
ಕರ್ನಾಟಕದಲ್ಲೂ ಧುರಂಧರ್ 2' ಅಬ್ಬರ; ಹೊಸ ದಾಖಲೆ
ಬಾಲಿವುಡ್‌ನ 'ಪವರ್ ಹೌಸ್' ರಣವೀರ್ ಸಿಂಗ್ (Ranveer Singh) ಅಭಿನಯದ 'ಧುರಂಧರ್ 2' (ಧುರಂಧರ್: ದಿ ರಿವೆಂಜ್) ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ ಬಂದ 'ಧುರಂಧರ್' ಸೃಷ್ಟಿಸಿದ್ದ ಕ್ರೇಜ್‌ಗಿಂತ ಹತ್ತು ಪಟ್ಟು ಹೆಚ್ಚು ಹವಾ ಈ ಸೀಕ್ವೆಲ್ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಜಾಗತಿಕವಾಗಿ 1365 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶೇಷವೆಂದರೆ, ಕೇವಲ ಬಾಲಿವುಡ್ ಅಥವಾ ಉತ್ತರ ಭಾರತದಲ್ಲಿ ಮಾತ್ರವಲ್ಲದೆ, ಕರ್ನಾಟಕದಲ್ಲೂ ಈ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಕರ್ನಾಟಕದ ಮಣ್ಣಿನಲ್ಲಿ ನೂರು ಕೋಟಿ ರೂಪಾಯಿ ಗಳಿಕೆ ಮಾಡುವುದು ಯಾವುದೇ ಪರಭಾಷಾ ಸಿನಿಮಾಗೆ ಅಷ್ಟು ಸುಲಭದ ಮಾತಲ್ಲ. ಆದರೆ, 'ಧುರಂಧರ್ 2' ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದೆ. ಕರ್ನಾಟಕದಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಎರಡನೇ ಪರಭಾಷಾ ಸಿನಿಮಾ ಎಂಬ ಖ್ಯಾತಿಗೆ ಇದು ಭಾಜನವಾಗಿದೆ.
ಇದಕ್ಕೂ ಮುನ್ನ 2017ರಲ್ಲಿ ತೆರೆಕಂಡಿದ್ದ ಎಸ್.ಎಸ್. ರಾಜಮೌಳಿ ಅವರ 'ಬಾಹುಬಲಿ 2' ಈ ಸಾಧನೆ ಮಾಡಿತ್ತು. ಆದರೆ ಅಚ್ಚರಿಯ ವಿಷಯವೆಂದರೆ, 'ಬಾಹುಬಲಿ 2' ಚಿತ್ರಕ್ಕಿಂತಲೂ ವೇಗವಾಗಿ ಅಂದರೆ ಕೇವಲ 11 ದಿನಗಳಲ್ಲಿ ಕರ್ನಾಟಕದಲ್ಲಿ ಶತಕೋಟಿ ಬಾಚಿಕೊಳ್ಳುವ ಮೂಲಕ ರಣವೀರ್ ಸಿಂಗ್ ಹೊಸ ಚರಿತ್ರೆ ಬರೆದಿದ್ದಾರೆ. ಸದ್ಯ ಕರ್ನಾಟಕದಲ್ಲಿ ಈ ಚಿತ್ರದ ಒಟ್ಟು ಗಳಿಕೆ 102 ಕೋಟಿ ರೂಪಾಯಿ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 125 ಕೋಟಿ ರೂಪಾಯಿಗಳ ಗಡಿ ದಾಟುವುದು ನಿಶ್ಚಿತ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು. 'ಬಾಹುಬಲಿ 2' ಚಿತ್ರವು ಒಟ್ಟೂ 111 ಕೋಟಿ ಗಳಿಕೆ ಮಾಡಿದ್ದರೆ 'ಧುರಂಧರ್ 2' ಚಿತ್ರವು ಕೇವಲ 11 ದಿನಗಳಲ್ಲಿ 102 ಕೋಟಿ ಗಳಿಕೆ ಮಾಡಿ ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಈ ಚಿತ್ರವು ಮುಂದೆ 'ಬಾಹುಬಲಿ 2' ಚಿತ್ರವನ್ನು ಮೀರಿಸುವುದು ಪಕ್ಕಾ ಎನ್ನಬಹುದು.
ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲೂ (USA & Canada) 'ಧುರಂಧರ್ 2' ಹೊಸ ದಾಖಲೆ ಬರೆದಿದೆ. ಕಳೆದ ಒಂಬತ್ತು ವರ್ಷಗಳಿಂದ ಯಾರಿಂದಲೂ ಮುರಿಯಲು ಸಾಧ್ಯವಾಗದ 'ಬಾಹುಬಲಿ 2: ದಿ ಕನ್‌ಕ್ಲೂಷನ್' ಚಿತ್ರದ ದಾಖಲೆಯನ್ನು ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಪುಡಿಪುಡಿ ಮಾಡಿದೆ. ಉತ್ತರ ಅಮೆರಿಕಾದಲ್ಲಿ ಈವರೆಗೆ 22 ಮಿಲಿಯನ್ ಡಾಲರ್ (ಸುಮಾರು 205 ಕೋಟಿ ರೂ.) ಗಳಿಸುವ ಮೂಲಕ, 'ಬಾಹುಬಲಿ 2' ಚಿತ್ರದ 20 ಮಿಲಿಯನ್ ಡಾಲರ್ ದಾಖಲೆಯನ್ನು ಹಿಂದಿಕ್ಕಿದೆ.
ಬಾಹುಬಲಿ ತಂಡದಿಂದಲೇ ಮೆಚ್ಚುಗೆ:
ಧುರಂಧರ್ ಚಿತ್ರದ ಈ ಮಹತ್ತರ ಸಾಧನೆಯನ್ನು ಕಂಡು 'ಬಾಹುಬಲಿ' ಚಿತ್ರತಂಡವೇ ಬೆರಗಾಗಿದೆ. ಕ್ರೀಡಾ ಸ್ಫೂರ್ತಿ ಮೆರೆದಿರುವ ಬಾಹುಬಲಿ ಚಿತ್ರತಂಡ, ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಆದಿತ್ಯ ಧರ್ ಮತ್ತು ಇಡೀ ಧುರಂಧರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ. "ಭಾರತ, ಯುಎಸ್ಎ ಮತ್ತು ವಿಶ್ವಾದ್ಯಂತ ಹೊಸ ಮೈಲಿಗಲ್ಲು ಸ್ಥಾಪಿಸಿದ ಧುರಂಧರ್ 2 ಚಿತ್ರಕ್ಕೆ ಅಭಿನಂದನೆಗಳು" ಎಂದು ತಂಡ ಹಾರೈಸಿದೆ. ಬಾಹುಬಲಿ ನಿರ್ಮಾಪಕ ಶೋಬು ಯಾರ್ಲಗಡ್ಡ ಕೂಡ ರಣವೀರ್ ನಟನೆ ಮತ್ತು ಆದಿತ್ಯ ಧರ್ ಮೇಕಿಂಗ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಜೋಡಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇ ಬದಲಿಸಿದೆ. ಎರಡನೇ ವಾರಾಂತ್ಯದಲ್ಲೂ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಈ 'ಧುರಂಧರ್' ಅಬ್ಬರ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಕುತೂಹಲಕಾರಿಯಾಗಿದೆ. ಸದ್ಯಕ್ಕಂತೂ ಇದು ಕೇವಲ ಸಿನಿಮಾವಲ್ಲ, ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಯಾಗಿರುವ ಒಂದು ಅನ್-ಸ್ಟಾಪಬಲ್ ಸುನಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.