ಪುನೀತ್‌ ಸಾರ್‌ ಇಲ್ಲದಿದ್ರೆ ನಾನು ನಾನಿರ್ತಿರಲಿಲ್ಲ: ಪಾರ್ಕ್‌ ಕೆಲಸಗಾರನ ಕಣ್ಣೀರು

By Kannadaprabha News  |  First Published Nov 2, 2021, 7:56 AM IST

*  ಮಹಾನ್‌ ವ್ಯಕ್ತಿಯ ಋುಣ ತೀರಿಸಲು ಆಗಲ್ಲ
*  ಕೊರೋನಾ ಸಮಯದಲ್ಲಿ ತುಂಬಾ ಸಹಾಯ ಮಾಡಿದ್ದ ಪುನೀತ್‌ ಸಾರ್‌
*  ಪುನೀತ್‌ಗೆ ತಾನೊಬ್ಬ ದೊಡ್ಡ ನಟ ಎನ್ನುವ ಅಹಂ ಒಂಚೂರು ಇರಲಿಲ್ಲ


ಬೆಂಗಳೂರು(ನ.02):  ತಾನು ದೊಡ್ಡ ನಟ ಎನ್ನುವ ಅಹಂ ಒಂಚೂರು ಇರಲಿಲ್ಲ ಸಾರ್‌. ವಾಕಿಂಗ್‌ ಬಂದಾಗ ಪ್ರೀತಿಯಿಂದ ಮಾತನಾಡುತ್ತಿದ್ದರು. ಕೊರೋನಾ(Coronavirus) ಸಮಯದಲ್ಲಿ ಅವರು ಇಲ್ಲದಿದ್ದರೆ ನಾನು ಬದುಕುತ್ತಿರಲಿಲ್ಲ ಸಾರ್‌...

ಇದು ಸದಾಶಿವನಗರದ ಡಾ.ಪಿ.ಬಿ.ಶ್ರೀನಿವಾಸ್‌ ಉದ್ಯಾನದ ಕೆಲಸಗಾರ ತಿಮ್ಮಪ್ಪ ಅವರು ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar)ಅವರ ಸಹಾಯವನ್ನು ಸ್ಮರಿಸಿ ಕಣ್ಣೀರಿಟ್ಟ ಪರಿ. ಪವರ್‌ ಸ್ಟಾರ್‌(Power Star) ಪುನೀತ್‌ ರಾಜ್‌ಕುಮಾರ್‌ ಅವರು ಈ ಉದ್ಯಾನಕ್ಕೆ(Park) ಆಗಾಗ ವಾಕಿಂಗ್‌ಗೆ(walking) ಬರುತ್ತಿದ್ದರು. ಅವರಿಗೆ ತಾನೊಬ್ಬ ದೊಡ್ಡ ನಟ ಎನ್ನುವ ಅಹಂ(Ego) ಒಂಚೂರು ಇರಲಿಲ್ಲ. ಬೆಳಗ್ಗೆ ಅಥವಾ ಸಂಜೆ ವೇಳೆ ವಾಕಿಂಗ್‌ ಬಂದಾಗ ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನನ್ನ ಕಷ್ಟ-ಸುಖ ಆಲಿಸುತ್ತಿದ್ದರು ಎಂದು ಭಾವುಕರಾದರು.

Latest Videos

ಪುನೀತ್‌ ರಾಜ್‌ಕುಮಾರ್‌ ಸಮಾಧಿ ವೀಕ್ಷಣೆಗೆ ಅಭಿಮಾನಿಗಳ ಬಿಗಿಪಟ್ಟು

ನಾನಾ ನೆರವು:

ವಾಕಿಂಗ್‌ ಮಾಡಿ ಮನೆಗೆ ಹೋಗುವಾಗ ನನ್ನ ಮನೆಗೆ ಬಂದು ಮಕ್ಕಳನ್ನು ಮಾತನಾಡಿಸಿ ಹೋಗುತ್ತಿದ್ದರು. ಮಕ್ಕಳಿಗೆ ಸೈಕಲ್‌, ಮನೆಗೆ ಟಿ.ವಿ. ಕೊಡಿಸಿ ಸಹಾಯ ಮಾಡಿದ್ದರು. ಹಗಲಿನಲ್ಲಿ ತಂದರೆ ಬೇರೆಯವರಿಗೆ ಗೊತ್ತಾಗುತ್ತದೆ ಎಂದು ರಾತ್ರಿ ಸಮಯದಲ್ಲಿ ಸ್ನೇಹಿತರ ಕೈಯಲ್ಲಿ ಕೊಟ್ಟು ಕಳುಹಿಸುತ್ತಿದ್ದರು. ಕೊರೋನಾ ಸಮಯದಲ್ಲಿ ಪುನೀತ್‌ ಸಾರ್‌ ತುಂಬಾ ಸಹಾಯ ಮಾಡಿದ್ದರು. ಆ ಸಮಯದಲ್ಲಿ ಅವರು ಇಲ್ಲದಿದ್ದರೆ ನಾನು ಬದುಕಿರುತ್ತಿರಲಿಲ್ಲ. ಅವರಿದ್ದಾಗ ನನಗೆ ಆನೆ ಬಲ ಇದ್ದಂತಿತ್ತು. ಅಂತಹ ವ್ಯಕ್ತಿ ಈಗ ನಮ್ಮ ಜತೆ ಇಲ್ಲ ಎಂಬುವುದನ್ನು ನಂಬೋಕೆ ಆಗುತ್ತಿಲ್ಲ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು.

ಕಳೆದ ಎರಡು ದಿನಗಳಿಂದ ಪುನೀತ್‌ ಸಾರ್‌ ವಾಕಿಂಗ್‌ ಬರ್ತಿದ್ದಾರೆ. ನನ್ನ ಜೊತೆ ಮಾತಾಡುತ್ತಿದ್ದಾರೆ ಅನಿಸುತ್ತಿದೆ. ಉದ್ಯಾನದಲ್ಲಿ ಎಷ್ಟೇ ಜನ ಇದ್ದರೂ ನನ್ನ ಹೆಸರು ಹಿಡಿದು ಕೂಗಿ ಮಾತನಾಡಿಸೋರು. ಯಾಕೆ ನನ್ನ ಜೊತೆ ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದರು. ಅವರ ಮನೆಯಲ್ಲಿ ವಿಶೇಷ ಅಡುಗೆ ಮಾಡಿದ್ದರೆ ನಮಗೆ ಊಟ ಕೊಟ್ಟು ಕಳುಹಿಸುತ್ತಿದ್ದರು. ಅಂತಹ ಮಹಾನ್‌ ವ್ಯಕ್ತಿಯ ಋುಣ ತೀರಿಸಲು ಆಗಲ್ಲ ಎಂದು ತಿಮ್ಮಪ್ಪ ನೋವು ವ್ಯಕ್ತಪಡಿಸಿದರು.

ಅಪ್ಪು ಅಲ್ಪಾಯುಷಿ ಅನ್ನೋದು ಅಣ್ಣಾವ್ರಿಗೆ ಮೊದಲೇ ಗೊತ್ತಿತ್ತಾ!

ಸ್ಮೈಲ್‌ ಕೊಡೋರು:

ಬೆಳಗ್ಗೆ ಅಥವಾ ಸಂಜೆ ಪುನೀತ್‌ ರಾಜ್‌ಕುಮಾರ್‌ ಈ ಉದ್ಯಾನಕ್ಕೆ ವಾಕಿಂಗ್‌ಗೆ ಬರೋರು. ಸಾಮಾನ್ಯ ಜನರಂತೆ ವಾಕಿಂಗ್‌ ಮಾಡೋರು. ಯಾರೇ ಎದುರು ಸಿಕ್ಕರೂ ಹಾಯ್‌, ಹಲೋ ಎಂದು ನಗುಸೂಸಿ ಮುಂದೆ ಹೋಗುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಿಂದ ಪುನೀತ್‌ ಅವರನ್ನು ನಾನು ನೋಡಿದ್ದೇನೆ. ತುಂಬಾ ಒಳ್ಳೆಯ ಹುಡುಗ. ಬಾಲ್ಯದಲ್ಲಿ ಎಲ್ಲರೊಂದಿಗೂ ಬೆರೆತು ಆಟವಾಡುತ್ತಿದ್ದರು ಎಂದು ವಾಕಿಂಗ್‌ಗೆ ಬಂದಿದ್ದ ಸದಾಶಿವನಗರ ನಿವಾಸಿ ಚಂದ್ರಶೇಖರ್‌ ಪುನೀತ್‌ ಅವರನ್ನು ಸ್ಮರಿಸಿದರು(Memory).
 

click me!