
'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ (Anup Bhandari) ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಬಿಗ್‌ಬಜೆಟ್ 'ವಿಕ್ರಾಂತ್ ರೋಣ' (Vikranth Rona) ಚಿತ್ರದ ಟೀಸರ್, ಪೋಸ್ಟರ್ ಲುಕ್‌ಗಳು ಹಾಗೂ ಡೆಡ್ ಮ್ಯಾನ್ ಆಂಥೆಮ್ ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಇದೀಗ 'ವಿಕ್ರಾಂತ್ ರೋಣ' ಚಿತ್ರವು ಅದ್ಧೂರಿಯಾಗಿ ತೆರೆಯ ಮೇಲೆ ಬರಲು ಸಜ್ಜಾಗಿದ್ದು, ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡ ಮಾಹಿತಿಯನ್ನು ಹಂಚಿಕೊಂಡಿದೆ. ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಟ್ವೀಟರ್‌ನಲ್ಲಿ (Twitter) ಡಿಸೆಂಬರ್ 7ರಂದು ಬೆಳಗ್ಗೆ 11.05ಕ್ಕೆ ಚಿತ್ರದ ಬಿಡುಗಡೆ ಬಗ್ಗೆ ಘೋಷಿಸಲಿದ್ದೇವೆ ಎಂದು ಚಿತ್ರದ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.
'ವಿಕ್ರಾಂತ್ ರೋಣ' ಚಿತ್ರವು '3ಡಿ'ಯಲ್ಲಿ ತೆರೆಕಾಣಲಿದ್ದು, ನಿರೂಪ್ ಭಂಡಾರಿ (Nirup Bhandari) ಹಾಗೂ ನೀತಾ ಅಶೋಕ್ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸ್ವತಃ ಸುದೀಪ್ ಅವರೇ ಡಬ್ಬಿಂಗ್ ಮಾಡಿದ್ದಾರೆ. ಈ ಹಿಂದೆ ಆಗಸ್ಟ್ 19ರಂದೇ ತೆರೆಯ ಮೇಲೆ ಬರಬೇಕಿದ್ದ ಈ ಚಿತ್ರ, ಕೊರೊನಾ ಲಾಕ್‌ಡೌನ್ (Corona Lockdown) ಕಾರಣದಿಂದ ಮುಂದೂಡಲ್ಪಟ್ಟಿತ್ತು. ವಿಶೇಷವಾಗಿ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ (Burj Khalifa) ಮೇಲೆ 'ವಿಕ್ರಾಂತ್ ರೋಣ' ಚಿತ್ರದ ಟೀಸರ್ (Teaser) ಬಿಡುಗಡೆಯಾಗಿ ಇಡೀ ವಿಶ್ವದ ಗಮನಸೆಳೆದಿತ್ತು.
ಡಿಸೆಂಬರ್‌ನಲ್ಲಿ 10 ದಿನ ಮೊದಲು ರಿಲೀಸ್ ಡೇಟ್ ಘೋಷಣೆ: ಜಾಕ್ ಮಂಜು
ಜಾಕ್ ಮಂಜು (Jack Manju) ನಿರ್ಮಾಣದ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) 'ಗಡಂಗ್ ರಕ್ಕಮ್ಮ' ಪಾತ್ರದಲ್ಲಿ ಕಿಚ್ಚನ ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಲವ್ ಮಾಕ್ಟೇಲ್ (Love Mocktail) ಖ್ಯಾತಿಯ ನಟಿ ಮಿಲನಾ ನಾಗರಾಜ್ (Milana Nagaraj) ಅವರು ಚಿತ್ರದ ಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಸಿನಿಮಾದಲ್ಲಿ ಪ್ರತಿ ಪಾತ್ರಧಾರಿಗೂ ಎಂದೂ ಕಲ್ಪನೆ ಮಾಡಿಕೊಳ್ಳಲಾಗದಂತೆ ಹೆಸರುಗಳನ್ನು ಇಡಲಾಗಿದೆ. ಚಿತ್ರದ ಸಣ್ಣ ಪುಟ್ಟ ವಿಚಾರಗಳ ಬಗ್ಗೆಯೂ ಚಿತ್ರತಂಡ ಹೆಚ್ಚಿನ ಗಮನ ಹರಿಸಿದೆ.
ಇಡೀ ಭಾರತೀಯ ಸಿನಿ ರಸಿಕರು 'ವಿಕ್ರಾಂತ್ ರೋಣ' ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದ್ದು, 10 ದಿನ ಮೊದಲೇ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೀವಿ ಹಾಗೂ 'ಓಟಿಟಿ (OTT)ಗಳಿಂದ ಸಾಕಷ್ಟು ಆಫರ್‌ಗಳು ಬರುತ್ತಿದ್ದರೂ ನಾವು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ಸಿನಿರಸಿಕರ ಪ್ರತಿಕ್ರಿಯೆ ಪಡೆದ ಬಳಿಕ ನೋಡಿಕೊಂಡು, ಓಟಿಟಿ ಆಯ್ಕೆ ಮಾಡಿಕೊಳ್ಳುವುದು ಎಂದು ಜ್ಯಾಕ್ ಮಂಜು ಈ ಹಿಂದೆ ತಿಳಿಸಿದ್ದಾರೆ. ಗಣೇಶ ಹಬ್ಬದ ದಿನ ಚಿತ್ರದ 'ಡೆಡ್ ಮ್ಯಾನ್ ಆಂಥೆಮ್' ವಿಡಿಯೋ ಬಿಡುಗಡೆ ಮಾಡಲಾಗಿತ್ತು.ಈ ವಿಡಿಯೋಗೆ ಕೇರಳದ ಪ್ರತಿಭಾವಂತ ಹಿನ್ನಲೆ ಗಾಯಕ ನಿರಂಜ್ ಧ್ವನಿ ನೀಡಿದ್ದರು. ಜೊತೆಗೆ ಬೇಬಿ ಆರಾಧ್ಯಾ ಪುಟ್ಟ ಮಗುವಿನ ದನಿ ಕೊಟ್ಟಿದ್ದಾರೆ.
'ವಿಕ್ರಾಂತ್ ರೋಣ' ಚಿತ್ರದಲ್ಲಿ ಮಿಲನಾ ನಾಗರಾಜ್!
ಇನ್ನು 'ವಿಕ್ರಾಂತ್ ರೋಣ' ಚಿತ್ರಕ್ಕೆ ಅನೂಪ್ ಭಂಡಾರಿ ಕಥೆ, ಸಂಭಾಷಣೆ ಬರೆದಿದ್ದು, ವಿಲಿಯಮ್ ಡೇವಿಡ್ (William David) ಕ್ಯಾಮರಾ ಕೈಚಳಕವಿದೆ. ಎ.ವಿಜಯ್ ಸಾಹಸ ನಿರ್ದೇಶನ, ಜಾನಿ ಮಾಸ್ಟರ್ ಕೊರಿಯೋಗ್ರಫಿ ಹಾಗೂ ಅಜನೀಶ್ ಲೋಕನಾಥ್ (Ajaneesh Loknath) ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮುಖ್ಯವಾಗಿ ಹಿಂದಿ ಹಾಗೂ ಇತರೆ ಭಾಷೆಯ ಪ್ರಮೋಷನ್ಸ್ ಸೇರಿ ಚಿತ್ರದ ಬಜೆಟ್ 100 ಕೋಟಿ ದಾಟಿದೆ ಎಂದು ಇತ್ತೀಚೆಗೆ ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.