
ಯೋಗರಾಜ ಭಟ್ ನಿರ್ದೇಶನದ ಹೊಸ ಸಿನಿಮಾ ‘ಗರಡಿ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಸ್ತುತ ಬೆಂಗಳೂರು ಸಮೀಪ ಚಿಕ್ಕಜಾಲದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಸ್ತಿ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಬಿರು ಬಿಸಿಲಿನಲ್ಲಿ ನಾಯಕ ಮತ್ತು ವಿಲನ್ ಮಧ್ಯ ಕುಸ್ತಿ ಹೋರಾಟವನ್ನು ಬಿ.ಸಿ. ಪಾಟೀಲ್, ರವಿಶಂಕರ್ ವೀಕ್ಷಿಸುತ್ತಿರುವ ದೃಶ್ಯವನ್ನು ಭಟ್ರು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.
ಬ್ರೇಕ್‌ನ ಮಧ್ಯೆ ಚಿತ್ರತಂಡ ಮಾತಿಗೆ ಕುಳಿತಿತು. ಮಾತು ಶುರು ಮಾಡಿದ ಭಟ್ಟರು, ‘ಇದೊಂದು ಬಡವನ ಕತೆ. ಅತಿ ಸಾಮಾನ್ಯನ ಕತೆ. ಗರಡಿಯಲ್ಲಿ ಅಡುಗೆ ಮಾಡಿಕೊಂಡಿದ್ದ ಹುಡುಗನ ಕತೆ. ನನಗೆ ಏಕಲವ್ಯನ ಪಾತ್ರ ತುಂಬಾ ಇಷ್ಟ. ಎಲ್ಲೋ ಸೈಡಲ್ಲಿ ನಿಂತುಕೊಂಡು ಯಾರಿಗೂ ಹೇಳದೆ ತನಗೆ ಬೇಕಾದ್ದು ಕಲಿಯುವ ಏಕಲವ್ಯನಂತಹ ಪಾತ್ರದ ಕತೆ. ಆ ಹುಡುಗನನ್ನು ಗರಡಿಯಿಂದ ಆಚೆ ಹಾಕಿದ ಮೇಲೆ ಏನಾಗುತ್ತದೆ ಅನ್ನುವ ಕತೆ ಬರೆದಿದ್ದೇನೆ. ನಾನು ಖುಷಿ ಖುಷಿಯಾಗಿ ಬರೆದುಕೊಂಡ ಕೆಲವು ಸಿನಿಮಾಗಳಲ್ಲಿ ಇದೂ ಒಂದು. ಬಹಳ ಹಿಂದೆ ಗರಡಿ ಊರ ಕಾಯುವ ಸ್ಥಳವಾಗಿತ್ತು. ಈಗ ಗರಡಿ ಕಾಣೆಯಾಗಿದೆ. ಆ ಒಂದು ಗರಡಿಯ ಕುಸ್ತಿ ಪರಂಪರೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ’ ಎಂದರು.
ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗಗಳಲ್ಲಿ ಕುಸ್ತಿ ಬಹಳ ಪ್ರಸಿದ್ಧವಾಗಿದ್ದು, ನಾನು ಮತ್ತು ಚಿತ್ರದ ನಿರ್ದೇಶಕರಾದ ಯೋಗರಾಜ ಭಟ್‌ರು ಉತ್ತರ ಕರ್ನಾಟಕದವರಾಗಿದ್ದರಿಂದ ಬಾದಾಮಿಯ ಐತಿಹಾಸಿಕ ಸ್ಥಳದಲ್ಲಿ ಚಿತ್ರೀಕರಣ ನಡೆಸಲು ಆಸಕ್ತಿ ತೋರಿದ್ದೇವೆ.
-ಬಿ.ಸಿ.ಪಾಟೀಲ, ಕೃಷಿ ಸಚಿವ
ನಿರ್ಮಾಣದ ಜೊತೆಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು, ‘ಕುಸ್ತಿ ಪರಂಪರೆ ದೊಡ್ಡದು. ನಾನು ಇಲ್ಲಿ ಕುಸ್ತಿ ಗುರು ಪಾತ್ರ ಮಾಡುತ್ತಿದ್ದೇನೆ. ಆ ಪಾತ್ರ ನನಗೆ ನಾಗರಹಾವು ಚಿತ್ರದ ಎಂ.ಪಿ. ಶಂಕರ್ ಅವರನ್ನು ನೆನಪಿಸಿತು. ಕೌರವ ಪ್ರೊಡಕ್ಷನ್ ಹೌಸ್‌ನ 16ನೇ ಸಿನಿಮಾ ಇದು. ಕತೆ ಸರಳವಾಗಿದೆ ಅನ್ನಿಸಿದರೂ ಈಗ ಸಿನಿಮಾ ದೊಡ್ಡದಾಗಿದೆ. ಮುಂದೆಯೂ ನಮ್ಮ ಸಂಸ್ಥೆಯಲ್ಲಿ ಒಳ್ಳೆಯ ಕತೆ ಸಿಕ್ಕರೆ ಸಿನಿಮಾ ಮಾಡುತ್ತೇವೆ. ನಮ್ಮ ಬ್ಯಾನರ್ ಸಿನಿಮಾದಲ್ಲಿ ಮಾತ್ರ ನಾನು ನಟಿಸುತ್ತೇನೆ’ ಎಂದರು.
ಬಿ.ಸಿ. ಪಾಟೀಲ್ ಅವರ ಅಳಿಯ ಸುಜಯ್ ಬೇಲೂರು ಇದರಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವಕಾಶ ಕೊಟ್ಟಿದ್ದಕ್ಕೆ ಎಲ್ಲರಿಗೂ ಥ್ಯಾಂಕ್ಸ್ ಎಂದರು. ಪಾಟೀಲರ ಪುತ್ರಿ ಸೃಷ್ಟಿಪಾಟೀಲ್ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯ ಹೊಣೆ ಹೊತ್ತಿದ್ದಾರೆ. ‘ನಮ್ಮ ತಂದೆಯೇ ನನ್ನ ಮಾರ್ಗದರ್ಶಕರು. ಅವರಿಂದಲೇ ನನ್ನ ಕೆಲಸ ಸುಲಭವಾಗಿದೆ’ ಎಂದರು.
ಚಿತ್ರದ ನಾಯಕ ಸೂರಿ ಅವರು ಭಟ್ಟರ ಜೊತೆ ಕೆಲಸ ಮಾಡುವ ಆಸೆ ನನಸಾದ ಖುಷಿ ವ್ಯಕ್ತಪಡಿಸಿದರು. ಚಿತ್ರದ ನಾಯಕಿ ಸೋನಲ್ ಮೊಂತೆರೋ, ಖಳನಾಯಕ ರವಿಶಂಕರ್, ರಾಘವೇಂದ್ರ, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಶಾಮನೂರು, ಇಮ್ರಾನ್, ನಿರಂಜನ್, ಕುಸ್ತಿ ಗುರು ದೇಸಿ ಗೌಡರು, ನಯನ, ತ್ರಿವೇಣಿ ರಾವ್, ಹೊಸ್ಮನೆ ಮೂರ್ತಿ ಮತ್ತು ಇಡೀ ಚಿತ್ರತಂಡ ಹಾಜರಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.