
ಸ್ಯಾಂಡಲ್‌ವುಡ್‌ನ ‘ಕನಸಿನ ರಾಣಿ’ ಮಾಲಾಶ್ರೀ ಬೆಳೆದು ಬಂದ ರೋಚಕ ಹಾದಿ!
ಕನ್ನಡ ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ, ಒಬ್ಬ ನಟಿಯ ಹೆಸರು ಸುವರ್ಣಾಕ್ಷರಗಳಲ್ಲಿ ಮಿನುಗುತ್ತದೆ. ಅವರೇ ಅಭಿಮಾನಿಗಳ ಪಾಲಿನ ‘ಕನಸಿನ ರಾಣಿ’, ಚಿತ್ರರಂಗದ ‘ಆಕ್ಷನ್ ಕ್ವೀನ್’ ಮಾಲಾಶ್ರೀ. 90ರ ದಶಕದಲ್ಲಿ ಮಾಲಾಶ್ರೀ (Malashri) ಎಂದರೆ ಕೇವಲ ಒಬ್ಬ ನಟಿಯಲ್ಲ, ಅದೊಂದು ಸಂಚಲನ! ಚಿತ್ರಮಂದಿರಗಳ ಮುಂದೆ ಮಾಲಾಶ್ರೀ ಸಿನಿಮಾ ನೋಡಲು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುತ್ತಿದ್ದ ಆ ಕಾಲವೇ ಒಂದು ಅದ್ಭುತ.
ಮಾಲಾಶ್ರೀ ಅವರ ಸಿನಿವೃತ್ತಿ ಆರಂಭವಾಗಿದ್ದು ಕೇವಲ ನಾಲ್ಕು ತಿಂಗಳ ಮಗುವಾಗಿದ್ದಾಗ! ಹೌದು, ಮಹಾನಟಿ ಸಾವಿತ್ರಿ ಅವರ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಬಣ್ಣ ಹಚ್ಚಿದ ಮಾಲಾಶ್ರೀ, ಸುಮಾರು 35 ಚಿತ್ರಗಳಲ್ಲಿ ಬಾಲನಟಿಯಾಗಿ ಮಿಂಚಿದ್ದರು. ಆಗ ಅವರ ಹೆಸರು ‘ಶ್ರೀದುರ್ಗಾ’. ಆದರೆ ಈ ಶ್ರೀದುರ್ಗಾ ‘ಮಾಲಾಶ್ರೀ’ ಆಗಿ ಬದಲಾಗಿದ್ದು ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ಮೂಲಕ.
1989ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ‘ನಂಜುಂಡಿ ಕಲ್ಯಾಣ’ ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದಾಗ ಅವರಿಗೆ ಸಿಕ್ಕಿದ್ದೇ ಈ ಪ್ರತಿಭೆ. ಶ್ರೀದುರ್ಗಾ ಹೆಸರನ್ನು ‘ಮಾಲಾಶ್ರೀ’ ಎಂದು ಬದಲಾಯಿಸಿದ ಪಾರ್ವತಮ್ಮನವರು, ರಾಘವೇಂದ್ರ ರಾಜ್‌ಕುಮಾರ್ ಎದುರು ನಾಯಕಿಯಾಗಿ ಲಾಂಚ್ ಮಾಡಿದರು. ಆಗ ಮಾಲಾಶ್ರೀಗೆ ಕೇವಲ 15 ವರ್ಷ! ಮೊದಲ ಚಿತ್ರವೇ ಬರೋಬ್ಬರಿ 535 ದಿನಗಳ ಕಾಲ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತು. ಮಾಲಾಶ್ರೀ ಅವರ ನಟನೆ ಮತ್ತು ಚಂದದ ಮುಖ ನೋಡಿ ಸ್ವತಃ ಅಣ್ಣಾವ್ರು ಇವರನ್ನು "ಕನ್ನಡ ಚಿತ್ರರಂಗದ ಹೇಮಾ ಮಾಲಿನಿ" ಎಂದು ಕರೆದಿದ್ದರು.
ಮಾಲಾಶ್ರೀ ಅವರ ವೇಗ ಎಷ್ಟಿತ್ತೆಂದರೆ, 1992ರಲ್ಲಿ ಒಂದೇ ವರ್ಷದಲ್ಲಿ ಅವರು ಬರೋಬ್ಬರಿ 20 ಚಿತ್ರಗಳಲ್ಲಿ ನಟಿಸಿ ಅಂದಿನ ಕಾಲಕ್ಕೆ ಅತಿ ದೊಡ್ಡ ದಾಖಲೆ ಬರೆದರು. ಕೇವಲ ಗ್ಲಾಮರ್ ಗೊಂಬೆಯಾಗಿ ಉಳಿಯದ ಮಾಲಾಶ್ರೀ, 'ರಾಣಿ ಮಹಾರಾಣಿ', 'ಹೃದಯ ಹಾಡಿತು' ಅಂತಹ ಚಿತ್ರಗಳ ಮೂಲಕ ಅಭಿನಯದ ತಾಕತ್ತು ತೋರಿಸಿದರು. ಇನ್ನು 'ಎಸ್.ಪಿ. ಭಾರ್ಗವಿ' ಚಿತ್ರದ ಮೂಲಕ ಅವರು ‘ಆಕ್ಷನ್ ಕ್ವೀನ್’ ಆಗಿ ಅವತರಿಸಿದಾಗ, ತೆಲುಗಿನ ವಿಜಯಶಾಂತಿಯಂತೆ ಕನ್ನಡದಲ್ಲೂ ಮಹಿಳಾ ಪ್ರಧಾನ ಚಿತ್ರಗಳಿಗೆ ಹೊಸ ಭಾಷ್ಯ ಬರೆದರು. ವಿಲನ್‌ಗಳನ್ನು ಮಾಲಾಶ್ರೀ ಸದೆಬಡಿಯುತ್ತಿದ್ದರೆ ಥಿಯೇಟರ್‌ನಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು.
ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಮಾಲಾಶ್ರೀ ಅವರು ಕನ್ನಡದ ಖ್ಯಾತ ನಿರ್ಮಾಪಕ ‘ಕೋಟಿ’ ರಾಮು ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿ ಸ್ಯಾಂಡಲ್‌ವುಡ್‌ನ ಪವರ್ ಕಪಲ್ ಎಂದೇ ಪ್ರಸಿದ್ಧವಾಗಿತ್ತು. ಆದರೆ 2021ರಲ್ಲಿ ಪತಿ ರಾಮು ಅವರ ಅಕಾಲಿಕ ಮರಣ ಮಾಲಾಶ್ರೀ ಅವರಿಗೆ ದೊಡ್ಡ ಆಘಾತ ನೀಡಿತು. ಆದರೂ ಕುಗ್ಗದ ಅವರು ಇಂದು ತಮ್ಮ ಮಕ್ಕಳಿಗಾಗಿ ಮತ್ತು ಚಿತ್ರರಂಗಕ್ಕಾಗಿ ಮರಳಿ ಬಂದಿದ್ದಾರೆ.
ಈಗ ಮಾಲಾಶ್ರೀ ಅವರ ಪರಂಪರೆಯನ್ನು ಮುಂದುವರಿಸಲು ಅವರ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕಾಟೇರ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಆರಾಧನಾ, ಮೊದಲ ಚಿತ್ರದಲ್ಲೇ SIIMA ಪ್ರಶಸ್ತಿ ಗೆಲ್ಲುವ ಮೂಲಕ ತಾಯಿಯ ಹೆಸರನ್ನು ಉಳಿಸಿದ್ದಾರೆ. ಬಾಲನಟಿಯಿಂದ ಹಿಡಿದು ಆಕ್ಷನ್ ಕ್ವೀನ್ ವರೆಗೆ ಮಾಲಾಶ್ರೀ ಅವರು ಸವೆಸಿದ ಹಾದಿ ಇಂದಿನ ಪೀಳಿಗೆಯ ನಟಿಯರಿಗೆ ಒಂದು ದೊಡ್ಡ ಸ್ಫೂರ್ತಿ. ‘ಕನಸಿನ ರಾಣಿ’ ಎಂದರೆ ಅದು ಎಂದಿಗೂ ಮಾಲಾಶ್ರೀ ಮಾತ್ರ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.