ಸಿನಿಮಾಗಾಗಿ ಏನು ಬೇಕಾದರೂ ಮಾಡುತ್ತೇನೆ: ಧ್ರುವ ಸರ್ಜಾ

By Kannadaprabha News  |  First Published Jan 22, 2021, 8:49 AM IST

ತುಂಬಾ ದಿನಗಳ ನಂತರ ನಟ ಧ್ರುವ ಸರ್ಜಾ ಮಾತಿಗೆ ಸಿಕ್ಕರು. ಫೆ.19ರಂದು ‘ಪೊಗರು’ ಬಿಡುಗಡೆ. ಆ ಸಂಭ್ರಮದಲ್ಲಿರುವ ಆ್ಯಕ್ಷನ್‌ ಪ್ರಿನ್ಸ್‌ ಸಂದರ್ಶನ ಇಲ್ಲಿದೆ.


ಆರ್.ಕೇಶವಮೂರ್ತಿ

ಈ ವರ್ಷ ತೆರೆ ಕಾಣುತ್ತಿರುವ ಮೊದಲ ದೊಡ್ಡ ಸ್ಟಾರ್‌ ಚಿತ್ರ ನಿಮ್ಮದೇ?

Tap to resize

Latest Videos

ದೊಡ್ಡದು, ಚಿಕ್ಕದು ಅಂತೇನು ಇಲ್ಲ. ಸಿನಿಮಾ, ಸಿನಿಮಾ ಅಷ್ಟೆ. ಅಭಿಮಾನಿಗಳು, ಪ್ರೇಕ್ಷಕರು ನೋಡಿ ಗೆಲ್ಲಿಸಿದರೆ ಎಲ್ಲವೂ ದೊಡ್ಡ ಸಿನಿಮಾಗಳೇ ಆಗುತ್ತವೆ. ಈ ಚಿತ್ರ ಗೆದ್ದು ಮತ್ತಷ್ಟುಚಿತ್ರಗಳು ಬಿಡುಗಡೆಗೆ ಧೈರ್ಯ ತುಂಬುತ್ತದೆ ಎನ್ನುವ ಭರವಸೆ ನನಗೆ ಇದೆ.

ಧ್ರುವ ಸರ್ಜಾ ಡಯೆಟ್‌ ಹಿಂದಿದೆ ಆ ಒಂದು ಶಕ್ತಿ! 

ಸಿನಿಮಾ ಹೇಗೆ ಬಂದಿದೆ, ನಿಮ್ಮ ಕರಾಬು ಲುಕ್ಕುಗೂ ಕತೆಗೂ ಏನು ನಂಟು?

ತುಂಬಾ ಪ್ರಾಮಾಣಿಕವಾಗಿ ಮಾಡಿರುವ ಸಿನಿಮಾ. ನಮಗೆ ನಮ್ಮ ಚಿತ್ರ ತುಂಬಾ ಚೆನ್ನಾಗಿಯೇ ಬಂದಿದೆ, ಹಾಗೆ ಕಾಣುತ್ತದೆ. ನೀವು ನೋಡಿ ಹೇಳಬೇಕು. ಕರಾಬು ಹಾಡು ಮತ್ತು ನನ್ನ ಲುಕ್ಕು ನೋಡಿ ಕೇವಲ ಮಾಸ್‌ ಪ್ರೇಕ್ಷಕರ ಸಿನಿಮಾ ಅಂದುಕೊಳ್ಳಬೇಡಿ. ಇದರಲ್ಲಿ ಬೇರೆ ಬೇರೆ ವಿಷಯಗಳಿವೆ. ಮನಸ್ಸಿಗೆ ನಾಟುವಂತಹ ಕತೆ ಮತ್ತು ದೃಶ್ಯಗಳು ಇಡೀ ಚಿತ್ರದ ಉದ್ದಕ್ಕೂ ಇದೆ. ಆ ಗಡ್ಡ, ಕೆದರಿದ ಕೂದಲು, ಒರಟು ಮೈ ತೋರಿಸಿಕೊಂಡಿರುವ ಲುಕ್ಕು ಯಾಕೆ ಎಂಬುದನ್ನು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಆದರೆ, ಕತೆಗೆ ಪೂರಕವಾಗಿದೆ.

ಆ್ಯಕ್ಷನ್‌, ಮಾಸ್‌ ಹೊರತಾಗಿರುವ ಅಂಶಗಳು ಚಿತ್ರದಲ್ಲಿ ಏನಿದೆ?

ಈಗಷ್ಟೆಹಾಡಿನ ಸಣ್ಣ ತುಣುಕು ಬಿಡುಗಡೆ ಮಾಡಿದ್ದೇವೆ. ನಟಿ ಪವಿತ್ರಾ ಲೋಕೇಶ್‌, ರವಿಶಂಕರ್‌ ಹಾಗೂ ನಾನು ಕಾಣಿಸಿಕೊಳ್ಳುವ ತಾಯಿ ಸೆಂಟಿಮೆಂಟ್‌ ಈ ಹಾಡಿನ ಪಿಲ್ಲರ್‌. ಈ ಹಾಡು ನೋಡಿದರೆ ಸಿನಿಮಾ ಬೇರೆ ಲೆವೆಲ್ಲಿಗೆ ಇದೆ ಎನಿಸುತ್ತದೆ. ಹೀಗೆ ಮನಸ್ಸಿಗೆ ತುಂಬಾ ಹತ್ತಿರುವಾಗುವ ಸರ್ಪೆ್ರೖಸ್‌ ಅಂಶಗಳು ಚಿತ್ರದಲ್ಲಿವೆ. ಹೀಗಾಗಿ ಎಲ್ಲಾ ರೀತಿಯ ಪ್ರೇಕ್ಷಕರನ್ನು ಮುಟ್ಟುವ ಸಿನಿಮಾ. ನಾನು ಯಾಕೆ ಹೈಸ್ಕೂಲ್‌ ಹುಡುಗನಂತೆ ಬದಲಾದೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಿಯೇ ತಿಳಿಯಬೇಕು.

ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ನಿಮ್ಮ ಚಿತ್ರದ ನಾಯಕಿನೇ ಕಾಣುತ್ತಿಲ್ಲವಲ್ಲ?

ಪಾಪ ತುಂಬಾ ಬ್ಯುಸಿ ಇರಬೇಕು. ಹೀಗಾಗಿ ಬರಲಿಕ್ಕೆ ಆಗಲಿಲ್ಲ ಅನಿಸುತ್ತದೆ. ನಾನು ಇದನ್ನ ವ್ಯಂಗ್ಯವಾಗಿ ಹೇಳುತ್ತಿಲ್ಲ. ನಿಜವಾಗಲೂ ಬ್ಯುಸಿ ಇರಬೇಕೇನೋ ನನಗೆ ಗೊತ್ತಿಲ್ಲ. ಯಾಕೆ ಬರಲಿಲ್ಲ ಎಂಬುದನ್ನು ನಿರ್ದೇಶಕರನ್ನು ಕೇಳಿದರೆ ಗೊತ್ತಾಗುತ್ತದೆ. ನೋಡೋಣ ಬರ್ತಾರೆ ಅಂತಿದ್ದಾರೆ.

ಈ ಸಿನಿಮಾ ಇಷ್ಟುಅದ್ದೂರಿಯಾಗಿ ಬರಲು ಮುಖ್ಯ ಕಾರಣಕರ್ತರು ಯಾರು?

ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರ ಶ್ರಮವೂ ಇದೆ. ನಿರ್ದೇಶಕ ನಂದಕಿಶೋರ್‌, ನಾವು ಕೇಳಿದ್ದೆಲ್ಲ ಕೊಟ್ಟನಿರ್ಮಾಪಕರು, ಸಂಭಾಷಣೆ ಬರೆದ ಪ್ರಶಾಂತ್‌ ರಾಜಪ್ಪ, ಮೂವರು ಛಾಯಾಗ್ರಾಹಕರು ಹೀಗೆ ಎಲ್ಲರೂ ಸೇರಿ ಕೆಲಸ ಮಾಡಿದ್ದರಿಂದಲೇ ಇಷ್ಟುವರ್ಷ ಆದರೂ ‘ಪೊಗರು’ ಕ್ರೇಜು ದಿನೇ ದಿನೇ ಹೆಚ್ಚಾಗುತ್ತಿದೆ.

ನೀವು ಯಾಕೆ ಒಂದು ಚಿತ್ರ ಮಾಡಲು ಎರಡ್ಮೂರು ವರ್ಷ ಸಮಯ ತೆಗೆದುಕೊಳ್ಳುತ್ತೀರಿ?

ಕೆಲವು ಚಿತ್ರಗಳು, ಕತೆ ಮತ್ತು ಅದರ ಪಾತ್ರಗಳು ಎರಡು, ಮೂರು ವರ್ಷ ಸಮಯ ಕೇಳುತ್ತದೆ. ನಾನು ಸುಮ್ಮನೆ ಬ್ಲೈಂಡ್‌ ಆಗಿ ಪಾತ್ರಗಳನ್ನು ಮಾಡಲ್ಲ. ಪೂರ್ವ ತಯಾರಿ ಮಾಡಿಕೊಂಡೇ ಸೆಟ್‌ಗೆ ಹೋಗುತ್ತೇನೆ. ಸಿನಿಮಾಗಿಂತ ಯಾರೂ ದೊಡ್ಡವರಲ್ಲ. ಸಿನಿಮಾಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ.

ಸಿನಿಮಾಗಾಗಿ ನೀವು ಮಾಡುವ ಸಾಹಸಗಳು ಬೇರೆಯವರಿಗಿಂತ ನಾವೇನು ಕಡಿಮೆ ಇಲ್ಲ ಅಂತ ತೋರಿಸಿಲಿಕ್ಕಾ?

ನಾನು ನನ್ನ ಯಾರಿಗೂ ಕಂಪೇರ್‌ ಮಾಡಿಕೊಳ್ಳುವುದಿಲ್ಲ. ಹಾಗೆ ಕಂಪೇರ್‌ ಮಾಡಿಕೊಂಡು ಪಾತ್ರಕ್ಕೆ ತಯಾರಿ ಮಾಡಿಕೊಳ್ಳುವುದಿಲ್ಲ. ನಾನು ಇಲ್ಲಿ ಕೂಡ ಒಬ್ಬ ಸ್ಪರ್ಧಿ ಎಂದೇ ಯೋಚನೆ ಮಾಡುತ್ತೇನೆ. ಸ್ಪರ್ಧೆಗೆ ಇಳಿದ ಮೇಲೆ ದೇಹದ ತೂಕ ಇಳಿಸಿಕೊಳ್ಳುತ್ತೇನೆ. ಮತ್ತೆ ದಪ್ಪ ಆಗುತ್ತೇನೆ.

'ಪೊಗರು' ಅಣ್ಣನಿಗೆ ಸಿನಿಮಾ ಅರ್ಪಣೆ ಮಾಡಿ ವೇದಿಕೆಯಲ್ಲೇ ಧ್ರುವ ಹೇಳಿದ ಮಾತು 

ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವ ಅಭಿಮಾನಿಗಳಿಗೆ ಏನು ಹೇಳುತ್ತೀರಿ?

ವರ್ಷ ಎರಡು ಸಿನಿಮಾ ಮಾಡಿ ಎನ್ನುವುದರ ಜತೆಗೆ ಯಾರೂ ಮಾಡದೆ ಇರುವ ಪಾತ್ರ ಮಾಡಿ ಅಂತಾರೆ. ಅವರ ಆ ಎರಡನೇ ಮಾತಿಗಾಗಿಯೇ ಇಷ್ಟೆಲ್ಲ ಶ್ರಮ ಹಾಕುತ್ತೇನೆ. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ. ನನ್ನ ಹೆಸರಿನಲ್ಲಿ ವರ್ಷಕ್ಕೆ ಒಂದಿಷ್ಟುಸಿನಿಮಾಗಳು ಇರುವುದಕ್ಕಿಂತ ಎರಡು, ಮೂರು ವರ್ಷಕ್ಕೊಂದು ಸಿನಿಮಾ ಇದ್ದರೂ ಪರ್ವಾಗಿಲ್ಲ. ಅದು ಕ್ವಾಲಿಟಿಯಿಂದ ಕೂಡಿರಬೇಕು. ಅರ್ಥಾತ್‌ ಗುಣಮಟ್ಟಕ್ಕೆ ಮಹತ್ವ ಕೊಡುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಫೌಂಡೇಷನ್‌ ಮುಖ್ಯ. ಅದಿಲ್ಲ ಎಂದರೆ ಏನೂ ಪ್ರಯೋಜನವಿಲ್ಲ. ಧ್ರುವ ಸರ್ಜಾ ಎಂದಾಗ ನನ್ನ ಸಿನಿಮಾಗಳು ನೆನಪಾಗಬೇಕು. ಅಂಥ ಸಿನಿಮಾಗಳನ್ನು ಮಾಡಲಿಕ್ಕೆ ಎಷ್ಟುಸಮಯ ಬೇಕಾದರೂ ಕೊಡಬಲ್ಲೆ.

ಕನ್ನಡಕ್ಕೇ ಸೀಮಿತವಾಗಿದ್ದ ಪೊಗರು ತೆಲುಗು, ತಮಿಳಿಗೆ ತೆಗೆದುಕೊಂಡು ಹೋಗಬೇಕು ಅನಿಸುದ್ದು ಯಾಕೆ?

ಅದಕ್ಕೆ ಮುಖ್ಯ ಕಾರಣ ಕತೆ. ಜತೆಗೆ ನಮ್ಮ ಚಿತ್ರದ ಹಾಡು ಹಿಟ್‌ ಆಗಿದ್ದು. ಸಿನಿಮಾ ಎಂದಾಗ ಕೆಲವು ಅಂಶಗಳು ಯೂನಿವರ್ಸಲ್‌. ಅಳು, ನಗು, ಪ್ರೀತಿ, ಭಾವನೆಗಳು ಇವು ಎಲ್ಲ ಕಡೆಯೂ ಇದೆ. ಇದಕ್ಕೆ ತಕ್ಕಂತಹ ಕತೆ ಕೂರಿಸಬೇಕು. ಅದು ಎಲ್ಲ ಭಾಷೆಗಳಿಗೂ ತಲುಪುತ್ತದೆ. ನಮ್ಮ ಚಿತ್ರದಲ್ಲಿ ಅಂಥ ಕತೆ ಅದೆ ಅನಿಸಿ ಬೇರೆ ಭಾಷೆಯಲ್ಲೂ ಬಿಡುಗಡೆ ಮಾಡುತ್ತಿದ್ದೇವೆ.

ಪ್ಯಾನ್‌ ಇಂಡಿಯಾ ಕ್ರೇಜಿನ ಭಾಗವಾಗಿ ಬೇರೆ ಭಾಷೆಗೆ ಹೋಗುತ್ತಿದ್ದೀರಾ?

ಸಿನಿಮಾ ದಿನೇ ದಿನೇ ಬದಲಾಗುತ್ತದೆ. ಸಿನಿಮಾಗೆ ಭಾಷೆಯ ಗಡಿ ಇಲ್ಲ. ಯಾರೂ ಬೇಲಿ ಹಾಕಿಕೊಂಡಿಲ್ಲ. ಪ್ಯಾನ್‌ ಇಂಡಿಯಾ ಮಾರುಕಟ್ಟೆಈಗ ದೊಡ್ಡದಾಗಿ ಸದ್ದು ಮಾಡುತ್ತಿದೆ. ಆದರೆ, ಸಿನಿಮಾ ಯಾವತ್ತಿಗೂ ಎಲ್ಲರಿಗೂ ತಲುಪುವ ಮಾಧ್ಯಮ. ಈ ಹಿಂದೆಯೂ ನಮ್ಮ ಭಾಷೆಯ ಸಿನಿಮಾಗಳು ಬೇರೆ ಬೇರೆ ಕಡೆ ಹೋಗಿವೆ. ತೆಲುಗು, ತಮಿಳಿನಲ್ಲಿ ನನ್ನ ನಿರೀಕ್ಷೆಗೂ ಮೀರಿ ಒಳ್ಳೆಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ತೆಲುಗಿನಲ್ಲಿ ಕನ್ನಡದ ಕರಾಬು ಹಾಡೇ ಓಡುತ್ತಿದೆ.

ಸದ್ಯ ನೀವು ಒಪ್ಪಿರುವ ಚಿತ್ರಗಳು ಯಾವುವು?

ಎರಡು ಚಿತ್ರಗಳಿವೆ. ನಂದ ಕಿಶೋರ್‌ ನಿರ್ದೇಶನದ ‘ದುಬಾರಿ’ ಹಾಗೂ ರಾಘವೇಂದ್ರ ಹೆಗಡೆ ನಿರ್ದೇಶನದ ಸಿನಿಮಾ. ಎರಡೂ ಚಿತ್ರಗಳ ಕತೆ ತುಂಬಾ ಚೆನ್ನಾಗಿದೆ. ಇಲ್ಲಿಂದ ನಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದಷ್ಟುಬೇಗ ಸಿನಿಮಾಗಳನ್ನು ಮಾಡುತ್ತೇನೆ.

click me!