ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಎಂ.ಎಸ್ ಧೋನಿಯನ್ನು ಬಿಸಿಸಿಐ ಆಯ್ಕೆ ಸಮಿತಿ ನಿರ್ಲಕ್ಷಿಸುತ್ತಿದೆಯಾ..? ಧೋನಿ ಮುಂದಿನ ಭವಿಷ್ಯ ಏನು..? ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಆ.29): ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ನಿರ್ಧಾರವನ್ನು ಎಂ.ಎಸ್.ಧೋನಿ ಸದ್ಯಕ್ಕೆ ಕೈಬಿಟ್ಟಿದ್ದರೂ, ಅವರಿಗೆ ಭಾರತ ತಂಡದಲ್ಲಿ ಮತ್ತೆ ಸ್ಥಾನ ಸಿಗುವುದು ಸುಲಭವಿಲ್ಲ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಧೋನಿ ಆಯ್ಕೆ ಅನುಮಾನವೆನಿಸಿದೆ. ಸೆ.15ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಸೆ.4ರಂದು ಸರಣಿಗೆ ಬಿಸಿಸಿಐ ತಂಡ ಆಯ್ಕೆ ಮಾಡುವ ನಿರೀಕ್ಷೆ ಇದೆ.
ಸೇನಾ ಸೇವೆ ಬಳಿಕ ಹೊಸ ಅವತಾರದಲ್ಲಿ ಧೋನಿ!
undefined
ವೆಸ್ಟ್‌ಇಂಡೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಗೆದ್ದ ತಂಡದಲ್ಲಿದ್ದ ಆಟಗಾರರನ್ನೇ ದ.ಆಫ್ರಿಕಾ ವಿರುದ್ಧದ ಸರಣಿಗೂ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾರಾದರೂ ಗಾಯಗೊಂಡರಷ್ಟೇ ತಂಡದಲ್ಲಿ ಬದಲಾವಣೆ ಮಾಡಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮಿಸ್ಬಾ ಉಲ್ ಹಕ್ ಕೋಚ್?
2020ರ ಅಕ್ಟೋಬರ್ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡ ಸಿದ್ಧಪಡಿಸುವ ಹೊಣೆ ಆಯ್ಕೆ ಸಮಿತಿ ಮೇಲಿದೆ. ‘ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಕೇವಲ 22 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಮಾತ್ರ ಸಿಗಲಿವೆ. ಹೀಗಾಗಿ ಸಿದ್ಧತೆ ಆರಂಭಿಸಲು ಇದು ಸೂಕ್ತ ಸಮಯ ಎಂದು ಆಯ್ಕೆಗಾರರು ನಿರ್ಧರಿಸಿದ್ದಾರೆಂದು’ ಬಿಸಿಸಿಐ ಅಧಿಕಾರಿಯೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ.
ಬಿಸಿಸಿಐ ಹಿರಿಯ ಅಧಿಕಾರಿಗಳು ಇಲ್ಲವೇ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್, ಧೋನಿಯನ್ನು ತಮ್ಮ ಮುಂದಿನ ಯೋಜನೆ ಬಗ್ಗೆ ವಿಚಾರಿಸುತ್ತಾರೆಯೇ ಇಲ್ಲವೇ ಎನ್ನುವ ಬಗ್ಗೆ ಇನ್ನೂ ಮಾಹಿತಿ ಇಲ್ಲ. ವಿಂಡೀಸ್ ಪ್ರವಾಸಕ್ಕೆ ತಂಡ ಆಯ್ಕೆ ಮಾಡುವ ಮೊದಲು ಆಯ್ಕೆಗಾರರು ಧೋನಿಯಿಂದ ಮಾಹಿತಿ ಪಡೆದುಕೊಂಡಿದ್ದರು. ‘ನಿವೃತ್ತಿ ಪ್ರತಿಯೊಬ್ಬ ಆಟಗಾರನ ವೈಯಕ್ತಿಕ ವಿಚಾರ. ಆದರೆ 2020ರ ವಿಶ್ವಕಪ್ಗೆ ಮಾರ್ಗಸೂಚಿ ರಚಿಸುವ ಹಕ್ಕು ಆಯ್ಕೆಗಾರರಿಗಿದೆ. ಈ ನಿಟ್ಟಿನಲ್ಲಿ ರಿಷಭ್ ಪಂತ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಆಯ್ಕೆ ಸಮಿತಿ ನಿರ್ಧರಿಸಬಹುದು’ ಎಂದು ಅಧಿಕಾರಿ ಹೇಳಿದ್ದಾರೆ.
ಸೇನಾ ಡ್ಯೂಟಿ ಮುಗಿಸಿ ಧೋನಿ ತವರಿನತ್ತ; ಎಲ್ಲರ ಚಿತ್ತ ಮಾಜಿ ನಾಯಕನತ್ತ!
ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಧೋನಿ ನಿವೃತ್ತಿ ವಿಚಾರಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೆಲವರ ಪ್ರಕಾರ 2020ರ ಟಿ20 ವಿಶ್ವಕಪ್ ವರೆಗೂ ಅವರು ತಂಡದಲ್ಲಿ ಮುಂದುವರಿಯಲು ಇಚ್ಛಿಸಿದ್ದಾರೆ ಎನ್ನಲಾಗಿದೆ.
ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!
ಪಂತ್ ಜತೆ ಮತ್ತಿಬ್ಬರು: ಇದೇ ವೇಳೆ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್‌ರನ್ನು ಆಯ್ಕೆಗಾರರು 2ನೇ ಹಾಗೂ 3ನೇ ಆಯ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾಗಿ ಗುರುತಿಸಿದ್ದಾರೆ ಎನ್ನಲಾಗಿದೆ. ಸಂಜು, ಪಂತ್‌ರಷ್ಟೇ ಪರಿಣಾಮಕಾರಿಯಾಗಿ ಬ್ಯಾಟ್ ಮಾಡಬಲ್ಲರು. ಆದರೆ ಅವರ ವಿಕೆಟ್ ಕೀಪಿಂಗ್ ಕಲೆ ಮತ್ತಷ್ಟು ಸುಧಾರಿಸಬೇಕಿದೆ. ಕಿಶನ್, ಈಗಾಗಲೇ ಭಾರತ ‘ಎ’ ತಂಡದಲ್ಲಿ ಸತತವಾಗಿ ಅವಕಾಶ ಪಡೆಯುತ್ತಿದ್ದು, ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಂತ್ ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಸಂಜು ಇಲ್ಲವೇ ಕಿಶನ್‌ಗೂ ಹೆಚ್ಚಿನ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರವಿದೆ.
ತಿರುವನಂತರಪುರಂನಲ್ಲಿ ಗುರುವಾರದಿಂದ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಸೀಮಿತ ಓವರ್ ಸರಣಿ ನಡೆಯಲಿದ್ದು, ಸಂಜು ಕೊನೆ 2 ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆ ಸಮಿತಿಯ ಕೆಲ ಸದಸ್ಯರು ಸಂಜು ಆಟ ವೀಕ್ಷಿಸಲು ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.