾಲ ಮನ್ನಾ ಮಾಡಬೇಕೆಂಬ ಕೂಗು ಎದ್ದಿದೆಯಲ್ಲಾ ಎಂಬ ಪ್ರಶ್ನೆಗೆ, ಸಂಕಷ್ಟದಲ್ಲಿರುವ ರೈತರಿಗೆ ಬೇರೆ ಸ್ವರೂಪದಲ್ಲಿ ಅನುಕೂಲ ಮಾಡಲು ಕ್ರಮ ವಹಿಸಲಾಗುವುದು. ಆದರೆ, ಅವರ ಸಾಲ ಮನ್ನಾದ ಯಾವುದೇ ಪ್ರಸ್ತಾಪ ಇಲ್ಲ ಎಂದರು. ರೈತರಿಂದ ಹಳೆ ಸಾಲ ವಸೂಲಿ ಮಾಡಿ ಹೊಸ ಸಾಲ ನೀಡುವ ಕಾರ್ಯ ನಿರಂತರವಾಗಿ ನಡೆದಿದೆ. ಯಾರಿಂದಲೂ ಬಲವಂತವಾಗಿ ಸಾಲ ವಸೂಲಾತಿ ಮಾಡಿಲ್ಲ. ಸಾಲ ವಸೂಲಾತಿಯಲ್ಲೂ ಉತ್ತಮ ಪ್ರಗತಿ ಸಾಧಿಸಿದ್ದೇವೆ ಎಂದರು.
Covid-19 Crisis: ವೀಕೆಂಡ್ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ಸಚಿವ ಸೋಮಶೇಖರ್
ಪಕ್ಷಕ್ಕೆ ಮೋಸ ಮಾಡುವುದಿಲ್ಲ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕಾರ ಸಚಿವನಾಗಿ ಕೆಲಸ ಮಾಡುವಾಗ ಬಿಜೆಪಿ ಮತ್ತು ಸರ್ಕಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಪಕ್ಷಕ್ಕೆ ನಾನು ಮೋಸ ಮಾಡುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ಹಲವರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಮತ್ತು ಸರ್ಕಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಪಕ್ಷ ಮತ್ತು ಸರ್ಕಾರಕ್ಕೆ ಯಾವತ್ತೂ ಮುಜುಗರ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಇಲ್ಲಿ ತೃಪ್ತಿಯಾಗಿದ್ದೇನೆ. ಇಲ್ಲಿಯೇ ಮುಂದುವರೆಯುತ್ತೇನೆ ಎಂದರು.