ಬಾನದಾರಿಯಲ್ಲಿ ಜಾರಿ ಹೋದ ಕರುನಾಡ ಯುವರಾಜಕುಮಾರ

By Kannadaprabha News  |  First Published Oct 30, 2021, 9:08 AM IST
  • ‘ಇವನನ್ನು ನನ್ನ ಮಗ ಅಂತ ನೋಡಬೇಡಿ. ನಿಮ್ಮ ಮನೆಮಗ ಎಂದುಕೊಳ್ಳಿ ಎಂದಿದ್ದ ಡಾ. ರಾಜ್
  • ಅವನಿಗೆ ಪ್ರತಿಭೆ ಇದ್ದರೆ ಬೆಳೆಸಿ. ನಾವೆಲ್ಲ ಹಾಗೇ ಬೆಳೆದವರು. ನನ್ನ ಹೆಸರಿನ ಹೊರೆ ಅವನ ಹೆಗಲೇರುವುದು ಬೇಡ ಎಂದು ಮಗನ ಬಗ್ಗೆ ಮಾತಾಡಿದ್ದರು

ಜೋಗಿ

ಪುನೀತ್‌ (Puneeth Rajkumar) ಅಭಿನಯದ ಮೊದಲ ಚಿತ್ರ ‘ಅಪ್ಪು’ ಚಿತ್ರದ ಮುಹೂರ್ತದಲ್ಲಿ ಪತ್ರಕರ್ತರ ಜತೆಗೆ ಮಾತಾಡುತ್ತಾ ಡಾ. ರಾಜ್‌ಕುಮಾರ್‌ (Dr Rajkumar) ಒಂದು ಮಾತು ಹೇಳಿದ್ದರು: ‘ಇವನನ್ನು ನನ್ನ ಮಗ ಅಂತ ನೋಡಬೇಡಿ. ನಿಮ್ಮ ಮನೆಮಗ ಎಂದುಕೊಳ್ಳಿ. ಅವನಿಗೆ ಪ್ರತಿಭೆ ಇದ್ದರೆ ಬೆಳೆಸಿ. ನಾವೆಲ್ಲ ಹಾಗೇ ಬೆಳೆದವರು. ನನ್ನ ಹೆಸರಿನ ಹೊರೆ ಅವನ ಹೆಗಲೇರುವುದು ಬೇಡ.’ ಅದರೊಟ್ಟಿಗೇ ಮತ್ತೊಂದು ಮಾತನ್ನೂ ಅವರು ಸೇರಿಸಿದ್ದರು: ‘ನಾನು ಇಷ್ಟೊಂದು ಸಿನಿಮಾಗಳಲ್ಲಿ (Movies) ನಟಿಸಿದ್ದರೂ ನನಗೆ ಶ್ರೇಷ್ಠ ನಟ ಪ್ರಶಸ್ತಿ ಸಿಗಲಿಲ್ಲ. ಪುನೀತ್‌ ನಟಿಸಿದ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ನಾನು ಇಷ್ಟು ವರ್ಷ ಮಾಡಲಿಕ್ಕೆ ಆಗದ್ದನ್ನು ಅವನು ಸಣ್ಣ ವಯಸ್ಸಿಗೇ ಮಾಡಿಬಿಟ್ಟ.’

Tap to resize

Latest Videos

undefined

"

ರಾಜ್‌ಕುಮಾರ್‌ ಮಾತನ್ನು ಪುನೀತ್‌ ಅಕ್ಷರಶಃ ನಡೆಸಿಕೊಟ್ಟರು. ಯಾವತ್ತೂ ಅವರು ರಾಜ್‌ ಕುಟುಂಬದ (Raj Family) ಕರುಣೆಯನ್ನಾಗಲೀ, ಆಸರೆಯನ್ನಾಗಲೀ ಬಯಸಲೇ ಇಲ್ಲ. ತನ್ನ ನಟನಾ ಕೌಶಲದಿಂದಲೇ ಬೆಳೆದರು. ಅಭಿನಯದಲ್ಲೂ ಅವರು ತನ್ನ ತಂದೆಯನ್ನಾಗಲೀ, ಸೋದರರನ್ನಾಗಲೀ ಅನುಕರಿಸಲಿಲ್ಲ. ಅಪ್ಪಾಜಿಯನ್ನು ಪುನೀತ್‌ ಅನುಕರಿಸಿದ್ದು ಒಂದೇ ವಿಚಾರದಲ್ಲಿ; ವಿನಯದಲ್ಲಿ. ಕೊನೆಯವರೆಗೂ ಯಾರೇ ಬಂದರೂ ಪುನೀತ್‌ ಎದ್ದು ನಿಂತು ಸ್ವಾಗತಿಸುತ್ತಿದ್ದರು. ದೊಡ್ಡವರ ಮುಂದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಿರಲಿಲ್ಲ. ಮತ್ತೊಬ್ಬರ ಕುರಿತು ಹಿಂದಿನಿಂದ ಒಂದು ಮಾತನ್ನೂ ಆಡುತ್ತಿರಲಿಲ್ಲ. ತನಗೆ ಇಷ್ಟವಿಲ್ಲದ್ದನ್ನು ಯಾರು ಹೇಳಿದರೂ ಮಾಡುತ್ತಿರಲಿಲ್ಲ.

ಡಾ.ರಾಜ್‌, 3 ಮಕ್ಕಳಿಗೂ ಹೃದಯ ಸಮಸ್ಯೆ!

ಪುನೀತ್‌ ನಟಿಸಿರುವ ಚಿತ್ರಗಳ (Movies) ಪಟ್ಟಿನೋಡಿದರೆ ಅದರಲ್ಲಿ ಕೊನೆಯ ತನಕ ನೆನಪಲ್ಲಿ ಉಳಿಯುವ ಸಿನಿಮಾಗಳ ಹೆಸರು ಥಟ್ಟನೆ ಸಿಗಲಿಕ್ಕಿಲ್ಲ. ಪ್ರತಿಯೊಬ್ಬ ನಟನೂ ತನ್ನ ವೃತ್ತಿ ಜೀವನದಲ್ಲಿ ಒಂದೋ ಎರಡೋ ಅಜರಾಮರ ಸಿನಿಮಾಗಳಲ್ಲಿ ನಟಿಸಿರುತ್ತಾನೆ. ಪುನೀತ್‌ ಇನ್ನೂ ಅಂಥ ಚಿತ್ರಗಳಲ್ಲಿ ನಟಿಸಿರಲಿಲ್ಲ. ಅಂಥದ್ದೊಂದು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು. ಅದನ್ನು ಅವರು ಕನ್ನಡಪ್ರಭಕ್ಕೆ (Kannadaprabha) ನೀಡಿದ ಸಂದರ್ಶನದಲ್ಲೂ ಹೇಳಿಕೊಂಡಿದ್ದರು. ಅವರ ಮಾತುಗಳಿವು: ನಾನು ನನಗಿಷ್ಟವಾದರೆ ಒಪ್ಪಿಕೊಳ್ಳುತ್ತೇನೆ. ಜಾಸ್ತಿ ಚೌಕಾಸಿ ಮಾಡಲಿಕ್ಕೆ ಹೋಗುವುದಿಲ್ಲ. ಅದೇ ರಭಸದಲ್ಲಿ ಸುಮಾರು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಈಗ ಬೇರೆ ಥರದ ಸಿನಿಮಾಗಳು ಬರುತ್ತಿವೆ. ಕಮರ್ಷಿಯಲ್‌ ಸಿನಿಮಾಗಳಲ್ಲೇ (commercial Movies)  ಎಷ್ಟೊಂದು ವೈವಿಧ್ಯ ಇದೆ ಅಂತ ನಾವು ನೋಡುತ್ತಿದ್ದೇವೆ. ಅಂಥ ಕತೆಗಾಗಿ ನಾನೂ ಕಾಯುತ್ತಿದ್ದೇನೆ.

ಪುನೀತ್‌ ಪ್ರತಿಭೆಯನ್ನು ಪೂರ್ತಿಯಾಗಿ ಬಳಸಿಕೊಂಡ ಸಿನಿಮಾಗಳ ಪಟ್ಟಿಯಲ್ಲಿ ನಾಲ್ಕಾರನ್ನು ತಕ್ಷಣ ಹೇಳಬಹುದು; ಮಿಲನ, ರಾಜಕುಮಾರ, ಪರಮಾತ್ಮ, ಅಣ್ಣಾಬಾಂಡ್‌, ಹುಡುಗರು ಮುಂತಾದ ಸಿನಿಮಾಗಳಲ್ಲಿ ಅವರು ಪೂರ್ತಿ ಪರಕಾಯ ಪ್ರವೇಶ ಪಡೆದದ್ದನ್ನು ನೋಡಿದ್ದೇವೆ. ಮಿಕ್ಕಂತೆ ಹೊಡೆದಾಟದ ಸಿನಿಮಾಗಳಲ್ಲಿ, ಕೆಲವು ರೀಮೇಕ್‌ ಸಿನಿಮಾಗಳಲ್ಲೂ ಪುನೀತ್‌ ನಟಿಸಿದ್ದಾರೆ. ಆದರೆ ಯಾವ ಚಿತ್ರದಲ್ಲೂ ಅವರು ಅತಿಯಾಗಿ ನಟನೆ ಮಾಡಿಲ್ಲ. ತನ್ನನ್ನು ಬೇರೆ ರೀತಿ ಬಿಂಬಿಸಿಕೊಳ್ಳಲು ಹೊರಟಿಲ್ಲ. ಹಾಗೆ ನೋಡಿದರೆ ಅವರು ಜೀವನದಲ್ಲಾಗಲೀ, ತೆರೆಯ ಮೇಲಾಗಲೀ ನಟನೆ ಮಾಡಿದವರೇ ಅಲ್ಲ. ನಾನು ಇರುವುದೇ ಹೀಗೆ ಎಂಬಂತೆ ತಮ್ಮ ಚಿತ್ರಗಳಲ್ಲೂ ಇದ್ದವರು.

ಪುನೀತ್‌ ಕಳೆದ ಹತ್ತು ವರ್ಷಗಳಲ್ಲಿ ಹೊಸ ಹುಡುಕಾಟದಲ್ಲಿದ್ದರು. ಹೊಸಬರ ಸಿನಿಮಾಗಳನ್ನು ತಮ್ಮ ಬ್ಯಾನರಿನಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದರು. ಹೊಸ ಗೆಳೆಯರನ್ನು ಜತೆಗಿಟ್ಟುಕೊಂಡು ಚರ್ಚೆ ಮಾಡುತ್ತಿದ್ದರು. ಹೊಸ ತಲೆಮಾರಿನ ನಿರ್ದೇಶಕರಾದ ಪವನ್‌, ರಿಷಭ್‌ ಮುಂತಾದವರ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ವರ್ಚಸ್ಸಿಗಿಂತ ಕತೆ ಮುಖ್ಯ ಎಂಬ ತೀರ್ಮಾನಕ್ಕೂ ಬಂದಿದ್ದರು.

ಸರಳ ವ್ಯಕ್ತಿತ್ವದ ವಿನಯವಂತ ಎಂದೇ ಪುನೀತ್‌ ಕರೆಸಿಕೊಂಡವರು. ಅವರನ್ನು ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಕಂಡವರು ಮೆಚ್ಚಿಕೊಂಡು ಮಾತಾಡಿದ್ದಾರೆ. ಅಲ್ಲಿಗೆ ಬಂದವರ ಕಷ್ಟಸುಖಗಳನ್ನು ಪ್ರಾಂಜಲವಾಗಿ ವಿಚಾರಿಸುವ ಪುನೀತ್‌ ಸೌಜನ್ಯ ಅನೇಕರಿಗೆ ಅಚ್ಚರಿ ನೀಡಿದೆ. ಚಿತ್ರಮಂದಿರದಲ್ಲಿ ಅಚಾನಕ್‌ ಭೇಟಿಯಾದಾಗ, ಮದುವೆ ಕಾರ್ಯಕ್ರಮಗಳಿಗೆ ಬಂದಾಗ, ಅಭಿಮಾನಿಗಳು ಸೆಲ್ಫೀ ಕೇಳಿದಾಗ ಒಂದಿಷ್ಟೂ ಮುನಿಸಿಕೊಳ್ಳದೇ ಮಾತಾಡುವುದನ್ನು ದೊಡ್ಮನೆ ಹುಡುಗನ ಸಹಜಗುಣ ಎಂದು ಅವರನ್ನು ಭೇಟಿಯಾದವರು ಭಾವಿಸಿ ಸಂತೋಷಪಟ್ಟಿದ್ದಾರೆ.

ಪುನೀತ್‌ಗೆ ಲಿಂಗ ದೀಕ್ಷೆ ನೀಡಿದ್ದ ಹಾವೇರಿ ಸಿಂದಗಿ ಮಠದ ಶ್ರೀಗಳು

ಗಾಯಕ (Singer), ನಿರ್ಮಾಪಕ, ನಟ (Actor), ಉದ್ಯಮಿ, ಪ್ರವಾಸಿ ಎಲ್ಲವೂ ಆಗಿದ್ದ ಪುನೀತ್‌, ಸೋಲು-ಗೆಲುವುಗಳನ್ನು ಮನಸ್ಸಿಗೆ ಹಚ್ಚಿಕೊಂಡವರೇ ಅಲ್ಲ. ಸಿನಿಮಾ ಮಾಡುವುದು ಮಾತ್ರ ತನ್ನ ಕರ್ತವ್ಯ ಎಂಬಂತೆ ನಟಿಸುತ್ತಾ ಹೋದರು. ಅವರು ನಿರ್ಮಾಪಕರಿಗೆ ಹೊರೆಯಾದವರಲ್ಲ. ಬಜೆಟ್‌ ಎಷ್ಟಿರಬೇಕು ಎಂದು ಅವರೆಂದೂ ನಿರ್ಧಾರ ಮಾಡಲಿಲ್ಲ. ನಿರ್ದೇಶಕರು ಹೇಳಿದರಷ್ಟೇ ಕತೆ ಕೇಳುತ್ತಿದ್ದ ಪುನೀತ್‌, ಕತೆ ಒಪ್ಪಿಗೆಯಾದರೆ ಮತ್ತೇನಕ್ಕೂ ತಲೆ ಹಾಕಿದವರೂ ಅಲ್ಲ.

ಪುನೀತ್‌ ಚಿತ್ರಕ್ಕಿಂತ ಹೆಚ್ಚಾಗಿ ಅವರು ನೆನಪಲ್ಲಿ ಉಳಿಯುವುದು ಅವರು ಹಬ್ಬಿಸುತ್ತಿದ್ದ ಪಾಸಿಟಿವ್‌ ಅಲೆಗಾಗಿ. ಅವರು ತೋರುತ್ತಿದ್ದ ಅಕ್ಕರೆಗಾಗಿ. ಸಣ್ಣವರನ್ನೂ ದೊಡ್ಡವರಂತೆ ಕಾಣುವ ಗುಣದಿಂದಾಗಿ. ಗೆಳೆಯರೊಂದಿಗೆ ತಮಾಷೆ ಮಾಡುತ್ತಾ, ದಿನವಿಡೀ ನಗುತ್ತಾ, ಎಲ್ಲರೊಂದಿಗೆ ಕುಳಿತು ಊಟಮಾಡುತ್ತಿದ್ದ ಪುನೀತ್‌ ನಿಜವಾದ ಅರ್ಥದಲ್ಲಿ ರಾಜಕುಮಾರ.

ಚಿತ್ರರಂಗ ಕಂಡ ಎರಡು ಮಹಾನ್‌ ಆಘಾತಗಳಲ್ಲಿ ಪುನೀತ್‌ ಸಾವು ಎರಡನೆಯದು. ಮೊದಲನೆಯದು ಶಂಕರ್‌ನಾಗ್‌ ಕಣ್ಮರೆ. ಶಂಕರ್‌ನಾಗ್‌ ಮತ್ತು ಪುನೀತ್‌ಗೆ ಕೆಲವು ಹೋಲಿಕೆಗಳಿದ್ದವು. ಪುನೀತ್‌ ಕೂಡ ಅವರಂತೆಯೇ ನಾಳೆಯತ್ತ ಕಣ್ಣುನೆಟ್ಟು ಕುಳಿತಿದ್ದವರು. ನಿರ್ದೇಶನಕ್ಕೆ (Direction) ಇಳಿಯಬೇಕು ಎಂದು ಆಸೆಪಟ್ಟು ಕತೆಗಳನ್ನು ಹುಡುಕುತ್ತಿದ್ದವರು. ಚಿತ್ರಸಂಸ್ಥೆ ಹುಟ್ಟುಹಾಕಿ ಹಲವು ಹೊಸ ಪ್ರತಿಭೆಗಳಿಗೆ ಭರವಸೆಯಾದವರು. ಗೆಳೆಯರ ಗುಂಪು ಕಟ್ಟಿಕೊಂಡು ಹಗಲಿರುಳು ಸಿನಿಮಾ ಕುರಿತು ಚರ್ಚೆ ಮಾಡುತ್ತಿದ್ದವರು. ಪುರುಸೊತ್ತಿದ್ದಾಗ ಕಾಡು ಸುತ್ತುತ್ತಾ, ದೇಶವಿದೇಶ ಅಲೆಯುತ್ತಾ ಇದ್ದವರು. ಎಲ್ಲಕ್ಕಿಂತ ಹೆಚ್ಚಾಗಿ ಹೆಂಡತಿ ಮಕ್ಕಳಿಗೆ ಧಾರಾಳವಾಗಿ ಸಮಯ ಕೊಟ್ಟವರು.

ಅಭಿಮಾನಿಗಳ ಕಣ್ತಪ್ಪಿಸಲು 5 ಆ್ಯಂಬುಲೆನ್ಸ್‌ ಬಳಕೆ ಮಾಡ್ಬೇಕಾಯ್ತು

ಶಂಕರ್‌ (Shankar) ಥರವೇ ಅಕಾಲದಲ್ಲಿ ಮರೆಯಾಗಿ ಹೋದ ಪುನೀತ್‌, ತಮ್ಮ ಕನಸುಗಳನ್ನು ಅನಾಥವನ್ನಾಗಿಸಿ ಹೊರಟು ಹೋಗಿದ್ದಾರೆ. ಕುಣಿಯುತ್ತಾ, ನಲಿಯುತ್ತಾ, ನಿಷ್ಕಲ್ಮಷವಾಗಿ ನಗುತ್ತಾ, ಬೆನ್ನು ತಡವಿ ಮೆಚ್ಚುಗೆ ಸೂಚಿಸುತ್ತಾ, ತುಂಟ ಕಣ್ಣುಗಳಲ್ಲಿ ಕೀಟಲೆ ಮಾಡುತ್ತಾ ಇದ್ದ ಅಪ್ಪು ಎಂಬ ಹುಡುಗ ಬಾನದಾರಿ ಹಿಡಿದಿದ್ದಾನೆ.

click me!