ಅಗಲಿದ ಅಪ್ಪುಗೆ ಕುಟುಂಬಸ್ಥರಿಂದ ಹಾಲು ತುಪ್ಪ ಶಾಸ್ತ್ರ!

By Suvarna News  |  First Published Nov 2, 2021, 4:06 PM IST

ಅಪ್ಪು ಅಗಲಿ 5 ದಿನ. ಕಂಠೀರವ ಸ್ಟುಡಿಯೋದಲ್ಲಿ ಹಾಲು ತುಪ್ಪ ಕಾರ್ಯ ಮಾಡಿದ ಕುಟುಂಬಸ್ಥರು.


ಕನ್ನಡ ಚಿತ್ರರಂಗದ (Sandalwood) ಮುತ್ತು, ಯುವರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಇಂದಿಗೆ 5 ದಿನಗಳು (November2, 2021) ಕಳೆದಿವೆ. ಅಪ್ಪು ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ಬೆಳಗ್ಗೆ 11.30ಕ್ಕೆ ಹಾಲು ತುಪ್ಪ ಕಾರ್ಯ ಮಾಡಿದ್ದಾರೆ. ಅಪ್ಪು ನೆಚ್ಚಿನ 50 ಬಗೆಯ ತಿನಿಸುಗಳನ್ನು ಪೂಜೆಗೆ ಇಡಲಾಗಿತ್ತು. 

ಪುನೀತ್ ರಾಜ್‌ಕುಮಾರ್ ಸಮಾಧಿಯನ್ನು ಬಿಳಿ ಮತ್ತು ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಡಾ.ರಾಜ್‌ಕುಮಾರ್ (Dr. Rajkumar) ಹುಟ್ಟೂರಿನಿಂದ ಬಸ್ ಮಾಡಿಕೊಂಡು ಹಾಲು ತುಪ್ಪ ಕಾರ್ಯದಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.  ದೊಡ್ಡ ಮನೆ ಕುಟುಂಬಸ್ಥರು,  ಚಿತ್ರರಂಗದ ಆಪ್ತರು, ರಾಜಕೀಯ ಗಣ್ಯರು ಮತ್ತು ಅಪ್ಪು ಸ್ನೇಹಿತರು ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ (Sri Murali) ಪೂಜೆ ಸಲ್ಲಿಸುವಾಗ ಭಾವುಕರಾಗಿದ್ದರು.

Latest Videos

ಕಬಾಬು (Kabab), ಚಿಕನ್ ಬಿರಿಯಾನಿ (Biryani), ಇಡ್ಲಿ (Idly), ಕಾಳು ಗೊಜ್ಜು, ಮೊಟ್ಟೆ ಬಿರಿಯಾನಿ, ಬಜ್ಜಿ, ಐದು ವೆರೈಟಿ ಸ್ವೀಟುಗಳು (Sweets), ಹಣ್ಣುಗಳನ್ನು (fruits) ಇಟ್ಟು ಎಲ್ಲರೂ ಪೂಜೆ ಸಲ್ಲಿಸಿದ್ದಾರೆ. ಅದರಲ್ಲೂ ಅಪ್ಪುವಿಗೆ ಪ್ರೀಯವಾದ ಮುದ್ದೆ (Ragi ball) ಮತ್ತು ನಾಟಿ ಕೋಳಿ ಸಾಂಬರ್‌ ಅನ್ನೇ ಎಲ್ಲರೂ ಇಟ್ಟಿದ್ದರು. ಕುಟುಂಬದ ಪ್ರತಿಯೊಬ್ಬರು ಒಂದೊಂದು ಖಾದ್ಯಗಳನ್ನು ಎಡೆಗೆ ಹಾಕಿದ್ದಾರೆ. ಅಶ್ವಿನಿ (Ashwini) ಮತ್ತು ಪುತ್ರಿಯರಾದ ದೃತಿ (Druthi) ಮತ್ತು ವಂದಿತಾ (Vanditha) ಪೂಜೆಯಲ್ಲಿ ಭಾಗಿಯಾಗಿ ತಂದೆಗೆ ಹಾಲು ತುಪ್ಪ ಹಾಕಿದ್ದಾರೆ. ಪತಿಯ ಸಮಾಧಿ ನೋಡಿ ಕಣ್ಣಿರಿಡುತ್ತಿದ್ದ ಅಶ್ವಿನಿ ಪೂಜೆ ಮುಗಿದ ತಕ್ಷಣವೇ, ಅಲ್ಲಿಂದ ಹೊರಟಿದ್ದಾರೆ. ಪ್ರೀತಿಯ ಸಹೋದರನಿಗೆ ಭಗವಂತ ಮುಕ್ತಿ ನೀಡಲಿ ಎಂದು ರಾಘಣ್ಣ (Raghavendra Rajkumar) ಭಜನೆ ಮಾಡಿ, ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. 

ಗದ್ದಲವಿಲ್ಲ, ಗಲಾಟೆಯಿಲ್ಲ, ಅಪ್ಪುಗೆ ಶಾಂತಿಯ ಅಶ್ರುತರ್ಪಣ ಕೊಟ್ಟ ಅಭಿಮಾನಿ ದೇವರುಗಳು..!

ಅಪ್ಪುಗೆ ಕಡಿಮೆ ಆಯಸ್ಸು ಕೊಟ್ಟ ಭಗವಂತ:
'ಅಪ್ಪಾಜಿಗೆ ದೇವರು 76 ವರ್ಷ ಆಯಸ್ಸು ಕೊಟ್ಟಿದ್ದ ಭಗವಂತ. ಅಪ್ಪುಗೆ  46 ವರ್ಷ ಕೊಟ್ಟಿದ್ದಾನೆ. ಇಲ್ಲೂ ನಾವು ನೆಮ್ಮದಿ ತಂದುಕೊಳ್ಳಬೇಕು. ಅಪ್ಪು ಕಣ್ಣುಗಳನ್ನು ನಾಲ್ಕು ಜನರಿಗೆ ಬೆಳಕು ಕೊಟ್ಟಿದೆ. ಸರ್ಕಾರ (Government) ಹಾಗೂ ಅಭಿಮಾನಿಗಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಅದು ಕಡಿಮೆ. ಸಮ್ಮ ಕುಟುಂಬದ ಮೇಲೆ ಅಭಿಮಾನಿಗಳು ಪ್ರಾಣವನ್ನೇ ಇಟ್ಟಿದ್ದಾರೆ. ಅಪ್ಪುವಿಗೆ ನಾವು ಇಷ್ಟವಾದ ತಿನಿಸುಗಳನ್ನು ಇಟ್ಟಿದ್ದೀವಿ. ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪುನೀತ್ ಹೆಸರಿನ್ನು ರಸ್ತೆಗಳಿಗೆ ಇಟ್ಟಿರೋದು ಖುಷಿ ಕೊಟ್ಟಿದೆ. ಸಾರ್ವಜನಿಕ ದರ್ಶನಕ್ಕೆ ನಾವು ಇವತ್ತೇ ಅವಕಾಶ ಕೊಡ್ತೀವಿ,' ಎಂದು ರಾಘವೇಂದ್ರ ರಾಜ್‌ಕುಮಾರ್ ಈ ಸಂದರ್ಭದಲ್ಲಿ ಮೀಡಿಯಾದೊಂದಿಗೆ ಮಾತನಾಡಿದ್ದಾರೆ.

ಪುನೀತ್ ಜೊತೆಗೆ ಕೊನೆಯ ಸೆಲ್ಫಿ, ಮಾತು ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್!

ಅಕ್ಟೋಬರ್ 29ರಂದು ಪುನೀತ್ ವ್ಯಾಯಾಮ (Gym) ಮಾಡಿದ ಬಳಿಕ ಸುಸ್ತು ಕಾಣಿಸಿಕೊಂಡಿತ್ತು. ತಕ್ಷಣವೇ ಪತ್ನಿ ಆಶ್ವಿನಿ ಜೊತೆ ಮನೆ ಬಳಿ ಇರುವ ಕ್ಲಿನಿಕ್‌ಗೆ (Clinic) ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ವೈದ್ಯರು ಮಾಡಿಸಿದ ECGಯಲ್ಲಿ ತುಸು ವ್ಯತ್ಯಾಸ ಕಂಡ ಕಾರಣ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ಅಪ್ಪು ಆಸ್ಪತ್ರೆ ಸೇರುವಷ್ಟರಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ವಿಕ್ರಮ್ ಆಸ್ಪತ್ರೆಯಲ್ಲಿ (Vikram Hospital) ಅಪ್ಪುವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು. ಪುನೀತ್ ಕೊನೆ ಉಸಿರೆಳೆದ ಎರಡೇ ಗಂಟೆಗಳಲ್ಲಿಯೇ ಕುಟುಂಬಸ್ಥರು ನೇತ್ರದಾನ (Eye Donation) ಮಾಡಿದ್ದಾರೆ. ಶುಕ್ರವಾರ ಅಪ್ಪು ಕಣ್ಣುಗಳನ್ನು ತೆಗೆದುಕೊಂಡು, ಶನಿವಾರ ಆಧುನಿಕ ತಂತ್ರಜ್ಞಾನವನ್ನು ಬಳಸಿ, ನಾಲ್ಕು ಮಂದಿಗೆ ವೈದ್ಯರು ಕಸಿ ಮಾಡಿದ್ದಾರೆ. 

ಪುನೀತ್ ಅಂತಿಮ ದರ್ಶನ ಪಡೆಯಲು 25 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಆಗಮಿಸಿದ್ದರು. ಜನರನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ಎಂದು ಭಾನುವಾರ ಬೆಳಗಿನ ಜಾವವೇ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇಷ್ಟು ಜನ ಸೇರಿದರೂ, ಸರಕಾರದ ಸೂಕ್ತ ನಿರ್ಧಾರ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳಿಗೆ ಮಾಡಿಕೊಂಡ ಕಳಕಳಿಯ ಮನವಿಯಿಂದ ಪುನೀತ್ ಅಭಿಮಾನಿಗಳೂ ವಿನೀತರಾಗಿ ನಡೆದುಕೊಂಡಿದ್ದು, ಯಾವುದೇ ಗಲಭೆಯಿಲ್ಲದೇ ಕರುನಾಡ ನೆಚ್ಚಿನ ಅಪ್ಪುವನ್ನು ಶಾಂತಿಯಿಂದ ಬೀಳ್ಕೊಟ್ಟಿದ್ದಾರೆ.

click me!