
ಬಹುತೇಕ ಪೋಷಕ ಪಾತ್ರಧಾರಿಗಳೇ ನಟಿಸಿರುವ ‘ತ್ರಿಕೋನ’ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬರುತ್ತಿದೆ. ನಿರ್ಮಾಪಕ ರಾಜಶೇಖರ್ ಅವರೇ ಕತೆ ಹಾಗೂ ಚಿತ್ರಕಥೆ ಬರೆದು ನಿರ್ಮಿಸಿರುವ ಈ ಚಿತ್ರವನ್ನು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಅಂದಹಾಗೆ ಈ ಹಿಂದೆ ‘143’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಾಂತ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಸುರೇಶ್ ಹೆಬ್ಳಿಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧು ಕೋಕಿಲಾ, ಮಾರುತೇಶ್, ರಾಜ್‌ವೀರ್, ಬೇಬಿ ಅದಿತ್ಯ, ಹಾಸಿನಿ, ಮನದೀಪ್ ರಾಯ್, ರಾಕ್‌ಲೈನ್ ಸುಧಾಕರ್... ಹೀಗೆ ದೊಡ್ಡ ತಾರಾಗಣ ಇರುವ ಚಿತ್ರವಿದು. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಇಲ್ಲಿ ಕಷ್ಟ ಎನ್ನುವ ಕ್ಯಾರೆಕ್ಟರ್ ಸುತ್ತ ಸಿನಿಮಾ ಸಾಗುತ್ತದೆ. ಅಂದರೆ ಕಷ್ಟ ಕೊಡುವ ವ್ಯಕ್ತಿಗೆ ಶಕ್ತಿ ಇದೆ, ಆ ಕಷ್ಟವನ್ನು ಎದುರಿಸುವವರಿಗೆ ಶಕ್ತಿ ಇರಲ್ಲ. ಇವರ ನಡುವೆ ಇಡೀ ಸಿನಿಮಾ ಸಾಗುತ್ತದೆ. ಆದರೆ, ಕಷ್ಟ ಯಾಕೆ ಇವರನ್ನು ಹಿಂಬಾಲಿಸುತ್ತದೆ ಎಂಬುದು ಚಿತ್ರದ ಮತ್ತೊಂದು ತಿರುವಂತೆ.
ಇತ್ತೀಚೆಗಷ್ಟೆ ಸಾಧು ಕೋಕಿಲಾ ನಿರ್ದೇಶನದಲ್ಲಿ ‘ಜಾಲಿಡೇಸ್’ ಚಿತ್ರಕ್ಕೆ ಚಾಲನೆ ಕೊಟ್ಟಿರುವ ರಾಜಶೇಖರ್, ‘ತ್ರಿಕೋನ’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ‘ಪೆರೋಲ್, ಬರ್ಫಿ ಚಿತ್ರಗಳ ನಂತರ ನನ್ನ ಸಂಸ್ಥೆಯ ಮತ್ತೊಂದು ಸಿನಿಮಾ ತೆರೆ ಮೇಲೆ ಮೂಡುತ್ತಿದೆ. ನಾನೇ ನಿರ್ದೇಶಕನಾಗಿದ್ದರೂ ನಾನು ಬರೆದ ಕತೆ, ಚಿತ್ರಕತೆಯನ್ನು ಚಂದ್ರಕಾಂತ್ ಅವರಿಂದ ನಿರ್ದೇಶನ ಮಾಡಿಸುವುದಕ್ಕೆ ಕಾರಣ ಅವರ ಹಿಂದಿನ ಚಿತ್ರ ‘143’ ನೋಡಿದ್ದೆ.
ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದರು. ಆದರೆ, ಆ ಚಿತ್ರದ ನಂತರ ಚಿತ್ರರಂಗವೇ ಬೇಡ ಎಂದು ಊರಿಗೆ ಹೋಗಿದ್ದ ಒಬ್ಬ ಪ್ರತಿಭಾವಂತ ನಿರ್ದೇಶಕನನ್ನು ನಾವು ಮರೆಯಬಾರದು ಎನ್ನುವ ಕಾರಣಕ್ಕೆ ‘ತ್ರಿಕೋನ’ ಚಿತ್ರವನ್ನು ನಿರ್ದೇಶನ ಮಾಡಿಸಿದ್ದೇನೆ. ನಾನು ಬರೆದ ಕತೆ ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಪೋಷಕ ಪಾತ್ರಧಾರಿಗಳೇ ಚಿತ್ರದ ಮುಖ್ಯ ಕಲಾವಿದರು. ಸಾಮಾನ್ಯವಾಗಿ ಇಂಥ ಚಿತ್ರಗಳನ್ನು ತೋರಿಕೆಗೆ ಬಿಡುಗಡೆ ಮಾಡುತ್ತಾರೆ. ಆದರೆ, ನಾನು ಒಬ್ಬ ಸ್ಟಾರ್ ನಟನ ಚಿತ್ರದಷ್ಟೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಏ.1ರಂದು 200 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ರಾಜಶೇಖರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.