Puneeth Rajkumar; ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಿದ್ದೀನಿ; ಶಿವಣ್ಣ ಭಾವುಕ

By Shruthi Krishna  |  First Published Mar 17, 2023, 2:23 PM IST

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವುಕ ಪತ್ರ ಹಂಚಿಕೊಂಡಿದ್ದಾರೆ. 


ಮಾರ್ಚ್ 17 ಈ ದಿನಕ್ಕಾಗಿ  ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ವರ್ಷಪೂರ್ತಿ ಕಾಯುತ್ತಿದ್ದರು.  ಅಭಿಮಾನಿಗಳಿಗೆ ಈ ದಿನ ದೊಡ್ಡ ಹಬ್ಬವಾಗಿತ್ತು. ಸದಾಶಿವನಗರದ ನಿವಾಸದ ಮುಂದೆ ಅಭಿಮಾನಿಗಳ ದಂಡೇ ಸೇರುತ್ತಿತ್ತು. ಅಪ್ಪು..ಅಪ್ಪು ಅಂತ ಘೋಷಣೆ ಮೊಳಗುತ್ತಿತ್ತು.  ನೆಚ್ಚಿನ ನಟನನ್ನು ನೋಡಲು ಸಾಲುಗಟ್ಟಲೇ ಅಭಿಮಾನಿಗಳು ನಿಂತಿರುತ್ತಿದ್ದರು. ಅಪ್ಪು ನೋಡಿ ಸಂಭ್ರಮಿಸುತ್ತಿದ್ದರು, ಸಂತಸ ಪಡುತ್ತಿದ್ದರು, ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಇದೆಲ್ಲ ಈಗ ನೆನಪು ಮಾತ್ರ. ಅಪ್ಪು ಇಲ್ಲದೇ 2ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಆ ಖುಷಿ, ಆ ಸಂಭ್ರಮ, ಆ ಘೋಷಣೆಗಳಿಲ್ಲದೇ ಪುನೀತ್ ಅವರನ್ನು ನೆನೆಯುತ್ತಾ ದುಃಖದಲ್ಲೇ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿದೆ.

ಅಪ್ಪು ನಿಧನ ಹೊಂದಿ ಒಂದೂವರೇ ವರ್ಷ ಆದರೂ ಅಗಲಿಯ ನೋವು ಇನ್ನೂ ಮಾಸಿಲ್ಲ. ಅದರಲ್ಲೂ ಅಪ್ಪು ಅವರನ್ನು ಎತ್ತಿ ಆಡಿಸಿ ಬೆಳೆಸಿದವರ ಸಂಕಟ ಅಂತೂ ಹೇಳತೀರದು. ತಮ್ಮನನ್ನು ನೆನಪಿಸಿಕೊಳ್ಳುತ್ತಾ, ಕಣ್ಣೀರಾಕುತ್ತಲೇ ಕಾಲ ತಳ್ಳುತ್ತಿದ್ದಾರೆ ಅಣ್ಣ ಶಿವರಾಜ್ ಕುಮಾರ್. ಇಂದು ಹುಟ್ಟುಹಬ್ಬದ ಈ ಸಮಯದಲ್ಲಿ ಶಿವರಾಜ್ ಕುಮಾರ್ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ಶಿವಣ್ಣನ ಸಾಲುಗಳು ಎಂತವರಿಗಾದರೂ ಕಣ್ಣೀರು ತರಿಸದೇ ಇರದು. 

Puneeth Rajkumar Birthday; ಅಪ್ಪು ಇಲ್ಲದೇ 2ನೇ ಜನ್ಮದಿನ; ಅಭಿಮಾನಿಗಳ ಭಾವುಕ ವಿಶ್

Tap to resize

Latest Videos

undefined

'ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು, ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೆ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರೂ ನಗ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ' ಎಂದು ಹೇಳಿದ್ದಾರೆ. 

'ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವ್ದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ - ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು' ಎಂದು ಬರೆದುಕೊಂಡಿದ್ದಾರೆ.

ನಿನ್ನ ನೆನಪುಗಳು ಎಂದಿಗೂ ಅಮರ
ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು pic.twitter.com/u6PukGoFCG

— DrShivaRajkumar (@NimmaShivanna)

Yuva Rajkumar:'ಯುವ' ಚಿತ್ರಕ್ಕೂ ಅಪ್ಪುಗೂ ಇದೆ ಲಿಂಕ್; ಪೋಸ್ಟರ್‌ನಲ್ಲಿ ಅಡಗಿದೆ ರಹಸ್ಯ

ಭಾವುಕ ಸಾಲುಗಳ ಜೊತೆಗೆ ಶಿವಣ್ಣ ತಮ್ಮನ ಜೊತೆಗಿನ ಫೋಟವನ್ನು ಶೇರ್ ಮಾಡಿದ್ದಾರೆ. ಶಿವಣ್ಣನ ಮಾತುಗಳಿಗೆ ಅಭಿಮಾನಿಗಳು ಕೂಡ ಭಾವುಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತುಂಬಾ ಹೃದಯಸ್ಪರ್ಶಿವಾಗಿದೆ ಎಂದು ಹೇಳುತ್ತಿದ್ದಾರೆ. ಭಾವುಕರಾದ್ವಿ ಎಂದು ಕಾಮೆಂಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.  

 

click me!