ದೊಡ್‌ದೊಡ್‌ ಸಿನಿಮಾಗಳ ಕತೆ ಎಲ್ಲಿಗೆ ಬಂತು ?

Kannadaprabha News   | Asianet News
Published : May 22, 2020, 08:50 AM ISTUpdated : May 22, 2020, 10:09 AM IST
ದೊಡ್‌ದೊಡ್‌ ಸಿನಿಮಾಗಳ ಕತೆ ಎಲ್ಲಿಗೆ ಬಂತು ?

ಸಾರಾಂಶ

ಕನ್ನಡದ ಬಹುನಿರೀಕ್ಷೆ ಮೂಡಿಸಿರುವ ಸಿನಿಮಾ ಈಗ ಯಾವ ಹಂತದಲ್ಲಿವೆ? ಇಡೀ ಚಿತ್ರರಂಗವೇ ಈ ದೊಡ್ಡ ಸಿನಿಮಾಗಳ ಗೆಲುವನ್ನು ಎದುರು ನೋಡುತ್ತಿದೆ. ಇಂಥಾ ಸಂದರ್ಭದಲ್ಲಿ ಈ ಚಿತ್ರಗಳ ಕೆಲಸಗಳು ಎಷ್ಟುಬಾಕಿ ಇವೆ, ಯಾವಾಗ ಬಿಡುಗಡೆ ಆಗುತ್ತದೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಆರ್‌ ಕೇಶವಮೂರ್ತಿ 

ರಾಬರ್ಟ್‌ ಚಿತ್ರವನ್ನು ಸೆಲೆಬ್ರೇಟ್‌ ಮಾಡಲು ಕಾಯುತ್ತಿದ್ದೇವೆ

ತರುಣ್‌ ಸುಧೀರ್‌, ನಿರ್ದೇಶಕ

ನಮ್ಮ ಚಿತ್ರದ ಎಲ್ಲಾ ರೀತಿಯ ಕೆಲಸಗಳು ಮುಗಿದಿವೆ. ಶೂಟಿಂಗ್‌ ಕೂಡ ಬಾಕಿ ಇಲ್ಲ. ಮುಖ್ಯವಾಗಿ ರೀ-ರೆಕಾರ್ಡಿಂಗ್‌, ಡಬ್ಬಿಂಗ್‌, ಸೌಂಡ್‌ ಮಿಕ್ಸಿಂಗ್‌ ಸೇರಿದಂತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿದ್ದೇವೆ. ಸದ್ಯಕ್ಕೆ ಮೊದಲ ಪ್ರತಿ ತೆಗೆಯುವ ಹಂತಕ್ಕೆ ಸಿನಿಮಾ ಬಂದಿದ್ದು, ಸೆನ್ಸಾರ್‌ಗೆ ಕೂಡ ಈಗಾಗಲೇ ಕಳುಹಿಸಿ ಕೊಡಲಾಗಿದೆ.

ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸುವ ಕಾತುರದಲ್ಲಿದ್ದೇವೆ. ಶೇ.99 ಭಾಗ ಕೆಲಸಗಳು ಮುಗಿದಿದ್ದು, ಬಿಡುಗಡೆಯ ಹೊತ್ತಿಗೆ ಸಣ್ಣಪುಟ್ಟಕೆಲಸಗಳು ಇರುತ್ತವೆ. ಒಟ್ಟು 108 ದಿನ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್‌, ಪಾಂಡಿಚೇರಿ, ವಾರಾಣಸಿ, ಲಕ್ನೋ ಹೀಗೆ ಹಲವು ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡದ ಮಟ್ಟಿಗೆ ಅದ್ದೂರಿ ಮೇಕಿಂಗ್‌, 200ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡ ದೊಡ್ಡ ತಾರಾಗಣವನ್ನು ನಮ್ಮ ಸಿನಿಮಾ ಒಳಗೊಂಡಿದೆ.

ರಾಬರ್ಟ್‌ ಡಿಜಿಟಲ್‌ ರೈಟ್ಸ್‌ಗೆ ಫುಲ್‌ ಡಿಮ್ಯಾಂಡ್‌: ಇದು 70 ಕೋಟಿ ಮ್ಯಾಟರ್‌!

ಒಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳಿಗೆ ಬೇಕಾದ ಮಾಸ್‌ ಅಂಶಗಳ ಜತೆಗೆ ಒಂದು ಫ್ಯಾಮಿಲಿ ಕತೆ ಕೂಡ ಇದೆ. ದರ್ಶನ್‌ ಅವರು ಎರಡು ಗೆಟಪ್‌ಗಳಲ್ಲಿ ಯಾಕೆ ಕಾಣಿಸಿಕೊಂಡಿದ್ದಾರೆ, ಇಲ್ಲಿ ದ್ವಿಪಾತ್ರ ಮಾಡಿದ್ದಾರೆಯೇ ಎಂಬುದನ್ನು ತೆರೆ ಮೇಲೆ ನೋಡಿ ಹೇಳಬೇಕು. ಯಾಕೆಂದರೆ ಇಡೀ ಕತೆ ಸಣ್ಣ ಸಣ್ಣ ತಿರುವುಗಳ ಮೇಲೆ ನಿಂತಿದ್ದು, ಅದು ತೆರೆ ಮೇಲೆ ದೊಡ್ಡದಾಗಿ ಕಾಣಿಸುತ್ತದೆ. ಇದು ಚಿತ್ರದ ಶಕ್ತಿ. ಕನ್ನಡದಲ್ಲಿ ಈ ರೀತಿ ಕೂಡ ಮೇಕಿಂಗ್‌ ಮಾಡಬಹುದು ಎಂಬುದಕ್ಕೆ ನಮ್ಮ ಚಿತ್ರ ಸಾಕ್ಷಿ ಆಗಲಿದೆ ಎನ್ನುವ ನಂಬಿಕೆ ಇದೆ. ಮೊದಲ ಪ್ರತಿ ತೆಗೆಯುವ ಹಂತಕ್ಕೆ ಬಂದಿರುವ ಚಿತ್ರವನ್ನು ಒಬ್ಬ ನಿರ್ದೇಶಕನಾಗಿ ನನಗೂ ಖುಷಿ ಕೊಟ್ಟಿದೆ.

ನಿರ್ಮಾಪಕ ಉಮಾಪತಿ ಅವರು ಯಾವುದಕ್ಕೂ ಕೊರತೆ ಮಾಡಿಲ್ಲ. ದರ್ಶನ್‌ ಹೇಳಿದ್ದಂತೆ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಸೆಲೆಬ್ರೇಟ್‌ ಮಾಡಲು ಕಾಯುತ್ತಿದ್ದೇವೆ. ಹೀಗಾಗಿ ಓಟಿಟಿಗೆ ಸಿನಿಮಾ ಕೇಳಿದರೂ ಕೊಟ್ಟಿಲ್ಲ ನಮ್ಮ ನಿರ್ಮಾಪಕರು. ಯಾಕೆಂದರೆ ಈ ವರ್ಷದಲ್ಲಿ ದರ್ಶನ್‌ ಅವರದ್ದು ಇದೊಂದೇ ಸಿನಿಮಾ ಬರುವುದು. ರಾಜಾವೀರ ಮದಕರಿ ನಾಯಕ ಚಿತ್ರಕ್ಕೆ ಕಾಯಬೇಕು. ಈ ಕಾರಣಕ್ಕೆ ರಾಬರ್ಟ್‌ ಚಿತ್ರ ಥಿಯೇಟರ್‌ಗೇ ಬರುತ್ತದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ

ಕೋಟಿಗೊಬ್ಬ 3 ರೆಡಿ

ಶಿವಕಾರ್ತಿಕ್‌, ನಿರ್ದೇಶಕ

ಲಾಕ್‌ಡೌನ್‌ ಮುಗಿದು ಚಿತ್ರಮಂದಿರಗಳು ಬಾಗಿಲು ತೆರೆದರೆ ನಾವು ಸಿನಿಮಾ ಬಿಡುಗಡೆ ಮಾಡುವುದಕ್ಕೆ ರೆಡಿ ಇದ್ದೇವೆ. ಈ ಬಿಡುಗಡೆ ತಯಾರಿ, ಸೆನ್ಸಾರ್‌ ಮಾಡಿಸಿಕೊಂಡು ಅಂತಿಮ ಕೆಲಸಗಳನ್ನು ಮಾಡಿಕೊಳ್ಳಲು 20 ದಿನ ಬೇಕಾಗುತ್ತದೆ ಅಷ್ಟೆ. ಉಳಿದಂತೆ ರೆಡಿ ಟು ರಿಲೀಸ್‌ ಹಂತದಲ್ಲಿ ನಮ್ಮ ಕೋಟಿಗೊಬ್ಬ 3 ಸಿನಿಮಾ ಸಜ್ಜಾಗಿದೆ. ಡಬ್ಬಿಂಗ್‌, ರೀರೆಕಾರ್ಡಿಂಗ್‌ ಸೇರಿದಂತೆ ಎಲ್ಲ ರೀತಿಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನೂ ಮುಕ್ತಾಯ ಮಾಡಿಕೊಂಡಿದ್ದೇವೆ. ಕೇವಲ ಸೆನ್ಸಾರ್‌ ಮಾಡಿಸುವುದು ಒಂದೇ ಬಾಕಿ.

5.5 ಮಿಲಿಯನ್ ಹಿಟ್ಸ್ ದಾಟಿದ ಕೋಟಿಗೊಬ್ಬ-3 ಸಿನಿಮಾದ ಟೈಟಲ್ ಸಾಂಗ್

ಚಿತ್ರದಲ್ಲಿ 5 ಹಾಡುಗಳಿವೆ. 6 ಫೈಟ್‌ಗಳಿವೆ. ಜತೆಗೆ 3 ಚೇಸಿಂಗ್‌ ಸಾಹಸಗಳಿವೆ. ಶೇ.60 ಭಾಗ ವಿದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 50 ರಿಂದ 55 ಕೋಟಿ ವೆಚ್ಚದ ಸಿನಿಮಾ ಇದು. ಈಗಾಗಲೇ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಹಕ್ಕುಗಳು ನಿರೀಕ್ಷೆಗೂ ಮೀರಿ ಮಾರಾಟಗೊಂಡಿದೆ. ಚಿತ್ರದ ನಾಯಕ ಸುದೀಪ್‌ ಅವರದ್ದು ಯಾವ ರೀತಿ ಪಾತ್ರ ಎಂಬುದು ಎಲ್ಲರಿಗೂ ಕುತೂಹಲ ಇದೆ. ಅಂತಾರಾಷ್ಟ್ರೀಯ ಕಳ್ಳನಾ, ಡಾನ್‌, ಒಳ್ಳೆಯ ವ್ಯಕ್ತಿಯಾ, ಕೋಟಿಗೊಬ್ಬ 2 ಚಿತ್ರದ ಕತೆಯ ಮುಂದುವರಿದ ಭಾಗವೇ ಇದು ಎಂಬಿತ್ಯಾದಿ ಕುತೂಹಲಗಳಿಗೆ ನೀವು ಸಿನಿಮಾ ನೋಡಬೇಕು. ಪಕ್ಕಾ ಒಂದು ಮಾಸ್‌ ಎಂಟರ್‌ಟೇನ್‌ಮೆಂಟ್‌ ಸಿನಿಮಾ ಇದು.

ನಿರ್ಮಾಪಕ ಸೂರಪ್ಪ ಬಾಬು ಮೇಕಿಂಗ್‌ಗೆ ಕಡಿಮೆ ಮಾಡಿಲ್ಲ. ಹೀಗಾಗಿ ಕನ್ನಡದ ಮಟ್ಟಿಗೆ ಅದ್ದೂರಿ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೋಟಿಗೊಬ್ಬ 3 ಸಿನಿಮಾ ಪಾತ್ರವಾಗಲಿದೆ. ಆ ಭರವಸೆ ನಮಗೆ ಇದೆ. ನಟ ಸುದೀಪ್‌ ಅಭಿಮಾನಿಗಳಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಬಂದಿದ್ದು, ಎಲ್ಲ ವರ್ಗದವರು ನೋಡುವಂತಹ ಕತೆ ಇಲ್ಲಿದೆ. ಮೊದಲ ನಿರ್ದೇಶನದಲ್ಲೇ ಸ್ಟಾರ್‌ ನಟ, ದೊಡ್ಡ ಬಜೆಟ್‌ ಸಿನಿಮಾ ಮಾಡಿದ ಅದೃಷ್ಟನನ್ನದು.

ಚಿತ್ರರಂಗ ಸಂಭ್ರಮಿಸುವ ಸಿನಿಮಾ ಯುವರತ್ನ

ಸಂತೋಷ್‌ ಆನಂದ್‌ರಾಮ್‌, ನಿರ್ದೇಶಕ

ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣಕ್ಕೆ ಕಾಯುತ್ತಿದ್ದೇವೆ. ಒಂದು ಹಾಡು ಗೋವಾದಲ್ಲಿ ಶೂಟ್‌ ಮಾಡುವ ಪ್ಲಾನ್‌ ಇದ್ದು, ಮತ್ತೊಂದು ಹಾಡಿನ ಚಿತ್ರೀಕರಣಕ್ಕೆ ಪ್ಲಾನ್‌ ಮಾಡಿಕೊಳ್ಳಬೇಕಿದೆ. ಈಗಷ್ಟೆಚಿತ್ರದ ಮೊದಲ ಭಾಗ ಡಬ್ಬಿಂಗ್‌ ಮುಗಿಸಿದ್ದೇವೆ. ಈ ವಾರದಿಂದ ಸೆಕೆಂಡ್‌ ಹಾಫ್‌ ಚಿತ್ರಕ್ಕೆ ಡಬ್ಬಿಂಗ್‌ ಮಾಡಬೇಕಿದೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

ಒಟ್ಟಾರೆ 125 ದಿನಗಳ ಕಾಲ ಧಾರವಾಡ, ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರೀಕರಣಕ್ಕೆ ಪ್ರತಿ ದಿನ 150 ಜನ ವಿದ್ಯಾರ್ಥಿಗಳು ಬರುತ್ತಿದ್ದರು. ಇವರೆಲ್ಲರನ್ನೂ ಆಡಿಷನ್‌ ಮಾಡಿ ತೆಗೆದುಕೊಂಡಿದ್ದು. 35 ರಿಂದ 45 ಜನ ಮುಖ್ಯ ಪಾತ್ರಧಾರಿಗಳು ಇದ್ದಾರೆ. ಇವರ ಹೊರತಾಗಿ ಪೋಷಕ ಕಲಾವಿದರು. ಹೀಗೆ ಒಂದು ದೊಡ್ಡ ತಾರಾಗಣದ ಮೂಲಕ ಯುವರತ್ನ ಸಿನಿಮಾ ಬರುತ್ತಿದೆ. 5 ಫೈಟ್‌ ಹಾಗೂ 5 ಹಾಡುಗಳು ಚಿತ್ರದಲ್ಲಿವೆ.

ಆಸ್ಟ್ರಿಯಾ, ಸ್ಲೋವೆನಿಯಾ ಹೊರಟ ಪುನೀತ್‌ ರಾಜ್‌ಕುಮಾರ್‌! 

ಮೂರು ಜನರೇಷನ್‌ಗೆ ಅನ್ವಯಿಸುವ ಸಂದೇಶವನ್ನು ಹೊತ್ತಿರುವ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಪಕ್ಕಾ ಯೂತ್‌ಫುಲ್‌ ಸಿನಿಮಾ. ಓಟಿಟಿಯಲ್ಲಿ ಬಿಡುಗಡೆ ಮಾಡುವ ಯೋಚನೆ ನಮಗೆ ಇಲ್ಲ. ಯಾಕೆಂದರೆ ಚಿತ್ರಮಂದಿರದಲ್ಲೇ ನೋಡಬೇಕಿರುವ ಸಿನಿಮಾ ಇದು. ಐದು ತಿಂಗಳಾದರೂ ಸರಿ ಕಾಯುತ್ತೇವೆ. ಅಭಿಮಾನಿಗಳು, ಪ್ರೇಕ್ಷಕರು, ಚಿತ್ರರಂಗ ಸಂಭ್ರಮಿಸುವಂತಹ ಸಿನಿಮಾ ಇದಾಗಿದ್ದು, ಅದನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂಬುದು ನಮ್ಮ ಆಸೆ.

ಪೊಗರು

ನಿರ್ದೇಶಕ ನಂದ ಕಿಶೋರ್‌

ನಮ್ಮ ಚಿತ್ರಕ್ಕೆ ಎಲ್ಲ ರೀತಿಯ ಕೆಲಸಗಳು ಮುಗಿದಿವೆ. ರಿರೇಕಾರ್ಡಿಂಗ್‌, ಡಬ್ಬಿಂಗ್‌, ಡಿಐ ಕೂಡ ಮುಗಿಸಿದ್ದೇವೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದು ಲಾಕ್‌ ಡೌನ್‌ ಕಾರಣಕ್ಕೆ ಬಾಕಿ ಇದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಏಪ್ರಿಲ್‌ 27 ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನಮ್ಮ ಸಿನಿಮಾ ತೆರೆ ಮೇಲೆ ಬರಬೇಕಿತ್ತು.

ಲಾಕ್‌ ಡೌನ್‌ ಮುಗಿದ ಮೇಲೆ ಬೆಂಗಳೂರಿನಲ್ಲೇ ಹಾಡಿನ ಚಿತ್ರೀಕರಣ ಮಾಡಲಿದ್ದೇವೆ. ಈ ನಡುವೆ ನಾವು ಯೂಟ್ಯೂಬ್‌ ನಲ್ಲಿ ಬಿಡುಗಡೆ ಮಾಡಿರುವ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಬಿಡುಗಡೆ ಆದ ಒಂದೇ ತಿಂಗಳಲ್ಲಿ ಕರಾಬು ಎನ್ನುವ ಹಾಡು 24 ಸಾವಿರ ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಮೋಸ್ಟ್‌ ವಿವ್ಯೂಸ್‌ ಎನ್ನುವ ಹೆಗ್ಗಳಿಕೆ ನಮ್ಮ ಚಿತ್ರದ ಹಾಡುಗಳಿಗೆ ದಕ್ಕಿದೆ.

ಬಾಲಿವುಡ್‌ನಲ್ಲಿಯೂ 'ಖರಾಬು' ಹವಾ; ಕ್ರಿಕೆಟ್ ಪ್ಲೇಯರ್‌ಗಳಿಗೂ ಇಷ್ಟವಾಯ್ತು!

ಚಿತ್ರದ ನಿರ್ಮಾಪಕ ಗಂಗಾಧರ್‌ ಅವರು ಸಾಕಷ್ಟುಕಷ್ಟದಲ್ಲೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಬ್ಬ ನಿರ್ದೇಶಕನಾಗಿ ನಾನು ಅತ್ಯಂತ ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡಿಕೊಟ್ಟಿದ್ದೇನೆ. ಒಬ್ಬ ಫೈಟರ್‌ ಕತೆಯ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ. ಜತೆಗೆ ಪ್ರೀತಿ- ಪ್ರೇಮದ ವಿಚಾರಗಳು ಇವೆ. ಒಂದು ಹೊಸ ರೀತಿಯ ಕತೆ ನಮ್ಮ ಪೊಗರು ಸಿನಿಮಾ ಒಳಗೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?