ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ ಅಭಿಮಾನ ಮಾತ್ರ ಎಳ್ಳಷ್ಟೂ ಕಡಿಮೆ ಆಗುತ್ತಿಲ್ಲ. ಇದೀಗ ಸಾಂಸ್ಕೃತಿಕ ನಗರಿಯ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂಗೆ ಅಪ್ಪು ಪ್ರತಿಮೆ ಸೇರ್ಪಡೆಗೊಂಡಿದೆ.
ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಮೈಸೂರು (ಮಾ.24): ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್‍ಕುಮಾರ್ (Puneeth Rajkumar) ನಮ್ಮನ್ನಗಲಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ (Fans) ಅಭಿಮಾನ ಮಾತ್ರ ಎಳ್ಳಷ್ಟೂ ಕಡಿಮೆ ಆಗುತ್ತಿಲ್ಲ. ಯಾವುದೇ ಕೆಲಸ, ಜಾತ್ರೆ, ಹಬ್ಬ, ಸಮಾರಂಭಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಅವಕಾಶ ಬಳಸಿಕೊಂಡು ಅಪ್ಪುವನ್ನು ಹೊತ್ತು ಮೆರೆಸುತ್ತಿದ್ದಾರೆ ಅವರ ಅಭಿಮಾನಿಗಳು. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೊಟ್ಟಿರುವ ಜೊತೆ ಜೊತೆಗೆ ಸಾಂಸ್ಕೃತಿಕ ನಗರಿಯ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂಗೆ (Celebrity Wax Museum) ಅಪ್ಪು ಪ್ರತಿಮೆ ಸೇರ್ಪಡೆಗೊಂಡಿದೆ.
ಮೇಣದಲ್ಲಿ ಅರಳಿದ ದೊಡ್ಮನೆ ದೇವರು: ಹೌದು! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪ್ಪು ನೆನಪು ಮಾಸದೆ, ಅಚ್ಚಳಿಯದೆ ಉಳಿದಿದೆ. ಹಬ್ಬ, ಜಾತ್ರೆ ಸೇರಿ ಎಲ್ಲಾ ಬಗೆಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಭಾವಚಿತ್ರಗಳು ಮೆರೆದಾಡುತ್ತಿರುವ ಹೊತ್ತಿನಲ್ಲಿ ಸೆಲೆಬ್ರಿಟಿಗಳ ಮ್ಯೂಸಿಯಂಗೆ ಅವರ ಮೇಣದ ಪ್ರತಿಮೆ ಸೇರ್ಪಡೆಯಾಗಿದೆ. ಮೇಣದಲ್ಲಿ ಮೂಡಿದ ಪುನೀತ್ ರಾಜ್‍ಕುಮಾರ್ ಮೇಣದ ಪ್ರತಿಮೆ ಇದಾಗಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಇದಾಗಿದೆ.
James 2022: ಕರ್ನಾಟಕ ಸಂಘ ಕತಾರ್ ವತಿಯಿಂದ 'ಜೇಮ್ಸ್' ಚಿತ್ರದ ವಿಶೇಷ ಪ್ರದರ್ಶನ
ಸತತ ಮೂರು ತಿಂಗಳ ಸುದೀರ್ಘ ಅವಧಿಯಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕೋಟ್ ಧರಿಸಿ ಕುರ್ಚಿಯಲ್ಲಿ ಕುಳಿತ ಭಂಗಿಯಲ್ಲಿ ನಿರ್ಮಿಸಲಾಗಿರುವ ಪ್ರತಿಮೆಗೆ 5 ಲಕ್ಷರೂ ವೆಚ್ಚವಾಗಿದೆ. ಇಡೀ ಮ್ಯೂಸಿಯಂನ ಕೇಂದ್ರಬಿಂದು ಡಾ.ಪುನೀತ್ ರಾಜ್‌ಕುಮಾರ್ ಪ್ರತಿಮೆಯಾಗಿದ್ದು, ಮೇಣದ ಪ್ರತಿಮೆ ಜೊತೆ ಸೆಲ್ಫಿಗೆ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಇನ್ನು ಇದೇ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸೇರಿ ಪ್ರಮುಖ ರಾಜಕಾರಣಿಗಳು, ಚಿತ್ರ ನಟರು, ಸಾಧು ಸಂತರು, ಸ್ವಾತಂತ್ರ್ಯ ಯೋಧರು, ಕೀಡಾಪಟುಗಳು ಸೇರಿದಂತೆ ಹಲವು ಖ್ಯಾತನಾಮರ ಪ್ರತಿಮೆಗಳು ಸ್ಥಾನ ಪಡೆದಿವೆ.
ರಾಜ್ಯದ ಮೊದಲ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಎಂಬ ಗೌರವಕ್ಕೆ ಪಾತ್ರವಾಗಿರುವ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೇರು ನಟ ಡಾ.ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿ ಕಾಂತ್, ಅಭಿನವ ಭಾರ್ಗವ ಡಾ.ವಿಷ್ಣು ವರ್ಧನ್, ಶಂಕರ್ ನಾಗ್, ಪ್ರಭಾಸ್, ಸರ್.ಎಂ. ವಿಶ್ವೇಶ್ವರಯ್ಯ, ಯದುವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಬಾಬಾ ರಾಮ್ ದೇವ್, ಹಿಟ್ಲರ್, ಭಗತ್ ಸಿಂಗ್, ಚಾರ್ಲಿ ಚಾಪ್ಲಿನ್, ಸಾಯಿಬಾಬಾ, ಶೀ ರಾಘವೇಂದ್ರ ಸ್ವಾಮಿ, ಎಂ.ಎಸ್.ಧೋನಿ, ಗಗನ ಯಾತ್ರಿ ಕಲ್ಪನಾ ಚಾವ್ಲಾ ಸೇರಿದಂತೆ ಹಲವರ ಪ್ರತಿಮೆಗಳು ಇವೆ. ಒಟ್ಟಾರೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವಂತೆ ದೊಡ್ಮನೆ ರಾಜಕುಮಾರನನ್ನು ಅಭಿಮಾನಿಗಳು ಸದಾ ಹೊತ್ತು ಮೆರೆಸುತ್ತಿರುವುದು ಸಾಕ್ಷಿಯಾಗಿದೆ.
4 ದಿನದಲ್ಲಿ ರು.100 ಕೋಟಿ ಕ್ಲಬ್ ಸೇರಿದ ಜೇಮ್ಸ್: ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ 4 ದಿನಕ್ಕೆ ರು.100 ಕೋಟಿ ಗಳಿಕೆ ದಾಖಲಿಸಿದ ಲೆಕ್ಕಾಚಾರ ಗಾಂಧಿನಗರದಿಂದ ಬಂದಿದೆ. ಈ ಮೂಲಕ ನಾಲ್ಕು ದಿನದಲ್ಲಿ ರು.100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಯನ್ನು ಜೇಮ್ಸ್ ಸಿನಿಮಾ ಮುಡಿಗೇರಿಸಿಕೊಂಡಿದೆ. ಕನ್ನಡ ಸಿನಿಮಾಗಳು ರು.100 ಕೋಟಿ ಕ್ಲಬ್ ಸೇರುವುದು ಅಪರೂಪ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಅಪ್ಪು ಅದನ್ನು ಸುಳ್ಳು ಮಾಡಿದ್ದಾರೆ.
Kishore Pathikonda: 'ಜೇಮ್ಸ್'ಗೆ 'ದಿ ಕಾಶ್ಮೀರ್ ಫೈಲ್' ಅಲ್ಲ 'ಆರ್‌ಆರ್‌ಆರ್' ಅಡ್ಡಿ
ಅವರು ನಟಿಸಿದ ಕೊನೆಯ ಸಿನಿಮಾ ದಾಖಲೆ ವೇಗದಲ್ಲಿ ರು.100 ಕೋಟಿ ಕ್ಲಬ್ ಸೇರಿದೆ. ಈ ವೇಗ ಇನ್ನೂ ನಿಂತಿಲ್ಲ. ಪ್ರೇಕ್ಷಕರು ಮುಗಿಬಿದ್ದು ಜೇಮ್ಸ್ ಸಿನಿಮಾ ನೋಡುತ್ತಿದ್ದಾರೆ. ಅಪ್ಪು ಅವರ ಮೇಲಿನ ಪ್ರೀತಿಯಿಂದ ಆರಂಭದ ದಿನವೇ ಪ್ರೇಕ್ಷಕರು ದಾಖಲೆ ಸಂಖ್ಯೆಯಲ್ಲಿ ಜೇಮ್ಸ್ ಸಿನಿಮಾ ನೋಡಿದ್ದರು. ರಾಜ್ಯವಷ್ಟೇ ಅಲ್ಲದೆ ಹೊರದೇಶಗಳಲ್ಲೂ ಜೇಮ್ಸ್ ಬಿಡುಗಡೆ ಸಂಭ್ರಮ ನಡೆದಿತ್ತು. ಅದೆಲ್ಲಕ್ಕೂ ಪುರಾವೆ ಎಂಬಂತೆ ದಾಖಲೆ ಗಳಿಕೆಯ ಲೆಕ್ಕಾಚಾರ ಬಂದಿದೆ. ಚೇತನ್ ಕುಮಾರ್ ನಿರ್ದೇಶನದ, ಕಿಶೋರ್ ಪತ್ತಿಕೊಂಡ ನಿರ್ಮಾದ ಜೇಮ್ಸ್ ಚಿತ್ರತಂಡದ ದಾಖಲೆಗಳ ಸಂಖ್ಯೆ ಇನ್ನಷ್ಟುಹೆಚ್ಚಾಗುವ ನಿರೀಕ್ಷೆ ಇದೆ.