Achyuth Kumar ಅಭಿನಯದ 'ಫೋರ್ ವಾಲ್ಸ್' ಚಿತ್ರ ವಿತರಿಸಲಿರುವ ಸತ್ಯಪ್ರಕಾಶ್

By Suvarna NewsFirst Published Jan 27, 2022, 8:22 AM IST
Highlights

'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ ಮತ್ತು ಅವರ ತಂಡದ ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ಅಚ್ಯುತ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಫೋರ್ ವಾಲ್ಸ್’ ಚಿತ್ರದ ವಿತರಣೆಗೆ ಮುಂದಾಗಿದೆ. 

'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ (Sathya Prakash) ಮತ್ತು ಅವರ ತಂಡದ ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ಅಚ್ಯುತ್‌ಕುಮಾರ್ (Achyuth Kumar) ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಫೋರ್ ವಾಲ್ಸ್’  (Fourwalls) ಚಿತ್ರದ ವಿತರಣೆಗೆ ಮುಂದಾಗಿದೆ. ‘ನಾವು ಸಿನಿಮಾ ವಿತರಣೆ ಸಂಸ್ಥೆ ಆರಂಭಿಸಿದ ಮೇಲೆ ಬಿಡುಗಡೆ ಮಾಡುತ್ತಿರುವ ಮೊದಲ ಸಿನಿಮಾ 'ಫೋರ್ ವಾಲ್ಸ್'. ಸಾಕಷ್ಟು ಭರವಸೆ ಹಾಗೂ ನಂಬಿಕೆಯೊಂದಿಗೆ ಈ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಅಚ್ಯುತ್ ಕುಮಾರ್ ಅವರ ಸಿನಿಮಾ ಆಗಿರುವ ಕಾರಣ ಇಲ್ಲಿ ಕತೆ ಹಾಗೂ ಕಲಾವಿದರ ಅಭಿನಯಕ್ಕೆ ಯಾವುದೇ ಕೊರತೆ ಇರಲ್ಲ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ತಿಳಿಸಲಾಗುವುದು’ ಎನ್ನುತ್ತಾರೆ ನಿರ್ದೇಶಕ ಸತ್ಯಪ್ರಕಾಶ್. 



ಎಸ್.ಎಸ್.ಸಜ್ಜನ್ (SS Sajjan) ನಿರ್ದೇಶನದ ಈ ಚಿತ್ರವು 80ರ ದಶಕದ ಕಥೆಯನ್ನು ಹೊಂದಿದೆ. ಇದು ತಂದೆ ಮತ್ತು ಅವರ ವಯಸ್ಕ ಮಕ್ಕಳ ಸುತ್ತ ಸುತ್ತುವ ಸಾಮಾಜಿಕ ನಾಟಕವಾಗಿದೆ. ಇದು ಗೃಹಿಣಿಯರ ಜೀವನವನ್ನು ಎತ್ತಿ ತೋರಿಸುತ್ತದೆ. 'ಮಂತ್ರಂ' (Mantram) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಸಜ್ಜನ್ ಆ್ಯಕ್ಷನ್ ಕಟ್ ಜೊತೆಗೆ  ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.  ಚಿತ್ರತಂಡ ಈ ಹಿಂದೆ ಬಿಡುಗಡೆ ಮಾಡಿರುವ ಟೀಸರ್‌​ನಲ್ಲಿ (Teaser) ಅಚ್ಯುತ್ ಕುಮಾರ್ ಮೂರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಗೆಟಪ್​ನಲ್ಲಿ ಲವರ್ ಬಾಯ್ ಆಗಿ ಅವರು ಕಾಣಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.



ಸಾಮಾಜಿಕ ಜಾಲತಾಣಗಳಲ್ಲೂ (Social Media) ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಚ್ಯುತ್ ಕುಮಾರ್ ಅವರ ಪ್ರೋತ್ಸಾಹ ದೊಡ್ಡದು. ಇದನ್ನೆಲ್ಲ ನೋಡಿದಾಗ ನಮ್ಮ ತಂಡದ ಪರಿಶ್ರಮ ಗೆದ್ದಿದೆ ಎಂಬ ಸಾರ್ಥಕತೆ ಇದೆ ಎನ್ನುತ್ತಾರೆ ನಿರ್ದೇಶಕರು. ತಂದೆ ಮಗನ ಬಾಂದವ್ಯದ ಸುತ್ತ ಹೆಣೆಯಲಾದ ಕಥೆ ಸಿನಿಮಾದಲ್ಲಿದೆ. ನಾಯಕಿಯಾಗಿ ಡಾ. ಪವಿತ್ರಾ (Dr.Pavitra) ನಟಿಸಿದ್ದು, ದತ್ತಣ್ಣ, ಡಾ.ಜಾನ್ವಿ ಜ್ಯೋತಿ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ ತಾರಾಬಳಗದಲ್ಲಿದ್ದಾರೆ. ತೆಲುಗಿನ 'ರುದ್ರಮದೇವಿ', 'ಗರುಡವೇಗ' ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ವಿಡಿಆರ್ ಕ್ಯಾಮೆರಾ ಕೈಚಳಕ, ಆನಂದ ರಾಜಾವಿಕ್ರಮ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 



ಕೋಟೆನಾಡು ಚಿತ್ರದುರ್ಗದವರಾವರಾದ ಟಿ.ವಿಶ್ವನಾಥ್ ನಾಯಕ್ (T.Vishwanath Nayak) ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಆಸಕ್ತಿ ಇದ್ದು, ಕಲಾವಿದರಾಗಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸ್ವತಂತ್ರ ನಿರ್ಮಾಪಕರಾಗಿ 'ಫೋರ್ ವಾಲ್ಸ್' ಚಿತ್ರವನ್ನು ಎಸ್.ವಿ ಬ್ಯಾನರ್‌ನಲ್ಲಿ (S.V.Banner) ನಿರ್ಮಿಸಿದ್ದಾರೆ. 'ಫೋರ್ ವಾಲ್ಸ್' ಸಿನಿಮಾದ ಜೊತೆಗೆ ಮೃತ್ಯುಂಜಯ ಎಂಬ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿರುವ ಸಜ್ಜನ್ ಬಯೋಪಿಕ್‌ವೊಂದನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಕಮರ್ಷಿಯಲ್ ಸಿನಿಮಾಗಳ‌ ನಡುವೆ ಕಂಟೆಂಟ್ ಸಿನಿಮಾಗಳ ತಾಕತ್ತು ಏನು ಅನ್ನೋದನ್ನು ಸಾರಿ ಹೇಳಲು ಸಜ್ಜನ್ ಅವರಂತಹ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕು. ಈ ಚಿತ್ರ ಸೆನ್ಸಾರ್ (Censor Board) ಅಂಗಳದಲ್ಲಿ ಯು/ಎ ಸರ್ಟಿಫೀಕೇಟ್ (U/A Certificate) ಪಡೆದುಕೊಂಡಿದೆ.

click me!