Gajanana and Gang: ಶ್ರೀ ಮಹದೇವ್-ಅದಿತಿ ಪ್ರಭುದೇವ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ

By Suvarna NewsFirst Published Jan 27, 2022, 9:53 AM IST
Highlights

ಫೆ.4ರಂದು ರಿಲೀಸ್ ದಿನಾಂಕ ಪ್ರಕಟಿಸಿದ್ದ ಶ್ರೀ ಮಹಾದೇವ್ ಹಾಗೂ ಅದಿತಿ ಪ್ರಭುದೇವ ನನೆಯ 'ಗಜಾನನ ಅಂಡ್ ಗ್ಯಾಂಗ್' ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದೆ. ಕೋವಿಡ್ ಕಾರಣಕ್ಕೆ ಅನಿವಾರ್ಯವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಚಿತ್ರತಂಡ ತಿಳಿಸಿದೆ. 

ಶ್ಯಾನೇ ಟಾಪಾಗಿರುವ ನಟಿ ಅದಿತಿ ಪ್ರಭುದೇವ (Aditi Prabhudeva) ಹಾಗೂ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹದೇವ್ (Shri Mahadev) ಅಭಿನಯದ 'ಗಜಾನನ ಅಂಡ್ ಗ್ಯಾಂಗ್' (Gajanana and Gang) ಚಿತ್ರದ ಫಸ್ಟ್‌ಲುಕ್ (First Look) ಮತ್ತು ಟ್ರೇಲರ್ (Trailer) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಸತತ ಎರಡು ವರ್ಷಗಳ ಪರಿಶ್ರಮದಿಂದ ತಯಾರಾಗಿರುವ ಈ ಚಿತ್ರ ಫೆಬ್ರವರಿ 4ರಂದು‌ ರಾಜ್ಯಾದ್ಯಂತ ಚಿತ್ರಮಂದಿರಗಳ ಬೆಳ್ಳಿ ತೆರೆಮೇಲೆ ಮಿಂಚಬೇಕಿತ್ತು. ಆದರೆ ಇದೀಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡವು ಮುಂದೂಡಿದೆ.

'ಕೊರೊನಾ (Coronavirus) ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧದಿಂದಾಗಿ ಸಿನಿಮಾಗಳ ಕಲೆಕ್ಷನ್ ಮೇಲೆ ದೊಡ್ಡ ಹೊಡೆದ ಬೀಳಲಿದೆ. ಫೆ.4ರಂದು ನಮ್ಮ ಚಿತ್ರ ಬಿಡುಗಡೆಯಾಗುವುದಿಲ್ಲ. ಒಂದೊಳ್ಳೆಯ ಮನರಂಜನಾತ್ಮಕ ಚಿತ್ರವು ಸೋಲಬಾರದು ಎನ್ನುವುದು ನಮ್ಮ ಉದ್ದೇಶ. ಪ್ರೇಕ್ಷಕರಿಗೆ ಶೇ 100 ಮನರಂಜನೆಯನ್ನು ನಮ್ಮ ಸಿನಿಮಾ ನೀಡಲಿದೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ. ಎಲ್ಲ ಪ್ರೇಕ್ಷಕರನ್ನು ತಲುಪುವ ಆಶಯ ನಮ್ಮದು' ಎಂದಿದೆ ಚಿತ್ರತಂಡ.

Gajanana and Gang Song: 'ನಾನ್ ಒಳ್ಳೆಯವ್ನೇ' ಹಾಡಿಗೆ ದನಿಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್

'ನಮ್ ಗಣಿ ಬಿಕಾಂ ಪಾಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ (Abhishek Shetty) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಗಜಾನನ ಅಂಡ್ ಗ್ಯಾಂಗ್' ಚಿತ್ರದ ಶೀರ್ಷಿಕೆಯೇ ಹೇಳುವಂತೆ ಕಾಲೇಜು ಕಥೆಯಾಧಾರಿತ ಸಿನಿಮಾ ಇದಾಗಿದ್ದು, ಹಾಸ್ಯ, ಭಾವನಾತ್ಮಕತೆಯೂ ಸಿನಿಮಾದಲ್ಲಿದೆ. ಶ್ರೀ ಮಹಾದೇವ್, ಗಜ ಎಂಬ ಪಾತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ನಟಿಸಿದ್ದಾರೆ.ನಿರ್ದೇಶಕ ಅಭಿಷೇಕ್ ಶೆಟ್ಟಿ ಕೂಡಾ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಬ್ರೋ ಗೌಡ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.



ವಿಶೇಷವಾಗಿ  'ಗಜಾನನ ಅಂಡ್ ಗ್ಯಾಂಗ್' ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ದನಿಯಾಗಿದ್ದಾರೆ. 'ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮೇ ಸರಿಯಿಲ್ಲ' (Naan Olleyavne) ಎಂಬ ಸಾಹಿತ್ಯವಿರುವ ಈ ಹಾಡು ಕಾಲೇಜಿನ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿದೆ. ಪುನೀತ್ ರಾಜ್​ಕುಮಾರ್ ದನಿಯಲ್ಲಿ ಮೂಡಿ ಬಂದಿರುವ ಹಾಡಿಗೆ ನಿರ್ದೇಶಕ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ.  ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ (Nagesh Kumar US) ನಿರ್ಮಾಪಕರಾಗಿ 'ಗಜಾನನ ಅಂಡ್ ಗ್ಯಾಂಗ್' ಚಿತ್ರಕ್ಕೆ ಹಣ ಹೂಡುತ್ತಿದ್ದು, ಚಿತ್ರದ ಹಾಡುಗಳಿಗೆ ಪ್ರದ್ಯುತನ್ (Praddyottan) ಸಂಗೀತ ಸಂಯೋಜಿಸಿದ್ದಾರೆ. ಉದಯ ಲೀಲ ಕ್ಯಾಮರಾ ಕೈಚಳಕ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.

Lets Break Up: ಶ್ರೀ ಮಹದೇವ್‌-ರಚನಾ ಇಂದರ್‌ ಜೋಡಿಯ ಚಿತ್ರಕ್ಕೆ ಮುಹೂರ್ತ

ಇತ್ತೀಚೆಗೆ ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿತ್ತು. ನಟಿ ಮೇಘನಾ ರಾಜ್​ (Meghana Raj) ಅವರು ಟ್ರೇಲರ್​ ಲಾಂಚ್​ ಮಾಡಿ, ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು. ಟ್ರೇಲರ್‌ನಲ್ಲಿ 'ಗಜಾನನ ಅಂಡ್ ಗ್ಯಾಂಗ್'ನ ಕಾಲೇಜ್ ಕಥೆಯಿದೆ. ಕಾಲೇಜಿನ ಹಿರೋ, ಹಿರೋಯಿನ್, ಗೆಳೆಯರು ಹಾಗೂ ವಿಲನ್‌ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರಿಗೆ ಕಚಗುಳಿಯನ್ನಿಡುತ್ತದೆ. ಹಾಗೆ ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಇನ್ನು ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದಾಗ ಮಾತ್ರ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ  ತಿಳಿಸಿದೆ.

click me!