ನಗಿಸಿ ರಂಜಿಸಿ ಖುಷಿ ಪಡಿಸಿ ಆಚೆ ಕಳಿಸ್ತೀನಿ: ನರಸಿಂಹ

By Kannadaprabha NewsFirst Published Jan 22, 2021, 9:03 AM IST
Highlights

ದೊಡ್‌ ದೊಡ್ಡೋರೆಲ್ಲಾ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌ ಮಾಡಿದ ತಕ್ಷಣ ಉಳಿದವರಿಗೆಲ್ಲಾ ಸಣ್ಣ ಒತ್ತಡ ಉಂಟಾಗಿದೆ. ಇನ್ನು ನಾಲ್ಕೈದು ತಿಂಗಳು ದೊಡ್‌ ದೊಡ್‌ ಸಿನಿಮಾಗಳ ಗಲಾಟೆ ಇರುತ್ತದೆ. ಅವುಗಳ ಮಧ್ಯೆ ಸಿಕ್ಕಿ ಬೀಳುವುದು ಕಷ್ಟವೇ. ಎಲ್ಲಾ ಬಂದು ಹೋದ ಮೇಲೆ ಬರೋಣ ಎಂದರೆ ತಡವಾಗುತ್ತದೆ. ಹಾಗಾಗಿ ಮೊದಲೇ ಬಂದರೆ ತೊಂದರೆ ಇಲ್ಲ ಎಂಬ ನಿರ್ಧಾರ ತೆಗೆದುಕೊಂಡಿರುವುದು ಎಆರ್‌ ವಿಖ್ಯಾತ್‌ ನಿರ್ಮಾಣದ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರತಂಡ. ಅದಕ್ಕೆ ಕಾರಣ ಸಿನಿಮಾದ ಮೇಲಿರುವ ವಿಶ್ವಾಸ, ಭರವಸೆ.

ಚಿತ್ರತಂಡದ ಪ್ರತಿಯೊಬ್ಬರಿಗೂ ಈ ಸಿನಿಮಾದ ಮೇಲೆ ಅಪಾರವಾದ ನಂಬಿಕೆ. ನಿರ್ದೇಶಕ ಶ್ರೀನರಸಿಂಹ ಅವರಿಗಂತೂ ಆ ವಿಶ್ವಾಸ ಕೊಂಚ ಹೆಚ್ಚೇ ಇದೆ. ‘ಇದು ಥ್ರಿಲ್ಲರ್‌ ಸಿನಿಮಾ ಅಲ್ಲ. ಸಾಕಷ್ಟುಅಚ್ಚರಿಗಳಿರುವ, ಕಾಮಿಡಿ ಇರುವ ಫ್ಯಾಮಿಲಿ ಸಿನಿಮಾ. ಯಾರು ಈ ಸಿನಿಮಾ ನೋಡಲು ಬರುತ್ತೀರೋ ನಿಮ್ಮನ್ನು ನಗಿಸಿ ರಂಜಿಸಿ ಖುಷಿ ಪಡಿಸಿಯೇ ಆಚೆ ಕಳುಹಿಸುತ್ತೇನೆ’ ಎಂದು ಅವರು ಹೇಳುವಾಗ ಕಣ್ಣ ತುಂಬಾ ಆತ್ಮವಿಶ್ವಾಸ.

ಫೆಬ್ರವರಿಯಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಮ್‌'; ಒಟ್ಟಿಗೆ ಬರ್ತಿದ್ದಾರೆ ದರ್ಶನ್-ಪ್ರಜ್ವಲ್! 

ಆದರೆ ಚೂರು ಟೆನ್ಷನಲ್ಲಿದ್ದಂತೆ ಇದ್ದಿದ್ದು ನಿರ್ಮಾಪಕ ವಿಖ್ಯಾತ್‌. ರಿಲೀಸ್‌ಗೆ ಟೈಮ್‌ ತುಂಬಾ ಕಡಿಮೆ ಇದೆ, ಪ್ರಮೋಷನ್‌ ಮಾಡಬೇಕು, ಥಿಯೇಟರ್‌ಗಳನ್ನು ನಿರ್ವಹಿಸಬೇಕು ಎಂಬುದೇ ಅವರ ತಲೆಯಲ್ಲಿ ಓಡಾಡುತಿದ್ದದ್ದು ಅವರ ನಡವಳಿಕೆಯಲ್ಲೇ ಗೊತ್ತಾಗುತ್ತಿತ್ತು. ಅವರ ವಿಶ್ವಾಸ ದೊಡ್ಡದು. ಸುಮಾರು 450 ಥಿಯೇಟರ್‌ಗಳಲ್ಲಿ ಕರ್ನಾಟಕದಾದ್ಯಂತ ರಿಲೀಸ್‌ ಮಾಡಿಯೇ ಮಾಡುತ್ತೇನೆ, ಒಮ್ಮೆ ಜನರಿಗೆ ತಲುಪಿದರೆ ಸಿನಿಮಾ ಇಷ್ಟವಾಗುತ್ತದೆ ಎಂದು ಗಟ್ಟಿದನಿಯಲ್ಲಿ ದಿಟ್ಟವಾಗಿ ಹೇಳಿಕೊಂಡರು. ಅವರ ಆಸೆ ಫಲಿಸಲಿ.

ಸಿನಿಮಾದ ಹೀರೋ ಪ್ರಜ್ವಲ್‌ ದೇವರಾಜ್‌ ತಾನು ಕಲ್ಪಿಸಿಕೊಂಡಿದ್ದಕ್ಕಿಂದ ಸಿನಿಮಾ ಮೂಡಿಬಂದಿರುವ ಸಂತೋಷದಲ್ಲಿದ್ದರು. ರಘು ಮುಖರ್ಜಿ ವಿಭಿನ್ನ ಪಾತ್ರ ಮಾಡಿದ, ಆದರೆ ಅದನ್ನು ರಿವೀಲ್‌ ಮಾಡಲಾಗದ ಸಂದಿಗ್ಧದಲ್ಲಿದ್ದರು. ಕಾಮಿಡಿ ಪೊಲೀಸ್‌ ಪಾತ್ರ ಮಾಡಿರುವ ಧರ್ಮಣ್ಣನಿಗಂತೂ ಈ ಚಿತ್ರದ ಬಗ್ಗೆ ಪೂರ್ತಿ ಸಂತೃಪ್ತಿ.

ಇನ್ಸ್‌ಪೆಕ್ಟರ್‌ ವಿಕ್ರಂನ 'ಹೇ ಗಾಯ್ಸ್' ಹಾಡಿಗೆ ಮೆಚ್ಚುಗೆ!

ಈ ಸಿನಿಮಾದ ಛಾಯಾಗ್ರಾಹಕ ನವೀನ್‌ಕುಮಾರ್‌ ಮತ್ತು ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ಗೆ ಚಿತ್ರತಂಡ ಜಾಸ್ತಿಯೇ ಪ್ರೀತಿ ತೋರಿಸಿತು. ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ದೇವೇಂದ್ರ ರೆಡ್ಡಿ ಶುಭ ಹರಸಿ ನಕ್ಕರು. ಆ ನಗುವಿಗೆ ಇಡೀ ಹಾಲ್‌ ಬೆಳಗಿತು.

click me!