Premam Poojyam 2: ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಚಿತ್ರಕ್ಕೆ ಚಾಲನೆ

By Suvarna News  |  First Published Dec 21, 2021, 11:48 PM IST

'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಸಿನಿಮಾ ಬಿಡುಗಡೆಯಾಗಿ 50ನೇ ದಿನದ ಸನಿಹದಲ್ಲಿರುವ ಸಂದರ್ಭದಲ್ಲೇ, ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಎರಡನೇ ಭಾಗದ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದಾರೆ.


'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ 25ನೇ ಸಿನಿಮಾ  'ಪ್ರೇಮಂ ಪೂಜ್ಯಂ' (Premam Poojyam) ಬಿಡುಗಡೆಯಾಗಿ 50ನೇ ದಿನದ ಸನಿಹದಲ್ಲಿರುವ ಸಂದರ್ಭದಲ್ಲೇ ತಮಿಳು, ತೆಲುಗು ನಿರ್ಮಾಪಕರಿಂದ ರಿಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯ ಯಾವುದನ್ನೂ ಒಪ್ಪಿಕೊಳ್ಳದೆ ಚಿತ್ರವು ನೂರು ದಿನಗಳ ಪ್ರದರ್ಶನವಾದ ನಂತರ ಬೇರೆ ಭಾಷೆಗೆ ಕೊಡಬೇಕೆಂಬ ನಿರ್ಧಾರ ತಳೆದಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನವಿರಾದ ಪ್ರೇಮ ಕಥೆ ಹೈಲೈಟ್​ ಆಗಿತ್ತು. 

ಇದೀಗ ಚಿತ್ರದ ನಿರ್ದೇಶಕ ಡಾ. ರಾಘವೇಂದ್ರ ಬಿ.ಎಸ್ (Dr.Raghavendra BS) ಎರಡನೇ ಭಾಗದ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದು, ಪ್ರೇಮ್​ ಅವರ 26ನೇ ಚಿತ್ರವಾಗಿ 'ಪ್ರೇಮಂ ಪೂಜ್ಯಂ 2' ಬರಲಿದೆ. ಈಗಾಗಲೇ ನಿರ್ದೇಶಕ ಡಾ. ರಾಘವೇಂದ್ರ ಅವರು ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದು 'ಪ್ರೇಮಂ ಪೂಜ್ಯಂ' ಸೀಕ್ವೆಲ್​ಗೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

Tap to resize

Latest Videos

ಏಳು ಶೇಡ್‌ಗಳಲ್ಲಿ ಪ್ರೇಮದ ರೋಮಾಂಚನ : ಪ್ರೇಮ್‌

'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರವನ್ನು ಒಪ್ಪಿಕೊಂಡಿದ್ದರು. ಇದರಲ್ಲಿ ಪ್ರೇಮ್ ಅವರು ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ನಾಯಕಿ ಬೃಂದಾ ಆಚಾರ್ಯ (Brunda Acharya), ಪ್ರೇಮ್‌ ಗೆಳೆಯರಾಗಿ ಕಾಣಿಸಿಕೊಂಡಿದ್ದ ಮಾಸ್ಟರ್‌ ಆನಂದ್‌ (Master Anand) ಹಾಗೂ ಸಾಧುಕೋಕಿಲ (Sadhu Kokila) ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ.



ಈ ಚಿತ್ರದಲ್ಲಿ ಪ್ರೇಮ್ ಜೊತೆ,  ಐಂದ್ರಿತಾ ರೇ (Aindrita Ray), ಸುಮನ್ (Suman), ಅನು ಪ್ರಭಾಕರ್ (Anu Prabhakar), ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದಾರೆ. ಈ  ಚಿತ್ರದ ಮತ್ತೊಂದು ವಿಶೇಷ ಪ್ರೇಮ್ ಹಾಗೂ  ಐಂದ್ರಿತಾ ರೇ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಐಂದ್ರಿತಾ ರೈ ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ. ಅಲ್ಲದೇ ಮುಖ್ಯವಾಗಿ ತಾಯಿಯಾದ ಬಳಿಕ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದ, ನಟಿ ಅನುಪ್ರಭಾಕರ್ ಕೂಡಾ ಈ ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. 

ಸಿನಿರಸಿಕರಿಂದ 'ಪ್ರೇಮಂ ಪೂಜ್ಯಂ' ದೃಶ್ಯ ಕಾವ್ಯ ಟ್ರೇಲರ್‌ಗೆ ಮೆಚ್ಚುಗೆ

ಈ ಸಿನಿಮಾ ಒಂದು ದೃಶ್ಯ ವೈಭವದಂತಿದೆ. ನಿಜವಾದ ಪ್ರೀತಿ ಬಗ್ಗೆ ಒಂದೊಳ್ಳೆಯ ಮೆಸೇಜ್​ ಈ ಸಿನಿಮಾದಲ್ಲಿದೆ. ಹಾಗೂ ಪ್ರೇಮ್​ ಹೀರೋ ಎಂದುಕೊಂಡು ಈ ಸಿನಿಮಾ ನೋಡಲು ಬಂದೆ. ಆದರೆ ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಯಿತು ಇದು ಮಲ್ಟಿಸ್ಟಾರರ್​ ಚಿತ್ರ ಎಂದು ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು 'ಪ್ರೇಮಂ ಪೂಜ್ಯಂ' ಚಿತ್ರವನ್ನು ವೀಕ್ಷಿಸಿ ಪ್ರೇಮ್​ ಮತ್ತು ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದರು. ನಟ ಶರಣ್​, ದಿಯಾ ಖ್ಯಾತಿಯ ಖುಷಿ ರವಿ, ತರುಣ್​ ಸುಧೀರ್, ಕಾರುಣ್ಯ ರಾಮ್, ನಿರ್ದೇಶಕ ಮಹೇಶ್, ಚಂದನ್ ಆಚಾರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ವೀಕ್ಷಿಸಿ, ಇಷ್ಟಪಟ್ಟಿದ್ದರು.

click me!